ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ಲಿನ ಜಿಂದಾಲ್ ಉಕ್ಕು ಕಾರ್ಖಾನೆಯಿಂದ ತಮಗೆ ವಂಚನೆಯಾಗಿದೆಂದು ಕಾರ್ಖಾನೆಯ ಮಾಜಿ ಉದ್ಯೋಗಿ ತಿಪ್ಪೇರುದ್ರಪ್ಪ ಆರೋಪಿಸಿದ್ದಾರೆ.
ಅವರಿಂದು ಬಳ್ಳಾರಿ ನಗರದ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ, ನಾನು 2001 ರಿಂದ 2009ರ ವರೆಗೆ ಜಿಂದಾಲ್ ಉಕ್ಕು ಕಾರ್ಖಾನೆಯಲ್ಲಿ ಸಹಾಯಕ ಇಂಜಿನೀಯರ್ ಆಗಿ ಸೇವೆ ಸಲ್ಲಿಸಿರುವೆ ಅದರ ಮಧ್ಯೆ 2007ರ ಎಪ್ರಿಲ್ ನಲ್ಲಿ ಕಾರ್ಖಾನೆಯ ಬಸ್ ನಲ್ಲಿ ಬಳ್ಳಾರಿಯಿಂದ ತೋರಣಗಲ್ಲಿಗೆ ಹೋಗುವಾಗ ಬಸ್ ಅಪಘಾತವಾಗಿ ನಾನು ತೀವ್ರವಾಗಿ ಗಾಯಗೊಂಡಿದ್ದೆ.
ಚಿಕಿತ್ಸೆಯನ್ನು ಜಿಂದಾಲ್ ಸಂಸ್ಥೆ ನೀಡಿತು. ನಂತರ ನನ್ನ ಎಡಗೈ ಮತ್ತು ಬೆನ್ನು ಮೂಳೆ ಈ ಮೊದಲಿನಂತೆ ಕಾರ್ಯನಿರ್ವಹಿಸಲು ಆಗದ ಕಾರಣ ಪರ್ಯಾಯ ಉದ್ಯೋಗ ನೀಡಿತ್ತು.
ಆದರೂ 2009ರ ಏಪ್ರಿಲ್ 3ರಂದು ನನ್ನನ್ನು ವಜಾ ಮಾಡಿತು,ಇದಕ್ಕೆ ಈ ವರೆಗೆ ಯಾವುದೇ ಪರಿಹಾರವನ್ನು ನೀಡಿಲ್ಲ ಎಂದು ಆರೋಪಿಸಿದರು.
ಈ ಮಧ್ಯೆ ನಾನು ನನಗೆ ಪರ್ಯಾಯ ಉದ್ಯೋಗ ಇಲ್ಲ 1 ಕೋಟಿ ರೂ ಪರಿಹಾರ ನೀಡಿ ಎಂದು ಕೇಳಿ ಎಸ್ಸಿ,ಎಸ್ಟಿ ಆಯೋಗಕ್ಕೆ ದೂರು ಸಲ್ಲಿಸಿದೆ,ಅವರು ಕಾರ್ಮಿಕ ಇಲಾಖೆಯ ಉಪ ಆಯುಕ್ತರಿಗೆ ವ್ಯಾಜ್ಯ ಬಗೆಹರಿಸಲು ಸೂಚಿಸಿದರು.
ಅವರು ಪರಿಹಾರ ನೀಡುವಂತೆ ಹೇಳಿದರೂ ಜಿಂದಾಲ್ ನೀಡಲಿಲ್ಲ,ಮತ್ತೆ ನಾನು ಆಯೋಗಕ್ಕೆ ದೂರು ಸಲ್ಲಿಸಿದರೆ ಅಲ್ಲಿಯೂ ಅನ್ಯಾಯವಾಗಿ ಪ್ರಕರಣ ಮುಕ್ತಾಯ ಮಾಡಿದ್ದಾರೆ.
ನಾನು ದಲಿತನೆಂಬ ಕಾರಣಕ್ಕೆ ಜಿಂದಾಲ್ ನಿಂದ ನನಗೆ ನ್ಯಾಯ ದೊರೆಯುತ್ತಿಲ್ಲ. ಪಿ.ಎಫ್, ವಿ.ಪಿ.ಎಫ್ ಹಣ ಸಹ ದೊರೆತಿಲ್ಲ. ರಿಲಿವಿಂಗ್ ಆದೇಶ ನೀಡಿಲ್ಲ. ಈ ಬಗ್ಗೆ ಜನ ಪ್ರತಿನಿಧಿಗಳಿಗೆ ಹೇಳಿದರೂ ಪ್ರಯೋಜನವಾಗಿಲ್ಲ, ಅದಕ್ಕಾಗಿ ಮಾಧ್ಯಮಗಳ ಮೂಲಕ ನನಗೆ ನ್ಯಾಯ ದೊರಕಿಸಿ ಕೊಡಬೇಕೆಂದು ಕೋರುತ್ತಿರುವುದಾಗಿ ಹೇಳಿದರು.
ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವೆ ಮಕ್ಕಳ ವಿದ್ಯಾಭ್ಯಾಸಕ್ಕೆ ಸಂಕಷ್ಟ ಬಂದಿದೆ. ನನ್ನ ಬದುಕು ಬೀದಿ ಪಾಲಾಗಿದೆ. ಅದಕ್ಕಾಗಿ ಪುನಃ ಉದ್ಯೋಗ ಇಲ್ಲ, ಪರಿಹಾರ ಕೊಡಿ ಎಂದು ಕೇಳುವೆ ಎಂದು ಹೇಳಿದರು.