ಬಳ್ಳಾರಿ: ನಗರದ ಜಿಲ್ಲಾ ಆಸ್ಪತ್ರೆ ಆವರಣದಲ್ಲಿ ನೂತನ ಕಟ್ಟಡ ಭೂಮಿ ಪೂಜೆಯನ್ನು ಬಳ್ಳಾರಿ ನಗರ ಶಾಸಕ ಸೋಮಶೇಖರ್ ರೆಡ್ಡಿ ಅವರು ಗುರುವಾರ ನೇರವೇರಿಸಿದರು. ರಾಜ್ಯ ಸರ್ಕಾರದಿಂದ 1 ಕೋಟಿ ರೂ. ಅನುದಾನ ಜಿಲ್ಲಾ ಖನಿಜ ನಿಧಿಯ 1.95 ಕೋಟಿ ರೂ.ಅನುದಾನ ಸೇರಿದಂತೆ 2.95 ಕೋಟಿ ರೂ.ವೆಚ್ಚದಲ್ಲಿ ಈ ಕಟ್ಟಡ ನಿರ್ಮಾಣವಾಗಲಿದೆ.
ಶಾಸಕ ಸೋಮಶೇಖರ ರೆಡ್ಡಿ ಅವರು ಮಾತನಾಡಿ, ಈ ಕಟ್ಟಡದಲ್ಲಿ ಮೆಡಿಕಲ್ ದಾಖಲೆ ವಿಭಾಗ, ಹೊರರೋಗಿ ನೋಂದಣಿ ವಿಭಾಗ, ಸಿ.ಟಿ.ಸ್ಕ್ಯಾನ್, ಎಂ.ಆರ್.ಐ. ಸ್ಕ್ಯಾನ್ ವಿಭಾಗಗಳನ್ನು ಹೊಂದಿರಲಿದ್ದು, ಆಸ್ಪತ್ರೆಗೆ ಆಗಮಿಸುವ ಸಾರ್ವಜನಿಕರಿಗೆ ತುಂಬಾ ಅನುಕೂಲವಾಗಲಿದೆ ಎಂದು ಅವರು ತಿಳಿಸಿದರು.
ಕಾಮಗಾರಿಯನ್ನು ನಿಗದಿಪಡಿಸಿದ ಅವಧಿಯೊಳಗೆ ಮತ್ತು ಅತ್ಯಂತ ಗುಣಮಟ್ಟದಲ್ಲಿ ನಿರ್ಮಿಸುವಂತೆ ಗುತ್ತಿಗೆದಾರರಿಗೆ ಇದೇ ಸಂದರ್ಭದಲ್ಲಿ ಅವರು ಸೂಚನೆ ನೀಡಿದರು. ಈ ಸಂದರ್ಭದಲ್ಲಿ ಜಿಲ್ಲಾಶಸ್ತ್ರಚಿಕಿತ್ಸಕ ಬಸರೆಡ್ಡಿ, ಆರ್.ಎಂ.ಒ ಡಾ.ವಿಶ್ವನಾಥ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಗುರುನಾಥ ಚೌಹಾಣ್, ಅಭಿವೃದ್ಧಿ ವಿಭಾಗದ ಸುಧಾಕರ್, ಕ್ಷ-ಕಿರಣ ವಿಭಾಗದ ಡಾ ಚಂದ್ರಬಾಬು ಹಾಗೂ ಚಿತ್ರಶೇಖರ್, ಎಂ.ಆರ್.ಡಿ ವಿಭಾಗದ ಅರುಣ ಹಾಗೂ ರಮಾ, ಗುತ್ತಿಗೆದಾರ ಮೋಹನ್ ಮತ್ತು ಸಿಬ್ಬಂದಿ ವರ್ಗದವರು ಇದ್ದರು.