ವಿಜಯನಗರ ವಾಣಿ
ದೇಶದ ಜನರು ಕೊರೊನಾ 3ನೇ ಅಲೆಯ ಭೀತಿಯಲ್ಲಿದ್ದಾರೆ. ಸಾಂಕ್ರಾಮಿಕ ರೋಗದಿಂದ ಹೇಗಾದರೂ ಮಾಡಿ ಬಚಾವ್ ಆಗೋಣವೆಂದರೆ ಜನರಿಗೆ ಲಸಿಕೆಯೇ ಸಿಗುತ್ತಿಲ್ಲ. ಎಲ್ಲಿ ನೋಡಿದರೂ ಲಸಿಕೆ ಕೊರತೆ ಎದುರಾಗಿದೆ. ಕೆಲವು ಕಡೆ ಕೋವಿಶೀಲ್ಡ್ ಲಸಿಕೆ ಮಾತ್ರ ಲಭ್ಯವಿದೆ. ಆದರೆ ಕೋವಾಕ್ಸಿನ್ ಅಭಾವ ತಲೆದೋರಿದೆ. ಯಾವುದಾದರೂ ಸಿಗಲಿ ಎಂದು ಕೋವಿಶೀಲ್ಡ್ ಪಡೆಯಲು ಜನರು ಮುಗಿಬಿದ್ದು ಬರುತ್ತಿದ್ದಾರೆ. ಆದರೆ ಕೆಲ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಕೋವಿಶೀಲ್ಡ್ ಸ್ಟಾಕ್ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸ್ಟಾಕ್ ಖಾಲಿಯಾಗಿದೆ.
ದೇಶದಲ್ಲಿ ಉಂಟಾಗಿರುವ ಕೊರೊನಾ ಲಸಿಕೆ ಅಭಾವವನ್ನು ನಿಗಿಸಲು ಕೇಂದ್ರ ಸರ್ಕಾರ ಪರಿಷ್ಕೃತ ದರದಲ್ಲಿ ಬರೋಬ್ಬರಿ 66 ಕೋಟಿ ಡೋಸ್ ಲಸಿಕೆ(covid-19 vaccine) ಖರೀದಿಗೆ ಆರ್ಡರ್ ನೀಡಿದೆ. ಆಗಸ್ಟ್ ಮತ್ತು ಡಿಸೆಂಬರ್ ತಿಂಗಳ ಅವಧಿಯಲ್ಲಿ ಲಸಿಕೆ ಪೂರೈಕೆಗೆ ಈ ಆರ್ಡರ್ ನೀಡಲಾಗಿದೆ.
‘66 ಕೋಟಿಯಷ್ಟು ಪ್ರಮಾಣದ ಕೋವಿಶೀಲ್ಡ್ ಮತ್ತು ಕೋವ್ಯಾಕ್ಸಿನ್ ಲಸಿಕೆಯನ್ನು ಕ್ರಮವಾಗಿ 205 ರೂ. ಮತ್ತು 215 ರೂ.ಗಳ ಪರಿಷ್ಕೃತ ದರದಲ್ಲಿ ಖರೀದಿಸಲು ಕೇಂದ್ರ ಸರ್ಕಾರ ಆರ್ಡರ್ ನೀಡಿದೆ. ಆಗಸ್ಟ್ ಮತ್ತು ಡಿಸೆಂಬರ್ ನಡುವೆ ಈ ಲಸಿಕೆ ಪೂರೈಕೆಯಾಗಲಿದೆ’ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಪುಣೆ ಮೂಲದ ಸೀರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಕಂಪನಿಗೆ 37.5 ಕೋಟಿ ಡೋಸ್ ಕೋವಿಶೀಲ್ಡ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದ್ದರೆ, ಹೈದರಾಬಾದ್ ನ ಭಾರತ್ ಬಯೋಟೆಕ್ ಕಂಪನಿಗೆ 28.5 ಕೋಟಿ ಡೋಸ್ ಕೋವ್ಯಾಕ್ಸಿನ್ ಲಸಿಕೆ ಪೂರೈಸುವಂತೆ ಕೇಂದ್ರ ಸರ್ಕಾರ ಕೇಳಿಕೊಂಡಿದೆ.
