ಬೆಂಗಳೂರು ನಗರಾದ್ಯಂತ ಹಲವು ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಕೈಗೊಂಡ ಬಿ.ಎಸ್.ವೈ

Share and Enjoy !

Shares
Listen to this article

ವಿಜಯನಗರ ವಾಣಿ

ರಾಜೀನಾಮೆ ಗದ್ದಲ ಹಾಗೂ ಅಧಿಕಾರ ಕಳೆದುಕೊಳ್ಳುವ ಆತಂಕದ ನಡುವೆಯೂ ಸಿಎಂ ಬಿಎಸ್ ಯಡಿಯೂರಪ್ಪ ಶುಕ್ರವಾರ ಬೆಂಗಳೂರು ನಗರದ ಸ್ಮಾರ್ಟ್ ಸಿಟಿ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳನ್ನು ವೀಕ್ಷಣೆ ಮಾಡಿದರು.

ಬೆಳಗ್ಗೆ 11 ಗಂಟೆಗೆ ಗೃಹ ಕಚೇರಿ ಕೃಷ್ಣಾದಿಂದ ಆರಂಭವಾದ ಸಿಟಿ ರೌಂಡ್ಸ್, ಮಧ್ಯಾಹ್ನ 1.45 ಗಂಟೆಯವರೆಗೂ ನಡೆಯಿತು. ಬೆಂಗಳೂರು ನಗರದ ಸ್ಮಾರ್ಟ್ ಸಿಟಿ ಯೋಜನೆ ಹಾಗೂ ಟೆಂಡರ್ ಶ್ಯೂರ್ ಕಾಮಗಾರಿಗಳನ್ನು ಸಿಎಂ ಯಡಿಯೂರಪ್ಪ ಪರಿಶೀಲನೆ ನಡೆಸಿದರು. ಒಟ್ಟು 29.53 ಕಿ.ಮೀ ಉದ್ದದ 481.65 ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ 30 ಕಾಮಗಾರಿ ಹಾಗೂ ಪ್ರಗತಿ ವೀಕ್ಷಣೆ ಮಾಡಿದರು.

ಪ್ಲಾನಟೋರಿಯಂ ರಸ್ತೆಯಲ್ಲಿ 7.15 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿ, ಇನ್‌ಫೆಂಟ್ರಿ ರಸ್ತೆಯಲ್ಲಿ 21.10 ಕೋಟಿ ವೆಚ್ಚದ 1.65 ಕಿ.ಮೀ ಉದ್ದದ ಸ್ಮಾರ್ಟ್ ಸಿಟಿ ಕಾಮಗಾರಿ, ಕಮರ್ಶಿಯಲ್ ಸ್ಟ್ರೀಟ್‌ನಲ್ಲಿ 5.41 ಕೋಟಿ ವೆಚ್ಚದ ಕಾಮಗಾರಿ, ಡಿಕಿನ್ಸನ್ ರಸ್ತೆಯಲ್ಲಿ 15.43 ಕೋಟಿ ವೆಚ್ಚದ ಸ್ಮಾರ್ಟ್ ಸಿಟಿ ಕಾಮಗಾರಿ ವೀಕ್ಷಣೆ ಮಾಡಿದರು.

ಹಲಸೂರು ರಸ್ತೆಯಲ್ಲಿ 8.31 ಕೋಟಿ ವೆಚ್ಚದ ಕಾಮಗಾರಿ, ಬ್ರಿಗೇಡ್ ರಸ್ತೆಯಲ್ಲಿ 4.29 ಕೋಟಿ ವೆಚ್ಚದ ಕಾಮಗಾರಿ, ರಾಜಾರಾಂ ಮೋಹನ್ ರಾವ್ ರಸ್ತೆಯಲ್ಲಿ 13.66 ಕೋಟಿ ವೆಚ್ಚದ ಕೆಲಸ ಕಾರ್ಯಗಳು ಹಾಗೂ ಕಸ್ತೂರ್ ಬಾ ರಸ್ತೆಯಲ್ಲಿ 10.02 ಕೋಟಿ ವೆಚ್ಚದ ಕಾಮಗಾರಿ ಅಲ್ಲದೆ, ರಾಜಭವನ ರಸ್ತೆಯಲ್ಲಿ 13.18 ಕೋಟಿ, ಪ್ಯಾಲೇಸ್ ರಸ್ತೆಯಲ್ಲಿ 25.48 ಕೋಟಿ ವೆಚ್ಚದ ಕಾಮಗಾರಿ ಪರಿಶೀಲನೆ ನಡೆಸಿದರು. ‌

