ಹಂಪಿಯಲ್ಲಿ ಪ್ರವಾಸಿಗರಿಂದ ಕೋವಿಡ್ ನಿಯಮ ಉಲ್ಲಂಘನೆ, ಸ್ಥಳೀಯರಲ್ಲಿ ಆತಂಕ

Share and Enjoy !

Shares
Listen to this article

ವಿಜಯನಗರ ವಾಣಿ

ಲಾಕ್ ಡೌನ್ ತೆರವು ಮಾಡಿದ ನಂತರ ಪ್ರವಾಸಿ ಸ್ಥಳಗಳಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಾಗುತ್ತಿದೆ. ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲ್ಲೂಕಿನಲ್ಲಿರುವ ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿ ಸಹ ಕಳೆದ 15 ದಿನಗಳಿಂದ 20 ಸಾವಿರಕ್ಕೂ ಹೆಚ್ಚು ಪ್ರವಾಸಿಗರು ಭೇಟಿ ನೀಡಿದ್ದಾರೆ. ಈ ವೇಳೆ ಪ್ರವಾಸಿಗರಿಂದ ಕೋವಿಡ್ ನಿಯಮ ಉಲ್ಲಂಘನೆ ಎದ್ದು ಕಂಡುಬರುತ್ತಿತ್ತು. ಇದರಿಂದ ಹಂಪಿ ಸುತ್ತಮುತ್ತ ಮುಂದಿನ ದಿನಗಳಲ್ಲಿ ಕೋವಿಡ್ ವೇಗವಾಗಿ ಹಬ್ಬಿದರೂ ಅಚ್ಚರಿಯಿಲ್ಲ.

ಪ್ರವಾಸಿಗರು ಸಾಮಾಜಿಕ ಅಂತರ ಕಾಯ್ದುಕೊಳ್ಳದೆ, ಮಾಸ್ಕ್ ಧರಿಸದೆ, ಸ್ಯಾನಿಟೈಸರ್ ಬಳಸದೆ ಓಡಾಡುತ್ತಿದ್ದಾರೆ. ಪ್ರವಾಸಿಗರು ಕೋವಿಡ್ ನಿಯಮ ಪಾಲಿಸುತ್ತಿದ್ದಾರೆಯೇ ಎಂದು ತಪಾಸಣೆ ಮಾಡಲು ಹಂಪಿಯಲ್ಲಿ ಬೆರಳೆಣಿಕೆಯ ಭದ್ರತಾ ಸಿಬ್ಬಂದಿ ಮಾತ್ರ ಇದ್ದಾರೆ. ಆದರೆ ಪ್ರವಾಸಿಗರು ನಿಯಮಗಳನ್ನು ಗಾಳಿಗೆ ತೂರಿ ಓಡಾಡುತ್ತಿದ್ದಾರೆ. ಸ್ಥಳೀಯ ನಿವಾಸಿಗಳಿಗೆ ಆತಂಕವಾಗಿದೆ ಎಂದು ಪ್ರವಾಸಿ ಗೈಡ್ ಒಬ್ಬರು ಹೇಳುತ್ತಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಹಂಪಿ ವಿಶ್ವ ಪಾರಂಪರಿಕ ಪ್ರದೇಶ ನಿರ್ವಹಣಾ ಪ್ರಾಧಿಕಾರದ ಆಯುಕ್ತ ಸಿದ್ದರಾಮೇಶ್ವರ್, ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿರುವ ಪ್ರವಾಸಿಗರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಪ್ರದೇಶ ಬಹಳ ದೊಡ್ಡದಾಗಿರುವುದರಿಂದ ಪ್ರತಿಯೊಬ್ಬರ ಮೇಲೂ ನಿಗಾ ವಹಿಸುವುದು ಕಷ್ಟ. ಅಷ್ಟಕ್ಕೂ ಪ್ರವಾಸಿಗರಿಗೇ ಹಂಪಿಗೆ ಭೇಟಿ ನೀಡುವಾಗ ಜವಾಬ್ದಾರಿಯಿರಬೇಕು. ಕೋವಿಡ್ ಪ್ರಕರಣಗಳು ಹೆಚ್ಚಾದರೆ ತಾತ್ಕಾಲಿಕವಾಗಿ ಭೇಟಿಗೆ ಪ್ರವೇಶ ನಿರ್ಬಂಧಿಸುವ ಬಗ್ಗೆ ಕೂಡ ಯೋಚಿಸುತ್ತಿದ್ದೇವೆ ಎಂದರು.

