ವಿಜಯನಗರ ವಾಣಿ
ಪ್ರತಿ ಮುಂಗಾರು ಹಂಗಾಮಿನ ಬೆಳೆಗಳ ವಿವರಗಳನ್ನು ಸಂಗ್ರಹಿಸಲು ಕೃಷಿ, ತೋಟಗಾರಿಕೆ, ಕಂದಾಯ, ರೇಷ್ಮೇ ಇಲಾಖೆ ಅಧಿಕಾರಿಗಳು ರೈತರ ಜಮೀನುಗಳಿಗೆ ಭೇಟಿ ನೀಡಿ ಬೆಳೆ ಸಮೀಕ್ಷೆ ಮಾಡುತ್ತಿದ್ದರು. ಆದರೆ ಈ ಬಾರಿ ರೈತರೇ ತಮ್ಮ ಮೊಬೈಲ್ ಮೂಲಕ ಸ್ವಯಂ ಬೆಳೆ ಸಮೀಕ್ಷೆ ಮಾಡಲು ಸರ್ಕಾರ ಅವಕಾಶ ಕಲ್ಪಿಸಿಕೊಟ್ಟಿದೆ. ರೈತರು ತಾವು ಬೆಳೆದ ಬೆಳೆಗಳನ್ನು ಕೃಷಿ ಉತ್ಪನ್ನ ಮಾರುಕಟ್ಟೆ ಸೇರಿದಂತೆ ವಿವಿದೆಡೆ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ಜೊತೆಗೆ ಪ್ರಕೃತಿ ವಿಕೋಪದಡಿ ಸರ್ಕಾರ ನೀಡುವ ಬೆಳೆ ಪರಿಹಾರ, ಫಸಲ್ ಬಿಮಾ ಯೋಜನೆಯಲ್ಲಿನ ವಿಮೆ ಹಣದ ಸದುಪಯೋಗ ಸೇರಿದಂತೆ ಬ್ಯಾಂಕಿನಲ್ಲಿ ಕೃಷಿ ಸಾಲ ಸೌಲಭ್ಯಗಳಿಗೆ ಬೆಳೆ ಸಮೀಕ್ಷೆ ಮಾಡಿರಬೇಕು. ಬೆಳೆ ಸಮೀಕ್ಷೆ ಮಾಡದೇ ಹೋದಲ್ಲಿ ಸರ್ಕಾರದ ಯಾವುದೇ ಯೋಜನೆ ರೈತರಿಗೆ ದೊರೆಯುವುದಿಲ್ಲ ಎನ್ನಲಾಗುತ್ತಿದೆ.
ಕ್ಷಣಾರ್ಧದಲ್ಲೆ ಆನ್ಲೈನ್ ಅಪ್ಲೋಡ್: ಈ ಹಿಂದೆ ರೈತರು ತಾವು ಬೆಳೆದ ಬೆಳೆಗಳ ಮಾಹಿತಿಯನ್ನು ಗ್ರಾಮ ಲೆಕ್ಕಾದಿಕಾರಿಗಳ ಕಚೇರಿ ಬಳಿ ಬಂದು, ಪಹಣಿಯಲ್ಲಿ ಬೆಳೆಗಳ ಮಾಹಿತಿ ದಾಖಲು ಮಾಡುತ್ತಿದ್ದರು. ಆದರೆ ಈಗ ಬೆಳೆ ಸಮೀಕ್ಷೆ ಮಾಡಿದ ಮಾಹಿತಿಯನ್ನು ಕಂದಾಯ ಇಲಾಖೆಯ ಭೂಮಿ ಕೇಂದ್ರಕ್ಕೆ ಲಿಂಕ್ ಮಾಡಿದ ಕೂಡಲೇ ರೈತರ ಪಹಣಿಯಲ್ಲಿ ರೈತರು ಬೆಳೆದ ಬೆಳೆಗಳ ಮಾಹಿತಿ ದಾಖಲೀಕರಣವಾಗಲಿದೆ. ಅಲ್ಲದೇ ಈ ಹಿಂದೆ ಹತ್ತಾರು ವರ್ಷಗಳ ಕಾಲ ಪಹಣಿಯಲ್ಲಿ ಒಂದೇ ಬೆಳೆಯ ಮಾಹಿತಿ ಲಭಿಸುತ್ತಿತ್ತು, ಸದ್ಯದ ತಂತ್ರಜ್ಞಾನದಿಂದ ಮಿಶ್ರ ಬೆಳೆ ಪದ್ದತಿ ಅನುಸರಿಸುವ ರೈತರಿಗೂ ಅನುಕೂಲಕರವಾಗಲಿದೆ.
