ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆ ರೈತರಿಗೆ ಗುಣಮಟ್ಟದ ಬಿತ್ತನೆ ಬೀಜ ವಿತರಿಸಿ: ಸಂಸದ ಸಂಗಣ್ಣ ಕರಡಿ

Share and Enjoy !

Shares

ಕೊಪ್ಪಳ: ಜಿಲ್ಲೆಯ ರೈತರಿಗೆ ಗುಣಮ ಟ್ಟದ ಬಿತ್ತನೆ ಬೀಜ ವಿತರಿಸಿ, ಕಳಪೆ ಬೀಜ ಮಾರುವ ಡೀಲರ್‍ಗಳ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಿ ಎಂದು ಕೊಪ್ಪಳ ಸಂಸದರು ಹಾಗೂ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತು ವಾರಿ ಸಮಿತಿ(ದಿಶಾ)ಯ ಅಧ್ಯಕ್ಷರಾದ ಸಂಗಣ್ಣ ಕರಡಿ ಅಧಿಕಾರಿಗಳಿಗೆ ಸೂಚನೆ ನೀಡಿದರು. ಶುಕ್ರವಾರದಂದು ಜಿಲ್ಲಾಡಳಿತ ಭವನದ ಆಡಿಟೋರಿಯಂ ಸಭಾಂಗಣದಲ್ಲಿ ಜಿಲ್ಲಾ ಪಂಚಾಯತಿ ವತಿಯಿಂದ ಆಯೋಜಿಸಲಾಗಿದ್ದ ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ(ದಿಶಾ) ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ರೈತರಿಗೆ ಕಳಪೆ ಬಿತ್ತನೆ ಬೀಜಗಳನ್ನು ವಿತರಿಸಿ ಡೀಲರ್‍ಗಳು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ಇದರಿಂದ ರೈತರಿಗೆ ನಿರೀಕ್ಷಿತ ಇಳುವರಿ ಬಾರದೆ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಆದ್ದರಿಂದ ನಕಲಿ ಅಥವಾ ಕಳಪೆ ಬಿತ್ತನೆ ಬೀಜ ವಿತರಿಸುವ ಡೀಲರ್‍ಗಳ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕಾನೂನು ಕ್ರಮ ಕೈಗೊಂಡು ಅವರ ಪರವಾನಗಿಯನ್ನು ರದ್ದುಗೊಳಿಸಿ. ಹಾಗೂ ರಸಗೊಬ್ಬರಗಳ ಕೃತಕ ಅಭಾವ ಸೃಷ್ಠಿಸುವ ಡೀಲರ್‍ಗಳ ಬಗ್ಗೆಯೂ ಪರಿಶೀಲನೆ ನಡೆಸಿ ಕ್ರಮ ಕೈಗೊಳ್ಳಿ ಎಂದು ಅವರು ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಪ್ರಸ್ತುತ ಜಿಲ್ಲೆಯಲ್ಲಿ ಬೆಳೆ ಕಟಾವು ಪ್ರಯೋಗಗಳ ಸಮೀಕ್ಷೆ (ಬೆಳೆ ಸಮೀಕ್ಷೆ) ನಡೆಯುತ್ತಿದ್ದು, ಸಮೀಕ್ಷೆಯಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳು, ಸಿಬ್ಬಂದಿ ಬೆಳೆ ಸಮೀಕ್ಷೆಯ ನೈಜ ದತ್ತಾಂಶಗಳನ್ನು ದಾಖಲು ಮಾಡಬೇಕು. ರೈತರಿಗೆ ಬೆಳೆ ವಿಮೆ ದೊರಕಲು ಬೆಳೆ ಸಮೀಕ್ಷೆಯ ವರದಿಯೂ ಕಾರಣವಾಗಿ ರುವುದರಿಂದ ಎಚ್ಚರಿಕೆಯಿಂದ ಹಾಗೂ ವ್ಯವಸ್ಥಿತವಾಗಿ ಕಾರ್ಯ ನಿರ್ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿ. ಪ್ರಧಾನಮಂತ್ರಿ ಸಿಂಚಾಯ ಯೋಜನೆಯಡಿ ಜಿಲ್ಲೆಯಲ್ಲಿ ಇದುವರೆಗೂ 10,370 ರೈತರಿಗೆ ಸ್ಪ್ರಿಂಕ್ಲರ್‍ಗಳನ್ನು ಒದಗಿಸಲಾಗಿದೆ. ಬಾಕಿ ಉಳಿದ ರೈತರಿಗೂ ಶೀಘ್ರ ಈ ಸೌಲಭ್ಯ ಒದಗಿಸಿ ಎಂದು ಅವರು ಕೃಷಿ ಅಧಿಕಾರಿಗಳಿಗೆ ತಿಳಿಸಿದರು.
