ಮಡಿಕೇರಿಯಲ್ಲಿ ಭೂ ಕುಸಿತ : ಕೊಡುಗಿನಲ್ಲಿ ಭಾರಿ ಮಳೆ

Share and Enjoy !

Shares

ವಿಜಯನಗರ ವಾಣಿ

ಜಿಲ್ಲೆಯಾದ್ಯಂತ ಮುಂಗಾರು ಅಬ್ಬರ ಜೋರಾಗಿದ್ದು, ಮಡಿಕೇರಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತವಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ 6 ಮನೆಗಳ ನಿವಾಸಿಗಳನ್ನು ಸ್ಥಳಾಂತರ ಮಾಡುವಂತೆ ಸೂಚನೆ ನೀಡಲಾಗಿದೆ.

ಮಡಿಕೇರಿಯಲ್ಲಿ ನಗರದಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಹೀಗಾಗಿ, ಮಂಗಳೂರು ರಸ್ತೆಯ ಬದಿಯಲ್ಲಿ ಸಣ್ಣ ಪ್ರಮಾಣದ ಭೂಕುಸಿತ ಉಂಟಾಗಿದೆ. ಸ್ಥಳಕ್ಕೆ ಭೇಟಿ ನೀಡಿದ ತಹಶೀಲ್ದಾರ್ ಮಹೇಶ್ ಮತ್ತವರ ತಂಡ ಪರಿಶೀಲನೆ ನಡೆಸಿತು. ಪೊಲೀಸರಿಂದಲೂ ಸ್ಥಳ ಪರಿಶೀಲನೆ ನಡೆಯಿತು. ಈ ವೇಳೆ, 6 ಮನೆಗಳಿಂದ ಜನರನ್ನು ಸ್ಥಳಾಂತರಿಸಲು ನಿರ್ಧರಿಸಲಾಯ್ತು.

ಕೊಡಗು ಜಿಲ್ಲೆಯಾದ್ಯಂತ ವರುಣ ಅಬ್ಬರಿಸುತ್ತಿದ್ದಾನೆ. ಹಾರಂಗಿಯಲ್ಲಿಯೂ ನೀರಿನ ಮಟ್ಟದಲ್ಲಿ ಗಣನೀಯ ಏರಿಕೆ ದಾಖಲಾಗಿದೆ. ಜಿಲ್ಲೆಯಲ್ಲಿ ಸೋಮವಾರ ರಾತ್ರಿಯಿಂದ ಮಳೆ ಬಿರುಸು ಪಡೆದುಕೊಂಡಿದೆ. ಮಡಿಕೇರಿ ತಾಲೂಕಿನಲ್ಲಿ ಗಾಳಿ ಸಹಿತ ಉತ್ತಮ ಮಳೆಯಾಗುತ್ತಿದ್ದು, ಚಳಿಯ ವಾತಾವರಣ ಮುಂದುವರಿದಿದೆ.

ಇನ್ನೆರೆಡು ದಿನ ಮಳೆ ಮುಂದುವರಿಯಲಿರುವ ಹಿನ್ನೆಲೆಯಲ್ಲಿ, ಜುಲೈ 15 ರವರೆಗೆ ಆರೆಂಜ್ ಅಲರ್ಟ್‌ ಘೋಷಿಸಲಾಗಿದೆ. ವಿರಾಜಪೇಟೆ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಮಳೆಯ ಪ್ರಮಾಣ ಕಡಿಮೆ ಇದ್ದರೂ ಈ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ. ಮಂಗಳವಾರ ಮಧ್ಯಾಹ್ನದ ಬಳಿಕ ಈ ಭಾಗದಲ್ಲಿ ಮಳೆ ಬಿಡುವು ನೀಡಿತ್ತು.

ಕಾವೇರಿಯ ಉಗಮ ಸ್ಥಾನ ತಲಕಾವೇರಿ ಹಾಗೂ ಭಾಗಮಂಡಲದಲ್ಲಿ ನಿರಂತರ ಮಳೆಯಾದ ಪರಿಣಾಮ, ತ್ರಿವೇಣಿ ಸಂಗಮ ನದಿ ನೀರಿನ ಮಟ್ಟ ಏರಿಕೆಯಾಗುತ್ತಿದೆ. ಉತ್ತಮ ಮಳೆಗೆ ನದಿ ತೊರೆ ಉಕ್ಕಿ ಹರಿಯುತ್ತಿದ್ದು, ಜಲಾಶಯದ ನೀರಿನ ಮಟ್ಟ ಕೂಡ ಹೆಚ್ಚಾಗುತ್ತಿದೆ. ನಿರಂತರ ಮಳೆಯಿಂದ ಕೃಷಿಕ ವರ್ಗ ಹರ್ಷಗೊಂಡಿದೆ.

ಜಿಲ್ಲೆಯ ಬೆಟ್ಟಗುಡ್ಡ ಹಾಗೂ ನದಿ ತೀರದ ನಿವಾಸಿಗಳು ಮಳೆ ಹೆಚ್ಚಾಗುವ ಆತಂಕದಲ್ಲಿದ್ದಾರೆ. ಮಡಿಕೇರಿ ನಗರದಲ್ಲಿ ಮಂಗಳವಾರ ಬೆಳಗ್ಗೆಯಿಂದಲೂ, ಗಾಳಿ ಸಹಿತ ಧಾರಾಕಾರವಾಗಿ ಮಳೆಯಾಗಿದೆ. ಜತೆಗೆ, ಚಳಿಯ ವಾತಾವರಣವಿದೆ. ಈ ವಾತಾವರಣದಲ್ಲಿ ಕಾಲ ಕಾಳೆಯಲು ರಾಜ್ಯ ಮತ್ತು ಹೊರ ರಾಜ್ಯದಿಂದ ಪ್ರವಾಸಿಗರ ಆಗಮನವಾಗುತ್ತಿದ್ದು, ಮಳೆಯಿಂದ ಪ್ರವಾಸಿ ತಾಣಗಳು ಕೂಡ ಹಸಿರಿನಿಂದ ಆಕರ್ಷಣೆ ಪಡೆದುಕೊಂಡಿದೆ. ಜಲಪಾತಗಳು ತುಂಬಿ ಕರೆಯುತ್ತಿವೆ. ಪ್ರಕೃತಿ ಪ್ರಿಯರನ್ನು ಕೈಬೀಸಿ ಕರೆಯುತ್ತಿವೆ.

ಕೊಡಗು ಜಿಲ್ಲೆಯಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 29.75 ಮಿ.ಮೀ. ಸರಾಸರಿ ಮಳೆಯಾಗಿದೆ. ಮಡಿಕೇರಿ ತಾಲೂಕಿನಲ್ಲಿ 40.32 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 17.62 ಮಿ.ಮೀ., ಸೋಮವಾರಪೇಟೆ ತಾಲೂಕಿನಲ್ಲಿ 31.3 ಮಿ.ಮೀ. ಸರಾಸರಿ ಮಳೆಯಾಗಿದೆ.

Share and Enjoy !

Shares