ವಿಜಯನಗರವಾಣಿ ಸುದ್ದಿ
ಸಿರುಗುಪ್ಪ: ಪುರುಷರಿಗೆ ಸಮಾನವಾಗಿ ಕೆಲಸ ಮಾಡುತ್ತಿರುವ ಮಹಿಳೆಯರು ಯಾವುದರಲ್ಲಿಯೂ ಪುರುಷರಿಗಿಂತ ಕಡಿಮೆ ಇಲ್ಲ, ಪುರುಷರು ಮಾಡುವ ಎಲ್ಲಾ ಕೆಲಸವನ್ನು ಮಹಿಳೆಯರು ಕೂಡ ಮಾಡುತ್ತಿದ್ದಾರೆ. ಮಹಿಳೆಯರಿಗೆ ಹೆಚ್ಚಿನ ಒತ್ತು ಕೊಡುವ ಉದ್ದೇಶದಿಂದ ಮಹಿಳಾ ಕಾಯಕೋತ್ಸವ ಕಾರ್ಯ ಕ್ರಮವನ್ನು ತಾಲೂಕಿನ 27 ಗ್ರಾಮ ಪಂಚಾಯಿತಿಗಳಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ತಾ.ಪಂ.ಇ.ಒ. ಶಿವಪ್ಪ ಸುಬೇದಾರ್ ತಿಳಿಸಿದರು.
ನಗರದ ತಾ.ಪಂ.ಸಭಾಂಗಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ, ಜಿ.ಪಂ.. ತಾ.ಪಂ. ಸಹಯೋಗದಲ್ಲಿ ಕಾಯಕ ಬಂಧುಗಳಿಗೆ ಏರ್ಪಡಿಸಿದ್ದ ಸಮೀಕ್ಷೆದಾರರ ಒಂದು ದಿನದ ತರಬೇತಿ ಕಾರ್ಯಾ ಗಾರದಲ್ಲಿ ಮಾತನಾಡಿ ಮಹಿಳಾ ಕಾಯಕೋತ್ಸವ ಅಭಿಯಾನದಲ್ಲಿ ಮಹಿಳೆ ಯರು ಭಾಗವಹಿಸಿ ಅಕುಶಲ ಉದ್ಯೋಗ ಪಡೆಯಲು ಅವಕಾಶವಿರುತ್ತದೆ. ನಮೂನೆ-06ರಲ್ಲಿ ಕೆಲಸ ಕೋರಿದ 15ದಿನದೊಳಗೆ ಕೆಲಸ ಖಾತರಿ ಮಾಡಬೇಕು, ಕೆಲಸ ಕೋರಿದ 15 ದಿನದೊಳಗೆ ಕೆಲಸ ನೀಡಲು ನಿರಾಕರಿಸಿದರೆ ನಿರುದ್ಯೋಗ ಭತ್ಯೆ ಪಡೆಯಲು ಅವಕಾಶವಿರುತ್ತದೆ.
ನರೇಗಾ ಯೋಜನೆಯಡಿ ಪ್ರತಿ ಗ್ರಾಮ ಪಂಚಾಯಿತಿಯಲ್ಲಿ ಮಹಿಳೆಯರ ಭಾಗವಹಿಸುವ ಪ್ರಮಾಣವನ್ನು ಕನಿಷ್ಠ ಶೇ.55ಕ್ಕಿಂತ ಹೆಚ್ಚಿಸುವುದು ಮತ್ತು ಮಹಿಳಾ ಪ್ರಧಾನ ಕುಟುಂಬಗಳನ್ನು ಗುರುತಿಸುವುದು. ಕಾಮಗಾರಿ ಸ್ಥಳಗಳನ್ನು ಮಹಿಳೆ ಮತ್ತು ಮಕ್ಕಳ ಸ್ನೇಹಿಯನ್ನಾಗಿ ಮಾಡುವುದು ನರೇಗಾ ಯೋಜನೆಯಡಿ ಸ್ವಸಹಾಯ ಸಂಘಗಳ ಭಾಗವಹಿಸಲು ಉತ್ತೇಜನ ನೀಡುವುದು, ಮಹಿಳೆಯರು ಯೋಜನೆಯಡಿ ಹೆಚ್ಚಿನ ಪ್ರಮಾಣದಲ್ಲಿ ಭಾಗವಹಿಸುವಂತೆ ಪ್ರೇರೇಪಿಸಲು ಕಾಯಕ ಬಂಧುಗಳಿಗೆ ತರಬೇತಿ ನೀಡಲಾಗುವುದೆಂದು ಹೇಳಿದರು.
ಕಾಯಕ ಬಂಧುಗಳು ನಿಗಧಿಪಡಿಸಿದ ಮನೆ ಮನೆ ಸಮೀಕ್ಷೆಯನ್ನು ಮುಗಿಸಬೇಕು, ಯಾವುದೇ ಕಾರಣಗಳನ್ನು ಹೇಳದೆ ನಿಗಧಿಪಡಿಸಿದ ಅವಧಿಯಲ್ಲಿಯೇ ಸಮೀಕ್ಷೆಯನ್ನು ಮುಗಿಸಬೇಕು, ಇದರಿಂದ ಮಹಿಳೆಯರಿಗೆ ಉದ್ಯೋಗ ದೊರೆಕಿಸಿಕೊಡಲು ಅನುಕೂಲವಾಗುತ್ತದೆ ಎಂದು ನರೇಗಾ ಯೋಜನೆಯ ತಾ.ನಿರ್ದೇಶಕಿ ಕೆ.ವಿ.ನಿರ್ಮಲ ತಿಳಿಸಿದರು. ಪಿ.ಡಿ.ಒ.ಗಳಾದ ಬಸವರಾಜ, ಮಲ್ಲಿಕಾರ್ಜುನ ಮತ್ತು ಕರೂರು, ರಾವಿಹಾಳ್, ಬಗ್ಗೂರು, ತಾಳೂರು ಗ್ರಾಮ ಪಂಚಾಯಿತಿಗಳ ಕಾಯಕ ಬಂಧುಗಳು ಇದ್ದರು.