ರೈತರ ಉತ್ಪಾದಕ ಸಂಸ್ಥೆಗಳು ಜಿಲ್ಲೆಯಲ್ಲಿ ಕಡ್ಡಾಯವಾಗಿ ಕಚೇರಿ ಮತ್ತು ಅಗತ್ಯ ಸಿಬ್ಬಂದಿಯನ್ನು ಹೊಂದಿರಬೇಕು. ಅಲ್ಲದೆ ಅದಕ್ಕೆ ಸಂಬಂಧಿಸಿದ ಎನ್‍ಜಿಒಗಳು ಜಿಲ್ಲೆಯ ರೈತರಿಗೆ ಪೂರಕವಾಗಿ ಕಾರ್ಯನಿರ್ವಹಿಸಬೇಕು. ಇದರಿಂದ ಜಿಲ್ಲೆಯ ರೈತರಿಗೆ ಉತ್ಪಾದಕತೆ, ಉತ್ಪನ್ನಗಳ ಮೌಲ್ಯ ವರ್ಧನೆ, ಮಾರುಕಟ್ಟೆ ಸಂಪರ್ಕ ಮುಂತಾದ ಅವಶ್ಯಕತೆಗಳನ್ನು ವ್ಯವಸ್ಥಿತವಾಗಿ ಪೂರೈಸಲು ಸಹಕಾರಿಯಾಗುತ್ತದೆ. ಎಫ್‍ಪಿಒಗಳು ರೈತರ ಸಮಗ್ರ ಕಲ್ಯಾಣಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳಬೇಕು. ಈ ಬಗ್ಗೆ ಜಿಲ್ಲೆಯಲ್ಲಿರುವ ಎಫ್‍ಪಿಒ ಪ್ರತಿನಿಧಿಗೆ ಅಗತ್ಯ ಸೂಚನೆ ನೀಡಿ ಎಂದು ಅವರು ಹೇಳಿದರು.
ಖಾರಿಫ್ ಬೆಳೆವಿಮೆಗಾಗಿ ಜಿಲ್ಲೆಯಲ್ಲಿ ಒಟ್ಟು 83,949 ರೈತರು 952.25 ಲಕ್ಷ ಮೊತ್ತದ ವಿಮೆ ಕಂತನ್ನು ಪಾವತಿಸಿದ್ದು, ಅದರಲ್ಲಿ 10,389 ರೈತರಿಗೆ ಮಾತ್ರ ರೂ.1035 ಲಕ್ಷ ಬೆಳೆ ವಿಮೆ ಜಮೆಯಾಗಿದೆ. ಬಾಕಿ ಉಳಿದ ರೈತರಿಗೆ ಬೆಳೆ ವಿಮೆ ಜಮೆಯಾಗದಿರಲು ಕಾರಣಗಳೇನು, ಅವುಗಳಲ್ಲಿ ಸರಿಪಡಿಸಬಹುದಾದ ಅಂಶಗಳು ಎಷ್ಟು ಮುಂತಾದವುಗಳ ಕುರಿತು ವಿವರಗಳನ್ನು ಸಲ್ಲಿಸಿ. ಹಾಗೂ ಸಣ್ಣ ಪುಟ್ಟ ತಾಂತ್ರಿಕ ತೊಂದರೆಗಳಿರುವ ರೈತರ ಖಾತೆಗಳನ್ನು ಪರಿಶೀಲಿಸಿ ಅವರಿಗೆ ಶೀಘ್ರ ಬೆಳೆವಿಮೆ ದೊರುಕುವಂತೆ ಕ್ರಮ ಕೈಗೊಳ್ಳಿ. ಜಿಲ್ಲೆಯ ಪ್ರತಿ ರೈತ ಸಂಪರ್ಕ ಕೇಂದ್ರಗಳಲ್ಲಿ, ಬಿತ್ತನೆ ಬೀಜ, ರಸಗೊಬ್ಬರ ಸೇರಿದಂತೆ ಕೃಷಿಗೆ ಸಂಬಂಧಿಸಿದ ಪರಿಕರಗಳ ಮಾರಾಟ ದರವನ್ನು ಕಡ್ಡಾಯವಾಗಿ ಪ್ರಕಟಿಸಬೇಕು ಎಂದು ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 4 ಖಾಸಗಿ ಗೋಶಾಲೆಗಳಿವೆ. ಸರ್ಕಾರದಿಂದ ಪ್ರತಿ ತಾಲ್ಲೂಕಿನಲ್ಲಿ ಗೋಶಾಲೆಗಳನ್ನು ನಿರ್ಮಿಸಲು ನಿವೇಶನ ಗುರುತಿಸಿ. ಅಗತ್ಯ ಮೂಲಭೂತ ಸೌಕರ್ಯಗಳಿರುವ ಪ್ರದೇಶಗಳಲ್ಲಿ ಗೋಶಾಲೆ ನಿರ್ಮಿಸಿ. ನಗರ, ಪಟ್ಟಣಗಳ ಮುಖ್ಯ ರಸ್ತೆಗಳಲ್ಲಿ ಬಿಡಾಡಿ ದನಗಳ ಹಾವಳಿ ಹೆಚ್ಚಾಗಿದೆ. ಇದರಿಂದ ಆಗಾಗ ಅಪಘಾತಗಳೂ ಸಂಭವಿಸುತ್ತವೆ. ಆದ್ದರಿಂದ ವಾರಸುದಾರರಿದ್ದೂ ರಸ್ತೆಗಳಲ್ಲಿ ಸಂಚರಿಸುವ ದನಗಳನ್ನು ಗೋಶಾಲೆಗೆ ಸೇರಿಸಿ. ದನಗಳ ಮಾಲೀಕರು ಅವುಗಳನ್ನು ಹಿಂಪಡೆಯಲು ಬಂದಾಗ ಸೂಕ್ತ ಎಚ್ಚರಿಕೆ ನೀಡಿ ಅವುಗಳನ್ನು ಮರಳಿಸಿ. ಇದರಿಂದ ದನಗಳ ಮಾಲೀಕರು ತಮ್ಮ ದನಗಳನ್ನು ರಸ್ತೆಗೆ ಬಿಡುವು ದನ್ನು ನಿಯಂತ್ರಿಸಬಹುದು. ಜಿಲ್ಲೆಗೆ ಪಶುಸಂಗೋಪನಾ ಮಹಾವಿದ್ಯಾಲಯ ಮಂಜೂರಾಗಿದ್ದು, ಶೀಘ್ರದಲ್ಲಿ ಅಗತ್ಯ ಪ್ರಮಾಣದ ನಿವೇಶನವನ್ನು ಗುರುತಿಸಿ ಮಹಾವಿದ್ಯಾಲಯದ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಿ ಎಂದು ಸಂಸದರು ತಿಳಿಸಿದರು.
