ತಮಿಳುನಾಡು ಪ್ರೀಮಿಯರ್‌ ಲೀಗ್‌ ಟೂರ್ನಿಯ ವೇಳೆ ‘ನಾನು ಕೂಡ ಬ್ರಾಹ್ಮಣ’ ಎಂಬ ಹೇಳಿಕೆ ನೀಡಿದ್ದ ಸುರೇಶ್ ರೈನಾ

Share and Enjoy !

Shares
Listen to this article

ವಿಜಯನಗರ ವಾಣಿ

ಪ್ರಸಕ್ತ 2021ರ ಆವೃತ್ತಿಯ ತಮಿಳುನಾಡು ಪ್ರೀಮಿಯರ್‌ ಲೀಗ್‌ ಟೂರ್ನಿಯ ಕಾಮೆಂಟರಿ ಪ್ಯಾನೆಲ್‌ನಲ್ಲಿ ವಿಶೇಷ ಆತಿಥಿಯಾಗಿ ಭಾಗವಹಿಸಿ ಮಾತನಾಡುವ ವೇಳೆ ಅನಿರೀಕ್ಷಿತವಾಗಿ ‘ತಾನು ಕೂಡ ಬ್ರಾಹ್ಮಣ’ ಎಂದು ಹೇಳಿಕೆ ನೀಡಿದ್ದ ಟೀಮ್‌ ಇಂಡಿಯಾ ಮಾಜಿ ಆಲ್‌ರೌಂಡರ್‌ ಸುರೇಶ್‌ ರೈನಾ ವಿರುದ್ಧ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಇಂಡಿಯನ್‌ ಪ್ರೀಮಿಯರ್‌ ಲೀಗ್‌(ಐಪಿಎಲ್‌) ಇತಿಹಾಸದಲ್ಲಿಯೇ ಸುರೇಶ್‌ ರೈನಾ ಅತ್ಯಂತ ಮೌಲ್ಯಯುತ ಎಡಗೈ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಅಂದಹಾಗೆ ಸೋಮವಾರ ನಡೆದಿದ್ದ ಎಲ್‌ವೈಸಿಎ ಕೊವೈ ಕಿಂಗ್ಸ್ ಹಾಗೂ ಸೇಲಂ ಸ್ಪರ್ಟನ್ಸ್‌ ನಡುವಿನ ಟಿಪಿಎಲ್‌ ಟೂರ್ನಿಯ ಪಂದ್ಯದ ಕಾಮೆಂಟರಿ ಪ್ಯಾನೆಲ್‌ಗೆ ರೈನಾ ಸೇರ್ಪಡೆಯಾಗಿದ್ದರು.

ಹಲವು ವರ್ಷಗಳಿಂದ ಐಪಿಎಲ್‌ ಟೂರ್ನಿಯಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್ ತಂಡವನ್ನು ಪ್ರತಿನಿಧಿಸುತ್ತಿರುವ ನೀವು, ದಕ್ಷಿಣ ಭಾರತದ ಸಂಸ್ಕೃತಿಗೆ ಹೇಗೆ ಹೊಂದಿಕೊಂಡಿದ್ದೀರಿ ಎಂದು ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಸುರೇಶ್‌ ರೈನಾ, ಇಷ್ಟು ವರ್ಷಗಳ ಕಾಲ ಸಿಎಸ್‌ಕೆ ತಂಡದೊಂದಿಗೆ ಸಂಬಂಧ ಹೊಂದಿರುವುದಕ್ಕೆ ಧನ್ಯವಾದ. ಇಲ್ಲಿನ ಸಂಸ್ಕೃತಿ ನನಗೆ ಇಷ್ಟ. ನಾನು ಕೂಡ ಬ್ರಾಹ್ಮಣ ಎಂದು ಹೇಳಿದರು. ಈ ಹೇಳಿಕೆಗೆ ಸೋಶಿಯಲ್‌ ಮೀಡಿಯಾದಲ್ಲಿ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

“ನಾನು ಕೂಡ ಬ್ರಾಹ್ಮಣ. ಕಳೆದ 2004 ರಿಂದ ನಾನು ಚೆನ್ನೈನಲ್ಲಿ ಕ್ರಿಕೆಟ್‌ ಆಡುತ್ತಿದ್ದೇನೆ. ಇಲ್ಲಿನ ಸಂಸ್ಕೃತಿಯನ್ನು ನಾನು ತುಂಬಾ ಇಷ್ಟಪಡುತ್ತೇನೆ. ಜತೆಗೆ, ನನ್ನ ಸಹ ಆಟಗಾರರನ್ನೂ ಇಷ್ಟಪಡುತ್ತೇನೆ. ಅನಿರುದ್ದ್‌ ಶ್ರೀಕಾಂತ್‌, ಬದ್ರಿ (ಎಸ್‌ ಬದ್ರಿನಾಥ್‌), ಬಾಲಾ ಭಾಯ್‌ (ಲಕ್ಷ್ಮಿಪತಿ ಬಾಲಾಜಿ) ಅವರೊಂದಿಗೆ ಆಡಿದ್ದೇನೆ. ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿ ಉತ್ತಮ ಆಡಳಿತವಿದೆ. ಅದರಂತೆ ಚೆನ್ನೈ ಸಂಸ್ಕೃತಿಯನ್ನು ಇಷ್ಟಪಡುತ್ತೇನೆ. ಸಿಎಸ್‌ಕೆಯ ಒಂದು ಭಾಗವಾಗಿರುವುದಕ್ಕೆ ನನಗೆ ಹೆಮ್ಮೆ ಇದೆ,” ಎಂದು ರೈನಾ ಹೇಳಿದರು.

ಮೈದಾನದ ಒಳಗೆ ಹಾಗೂ ಮೈದಾನದ ಹೊರಗೆ ಸಭ್ಯತೆಯಿಂದಾಗಿ ಇಡೀ ದೇಶಾದ್ಯಂತ ಅಪಾರ ಅಭಿಮಾನಿಗಳ ಬಳಗವನ್ನು ಹೊಂದಿರುವ ಸುರೇಶ್‌ ರೈನಾ, ಬ್ರಾಹ್ಮಣ ಪದ ಬಳಕೆ ಮಾಡಿದ ಕಾರಣ ಸೋಶಿಯಲ್‌ ಮೀಡಿಯಾದಲ್ಲಿ ಹಲವರ ಕೆಂಗೆಣ್ಣಿಗೆ ಗುರಿಯಾಗಿದ್ದಾರೆ. ಅಂದಹಾಗೆ ಸೆಪ್ಟೆಂಬರ್‌ ಹಾಗೂ ಅಕ್ಟೋಬರ್‌ ಅವಧಿಯಲ್ಲಿ ನಡೆಯಲಿರುವ 14ನೇ ಐಪಿಎಲ್‌ ಎರಡನೇ ಭಾಗದಲ್ಲಿ ರೈನಾ ಕಾಣಿಸಿಕೊಳ್ಳಲಿದ್ದಾರೆ.

 

Share and Enjoy !

Shares