ಕೊರೋನ ಹಿನ್ನೆಲೆ ಮಾಸ್ಕ್ ಬಳಕೆಯಿಂದ ಅಸ್ತಮಾ, ಉಸಿರಾಟದ ಸೋಂಕಿನ ಸಂಖ್ಯೆಯಲ್ಲಿ ಇಳಿಕೆ

ವಿಜಯನಗರ ವಾಣಿ

ಕೋವಿಡ್ 19 ಜಗತ್ತಿನಲ್ಲಿ ಶರವೇಗದಲ್ಲಿ ವ್ಯಾಪಿಸುತ್ತಿರುವ ಹಿನ್ನೆಲೆ ಸರ್ಕಾರ ಲಾಕ್‍ಡೌನ್, ಮಾಸ್ಕ್ ಮೂಲಕ ಕೊರೋನಾ ನಿಯಂತ್ರಿಸಲು ಪ್ರಯತ್ನಿಸಿತು. ಭಾಗಶಃ ಯಶಸ್ವಿಯೂ ಆಯಿತು. ಆದರೆ ಇದೀಗ ಲಾಕ್‍ಡೌನ್ ತೆಗೆದರೂ ಮಾಸ್ಕ್ ಹಾಕಿಕೊಳ್ಳುವುದು ಮಾತ್ರ ಕಡ್ಡಾಯವೇ ಆಗಿದೆ. ಇದರಿಂದ ಕೊರೋನಾ ನಿಯಂತ್ರಣ ಸಾಧ್ಯವಾಗಿರುವುದಲ್ಲದೇ ಅಸ್ತಮಾ, ಉಸಿರಾಟದ ತೊಂದರೆಗಳು ಸ್ವಲ್ಪ ಮಟ್ಟಿಗೆ ತಗ್ಗಿವೆ ಎಂದು ವೈದ್ಯರು ಹೇಳುತ್ತಾರೆ. ಕೋವಿಡ್ ವ್ಯಕ್ತಿಯ ಉಸಿರಾಟದ ವ್ಯವಸ್ಥೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಅದರಲ್ಲೂ ಅಸ್ತಮಾ ಹಾಗೂ ಇನ್ನಿತರೆ ಉಸಿರಾಟದ ತೊಂದರೆ ಅನುಭವಿಸುತ್ತಿರುವವರಿಗೆ ಭಾರೀ ಅಪಾಯ ತಂದೊಡ್ಡಲಿದೆ ಎಂದು ಹೇಳಲಾಗಿತ್ತು. ಆದರೆ ಸತತ ಒಂದೂವರೆ ವರ್ಷಗಳ ನಂತರ ಸಾಮಾಜಿಕ ಅಂತರ, ಮಾಸ್ಕ್, ಸ್ಯಾನಿಟೈಜೇಷನ್ ಇವೆಲ್ಲವೂ ಉಸಿರಾಟದ ತೊಂದರೆಗಳನ್ನು ಬಹಳಷ್ಟು ಕಡಿಮೆ ಮಾಡಿವೆ ಎಂದು ವೈದ್ಯರು ಹಾಗೂ ತಜ್ಞರು ಹೇಳುತ್ತಾರೆ.

ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯ ಶ್ವಾಸಕೋಶ ವಿಭಾಗದ ಮುಖ್ಯಸ್ಥ ಮತ್ತು ಸಲಹೆಗಾರ ಡಾ. ಸತ್ಯನಾರಾಯಣ ಮೈಸೂರು ಹೇಳುವಂತೆ, ಮಾಸ್ಕ್‌ಗಳು ಜನರಿಗೆ ಅಲರ್ಜಿಯಾಗದಂತೆ ತಡೆದಿದೆ. ಅಂದರೆ ಮಾಸ್ಕ್‌ಗಳು ಗಾಳಿಯಿಂದ ಸಂಭವಿಸುವ ವಿವಿಧ ಅಲರ್ಜಿಗಳು ಉಂಟಾಗದಂತೆ ತಡೆಹಿಡಿದಿದೆ. ಇದರಿಂದ ಅಸ್ತಮಾ ರೋಗಿಗಳಿಗೆ ತುಂಬಾ ಅನುಕೂಲವಾಗಿದೆ. ಸಾಮಾನ್ಯವಾಗಿ ಮಳೆಗಾಲದಲ್ಲಿ ಅಸ್ತಮಾ, ಉಸಿರಾಟದ ತೊಂದರೆ ಎಂದು ಆಸ್ಪತ್ರೆಗಳು ಈ ರೋಗಿಗಳಿಂದಲೇ ತುಂಬಿ ತುಳುಕುತ್ತಿತ್ತು. ಮಾಸ್ಕ್ ಅಸ್ತಮಾ ರೋಗಿಗಳಿಗೆ ಒಂದು ವರದಾನವೇ ಆಗಿದೆ. ಜನರು ಕೆಲವು ಗಂಟೆಗಳ ಕಾಲ ಮಾಸ್ಕ್ ಧರಿಸಿದರೆ ಉಸಿರುಗಟ್ಟುತ್ತದೆ ಎಂದು ಹೇಳುತ್ತಾರೆ. ಆದರೆ ವೈದ್ಯಕೀಯ ಸಿಬ್ಬಂದಿ 10 ರಿಂದ 12 ಗಂಟೆಗಳ ಕಾಲ ಡಬಲ್ ಮಾಸ್ಕ್ ಹಾಕುತ್ತಾರೆ.

ಮಾಸ್ಕ್‌ಗಳ ಜೊತೆಗೆ ಸಾಮಾಜಿಕ ಅಂತರ, ಸ್ಯಾನಿಟೈಜೇಷನ್, ಲಾಕ್‍ಡೌನ್, ಮನೆಯಲ್ಲೇ ಇರುವುದು ಇವೆಲ್ಲವೂ ಕೂಡ ವಾಯುಮಾಲಿನ್ಯ ಕುಸಿತಕ್ಕೆ ಕಾರಣವಾಗಿದೆ. ಇದರಿಂದ ಅಸ್ತಮಾ ಇತರೆ ರೋಗಿಗಳ ಆರೋಗ್ಯದಲ್ಲೂ ಸುಧಾರಣೆ ಕಂಡಿದೆ.

ಕೋವಿಡ್‍ನ ಏಕಾಏಕಿ ಹರಡುವಿಕೆಯಿಂದಾಗಿ ದೇಶದ ಇತರೆ ಭಾಗಗಳಲ್ಲಿ ಉಸಿರಾಟದ ತೊಂದರೆ ಹಾಗೂ ಅಸ್ತಮಾ ರೋಗಿಗಳು ಕಡಿಮೆಯಾಗಿದ್ದಾರೆ. ವಾಯುವಿನಲ್ಲಿನ ವಿಷದ ಕಣಗಳು ಅಸ್ತಮಾ ರೋಗಿಗಳಿಗೆ ತಗುಲದಂತೆ ಮಾಸ್ಕ್‌ಗಳು ತಡೆದಿದೆ. ವಾಯುವಿನಲ್ಲಿರುವ ವಿಷಕಾರಕಗಳು ಅಸ್ತಮಾ ಹೆಚ್ಚಾಗಲು ಕಾರಣವಾಗುತ್ತದೆ. ಆದರೆ ಇದರ ಸೋಂಕು ತಗುಲದಂತೆ ಮಾಸ್ಕ್ ನೋಡಿಕೊಂಡಿದೆ ಎಂದು ನವದೆಹಲಿಯ ಬಿಎಲ್‍ಕೆ ಮ್ಯಾಕ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಎದೆ ಮತ್ತು ಉಸಿರಾಟ ತೊಂದರೆ ನಿವಾರಣೆಯ ಹಿರಿಯ ನಿರ್ದೇಶಕರು ಮತ್ತು ಎಚ್‍ಒಡಿ ಆದ ಡಾ. ಸಂದೀಪ್ ನಾಯರ್ ಹೇಳುತ್ತಾರೆ.

ಆಸ್ಪತ್ರೆಗಳಿಗೆ ರೋಗಿಗಳು ಬರುವುದು ಕಡಿಮೆಯಾಗಿದೆ. ಮಾಲಿನ್ಯಕ್ಕೆ ತೆರೆದುಕೊಳ್ಳುವುದು ಕಡಿಮೆಯಾದರೆ ಗಮನಾರ್ಹವಾಗಿ ಸೋಂಕಿನ ತೀವ್ರತೆಯು ಕಡಿಮೆಯಾಗುತ್ತದೆ. ಜೊತೆಗೆ ಅಸ್ತಮಾಕ್ಕೆ ಸಂಬಂಧಿಸಿದ ಇನ್‍ಫ್ಲುಯೆನ್ಜಾ ಎಂಬ ಕಾಯಿಲೆಗಳು ದೂರವಾಗುತ್ತದೆ ಎಂದು ನವಿ ಮುಂಬಯಿಯ ಹಿರಿಯ ಆರೋಗ್ಯ ಸಲಹೆಗಾರ ಡಾ.ಪ್ರಶಾಂತ್ ಚಾಜೆದ್ ಹೇಳಿದರು.

ಮಳೆಗಾಲದಲ್ಲಿ ಅಸ್ತಮಾ ಮತ್ತು ಇತರೆ ಸೋಂಕುಗಳು ಸಾಮಾನ್ಯ. ಶಾಲೆಗಳು ಮುಚ್ಚಲ್ಪಟ್ಟಿರುವುದು, ಸ್ನೇಹಿತರು ಹೊರಗೆ ಭೇಟಿ ಮಾಡದಿರುವುದು ಇವುಗಳಿಂದ ಸೋಂಕು ಹರಡುವುದು ಕಡಿಮೆಯಾಗಿದೆ. ಅಕಸ್ಮಾತ್ ಜನರು ಸ್ನೇಹಿತರನ್ನು ಭೇಟಿ ಮಾಡಿದರೂ ಸಾಮಾಜಿಕ ಅಂತರ ಕಾಯ್ದುಕೊಳ್ಳುತ್ತಾರೆ. ಇದು ಮಕ್ಕಳಲ್ಲಿ ಉಬ್ಬಸ ಸಮಸ್ಯೆ ಶೇ. 50 ರಷ್ಟು ಕಡಿಮೆಯಾಗಿದೆ. ವಾಹನ ಸಂಚಾರ ಕಡಿಮೆಯಾದ ಕಾರಣ ವಾಯುಮಾಲಿನ್ಯವೂ ಕಡಿಮೆಯಾಗಿದೆ. ಇನ್ನು ಮಾಸ್ಕ್‌ಗಳಿಂದ ಅಸ್ತಮಾದಂತಹ ಕಾಯಿಲೆಗಳು ದೂರವಾಗಿದೆ ಎಂದು ಬೆಂಗಳುರಿನ ತಜ್ಞವೈದ್ಯರಾದ ಡಾ. ಶ್ರೀಕಾಂತ್ ಹೇಳುತ್ತಾರೆ.

Share and Enjoy !

Shares