ರಾಜ್ಯ ಸರ್ಕಾರದಿಂದ ಜಿಲ್ಲೆಗೆ ತೋಟಗಾರಿಕೆ ತಂತ್ರಜ್ಞಾನ ಪಾರ್ಕ್(ಹಾರ್ಟಿಕಲ್ಚರ್ ಟೆಕ್ನಾಲಜಿ ಪಾರ್ಕ್) ಮಂಜೂರಾಗಿದ್ದು, ಇದಕ್ಕಾಗಿ ಜಿಲ್ಲಾ ತೋಟಗಾರಿಕೆ ಇಲಾಖೆಯಿಂದ ರೂ.100 ಕೋಟಿ ಮೊತ್ತದ ಪ್ರಸ್ತಾವ ನೆಯನ್ನು ಸರ್ಕಾರಕ್ಕೆ ಸಲ್ಲಿಸಲಾಗಿದೆ. ತೋಟಗಾರಿಕೆ ತಂತ್ರಜ್ಞಾನ ಪಾರ್ಕ್‍ನಲ್ಲಿ ದಾಳಿಂಬೆ, ಪೇರಲ, ಸೀತಾಫಲ ಸೇರಿದಂತೆ 10 ತೋಟಗಾರಿಕೆ ಬೆಳೆಗಳ ಸಂಸ್ಕರಣೆ, ಉಪ ಉತ್ಪನ್ನಗಳ ಉತ್ಪಾದನೆ, ಮೌಲ್ಯ ವರ್ಧನೆ, ಔಷಧೀಯ ಮತ್ತು ಸುಗಂಧ ಉತ್ಪನ್ನಗಳನ್ನು ಉತ್ಪಾದಿಸಬಹುದು. ಇವುಗಳಿಗೆ ಸೂಕ್ತ ಮಾರುಕಟ್ಟೆ ವ್ಯವಸ್ಥೆಯನ್ನು ಒದಗಿಸುವುದರ ಮೂಲಕ ಜಿಲ್ಲೆಯ ಉತ್ಪನ್ನಗಳಿಗೆ ಬ್ರಾಂಡ್ ಕಲ್ಪಿಸಿಕೊಡಬಹುದು. ಮುಂದಿನ ದಿನಗಳಲ್ಲಿ ಜಿಲ್ಲೆಯಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, ಉತ್ಪನ್ನಗಳ ರಫ್ತಿಗೆ ಪೂರಕವಾಗಿರಲಿದೆ. ಆದ್ದರಿಂದ ತಂತ್ರಜ್ಞಾನ ಪಾರ್ಕ್‍ನ ನಿರ್ಮಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಿ ಎಂದು ಅವರು ತೋಟಗಾರಿಕೆ ಉಪನಿರ್ದೇಶಕರಿಗೆ ತಿಳಿಸಿದರು.
ಜಿಲ್ಲೆಯಲ್ಲಿ ಮೀನುಗಾರಿಕೆ ಇಲಾಖೆಯಿಂದ ಬಾಕಿ ಉಳಿದಿರುವ ಮೀನು ಕೊಳಗಳ ನಿರ್ಮಾಣ ಕಾಮಗಾರಿಗಳನ್ನು ಅನುಷ್ಠಾನ ಏಜೆನ್ಸಿಯಾದ ಕೆ.ಆರ್.ಐ.ಡಿ.ಎಲ್ ವಿಳಂಬ ಮಾಡುತ್ತಿದ್ದು, ಈ ಬಗ್ಗೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಥರ್ಡ್ ಪಾರ್ಟಿಯನ್ನು ನಿಯೋಜಿಸಿ ಕಾಮಗಾರಿಯನ್ನು ಪರಿಶೀಲಿಸಿ ವರದಿ ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮುಂಡರಗಿ ಬಹು ಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಮೊದಲನೇ ಹಂತದಲ್ಲಿ ನಡೆದ ಅಕ್ರಮದ ಕುರಿತು ಗ್ರಾಮೀಣ ಕುಡಿಯುವ ನೀರು ಸರಬರಾಜು ಇಲಾಖೆ ಅಧಿಕಾರಿಗೆ ಪ್ರಶ್ನಿಸಿದರು. ಈ ಬಗ್ಗೆ ಮಾತನಾಡಿದ ಅಧಿಕಾರಿಗಳು, ಗುತ್ತಿಗೆದಾರರು ಹಾಗೂ 9 ಜನ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಹಾಗೂ ಇದುವರೆಗೂ ಸರ್ಕಾರದಿಂದ ಬಿಡುಗಡೆ ಮಾಡಲಾಗಿದ್ದ ರೂ. 