ವಿಜಯನಗರ ವಾಣಿ
ಕೆಜಿಎಫ್ ಸಿನಿಮಾ ಮೂಲಕ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿರುವ ರಾಕಿಂಗ್ ಸ್ಟಾರ್ ಯಶ್ ಆಗಾಗ ತಮ್ಮ ಯಶಸ್ಸಿನ ಬಗ್ಗೆ ಹೇಳಿಕೊಳ್ಳುತ್ತಿರುತ್ತಾರೆ. ತಾವೊಬ್ಬ ಡೆಡಿಕೇಟೆಡ್ ನಟ ಎಂಬುದನ್ನು ಅವರು ಕಾಲಕಾಲಕ್ಕೆ ಪ್ರೂವ್ ಮಾಡುತ್ತಿರುತ್ತಾರೆ. ಮೈಸೂರಿನ ಪಡುವಾರಹಳ್ಳಿಯಲ್ಲಿ ಬೆಳೆದ ಸಾಮಾನ್ಯ ಹುಡುಗನೊಬ್ಬ ಗಾಂಧಿನಗರ ಪ್ರವೇಶಿಸಿ ರಾಕಿಂಗ್ ಸ್ಟಾರ್ ಆಗಿದ್ದು, ನಂತರ ನ್ಯಾಷನಲ್ ಸ್ಟಾರ್ ಆಗಿದ್ದು ಹೇಗೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ನಿರಂತರ ಪ್ರಯತ್ನ, ಕಠಿಣ ಪರಿಶ್ರಮ ಎಂಥವರಿಗೂ ಯಶಸ್ಸು ತಂದುಕೊಡುತ್ತದೆ ಎಂಬುದಕ್ಕೆ ರಾಕಿಬಾಯ್ ನಿದರ್ಶನ. ಅಂದುಕೊಂಡಿದ್ದನ್ನೆಲ್ಲ ಸಾಧಿಸುವ ಮೂಲಕ ಕೋಟ್ಯಂತರ ಅಭಿಮಾನಿಗಳಿಗೆ ಯಶ್ ಸ್ಫೂರ್ತಿಯಾಗಿದ್ದಾರೆ. ಅನೇಕ ವೇದಿಕೆಗಳಲ್ಲಿ ತಮಗಿರುವ ಸಿನಿಮಾ ಹುಚ್ಚು, ಸಾಧಿಸುವ ಛಲದ ಬಗ್ಗೆ ಅವರು ಹೇಳಿಕೊಂಡಿದ್ದರು. ಅದರಂತೆ ಅವರಿಂದ ಸ್ಟಾರ್ ನಟನಾಗಿ ಬೆಳೆದುನಿಂತಿದ್ದಾರೆ.
ರಂಗಭೂಮಿ ಕಲಿಸಿದ ಪಾಠ
ಮೂಲತಃ ನಾನು ರಂಗಭೂಮಿ ಹಿನ್ನೆಲೆಯವ. ಅಲ್ಲಿ ಪ್ರಾರಂಭದಿಂದ ಅಂತ್ಯದವರೆಗೂ ನಾವು ಕೆಲಸದಲ್ಲಿ ತೊಡಗಿಸಿಕೊಳ್ಳುತ್ತೇವೆ. ಇಲ್ಲಿ ನೀವು ಎಲ್ಲ ಕೆಲಸಗಳನ್ನು ನಮ್ಮದೆಂದು ಮಾಡಬೇಕು. ಅದು ಅವನ ಕೆಲಸ, ಇದು ಮತ್ತೊಬ್ಬರ ಕೆಲಸ ಎಂದು ಹೇಳುವಂತಿಲ್ಲ. ಎಲ್ಲರೂ ಒಟ್ಟಿಗೆ ಸೇರಿ ರಂಗಭೂಮಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಪ್ರೇಕ್ಷಕರಿಗಾಗಿ ಒಂದು ಉತ್ತಮ ನಾಟಕ ರೂಪಿಸುವುದು ಹಾಗೂ ಸಾಧ್ಯವಾದಷ್ಟು ಅವರಿಗೆ ಮನರಂಜನೆ ನೀಡುವುದು ನಮ್ಮ ಉದ್ದೇಶವಾಗಿರುತ್ತದೆ. ಪ್ರತಿಯೊಬ್ಬರೂ ಅತ್ಯಂತ ಕಾಳಜಿಯಿಂದ ಕೆಲಸ ಮಾಡುತ್ತೇವೆಂದು ಯಶ್ ಹೇಳಿಕೊಂಡಿದ್ದರು.