ಡಿಸೆಂಬರ್ ನೊಳಗೆ ದೇಶದ ಎಲ್ಲ ವಯಸ್ಕರಿಗೆ ಲಸಿಕೆ ನೀಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದೆ. ಈ ನಿಟ್ಟಿನಲ್ಲಿ ಆಗಸ್ಟ್ ಮತ್ತು ಡಿಸೆಂಬರ್ ಅವಧಿಯಲ್ಲಿ 66 ಕೋಟಿಗೂ ಹೆಚ್ಚು ಡೋಸ್ ಲಸಿಕೆ ಪೂರೈಕೆಗೆ ಆರ್ಡರ್ ನೀಡಿದೆ. ಪ್ರತಿ ಡೋಸ್ ಕೋವಿಶೀಲ್ಡ್ ಲಸಿಕೆಗೆ ಜಿಎಸ್‌ಟಿ ಸೇರಿ 225.75 ರೂ. ಆದರೆ, ಕೋವ್ಯಾಕ್ಸಿನ್ ಪ್ರತಿ ಡೋಸ್ ಲಸಿಕೆಗೆ ಜಿಎಸ್‌ಟಿ ಸೇರಿ 215.25 ರೂ. ವೆಚ್ಚವಾಗಲಿದೆ.
ಕೇಂದ್ರ ಆರೋಗ್ಯ ಸಚಿವಾಲಯವು ಈ ಹಿಂದೆ ಎರಡೂ ಕಂಪನಿಗಳ ಲಸಿಕೆಗಳನ್ನು ಪ್ರತಿ ಡೋಸ್ ಗೆ 150 ರೂ. ನೀಡಿ ಖರೀದಿಸುತ್ತಿತ್ತು. ಹೊಸ ಕೋವಿಡ್-19 ಲಸಿಕೆ ಖರೀದಿ ನೀತಿಯ ನಂತರ ಬೆಲೆಗಳನ್ನು ಪರಿಷ್ಕರಿಸಲಾಗಿದೆ. ಹೀಗಾಗಿ ಕೊರೊನಾ ಲಸಿಕೆಯ ಬೆಲೆ ಏರಿಕೆಯಾಗಿದೆ. ಈ ಪರಿಷ್ಕೃತ ದರಗಳು ಜೂನ್ 21ರಿಂದ ಜಾರಿಗೆ ಬಂದಿವೆ. ಹೊಸ ನೀತಿಯ ಪ್ರಕಾರ ಔಷಧ ಕಂಪನಿಗಳು ಉತ್ಪಾದಿಸಿದ ಒಟ್ಟು ಲಸಿಕೆಗಳಲ್ಲಿ ಶೇ.75ರಷ್ಟನ್ನು ಸಚಿವಾಲಯವು ಖರೀದಿಸುತ್ತದೆ.
ಖಾಸಗಿ ಆಸ್ಪತ್ರೆಗಳಿಗೆ ನೀಡುವ ಲಸಿಕೆಯ ಬೆಲೆಯನ್ನು ಲಸಿಕಾ ಉತ್ಪಾದಕರು ನಿರ್ಧರಿಸುತ್ತಾರೆ ಮತ್ತು ನಂತರದ ಯಾವುದೇ ಬದಲಾವಣೆಗಳನ್ನು ಮುಂಚಿತವಾಗಿಯೇ ತಿಳಿಸಲಾಗುತ್ತದೆ. ಇದುವರೆಗೆ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ 41.69 ಕೋಟಿಗೂ ಹೆಚ್ಚು ಲಸಿಕೆ ಪ್ರಮಾಣವನ್ನು ನೀಡಲಾಗಿದೆ ಎಂದು ಆರೋಗ್ಯ ಸಚಿವಾಲಯ ಶನಿವಾರ ಮಾಹಿತಿ ನೀಡಿದೆ.