49 ಕೋಟಿ ಹಣವನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಮತ್ತು ಅದಕ್ಕೆ ಸಂಬಂಧಿಸಿದಂತೆ ಲಿಕ್ವಿಡಿಟಿ ಡ್ಯಾಮೇಜ್ ಮೊತ್ತವನ್ನು ವಸೂಲಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಜಿಲ್ಲೆಯಲ್ಲಿ ಸರ್ಕಾರಿ ಆಸ್ಪತ್ರೆಗಳಿಗಿಂತ ದುಬಾರಿಯಾದರೂ ಖಾಸಗಿ ಆಸ್ಪತ್ರೆಗಳಿಗೆ ರೋಗಿಗಳು ಹೆಚ್ಚಾಗಿ ದಾಖಲಾಗುತ್ತಾರೆ. ಇದಕ್ಕೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು, ಸಿಬ್ಬಂದಿ ರೋಗಿಗಳೊಂದಿಗೆ ವರ್ತಿಸುವ ರೀತಿಯೂ ಕಾರಣವಿರಬಹುದು. ಆದ್ದರಿಂದ ಸರ್ಕಾರಿ ಆಸ್ಪತ್ರೆಗೆ ಬರುವ ರೋಗಿಗಳೊಂದಿಗೆ ವೈದ್ಯರು ಹಾಗೂ ಸಿಬ್ಬಂದಿ ಮಾನವೀಯತೆ ಹಾಗೂ ಸೌಜನ್ಯದಿಂದ ವರ್ತಿಸಬೇಕು. ಗುಣಮಟ್ಟದ ಚಿಕಿತ್ಸೆಯನ್ನು ನೀಡುತ್ತೀರಿ, ಅದರೊಂದಿಗೆ ಸೌಜನ್ಯತೆಯನ್ನು ರೂಢಿಸಿಕೊಳ್ಳಿ. ಆಯುಷ್ಮಾನ್ ಭಾರತ ಆರೋಗ್ಯ ಕರ್ನಾಟಕ ಯೋಜನೆಯಡಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ದೊರಕುವ ಸೌಲಭ್ಯಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ದೊರಕುವಂತೆ ಆಸ್ಪತ್ರೆಗಳಲ್ಲಿ ಫಲಕಗಳ ಮೂಲಕ ಬಿತ್ತರಿಸಿ. ಜಿಲ್ಲಾಸ್ಪತ್ರೆಯಲ್ಲಿ ಕಾರ್ಡಿಯಾಲಿಜಿಸ್ಟ್ ಅವಶ್ಯಕತೆಯಿದ್ದು, ಹುದ್ದೆ ಮಂಜೂರಾಗಿಲ್ಲ. ಹುದ್ದೆ ಮಂಜೂರು ಮಾಡುವಂತೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ. ಆಸ್ಪತ್ರೆಯ ಸಿವಿಲ್ ಕಾಮಗಾರಿ, ಇತರೆ ಅಭಿವೃದ್ಧಿ ಕಾರ್ಯಗಳನ್ನು ನಿರ್ವಹಿಸುವಲ್ಲಿ ಜಿಲ್ಲಾ ಆರೋಗ್ಯಾಧಿಕಾರಿಗಳು, ಶಸ್ತ್ರಚಿಕಿತ್ಸಕರು, ಕಿಮ್ಸ್ ನಿರ್ದೇಶಕರು ಪರಸ್ಪರ ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ಸೂಚಿಸಿದರು.