ಬಿತ್ತನೆಯಿಂದ ಕಟಾವಿನವರೆಗೂ ಅವಕಾಶ: ರೈತರು ಬೆಳೆ ಸಮೀಕ್ಷೆಯನ್ನು ತಮ್ಮ ಮೊಬೈಲ್ ಮೂಲಕ ದಾಖಲಿಸಬಹುದು. ಜಮೀನುಗಳಲ್ಲಿ ಬಿತ್ತನೆ ಮಾಡಿದ ದಿನದಿಂದ ಬೆಳೆ ಕಟಾವು ಮಾಡುವ ಕೊನೆ ದಿನದವರೆಗೂ ಬೆಳೆ ಸಮೀಕ್ಷೆ ಮಾಡಲು ಕೃಷಿ ಇಲಾಖೆ ಅವಕಾಶ ಕಲ್ಪಿಸಿದೆ.
ಬೆಳೆ ಸರ್ವೆ ಮಾಡುವ ‘Kharif Season Farmer Crop Survey 2021-22’ ಆ್ಯಪ್‌ಗಾಗಿ ಈ ಲಿಂಕ್ ಕ್ಲಿಕ್ ಮಾಡಿ: https://play.google.com/store/apps/details?id=com.csk.Khariffarmer2021.cropsurvey
ಗುತ್ತಿಗೆ ಸಿಬ್ಬಂದಿ ನಿಯೋಜನೆ: ಎಲ್ಲ ರೈತರ ಬಳಿ ಬೆಳೆ ಸಮೀಕ್ಷೆ ದಾಖಲು ಮಾಡುವಂತಹ ತಂತ್ರಾಂಶಗಳಿರುವ ಮೊಬೈಲ್‌ಗಳು ಇರುವುದಿಲ್ಲ, ಅಲ್ಲದೇ ಕೆಲವು ರೈತರಲ್ಲಿ ಮೊಬೈಲ್ ಬಳಕೆಯೇ ಶೂನ್ಯವಾಗಿರುತ್ತದೆ. ಅಂತಹ ರೈತರ ಅನುಕೂಲಕ್ಕಾಗಿ ಜಮೀನುಗಳಿಗೆ ಬೆಳೆ ಸಮೀಕ್ಷೆ ಮಾಡಲು ಕೃಷಿ ಇಲಾಖೆಯ ಅಧಿಕಾರಿಗಳು ಹೊರ ಗುತ್ತಿಗೆ ಸಿಬ್ಬಂದಿಯನ್ನು ನಿಯೋಜನೆ ಮಾಡಲಿದ್ದಾರೆ. ಅವರನ್ನು ಜಮೀನುಗಳಿಗೆ ಕರೆ ತಂದು ಬೆಳೆ ಸಮೀಕ್ಷೆ ಮಾಡಲು ಅವಕಾಶವಿದೆ.
ತಪ್ಪು ಸರಿಪಡಿಸಲು ಅವಕಾಶ: ರೈತರ ಬಳಿ ತಂತ್ರಾಂಶ ಇರುವ ಮೊಬೈಲ್‌ಗಳಿದ್ದರೆ ರೈತರೇ ಬೆಳೆ ದರ್ಶಕ ಆ್ಯಪ್ನಲ್ಲಿ ಬೆಳೆ ಸಮೀಕ್ಷೆ ಮಾಡಲು ಅವಕಾಶ ನೀಡಿದೆ. ಕೆಲ ಬೆಳೆ ಸಮೀಕ್ಷೆ ವೇಳೆ ವ್ಯತ್ಯಾಸಗಳು ಕಂಡುಬಂದಲ್ಲಿ ಬೆಳೆ ದರ್ಶಕ ಆ್ಯಪ್ನಲ್ಲಿ ಸರಿಪಡಿಸುವಂತಹ ವ್ಯವಸ್ಥೆ ಸಹ ಇದೆ ಎನ್ನುತ್ತಾರೆ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಶಿವಕುಮಾರ್.
ಉದ್ದೇಶ: ರೈತರೇ ತಮ್ಮ ಬೆಳೆಗಳನ್ನು ತಮ್ಮ ಮೊಬೈಲ್ ಮೂಲಕ ಸಮೀಕ್ಷೆ ಮಾಡಲು ಸರ್ಕಾರ ಅವಕಾಶ ನೀಡಿದೆ. ಈ ವಿಚಾರ ರೈತರಿಗೆ ಹೆಚ್ಚು ಮನವರಿಕೆಯಾಗಿ ರೈತರಿಂದ ರೈತರಿಗೆ ಹೆಚ್ಚು ಪ್ರಚಾರ ಆಗಲಿ ಎಂಬ ಕಾರಣಕ್ಕಾಗಿ ರೈತರ ಬೆಳೆ ಸಮೀಕ್ಷೆ ಮಾಡಬಹುದು.
