ವರಿಷ್ಠರ ಸೂಚನೆಗಾಗಿ ಕಾಯುತ್ತಿರುವ ಯಡಿಯೂರಪ್ಪ!!

Share and Enjoy !

Shares
Listen to this article
ವಿಜಯನಗರ ವಾಣಿ
ಯಡಿಯೂರಪ್ಪ ನೇತೃತ್ವದ ಸರ್ಕಾರ ಇದೇ 26ಕ್ಕೆ ಎರಡು ವರ್ಷಗಳನ್ನು ಪೂರೈಸಲಿದೆ. ನಾಯಕತ್ವಕ್ಕೆ ಸಂಬಂಧಿಸಿದಂತೆ ಭಾನುವಾರ  ವರಿಷ್ಠರಿಂದ ಸಂದೇಶ ಬರಲಿದೆ ಎಂದು ಅವರು ಈ ಹಿಂದೆಯೇ ಹೇಳಿಕೆ ನೀಡಿದ್ದರು.  ಹಾಗಿದ್ದರೂ ಭಾನುವಾರಬೆಳಿಗ್ಗೆಯಿಂದಲೇ ಬೆಳಗಾವಿ ಜಿಲ್ಲಾ ಪ್ರವಾಸ ಕೈಗೊಂಡು, ಪ್ರವಾಹ ಪರಿಸ್ಥಿತಿ ಅವಲೋಕಿಸಿದ್ದರು. ವರಿಷ್ಠರ ಸಂದೇಶವನ್ನು ಪಾಲಿಸುವುದಾಗಿ ಅಲ್ಲಿಯೂ ಹೇಳಿದ್ದರು.

‘ನಾಯಕತ್ವ ಬದಲಾವಣೆ ಕುರಿತು ಪಕ್ಷದ ವರಿಷ್ಠರಿಂದ ಸಂದೇಶ ಬಂದಿಲ್ಲ’ ಎಂಬುದನ್ನು ಮಾಧ್ಯಮಗಳ ಜತೆ ಹಂಚಿಕೊಳ್ಳುತ್ತಲೇ, ‘ಯಾವ ಬಗೆಯ ಸಂದೇಶ ಬಂದರೂ ಶಿರಸಾವಹಿಸಿ ಪಾಲಿಸಲು ಸಿದ್ಧ’ ಎಂಬುದಾಗಿ ಯಡಿಯೂರಪ್ಪ ಪದೇ ಪದೇ ಹೇಳಿದ್ದು, ಆ ಮೂಲಕ ಮುಖ್ಯಮಂತ್ರಿ ಬದಲಾವಣೆ ಕುರಿತ ಕುತೂ ಹಲವನ್ನು ಜೀವಂತವಾಗಿ ಇರಿಸಿದ್ದಾರೆ.

ಈ ಎಲ್ಲ ಬೆಳವಣಿಗೆಗಳ ಮಧ್ಯೆಯೇ ಗೋವಾದಲ್ಲಿ ಹೇಳಿಕೆ ನೀಡಿರುವ ಬಿಜೆಪಿ ಅಧ್ಯಕ್ಷ ಜೆ.ಪಿ. ನಡ್ಡಾ ಅವರು, ಯಡಿಯೂರಪ್ಪ ಕಾರ್ಯವೈಖರಿ ಶ್ಲಾಘಿಸಿದ್ದಾರೆ. ನಾಯಕತ್ವ ಬದಲಾವಣೆಯ ಚರ್ಚೆಯ ನಡುವೆಯೇ ನಡ್ಡಾ ಅವರ ಹೇಳಿಕೆ ನಾನಾ ಬಗೆಯ ವಿಶ್ಲೇಷಣೆ, ವಿಮರ್ಶೆಗೆ ಎಡೆ ಮಾಡಿದೆ. ಬೆಳಗಾವಿ ಪ್ರವಾಸ ಮುಗಿಸಿ ನಗರಕ್ಕೆ ಹಿಂದಿರುಗಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಯಡಿಯೂರಪ್ಪ, ‘ಭಾನುವಾರ ರಾತ್ರಿ ಅಥವಾ ಸೋಮ ವಾರ ಬೆಳಿಗ್ಗೆ ಸಂದೇಶ ಬರಬಹುದು ಎಂಬ ನಿರೀಕ್ಷೆ ಇದೆ. ಸಂದೇಶ ಬಂದ ಬಳಿಕ ವರಿಷ್ಠರು ಹೇಳಿದಂತೆ ನಡೆದುಕೊಳ್ಳುವೆ. ಅಧಿಕಾರದಲ್ಲಿ ಮುಂದುವರಿಯಿರಿ ಎಂದರೆ ಮುಖ್ಯಮಂತ್ರಿಯಾಗಿ ಕೆಲಸ ನಿರ್ವಹಿಸಿಕೊಂಡು ಹೋಗುವೆ. ರಾಜೀನಾಮೆಗೆ ಸೂಚಿಸಿದರೆ ತಕ್ಷಣವೇ ಹುದ್ದೆಯಿಂದ ಕೆಳಗೆ ಇಳಿಯುತ್ತೇನೆ ಎಂದರು.