ಕುಷ್ಟಗಿ ಶಾಸಕರಾದ ಅಮರೇಗೌಡ ಪಾಟೀಲ್ ಬಯ್ಯಾಪೂರ ಮಾತನಾಡಿ, ಕೃಷಿ ಇಲಾಖೆಯಿಂದ ಕೃಷಿ ಹೊಂಡ ನಿರ್ಮಾಣ ಸೇರಿದಂತೆ ಕೃಷಿಗೆ ಪೂರಕವಾಗಿರುವ ಯೋಜನೆಗಳಲ್ಲಿ ರೈತರ ಬೇಡಿಕೆಗನುಸಾರ ಸರ್ಕಾರಕ್ಕೆ ಇಲಾಖೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸಬೇಕು. ಪಶುಸಂಗೋಪನಾ ಇಲಾಖೆಯಿಂದ ಜಾನುವಾರು ಹಾಗೂ ಕುರಿಗಳಿಗೆ ನೀಡಲಾಗುವ ಲಸಿಕೆಯ ಕೊರತೆಯಿದ್ದು, ಸಂಬಂಧಿಸಿದ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಸರ್ಕಾರದಿ ಂದ ಸಬ್ಸಿಡಿ ನೀಡುವ ಯೋಜನೆಗಳಲ್ಲಿ ಸಾಲ ಪಡೆಯಲು ಬ್ಯಾಂಕಿಗೆ ಅರ್ಜಿ ಸಲ್ಲಿಸುವ ರೈತರೊಂದಿಗೆ ಬ್ಯಾಂಕ್ ಅಧಿಕಾರಿಗಳು ಸರಿಯಾಗಿ ವರ್ತಿಸುವುದಿಲ್ಲ. ರೈತರೊಂದಿಗೆ ಬ್ಯಾಂಕ್ ಸಿಬ್ಬಂದಿ ಸೂಕ್ತ ರೀತಿಯಲ್ಲಿ ವರ್ತಿಸುವಂತೆ ಲೀಡ್ ಬ್ಯಾಂಕ್ ವ್ಯವಸ್ಥಾಪಕರು ಸೂಕ್ತ ನಿರ್ದೇಶನ ನೀಡಬೇಕು. ಜಲ ಜೀವನ ಮಿಷನ್ ಯೋಜನೆಯಡಿ ಕುಷ್ಟಗಿ ತಾಲ್ಲೂಕಿನ 153 ಹಳ್ಳಿಗಳಿಗೆ ಸೆಪ್ಟೆಂಬರ್ ಅಂತ್ಯದೊಳಗೆ ಕುಡಿಯುವ ನೀರಿನ ಸಂಪರ್ಕ ಒದಗಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 1.93 ಲಕ್ಷ ಫಲಾನುಭವಿಗಳು ವಿವಿಧ ಪಿಂಚಣಿ ಯೋಜನೆಯಡಿ ಪಿಂಚಣಿ ಪಡೆಯುತ್ತಿದ್ದರು. ಅದರಲ್ಲಿ ಮನೆ ಮನೆಗೆ ಭೇಟಿ ನೀಡಿ, ಮರಣ ಹೊಂದಿದ ಮತ್ತು ಹೆಸರುಗಳು ಎರಡು ಬಾರಿ ದಾಖಲಾದ ಮತ್ತು ಸ್ಥಳಾಂತರಗೊಂಡ ವ್ಯಕ್ತಿಗಳನ್ನು ಪತ್ತೆ ಹಚ್ಚಿ 18,000 ಹೆಸರುಗಳನ್ನು ಪಿಂಚಣಿ ಫಲಾನುಭವಿಗಳ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ಸದ್ಯ ಜಿಲ್ಲೆಯಲ್ಲಿ 1.75 ಲಕ್ಷ ಫಲಾನುಭವಿಗಳ ಬ್ಯಾಂಕ್ ಖಾತೆಗೆ ವಿವಿಧ ಪಿಂಚಣಿ ಹಣವನ್ನು ಜಮೆ ಮಾಡಲಾಗುತ್ತಿದೆ ಎಂದು ಸಹಾಯಕ ಆಯಕ್ತರಾದ ನಾರಾಯಣರೆಡ್ಡಿ ಕನಕರೆಡ್ಡಿ ಮಾಹಿತಿ ನೀಡಿದರು. ಸಭೆಯಲ್ಲಿ ಜಿಲ್ಲಾಧಿಕಾರಿ ವಿಕಾಸ್ ಕಿಶೋರ್ ಸುರಳ್ಕರ್, ಜಿಲ್ಲಾ ಪಂಚಾಯತಿ ಸಿಇಒ ಫೌಜಿಯಾ ತರನುಮ್, ದಿಶಾ ಸಮಿತಿಯ ನಾಮ ನಿರ್ದೇಶಿತ ಸದಸ್ಯರು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Share and Enjoy !

Shares