ವಿಜಯನಗರ ವಾಣಿ
ಕರ್ನಾಟಕದಲ್ಲಿ ಮುಖ್ಯಮಂತ್ರಿ ಬದಲಾವಣೆ ಸುದ್ದಿ ಕೆಲ ದಿನಗಳಿಂದ ಕೇಳಿಬರುತ್ತಿದೆ. ಕಳೆದ ವಾರ ದೆಹಲಿಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ, ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಹಿರಿಯ ನಾಯಕರೊಂದಿಗೆ ಸಭೆ ನಡೆಸಿದ ನಂತರವಂತೂ ಈ ಊಹಾಪೋಹಗಳು ಮತ್ತಷ್ಟು ತೀವ್ರಗೊಂಡಿವೆ. ಈ ಮಧ್ಯೆ , ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ನೀಡಿರುವ ಹೇಳಿಕೆ ಈ ಊಹಾಪೋಹಗಳಿಗೆ ಪುಷ್ಟಿ ನೀಡುವಂತಿದೆ. ಹೈಕಮಾಂಡ್ ಸೂಚನೆಗೆ ಬದ್ದ ಎಂದು ಬಿ.ಎಸ್. ವೈ ಹೇಳಿದ್ದಾರೆ.
ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಕರ್ತವ್ಯ: ಯಡಿಯೂರಪ್ಪ
ಸಿಎಂ ಬಿ.ಎಸ್.ಯಡಿಯುರಪ್ಪ ಮಾತನಾಡಿ, ‘ನಮ್ಮ ಸರ್ಕಾರದ 2 ವರ್ಷಗಳು ಪೂರ್ಣಗೊಂಡ ಹಿನ್ನೆಲೆಯಲ್ಲಿ ಜುಲೈ 26 ರಂದು ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು. ನಂತರ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಯಾವುದೇ ನಿರ್ಧಾರ ತೆಗೆದುಕೊಂಡರೂ ಆ ನಿರ್ಧಾರಕ್ಕೆ ಬದ್ಧ ಎಂದು ಮುಖ್ಯಮಂತಿ ಯಡಿಯೂರಪ್ಪ ಹೇಳಿದ್ದಾರೆ. ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದು ನನ್ನ ಕರ್ತವ್ಯ. ಪಕ್ಷದ ಕಾರ್ಯಕರ್ತರು ಮತ್ತು ಬೆಂಬಲಿಗರು ಇದಕ್ಕೆ ಸಹಕರಿಸುವಂತೆ ಕೂಡಾ ಅವರು ಮನವಿ ಮಾಡಿದ್ದಾರೆ.
ಟ್ವೀಟ್ ಮೂಲಕವೂ ರಾಜೀನಾಮೆ ಸುಳಿವು ನೀಡಿದ್ದ ಸಿಎಂ :
ಬುಧವಾರವಷ್ಟೇ ಬಿ.ಎಸ್.ಯಡಿಯುರಪ್ಪ ಕೂಡ ಟ್ವೀಟ್ ಮಾಡುವ ಮೂಲಕ ತಮ್ಮ ರಾಜೀನಾಮೆಯ ಸುಳಿವು ನೀಡಿದ್ದರು. ಇದಕ್ಕೂ ಮೊದಲು ಕಳೆದ ವಾರ ದೆಹಲಿಗೆ ತೆರಳಿ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದರು. ಇದಲ್ಲದೆ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ, ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಕೂಡಾ ಭೇಟಿ ಮಾಡಿದ್ದರು. ಆದರೆ ದೆಹಲಿಯಿಂದ ಹಿಂದಿರುಗಿದ ನಂತರ ಸಿಎಂ ಬದಲಾವಣೆ ಬಗ್ಗೆ ಕೇಳಿ ಬರುತ್ತಿರುವ ಸುದ್ದಿಗಳನ್ನು ತಳ್ಳಿ ಹಾಕಿದ್ದರು.