ಮಳೆಯಲ್ಲೇ ಕಾಮಗಾರಿ ವೀಕ್ಷಣೆ ಮಾಡಿದ ಸಿಎಂ

ಸಿಟಿ ರೌಂಡ್ಸ್ ಸಂದರ್ಭದಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಅವರು ಮಳೆಯಲ್ಲೇ ಕಾಮಗಾರಿ ವೀಕ್ಷಣೆ ಮಾಡಿದರು. ಕಮರ್ಶಿಯಲ್ ಸ್ಟ್ರೀಟ್ ರಸ್ತೆಯನ್ನು ಪರಿಶೀಲನೆ ನಡೆಸಿದರು. ಈ ವೇಳೆ ಸಿಎಂಗೆ ಡಿಸಿಎಂ ಅಶ್ವತ್ಥ ನಾರಾಯಣ, ಸಚಿವರಾದ ಆರ್ ಅಶೋಕ್, ವಿ. ಸೋಮಣ್ಣ, ಅರವಿಂದ ಲಿಂಬಾವಳಿ ಸಾಥ್ ನೀಡಿದರು.

ರೌಂಡ್ಸ್ ನಡುವೆ ಸಚಿವರ ಜೊತೆಗೆ ಉಪಹಾರ

ಕಮರ್ಶಿಯಲ್ ಸ್ಟ್ರೀಟ್‌ನಲ್ಲಿ ಟೆಂಡರ್ ಶ್ಯೂರ್ ಕಾಮಗಾರಿ ವೀಕ್ಷಣೆ ಮಾಡಿದ ಸಿಎಂ, ಇದೇ ಸಂದರ್ಭದಲ್ಲಿ ವುಡ್ಡೀಸ್ ಹೋಟೆಲ್‌ಗೆ ಸಚಿವರ ಜೊತೆ ತೆರಳಿ ಉಪಾಹಾರ, ಟೀ, ಕಾಫಿ ಸೇವಿಸಿದರು.

ಇನ್ನು ಸಿ.ವಿ ರಾಮನ್ ನಗರದಲ್ಲಿ ವೈಟ್ ಟಾಪಿಂಗ್ ವೀಕ್ಷಣೆ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರು ಪಕ್ಷದ ಬಾವುಟ ಹಿಡಿದು ಸ್ವಾಗತಿಸಿದರು. ದಾರಿ ಉದ್ದಕ್ಕೂ ಕಾರ್ಯಕರ್ತರು ಸಿಎಂಗೆ ಸ್ವಾಗತ ಕೋರಿರುವುದು ವಿಶೇಷ ಆಗಿತ್ತು.

ಇನ್ನು ಸಿ.ಟಿ ರೌಂಡ್ಸ್ ಸಂದರ್ಭದಲ್ಲಿ ದಾರಿ ಉದ್ದಕ್ಕೂ ಸಾಕಷ್ಟು ಜನರು ರಸ್ತೆಯ ಇಕ್ಕೆಲಗಳಲ್ಲಿ ಸಿಎಂ ನೋಡಲು ನಿಂತಿದ್ದರು. ಮೊಬೈಲ್ ನಲ್ಲಿ ವಿಡಿಯೋ ಮಾಡಿಕೊಳ್ಳುತ್ತಾ ಕೈಬೀಸಿದರು.

Share and Enjoy !

Shares