ಎಲ್ಲ ವಿಶ್ವವಿದ್ಯಾಲಯ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಸೂಚನೆ

Share and Enjoy !

Shares
Listen to this article

ವಿಜಯನಗರ ವಾಣಿ

ಪದವಿ ಮತ್ತು ಡಿಪ್ಲೊಮೊ ಸೆಮಿಸ್ಟರ್‌ಗಳ ಬಾಕಿ ಉಳಿದಿರುವ ಪರೀಕ್ಷೆಗಳನ್ನು ಕ್ರಮವಾಗಿ ಅಗಸ್ಟ್‌ ಮತ್ತು ಅಕ್ಟೋಬರ್‌ ತಿಂಗಳ ಒಳಗಾಗಿ ಮುಗಿಸಬೇಕು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಎಲ್ಲ ವಿಶ್ವವಿದ್ಯಾಲಯ ಹಾಗೂ ತಾಂತ್ರಿಕ ಶಿಕ್ಷಣ ಇಲಾಖೆಗೆ ಶುಕ್ರವಾರ ಸೂಚನೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಶುಕ್ರವಾರ ಪರೀಕ್ಷೆಗಳನ್ನು ನಡೆಸುವ ಹಾಗೂ ಕಾಲೇಜುಗಳನ್ನು ತೆರೆಯುವ ಬಗ್ಗೆ ಉನ್ನತ ಶಿಕ್ಷಣ ಇಲಾಖೆ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ ನಂತರ ಮಾಧ್ಯಮಗಳ ಜತೆ ಅಶ್ವತ್ಥ್ ನಾರಾಯಣ್ ಅವರು ಮಾತನಾಡಿದರು.

ಉನ್ನತ ಶಿಕ್ಷಣ ಮಂಡಳಿ ಸದಸ್ಯರ ಜತೆ ಚರ್ಚಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಿಪ್ಲೊಮಾ 1, 3 ಮತ್ತು 5ನೇ ಸೆಮಿಸ್ಟರ್‌ಗಳ ಪ್ರಾಯೋಗಿಕ ಪರೀಕ್ಷೆಗಳು ಜುಲೈ 26ರಿಂದ 28ರವರೆಗೆ ನಡೆಯಲಿವೆ. ಇದೇ ಸೆಮಿಸ್ಟರ್‌ಗಳ ಲಿಖಿತ ಪರೀಕ್ಷೆಗಳನ್ನು ಆಗಸ್ಟ್‌ 2ರಿಂದ 21ರವರೆಗಿನ ಅವಧಿಯಲ್ಲಿ ನಡೆಸಲು ಸೂಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಡಿಪ್ಲೊಮಾ 2, 4 ಮತ್ತು 6ನೇ ಸೆಮಿಸ್ಟರ್‌ಗಳ ಪ್ರಾಯೋಗಿಕ ಪರೀಕ್ಷೆಗಳು ನವೆಂಬರ್‌ 2ರಿಂದ 12ರವರೆಗೆ ನಡೆಯಲಿವೆ. ಇದೇ ಸೆಮಿಸ್ಟರ್‌ಗಳ ಲಿಖಿತ ಪರೀಕ್ಷೆಗಳನ್ನು ನವೆಂಬರ್‌ 17ರಿಂದ ಡಿಸೆಂಬರ್‌ 6ರೊಳಗೆ ಪೂರ್ಣಗೊಳಿಸುವಂತೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

ಬಹುತೇಕ ಎಲ್ಲ ವಿಶ್ವವಿದ್ಯಾಲಯಗಳು ಪದವಿ ಪರೀಕ್ಷೆಗಳನ್ನು ಮುಗಿಸಿವೆ. ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ಕರ್ನಾಟಕ ವಿಶ್ವವಿದ್ಯಾಲಯ, ಕಲಬುರ್ಗಿ ವಿಶ್ವವಿದ್ಯಾಲಯ ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳ ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಈ ಮೂರು ವಿಶ್ವವಿದ್ಯಾಲಯಗಳಲ್ಲಿ ಬಾಕಿ ಇರುವ ಪರೀಕ್ಷೆಗಳನ್ನು ಅಕ್ಟೋಬರ್ ಅಂತ್ಯದೊಳಗೆ ನಡೆಸಲು ಸೂಚಿಸಲಾಗಿದೆ ಎಂದರು.

ಕಾಲೇಜು ಆರಂಭ; ಇನ್ನೆರಡು ದಿನದಲ್ಲಿ ನಿರ್ಧಾರ:
ಇದೇ ವೇಳೆ ಉನ್ನತ ಶಿಕ್ಷಣ ವಿಭಾಗದ ಕಾಲೇಜುಗಳನ್ನು ಆರಂಭಿಸುವ ಬಗ್ಗೆ ಈ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಇನ್ನೆರಡು ದಿನಗಳಲ್ಲಿ ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸಚಿವರು ತಿಳಿಸಿದರು.

ಈಗಾಗಲೇ ಶೇ.75ರಷ್ಟು ಪದವಿ ವಿದ್ಯಾರ್ಥಿಗಳಿಗೆ ಲಸಿಕೆ ಕೊಡಲಾಗಿದೆ. ಸರಕಾರಿ, ಅನುದಾನಿತ ಮತ್ತು ಖಾಸಗಿ ಕಾಲೇಜುಗಳ ತೆಗೆದುಕೊಂಡರೆ ಶೇ.65ರಷ್ಟು ವಿದ್ಯಾರ್ಥಿಗಳು ವ್ಯಾಕ್ಸಿನ್‌ ಪಡೆದಿದ್ದಾರೆ. ಉಳಿದ ವಿದ್ಯಾರ್ಥಿಗಳಿಗೆ ಶೀಘ್ರವೇ ನೀಡಲಾಗುವುದು. ಸರಕಾರಿ ಮತ್ತು ಅನುದಾನಿತ ಕಾಲೇಜುಗಳಲ್ಲಿ ಲಸಿಕೀಕರಣ ಭರದಿಂದ ಸಾಗುತ್ತಿದೆ.

ಆಫ್‌ಲೈನ್‌ ಕ್ಲಾಸ್‌ ಕಡ್ಡಾಯ ಅಲ್ಲ. ಇಷ್ಟ ಇದ್ದವರು ಲಸಿಕೆ ಪಡೆದು ಬರಬಹುದು, ಇಲ್ಲದವರು ಆನ್‌ಲೈನ್‌ ಕ್ಲಾಸ್‌ನಲ್ಲಿ ಪಾಠ ಕೇಳಬಹುದು. ಆದರೆ, ಹಾಜರಿ ಮಾತ್ರ ಕಡ್ಡಾಯ. ಮೇ ತಿಂಗಳಿಂದಲೇ ಆನ್‌ಲೈನ್‌ ತರಗತಿಗಳು ಯಶಸ್ವಿಯಾಗಿ ನಡೆಯುತ್ತಿವೆ. ಜತೆಗೆ, ಸಂಪರ್ಕ ತರಗತಿಗಳು ನಡೆಯುತ್ತಿವೆ ಎಂದು ಅವರು ಮಾಹಿತಿ ನೀಡಿದರು.

Share and Enjoy !

Shares