ಡಿ ಬಾಸ್ ಪರ ಮಾತನಾಡಿದ ಸಚಿವ ಬಿ.ಸಿ.ಪಾಟಿಲ್

Share and Enjoy !

Shares
Listen to this article

 BP NEWS  ಜುಲೈ 16:  ಮೈಸೂರಿನ ಸಂದೇಶ್ ಹೋಟೆಲ್‌ನ ಸಪ್ಲೈಯರ್ ಮೇಲೆ ನಟ ದರ್ಶನ್ ಮತ್ತು ಅವರ ಸ್ನೇಹಿತರು ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಈಗ ಭಾರಿ ಸದ್ದು ಮಾಡುತ್ತಿದೆ. ಶುಕ್ರವಾರ (ಜುಲೈ 16) ಪೊಲೀಸರು ಸಂದೇಶ್ ಹೋಟೆಲ್‌ಗೆ ಹೋಗಿ ವಿಚಾರಣೆಯನ್ನೂ ಮಾಡಿದ್ದಾರೆ. ಈ ನಡುವೆ ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ನಟ ದರ್ಶನ್ ಅವರ ಪರ ಬ್ಯಾಟ್ ಬೀಸಿದ್ದಾರೆ.

ವಿಧಾನಸೌಧದಲ್ಲಿ ಮಾಧ್ಯಮಗ ಜೊತೆಗೆ ಮಾತನಾಡಿದ ಅವರು, ‘ದರ್ಶನ್ ತುಂಬ ಒಳ್ಳೆಯ ವ್ಯಕ್ತಿ. ಅವರು ಬಹಳ ಕಷ್ಟದಿಂದ ಬೆಳೆದು ಈ ಮಟ್ಟಕ್ಕೆ ಬಂದಿದ್ದಾರೆ. ದರ್ಶನ್‌ ಅವರ ತೇಜೋವಧೆ ಮಾಡುವ ಪ್ರಯತ್ನಗಳು ನಡೆದಿವೆ. ದರ್ಶನ್ ಅವರು ಯಾವುದೇ ಅಪರಾಧ ಮಾಡಿಲ್ಲ. ಅವರನ್ನು ಕೃಷಿ ಇಲಾಖೆಯ ರಾಯಭಾರಿ ಸ್ಥಾನದಿಂದ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟನೆ ನೀಡಿದ್ದಾರೆ.

ತಲೆ ಕತ್ತರಿಸುವೆ ಎಂಬ ದರ್ಶನ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವರು, ‘ಅವರು ಹೇಳಿದ್ದನ್ನು ನಾನು ಕೇಳಿದ್ದೇನೆ. ರೆಕ್ಕೆ-ಪುಕ್ಕ ಹುಟ್ಟಿಕೊಳ್ಳುತ್ತವೆ ಎಂಬ ಮಾತಿಗೆ ಅವರು ಹಾಗೇ ಹೇಳಿದ್ದಾರೆ. ಯಾರದೋ ತಲೆ ಕಡಿಯುವೆ ಎಂಬ ಅರ್ಥದಲ್ಲಿ ಅವರು ಹೇಳಿದ್ದಲ್ಲ. ಯಾವುದೇ ಗಾಡ್ ಫಾದರ್ ಇಲ್ಲದೇ ಬೆಳೆದು ಬಂದವರು ಅವರು. ದರ್ಶನ್‌ ಅವರು ಒಳ್ಳೆಯ ಹೃದಯ ಇರುವಂತಹ ವ್ಯಕ್ತಿ. ಚಿತ್ರರಂಗದ ಹೊಸ ನಟರಿಗೆ ಅವರು ಬಹಳ ಪ್ರೋತ್ಸಾಹ ನೀಡುತ್ತಾರೆ. ಅವರನ್ನು ಬೆಳೆಸುತ್ತಾರೆ’ ಎಂದು ಹೇಳಿದ ಅವರು, ‘ಆಮೇಲೆ ಪೊಲೀಸ್ ಇಲಾಖೆ ಯಾರ ಕೈಯಲ್ಲೂ ಇಲ್ಲ’ ಎಂದಿದ್ದಾರೆ.

ಕೆಲ ದಿನಗಳ ಹಿಂದೆ ನಟ ದರ್ಶನ್ ಅವರು ಮೈಸೂರಿನ ಸಂದೇಶ್ ಹೋಟೆಲ್‌ನ ಸಪ್ಲೈಯರ್ ಮೇಲೆ ಹಲ್ಲೆ ಮಾಡಿದ್ದರು. ಹಲ್ಲೆಗೆ ಒಳಗಾದ ವ್ಯಕ್ತಿ ಗಂಭೀರವಾಗಿದ್ದಾನೆ ಎಂದು ನಿರ್ದೇಶಕ ಇಂದ್ರಜಿತ್ ಲಂಕೇಶ್‌ ಗುರುವಾರ (ಜುಲೈ 15) ಆರೋಪ ಮಾಡಿದ್ದರು. ಈ ವಿಚಾರ ಭಾರಿ ಚರ್ಚೆಗೆ ಗ್ರಾಸವಾಗಿದೆ. ಪ್ರಕರಣದ ಸಂಬಂಧ ಗೃಹ ಸಚಿವರನ್ನೂ ಇಂದ್ರಜಿತ್ ಭೇಟಿಯಾಗಿದ್ದರು. ಇದಾದ ಬಳಿಕ ಪ್ರಕರಣದ ಕುರಿತು ಸಮಗ್ರ ತನಿಖೆ ನಡೆಸುವಂತೆ ಮೈಸೂರು ಪೊಲೀಸರಿಗೆ ಗೃಹ ಸಚಿವರು ಸೂಚಿಸಿದ್ದರು. ಅಂತೆಯೇ ಇಂದು ಸಂದೇಶ್ ದಿ ಪ್ರಿನ್ಸ್ ಹೋಟೆಲ್‌ಗೆ ಭೇಟಿಕೊಟ್ಟ ಪೊಲೀಸರು, ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ. ಜೊತೆಗೆ ಹೋಟೆಲ್ ಸಿಬ್ಬಂದಿ, ಹೋಟೆಲ್ ಮಾಲೀಕ ಸಂದೇಶ್, ಹಲ್ಲೆಗೊಳಗಾಗಿದ್ದಾರೆ ಎನ್ನಲಾದ ಗಂಗಾಧರ್ ಎಂಬುವರಿಂದ ಮಾಹಿತಿ ಪಡೆಯುತ್ತಿದ್ದಾರೆ.

 

Share and Enjoy !

Shares