ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರಕ್ಕೆ ನಾಡೋಜ ಡಾ.ಸುಭದ್ರಮ್ಮ ಮನ್ಸೂರ್ ಹೆಸರು ನಾಮಕರಣ ಬಳ್ಳಾರಿಯಲ್ಲಿ ಹಿರಿಯ ಕಲಾವಿದರ ಪುತ್ಥಳಿ ನಿರ್ಮಾಣ: ಶಾಸಕ ಸೋಮಶೇಖರ ರೆಡ್ಡಿ

Share and Enjoy !

Shares
Listen to this article

ವಿಜಯನಗರವಾಣಿ ಸುದ್ದಿ
ಬಳ್ಳಾರಿ: ಬಳ್ಳಾರಿ ನಗರದ ಸಾಂಸ್ಕೃತಿಕ ಸಮುಚ್ಚಯದ ಆವರಣದಲ್ಲಿರುವ ಬಯಲು ರಂಗಮಂದಿರಕ್ಕೆ ನಾಡೋಜ ಡಾ. ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಕಾರ್ಯಕ್ರಮವು ಶುಕ್ರವಾರ ಸಂಜೆ ನಡೆಯಿತು. ಕಾರ್ಯಕ್ರಮ ಉದ್ಘಾಟಿಸಿದ ನಂತರ ಬಳ್ಳಾರಿ ನಗರ ಶಾಸಕ ಜಿ.ಸೋಮ ಶೇಖರ್ ರೆಡ್ಡಿ ಅವರು ಮಾತನಾಡಿ ಹಿರಿಯ ಕಲಾವಿದರಾದ ನಾಡೋಜ ಡಾ.ಸುಭದ್ರಮ್ಮ ಅವರು ಬಳ್ಳಾರಿ ಜಿಲ್ಲೆಗೆ ಅಪಾರವಾದ ಕೊಡುಗೆ ನೀಡಿದ್ದಾರೆ. ಅವರ ಕಲೆ ಹಾಗೂ ಹಿರಿಯ ಕಲಾವಿದರ ಕಲೆಯನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶದಿಂದ ಬಳ್ಳಾರಿ ನಗರದಲ್ಲಿ ಹಿರಿಯ ಕಲಾವಿದರ ಪುತ್ಥಳಿಗಳನ್ನು ನಿರ್ಮಿಸಲಾಗುವುದು ಎಂದು ಹೇಳಿದರು.
ಬಳ್ಳಾರಿ ಜಿಲ್ಲೆಗೆ ಹಿರಿಯ ಕಲಾವಿದರು ನೀಡಿದ ಸೇವೆ ಅನನ್ಯ. ನಗಾರಾಭಿವೃದ್ಧಿ ಇಲಾಖೆ ವತಿಯಿಂದ ಜಿಲ್ಲೆಯ ಹಿರಿಯ ಕಲಾವಿದರಾದ ದೊಡ್ಡನೌಡ, ರಂಜಾನ್ ಸಾಬ್, ಬಹದ್ದೂರ್ ಶೇಷಗಿರಿ ಅವರ ಪುತ್ಥಳಿ ನಿರ್ಮಿಸಲು ಉದ್ದೇಶಿಸಲಾಗಿದೆ. ಈಗಾಗಲೇ ನಗರದ 21 ಪಾರ್ಕ್‍ಗಳಿಗೆ ಕಲಾವಿದರ ಹೆಸರು ಇಡಲು ನಿಶ್ಚಯಿಸಲಾಗಿದೆ. ನಮ್ಮ ದೇಶದಲ್ಲಿರುವ ಕಲೆ ಮತ್ಯಾವ ದೇಶದಲ್ಲೂ ಇರಲು ಸಾಧ್ಯವಿಲ್ಲ. ನಾಟಕ, ಜಾನಪದ ಗೀತೆಗಳು, ಹಗಲುವೇಷ, ಸಂಗೀತ, ಸಾಹಿತ್ಯ ಒಳಗೊಂಡಂತೆ ಅಪಾರ ಸಂಸ್ಕೃತಿ ಹೊಂದಿದ ನಾಡು ನಮ್ಮ ದೇಶ ಎಂದು ಹೇಳಿದರು.