‘ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡುವ ಕ್ಷಣದವರೆಗೂ ಕೆಲಸ ಮುಂದುವರಿಸುತ್ತೇನೆ. ಸೋಮವಾರಕ್ಕೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಎರಡು ವರ್ಷಗಳಾಗುತ್ತಿವೆ. ಈ ಸಂಬಂಧ ಒಂದು ಕಾರ್ಯಕ್ರಮ ಆಯೋಜಿಸಲಾಗಿದೆ. ಆ ಕಾರ್ಯಕ್ರಮದಲ್ಲಿ ನಮ್ಮ ಸರ್ಕಾರದ ಸಾಧನೆಗಳ ಕುರಿತು ಮಾತನಾಡುತ್ತೇನೆ. ನಂತರ ಉಳಿದ ಸಂಗತಿಗಳು ನಿಮಗೆ ಗೊತ್ತಾಗುತ್ತವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಬಿಎಸ್‌ವೈ ಶ್ಲಾಘಿಸಿದ ನಡ್ಡಾ: ‘ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಉತ್ತಮ ಕೆಲಸ ಮಾಡಿದ್ದಾರೆ’ ಎಂದಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ, ರಾಜ್ಯದಲ್ಲಿ ರಾಜಕೀಯ ಬಿಕ್ಕಟ್ಟು ಇದೆ ಎಂಬುದನ್ನು ತಳ್ಳಿಹಾಕಿದ್ದಾರೆ.‘ಯಡಿಯೂರಪ್ಪ ಅವರು ಉತ್ತಮವಾಗಿ ಕೆಲಸ ಮಾಡಿದ್ದಾರೆ. ಕರ್ನಾಟಕ ಸರ್ಕಾರ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಯಡಿಯೂರಪ್ಪ ಅವರು ತಮ್ಮದೇ ಆದ ರೀತಿಯಲ್ಲಿ ವಿಷಯಗಳನ್ನು ನೋಡಿಕೊಳ್ಳುತ್ತಿದ್ದಾರೆ’ ಎಂದು ಅವರು ಭಾನುವಾರ ಸುದ್ದಿಗಾರರಿಗೆ ತಿಳಿಸಿದರು.

ವಿರೋಧಿ ಬಣದಲ್ಲಿ ದೃಢ ವಿಶ್ವಾಸ: ಬಿಜೆಪಿ ವರಿಷ್ಠರು ರಾಜ್ಯದಲ್ಲಿನ ಬೆಳವಣಿಗೆಗಳ ಕುರಿತು ಯಾವುದೇ ಸಂದೇಶ ರವಾನಿಸದೆ ಮುಗುಂ ಆಗಿದ್ದಾರೆ. ಆದರೂ, ರಾಜ್ಯ ಸರ್ಕಾರದ ನಾಯಕತ್ವ ಬದಲಾವಣೆ ಆಗುವುದು ನಿಶ್ಚಿತ ಎಂಬ ದೃಢ ವಿಶ್ವಾಸದಲ್ಲಿದ್ದಾರೆ ಯಡಿಯೂರಪ್ಪ ವಿರೋಧಿ ಬಣದವರು. ‘ವರಿಷ್ಠರಿಂದ ಸಂದೇಶ ಬರುವುದು ತಡವಾಗುತ್ತಿದೆ. ಅದನ್ನು ನಾಯಕತ್ವ ಬದಲಾವಣೆ ಇಲ್ಲ ಎಂದು ಅರ್ಥೈಸಲಾಗದು. 10 ರಿಂದ 15 ದಿನಗಳಲ್ಲಾದರೂ ಮುಖ್ಯಮಂತ್ರಿ ಬದಲಾವಣೆ ಆಗುವುದು ಖಚಿತ’ ಎಂದು ಕೆಲವು ಶಾಸಕರು ಹೇಳುತ್ತಾರೆ.