‘ಸ್ಟಾರ್‌ಡಮ್’ ಬಗ್ಗೆ ರಾಕಿಬಾಯ್ ಮಾತು
ನಾನು ಇಂದು ಏನಾಗಿದ್ದೇನೋ ಮತ್ತು ಜೀವನದಲ್ಲಿ ಏನೆಲ್ಲಾ ಸಾಧಿಸಿದ್ದಿನೋ ಅದಕ್ಕೆ ಕಾರಣ ಜನರು ನಾನು ಅವರಲ್ಲಿ ಒಬ್ಬನೆಂದು ಭಾವಿಸಿದ್ದು. ಮಧ್ಯಮವರ್ಗದ ಕುಟುಂಬ ಹಿನ್ನೆಲೆಯಿಂದ ಬಂದಿದ್ದರಿಂದ ಜನರು ನನ್ನನ್ನು ಬೆಂಬಲಿಸಿದರು. ಯಾವಾಗ ನಾನು ಮನೆಗೆ ಹೋಗುತ್ತೇನೋ ಆಗ ನಾನು ನನ್ನ ಸ್ಟಾರ್‌ಡಮ್ ಅನ್ನು ಪಕ್ಕಕ್ಕೆ ಸರಿಸುತ್ತೇನೆ. ನಾನು ಸ್ವಂತ ಶ್ರಮದಿಂದ ಬೆಳೆದುಬಂದ ವ್ಯಕ್ತಿ. ನನ್ನ ಬಗ್ಗೆ ನನಗೆ ನಂಬಿಕೆ ಇತ್ತು ಹಾಗೂ ಸ್ಪಷ್ಟ ಗುರಿಯಿತ್ತು. ಎಲ್ಲವೂ ನಾನಂದುಕೊಂಡಂತೆ ಆಗಿರುವುದಕ್ಕೆ ಜನರೇ ಸಾಕ್ಷಿಯಾಗಿದ್ದಾರೆ ಎಂದು ರಾಕಿಬಾಯ್ ಹೇಳಿದ್ದರು.
ಜನಗಳು ಮೆಚ್ಚುವ ವ್ಯಕ್ತಿಯಾಗಬೇಕು
ಪ್ರಾರಂಭದಲ್ಲಿ ಎಲ್ಲರೂ ಹೊಸಬರಾಗಿರುತ್ತಾರೆ. ಒಂದು ಸರಿ ಜನರು ನಿಮ್ಮ ಕೆಲಸವನ್ನು ಮೆಚ್ಚಿದರೆ ಸಾಕು ಅವರು ಜೀವನಪೂರ್ತಿ ನಿಮ್ಮನ್ನು ಮರೆಯುವುದಿಲ್ಲ. ನೀವು ಮಾಡುವ ಕೆಲಸ ಅವರಿಗೆ ಖುಷಿ ಕೊಟ್ಟರೆ ಸಾಕು ಜನರು ನಿಮ್ಮ ಬಗ್ಗೆ ಸಂಭ್ರಮಿಸಲು ಪ್ರಾರಂಭಿಸುತ್ತಾರೆ. ಅದೇ ರೀತಿ ನನ್ನ ಜೀವನದಲ್ಲೂ ಆಗಿದೆ. ನನ್ನ ಕೆಲಸ, ಶ್ರದ್ಧೆ, ಪರಿಶ್ರಮವನ್ನು ಗುರುತಿಸಿದ ಜನರು ಇಂದು ನನ್ನನ್ನು ಸ್ಟಾರ್ ನಟನನ್ನಾಗಿ ಮಾಡಿದ್ದಾರೆ. ಆದರೆ ನಾವು ಎಂದಿಗೂ ನಮ್ಮ ಸರಳತೆಯನ್ನು ಮರೆಯಬಾರದು ಎಂದು ಯಶ್ ಸಲಹೆ ನೀಡಿದ್ದಾರೆ.
ಕನ್ನಡ ಚಿತ್ರರಂಗದ ಬಗ್ಗೆ ರಾಕಿ ಹೇಳಿದ್ದೇನು..?
ಇಲ್ಲಿ ಯಾವುದೇ ಚಿತ್ರರಂಗ ಸಣ್ಣದೂ ಅಲ್ಲ ದೊಡ್ಡದೂ ಅಲ್ಲ. ಚಿತ್ರರಂಗದಲ್ಲಿ ಕೆಲಸ ಮಾಡುವ ವ್ಯಕ್ತಿಗಳಿಂದ ಅದು ದೊಡ್ಡದು, ಸಣ್ಣದು ಎಂದು ವಿಂಗಡನೆಯಾಗುತ್ತದೆ. ನಾವು ಯಾವತ್ತಿಗೂ ನಮ್ಮ ಚಿತ್ರರಂಗದ ಬಗ್ಗೆ ದೂಷಿಸಬಾರದು. ಪ್ರತಿಯೊಂದು ಚಿತ್ರರಂಗಕ್ಕೆ ಅದರದೇಯಾದ ಅದ್ಭುತ ಪರಂಪರೆ, ಇತಿಹಾಸವಿದೆ. ನಾವು ಅದನ್ನು ಗೌರವಿಸಬೇಕು. ನಮ್ಮ ಚಿತ್ರರಂಗ ಚಿಕ್ಕದು ಎಂದು ನಾನು ಯಾವತ್ತೂ ಹೇಳುವುದಿಲ್ಲ. ನಮ್ಮ ಚಿತ್ರರಂಗಕ್ಕೆ ಏನಾದರೂ ಸಮಸ್ಯೆ ಬಂದರೆ ಜನರು ನನಗೆ ಕೊಟ್ಟಿರುವ ಬಲದಿಂದ ನಾನು ಹೋರಾಡುತ್ತೇನೆ. ಕನ್ನಡ ಚಿತ್ರರಂಗದ ಪ್ರತಿಯೊಬ್ಬ ನಟ-ನಟಿ, ನಿರ್ದೇಶಕ, ನಿರ್ಮಾಪಕರು ಉತ್ತಮ ಸಿನಿಮಾಗಳನ್ನು ನಿರ್ಮಿಸಬೇಕು. ಆಗ ನಮ್ಮ ಚಿತ್ರರಂಗ ಮತ್ತಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದು ರಾಕಿಬಾಯ್ ಹೇಳಿಕೊಂಡಿದ್ದರು.