ಕಲೆಯ ಮೂಲಕ ಇತರರ ಜೀವನದಲ್ಲಿ ಖುಷಿ ಕೊಡುವ ಕಲಾವಿದರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಳ್ಳುವ ಕಾರ್ಯ ಮಾಡಲಾಗುವುದು. ನಿಮ್ಮ ಸಮಸ್ಯೆಗಳು ನಮ್ಮ ಗಮನಕ್ಕೆ ತರುವ ಕೆಲಸ ಮಾಡಿ ಎಂದು ಹೇಳಿದರು. ಪದ್ಮಶ್ರೀ ಪುರಸ್ಕೃತೆ, ಕರ್ನಾಟಕ ಜಾನಪದ ಅಕಾಡೆಮಿಯ ಅಧ್ಯಕ್ಷರಾದ ಮಂಜಮ್ಮ ಜೋಗತಿ ಅವರು ಮಾತನಾಡಿ, ಸಾಂಸ್ಕೃತಿಕ ಸಮುಚ್ಚಯದ ಬಯಲು ರಂಗಮಂದಿರಕ್ಕೆ ನಾಡೋಜ ಸುಭದ್ರಮ್ಮ ಮನ್ಸೂರ್ ಅವರ ಹೆಸರು ನಾಮಕರಣ ಮಾಡಿರುವುದು ನಮ್ಮ ಜಿಲ್ಲೆಯ ಕಲಾವಿದರಿಗೆ ಸಲ್ಲುವ ಗೌರವ, ಅವರ ಶ್ರಮ, ಭಕ್ತಿ, ನಯ, ನುಡಿ ಮತ್ತು ವಾಕ್ಚಾತುರ್ಯ ಅವರ ಬೆಳವಣಿಗೆಗೆ ಕಾರಣ ಎಂದರು.
ನಾಟಕದಲ್ಲಿ ಎಲ್ಲರಿಗೂ ಸಮಾನವಾದ ಪ್ರಾಮುಖ್ಯತೆ ಇದೆ. ನಾವು ಮಾಡುವ ಕೆಲಸದಲ್ಲಿ ಭಕ್ತಿ ಮತ್ತು ಶ್ರದ್ಧೆ ಇದ್ದರೆ ಯಶಸ್ಸು ನಮ್ಮನ್ನು ಹಿಂಬಾಲಿಸುತ್ತದೆ. ಕಲೆಯ ಬಗ್ಗೆ ಇಂದಿನ ಯುವಪೀಳಿಗೆ ಹೆಚ್ಚಿನ ಆಸಕ್ತಿ ತೋರಿಸುತ್ತಿರುವುದು ಒಳ್ಳೆಯ ಬೆಳವಣಿಗೆ. ಆದರೆ ರಂಗಭೂಮಿಗೆ ಬರುವ ಯುವಕರು ಹವ್ಯಾಸ ಕಲಾವಿದರಾಗಿ, ವೃತ್ತಿ ಕಲಾವಿದರಾಗಬೇಡಿ, ಕಲೆಯೇ ಜೀವನ ಮಾಡಿಕೊಳ್ಳಬೇಡಿ ಕಲೆಯ ಜೊತೆಗೆ ಮತ್ತೊಂದು ಕೆಲಸವನ್ನು ಮೈಗೂಡಿಸಿಕೊಳ್ಳಿ ಎಂದು ಹೇಳಿದರು.
ಇದೇ ಸಮಯದಲ್ಲಿ ಟಿ.ಕೆ.ಗಂಗಾಧರ್ ಪತ್ತಾರ್ ಅವರ ಅಭಿವ್ಯಕ್ತಿ ವ್ಯಕ್ತಿ ಚಿತ್ರಣ ಕವನ ಸಂಕಲನ ಬಿಡುಗಡೆ ಮಾಡಲಾಯಿತು. ಹಿರಿಯ ಕಲಾವಿದರಾದ ನಾಡೋಜ ಬೆಳಗಲ್ಲು ವೀರಣ್ಣ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿವೃತ್ತ ಉಪನಿರ್ದೇಶಕರಾದ ಚೋರುನೂರು ಕೊಟ್ರಪ್ಪ ಅವರು ಮಾತನಾಡಿದರು. ಈ ಸಂದರ್ಭದಲ್ಲಿ ಬುಡಾ ಅಧ್ಯಕ್ಷ ದಮ್ಮೂರು ಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರಾದ ಸಿದ್ದಲಿಂಗೇಶ ಕೆ.ರಂಗಣ್ಣನವರ್, ಹಿರಿಯ ಕಲಾವಿದರಾದ ಈರಮ್ಮ, ರಮೇಶ್ ಗೌಡ ಪಾಟೀಲ್, ಸುಜಾತಮ್ಮ, ಪುರುಷೋತ್ತಮ ಹಂದ್ಯಾಳ್, ಸುಭದ್ರಮ್ಮ ಕುಟುಂಬದ ಸದಸ್ಯರು ಸೇರಿದಂತೆ ಇತರರು ಇದ್ದರು.

Share and Enjoy !

Shares