ಸಾಮಾಜಿಕ ಕಾರ್ಯಕರ್ತ ಪ್ರಭು ಪಾಟೀಲ್, ಕೋವಿಡ್ ನಿರ್ಬಂಧ ನಂತರ ಉದ್ಯಮ ಚಟುವಟಿಕೆಗಳು ಮತ್ತೆ ಸಹಜ ಸ್ಥಿತಿಗೆ ಬಂದಾಗ ಸ್ಥಳೀಯರಿಗೆ ಖುಷಿಯಾಗಿತ್ತು. ಆದರೆ ಪ್ರವಾಸಿಗರು ಕೋವಿಡ್ ನಿಯಮ ಉಲ್ಲಂಘಿಸುತ್ತಿರುವುದು, ಹಂಪಿ ಆಡಳಿತ ಶಿಸ್ತುಬದ್ಧವಾಗಿ ವರ್ತಿಸದಿರುವುದು ಆತಂಕ ಮೂಡಿಸುತ್ತಿದೆ ಎನ್ನುತ್ತಾರೆ.

ಪ್ರಕರಣಗಳು ಇನ್ನೂ ಹೆಚ್ಚಿರುವ ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶದಿಂದ ಹಲವಾರು ಪ್ರವಾಸಿಗರು ಬರುತ್ತಿದ್ದಾರೆ. ಅಧಿಕಾರಿಗಳು ಆರ್‌ಟಿ-ಪಿಸಿಆರ್ ಪರೀಕ್ಷಾ ವರದಿಗಳು ಅಥವಾ ವ್ಯಾಕ್ಸಿನೇಷನ್ ಪ್ರಮಾಣಪತ್ರಗಳನ್ನು ಹೆಚ್ಚು ಕೂಲಂಕಷವಾಗಿ ಪರಿಶೀಲಿಸಬೇಕು. ಕಳೆದ ವರ್ಷ ಸಾಂಕ್ರಾಮಿಕ ರೋಗ ಹರಡಿದ ನಂತರ ಪ್ರವಾಸಿಗರಿಗೆ ಹಂಪಿಯನ್ನು ಎರಡು ಬಾರಿ ಮುಚ್ಚಲಾಯಿತು. ಕೋವಿಡ್‌ನ ಎರಡನೇ ಅಲೆ ಸಮಯದಲ್ಲಿ, ಹಂಪಿಯನ್ನು ಎರಡು ತಿಂಗಳಿಗಿಂತ ಹೆಚ್ಚು ಕಾಲ ಮುಚ್ಚಲಾಯಿತು. ಭಾರತೀಯ ಪುರಾತತ್ವ ಇಲಾಖೆ (ಎಎಸ್ಐ) ಜೂನ್ ಮಧ್ಯದಲ್ಲಿ ಕರ್ನಾಟಕದಲ್ಲಿ ಸ್ಮಾರಕಗಳನ್ನು ತೆರೆಯುವುದಾಗಿ ಘೋಷಿಸಿದ ನಂತರ, ಪ್ರವಾಸಿಗರ ಸಂಖ್ಯೆ ಹೆಚ್ಚಾಯಿತು. ಹಂಪಿ ಬಳಿ ಹೆಚ್ಚಿನ ಹೋಂ ಸ್ಟೇಗಳನ್ನು ಸ್ಥಾಪಿಸಲು ಅಧಿಕಾರಿಗಳು ಯೋಜಿಸುತ್ತಿದ್ದಾರೆ ಎಂದು ಪ್ರಭು ಪಾಟೀಲ್ ಹೇಳಿದರು.

Share and Enjoy !

Shares