ಸಮೀಕ್ಷೆಗೆ 5 ಇಲಾಖೆ ಅಧಿಕಾರಿಗಳು: ರೈತರಿಂದ ಬಿಟ್ಟು ಹೋಗಿರುವ ಬೆಳೆ ಸಮೀಕ್ಷೆ ಮಾಡಲು ಕಂದಾಯ, ತೋಟಗಾರಿಕೆ, ಕೃಷಿ, ರೇಷ್ಮೆ ಮತ್ತು ಬೃಹತ್ ನೀರಾವರಿ ಇಲಾಖೆ ಅದಿಕಾರಿಗಳಿಗೆ ಸೂಕ್ತ ತರಬೇತಿ ನೀಡಲಾಗುತ್ತಿದೆ. ಕಳೆದ ಬಾರಿ ಬೆಳೆ ಸಮೀಕ್ಷೆ ಮಾಡಿರುವ ವ್ಯಕ್ತಿಗಳನ್ನೇ ಈ ಬಾರಿ ನೇಮಿಸಿಕೊಳ್ಳಲಾಗಿದ್ದು, ಹೊಸಬರನ್ನು ನೇಮಿಸಿದ್ದರೆ ಅಂತಹವರಿಗೆ ಮಾಸ್ಟರ್ ತರಬೇತಿದಾರರಿಂದ ಬೆಳೆ ಸಮೀಕ್ಷೆ ತರಬೇತಿ ನೀಡಲಾಗುತ್ತಿದೆ.
ರೈತರ ಸುಮ್ಮುಖದಲ್ಲಿ ಸಮೀಕ್ಷೆ: ಬೆಳೆ ಸಮೀಕ್ಷೆ ಕುರಿತ ಮಾಹಿತಿ ರೈತರ ಮನವರಿಕೆಗೆ ಬರಬೇಕೆಂಬ ಕಾರಣಕ್ಕಾಗಿ ಸರ್ಕಾರ ರೈತರಿಂದ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ಮೊಬೈಲ್ ಇಲ್ಲದ ರೈತರ ಜಮೀನುಗಳಲ್ಲಿ ಸಮೀಕ್ಷೆ ಮಾಡಲು ಹೊರಗುತ್ತಿಗೆ ಆಧಾರದಲ್ಲಿ ಬೆಳೆ ಸಮೀಕ್ಷೆಗಾಗಿ ಮಾತ್ರ ನೇಮಿಸಿಕೊಳ್ಳಲಾಗುತ್ತಿದೆ. ರೈತರ ಸಮ್ಮುಖದಲ್ಲೇ ಬೆಳೆ ಸಮೀಕ್ಷೆ ಮಾಡಲಾಗುತ್ತಿದೆ. ರೈತರು ಬಿತ್ತನೆ ಮಾಡಿರುವ ದಿನದಿಂದ ಕಟಾವು ಕೊನೆ ಹಂತದವರೆಗೂ ಬೆಳೆ ಸಮೀಕ್ಷೆ ಮಾಡಲು ಅವಕಾಶವಿದೆ ಎಂದು ಸೋಂಪುರದ ಸಹಾಯಕ ಕೃಷಿ ನಿರ್ದೇಶಕ ಶಿವಕುಮಾರ್ ತಿಳಿಸಿದರು.
ಕೃಷಿ ಇಲಾಖೆ ರೈತರ ಬೆಳೆ ಸಮೀಕ್ಷೆ ಆ್ಯಪ್ ಮಾಡಿರುವುದು ಸ್ವಾಗತಾರ್ಹ, ಕಳೆದ ಬಾರಿ ಸಾಕಷ್ಟು ರೈತರು ರಾಗಿ ಬಿತ್ತನೆ ಮಾಡಿದ್ದರು. ಬೆಳೆ ಸಮೀಕ್ಷೆ ಮಾಡದಿರುವ ಹಿನ್ನೆಲೆಯಲ್ಲಿ ಪಹಣಿ ಪತ್ರದಲ್ಲಿ ಬೆಳೆ ದಾಖಲೀಕರಣ ಆಗಿರಲಿಲ್ಲ. ಇದರಿಂದ ಸರ್ಕಾರದ ಖರೀದಿ ಕೇಂದ್ರದಲ್ಲಿ ಕೆಲ ರೈತರು ತಾವು ಬೆಳೆದ ಬೆಳೆಯ ಮಾರಾಟಕ್ಕೆ ಅವಕಾಶವೇ ಸಿಗಲಿಲ್ಲ. ಇದು ಸರ್ಕಾರಿ ಸೌಲಭ್ಯ ಪಡೆಯಲು ಸುಲಭ ಮಾರ್ಗವಾಗಿದೆ ಎಂದು ರೈತ ರಾಜಣ್ಣ ಸಂತಸ ವ್ಯಕ್ತ ಪಡಿಸಿದರು.