ವಿಜಯನಗರವಾಣಿ ಸುದ್ದಿ
ಸಿರುಗುಪ್ಪ: ತಾಲೂಕಿನ 26 ಪರೀಕ್ಷಾ ಕೇಂದ್ರಗಳಲ್ಲಿ ಗುರುವಾರ ನಡೆದ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 3,844 ವಿದ್ಯಾರ್ಥಿಗಳು ಪರೀಕ್ಷೆ ಬರೆದರು. ಬೆಳಿಗ್ಗೆ 10:15 ಕ್ಕೆ ಪ್ರಾರಂಭವಾದ ಪರೀಕ್ಷೆ ಮದ್ಯಾಹ್ನ 1:30ಕ್ಕೆ ಮುಕ್ತಾಯ ಗೊಂಡಿತು. ಕನ್ನಡ, ಇಂಗ್ಲೀಷ್ ಮತ್ತು ಹಿಂದಿ ಪರೀಕ್ಷೆಯಲ್ಲಿ 35 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದರು.
ಪರೀಕ್ಷಾ ಕೇಂದ್ರದಲ್ಲಿ ಕೋವಿಡ್-19 ಮಾರ್ಗಸೂಚಿಯಂತೆ ದೈಹಿಕ ಅಂತರ, ಕಡ್ಡಾಯ ಮಾಸ್ಕ್ ಧರಿಸುವುದು, ಸ್ಯಾನಿಟೈಜಿಂಗ್ ಸೇರಿದಂತೆ ಎಲ್ಲಾ ವಿದ್ಯಾರ್ಥಿಗಳನ್ನು ಆರೋಗ್ಯ ಇಲಾಖೆಯ ಸಿಬ್ಬಂದಿಯು ಥರ್ಮಲ್ ಸ್ಕ್ಯಾನಿಂಗ್ ಮೂಲಕ ತಪಾಸಣೆ ನಡೆಸಿ ಪರೀಕ್ಷಾ ಕೆಂದ್ರಗಳಿಗೆ ಹೋಗಲು ಅನುಮತಿ ಸಲಾಯಿತು. ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ ಅನಾರೋಗ್ಯ ಮತ್ತು ಕೋವಿಡ್ ಪಾಸಿಟಿವ್ ಗುರುತಿಸಲ್ಪಟ್ಟ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಕೊಠಡಿಗಳನ್ನು ವ್ಯವಸ್ಥೆ ಮಾಡಲಾಗಿದ್ದು ಅಂತಹ ಯಾವುದೇ ಪ್ರಕರಣಗಳು ಕಂಡುಬಂದಿಲ್ಲ. ತಾಲೂಕಿನ ರಾರಾವಿ ಗ್ರಾಮದ ಹುತ್ತಿನ ಯಲ್ಲಮ್ಮ ಪ್ರೌಢಶಾಲೆಯ ಪರೀಕ್ಷಾ ಕೇಂದ್ರಕ್ಕೆ ಬಿ.ಇ.ಒ. ಕಛೇರಿಯ ಜಾಗೃತ ದಳ ಮತ್ತು ಜಿಲ್ಲಾ ಉಪನಿರ್ದೇಶಕರ ಕಛೇರಿಯ ತಾಲೂಕು ನೋಡಲ್ ಅಧಿಕಾರಿ ಬಸವರಾಜ್ ಬೇಟಿನೀಡಿ ಪರಿಶೀಲನೆ ನಡೆಸಿದರು. ಇದಕ್ಕೂ ಮುನ್ನ ಶಾಲೆಯ ಆವರಣದಲ್ಲಿ ತಾಲೂಕು ನೋಡಲ್ ಅಧಿಕಾರಿ ವಿದ್ಯಾರ್ಥಿಗಳ ಕೈಗಳಿಗೆ ಸ್ಯಾನಿಟೈಜರ್ ಸಿಂಪರಣೆ ಮಾಡಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಬಿ.ಇ.ಒ. ಪಿ.ಡಿ. ಭಜಂತ್ರಿ ನಮ್ಮ ತಾಲೂಕಿನಲ್ಲಿ ಕೋವಿಡ್ ಪಾಜಿಟಿವ್ ಎಂದು ಗುರುತಿಸಲ್ಪಟ್ಟು ಕೋವಿಡ್ ಸೆಂಟರ್‍ನಲ್ಲಿ ಯಾವುದೇ ವಿದ್ಯಾರ್ಥಿ ಪರೀಕ್ಷೆ ಬರೆದಿಲ್ಲ. ಪರೀಕ್ಷಾ ಕೊಠಡಿಯಲ್ಲಿ ಯಾವುದೇ ವಿದ್ಯಾರ್ಥಿಗೆ ಅನಾರೋಗ್ಯ ಕಾಣಿಸಿಕೊಂಡಿಲ್ಲ, ಎಲ್ಲಾ ಪರೀಕ್ಷೆಗಳು ಸುಗಮವಾಗಿನಡೆದಿವೆ ಎಂದು ಮಾಹಿತಿ ನೀಡಿದರು.