ಕನ್ನಡಿಗ ಚಿತ್ರದ ನಟಿ ಪಾವನಾಗೆ ಪೊಲೀಸ್ ತರಬೇತಿ

Share and Enjoy !

Shares
Listen to this article

ವಿಜಯನಗರ ವಾಣಿ

‘ಗೊಂಬೆಗಳ ಲವ್’, ‘ಜಟ್ಟ’ ಸಿನಿಮಾಗಳ ಖ್ಯಾತಿಯ ನಟಿ ಪಾವನಾ ಈಗ ಪೊಲೀಸ್‌ ಟ್ರೈನಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಹಾಗಂತ ಅವರು ಪೊಲೀಸ್‌ ಇಲಾಖೆ ಸೇರುತ್ತಿದ್ದಾರೆ ಎಂದು ಭಾವಿಸಬೇಕಿಲ್ಲ. ಪಾವನಾ ಇವನ್ನೆಲ್ಲ ಮಾಡುತ್ತಿರುವುದು, ಸಿನಿಮಾಕ್ಕಾಗಿ! ಹೌದು, ‘ಸದ್ದು ವಿಚಾರಣೆ ನಡೆಯುತ್ತಿದೆ’ ಎಂಬ ಚಿತ್ರದಲ್ಲಿ ಪಾವನಾ ನಟಿಸುತ್ತಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್‌ ಕಾನ್‌ಸ್ಟೇಬಲ್‌ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಚಿತ್ರವನ್ನು ಭಾಸ್ಕರ್‌ ನೀನಾಸಂ ನಿರ್ದೇಶನ ಮಾಡುತ್ತಿದ್ದಾರೆ.

ನಟಿ ಪಾವನಾ ಮೈಸೂರಿನಲ್ಲಿ ಇರುವ ಪೊಲೀಸ್‌ ಟ್ರೈನಿಂಗ್ ಸ್ಕೂಲ್‌ನಲ್ಲಿ ತರಬೇತಿ ಪಡೆಯುತ್ತಿದ್ದಾರೆ. ಕರಾಟೆ, ರೈಫಲ್‌ ಶೂಟಿಂಗ್‌ಗಳನ್ನೂ ಅವರು ಕಲಿಯುತ್ತಿದ್ದಾರಂತೆ. ‘ನಾನು ಪೊಲೀಸ್‌ ಕಾನ್‌ಸ್ಟೇಟೇಬಲ್‌ ಪಾತ್ರದಲ್ಲಿ ನಟಿಸುತ್ತಿರುವುದರಿಂದ ಅವರು ಹೇಗೆ ಮಾರ್ಚ್ಫಾಸ್ಟ್‌ ಮಾಡ್ತಾರೆ, ಹೇಗೆ ಸಲ್ಯೂಟ್‌ ಹೊಡೆಯುತ್ತಾರೆ ಎನ್ನುವುದನ್ನು ಸರಿಯಾಗಿ ತಿಳಿದುಕೊಳ್ಳಬೇಕಿದೆ. ಸಿನಿಮಾ ಬಹಳ ನೈಜವಾಗಿ ಇರಲಿದ್ದು, ಇದಕ್ಕಾಗಿ ಪಿಸಿಗಳ ಹಾವಭಾವವನ್ನು ಸಹಜವಾಗಿ ಅನುಸರಿಸಬೇಕಿದೆ. ಈ ಕಾರಣಕ್ಕಾಗಿ ಪೊಲೀಸ್‌ ಟ್ರೈನಿಂಗ್ ಸ್ಕೂಲ್‌ ಸಹಾಯವನ್ನು ಪಡೆದೆವು. ಇದೇ ಕಟ್ಟಡದಲ್ಲಿ ಚಿತ್ರೀಕರಣವೂ ನಡೆಯಲಿದೆ’ ಎಂದಿದ್ದಾರೆ.

ಮರ್ಡರ್‌ ಕೇಸ್‌ ಸುತ್ತ ಕಥೆ ಸಾಗಲಿದೆ. ಥ್ರಿಲ್ಲರ್‌ ಸಿನಿಮಾ ಇದಾಗಿದೆ. ಈಗಾಗಲೇ ಸಕಲೇಶಪುರದಲ್ಲಿ ಚಿತ್ರೀಕರಣ ಮಾಡಲಾಗಿದೆ. ಚಿತ್ರದಲ್ಲಿ ಕಿರುತೆರೆ ನಟ ರಾಕೇಶ್‌ ಮಯ್ಯ ನಾಯಕನಾಗಿ ನಟಿಸಲಿದ್ದಾರೆ. ಇದರ ಜೊತೆಗೆ ಕ್ರೇಜಿ ಸ್ಟಾರ್ ವಿ. ರವಿಚಂದ್ರನ್ ಅವರ ಜೊತೆ ‘ಕನ್ನಡಿಗ’ ಚಿತ್ರದಲ್ಲೂ ಪಾವನಾ ನಟಿಸಿದ್ದಾರೆ. ಅಲ್ಲಿ ಅವರು ರವಿಚಂದ್ರನ್‌ ಪತ್ನಿಯಾಗಿ ಕಾಣಿಸಿಕೊಂಡಿದ್ದಾರೆ. ಈ ಮಧ್ಯೆ ರವಿಚಂದ್ರನ್ ನಿರ್ದೇಶನ ಮಾಡಲಿರುವ ‘6ಟಿ’ ಸಿನಿಮಾಕ್ಕೂ ಪಾವನಾ ಅವರೇ ನಾಯಕಿ.

‘ರವಿಚಂದ್ರನ್‌ ಅವರ ಸಿನಿಮಾಗಳಲ್ಲಿ ನಟಿಸುವುದು ವಿಶೇಷ ಅನುಭವ ನೀಡುತ್ತದೆ. ‘6ಟಿ’ ಬಹಳ ವಿಶೇಷವಾದ ಸಿನಿಮಾ. ಏಕೆಂದರೆ ಇದು ಅವರ ನಿರ್ದೇಶನದ ಸಿನಿಮಾ. ಇದರ ಸಬ್ಜೆಕ್ಟ್ ಮತ್ತು ಕೊಂಚ ವಿಭಿನ್ನವಾಗಿವೆ. ಅವರ ನಟನೆಯ ಕನ್ನಡಿಗ ಸಿನಿಮಾದಲ್ಲಿ ನಾನು ಹೇಗೆ ಕಾಣಿಸಿಕೊಂಡಿದ್ದೇನೆ ಎಂಬುದು ಈಗಾಗಲೇ ರಿವೀಲ್‌ ಆಗಿದೆ. ಅವರು ನಾಯಕಿಯರನ್ನು ಸುಂದರವಾಗಿ ತೋರಿಸುತ್ತಾರೆ. ಈಗ ಅವರ ನಿರ್ದೇಶನದ 6ಟಿ ಕೂಡ ನನ್ನ ಕೆರಿಯರ್‌ನ ವಿಶೇಷ ಸಿನಿಮಾವಾಗಲಿದೆ’ ಎಂದು ಪಾವನಾ ಈ ಹಿಂದೆ ಹೇಳಿಕೊಂಡಿದ್ದರು.

Share and Enjoy !

Shares