‘ಮುಖ್ಯಮಂತ್ರಿ ರಾಜೀನಾಮೆ ನೀಡಿದರೆ ಅವರನ್ನು ಕೆಲವು ದಿನಗಳ ಕಾಲ ಉಸ್ತುವಾರಿ ಮುಖ್ಯಮಂತ್ರಿ ಆಗಿ ಮುಂದುವರಿಸಲಾಗುತ್ತದೆ. ಬಳಿಕ ಶಾಸಕಾಂಗ ಪಕ್ಷದ ಸಭೆ ಕರೆದು ನಾಯಕನ ಆಯ್ಕೆ ಮಾಡಲಾಗುತ್ತದೆ’ ಎಂಬ ಮಾತು ಕೇಳಿ ಬಂದಿದೆ.

‘ಬಿಎಸ್‌ವೈಗೆ ಹೆಚ್ಚು ಅವಕಾಶ ನೀಡಿದ್ದೇ ಬಿಜೆಪಿ’‘ಯಡಿಯೂರಪ್ಪ ಅವರಿಗೆ ಬಿಜೆಪಿ ಸಾಕಷ್ಟು ಅವಕಾಶಗಳನ್ನು ನೀಡಿದೆ. ಅವರು ಬೇರೆ ಯಾವುದೇ ಪಕ್ಷದಲ್ಲಿದ್ದರೂ ಇಷ್ಟು ಅವಕಾಶಗಳು ಸಿಗುತ್ತಿರಲಿಲ್ಲ’ ಎಂದು ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಗೋವಾದಲ್ಲಿ ಸುದ್ದಿಗಾರರಿಗೆ ಹೇಳಿದ್ದಾರೆ. ರಾಜ್ಯ ಕಂಡ ಅತ್ಯುತ್ತಮ ಜನಪ್ರಿಯ ನಾಯಕ ಯಡಿಯೂರಪ್ಪ ಎಂಬುದರಲ್ಲಿ ಸಂಶಯವಿಲ್ಲ. ಪಕ್ಷವು ಸಾಮಾನ್ಯ ಕಾರ್ಯಕರ್ತ ನನ್ನು ನಾಯಕನಾಗಿ ಬೆಳೆಸಿ ನಾಯಕತ್ವ ನೀಡುತ್ತದೆ. ಅದೇ ರೀತಿ ಯಡಿಯೂರಪ್ಪ ಅವರಿಗೆ ಎಲ್ಲ ಹಂತಗಳಲ್ಲೂ ಅವಕಾಶ ನೀಡಿದೆ. ಪಕ್ಷದಲ್ಲಿ, ಸರ್ಕಾರದಲ್ಲಿ ಮತ್ತು ವಿರೋಧ ಪಕ್ಷ ನಾಯಕರಾಗಿ ಹಲವು ಬಾರಿ ಅವಕಾಶ ನೀಡಿದೆ ಎಂದು ತಿಳಿಸಿದರು.

ರಾಜಭವನಕ್ಕೆ ಮರಳಿದ ರಾಜ್ಯಪಾಲ:ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಅವರು ಮಧ್ಯಪ್ರದೇಶಕ್ಕೆ ತೆರಳಿದ್ದರು. ಭಾನುವಾರ ಸಂಜೆಯೇ ರಾಜಭವನಕ್ಕೆ ಮರಳಿದ್ದಾರೆ.‘ಹೈಕಮಾಂಡ್‌ನಿಂದ ಮಾಹಿತಿ ಬಂದಿಲ್ಲ’: ಉಡುಪಿ: ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಹೈಕಮಾಂಡ್‌ನಿಂದ ಯಾವುದೇ ಸೂಚನೆಯಾಗಲಿ ಹಾಗೂ ಮಾಹಿತಿಯಾಗಲಿ ಬಂದಿಲ್ಲ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್‌ ಭಾನುವಾರ ಹೇಳಿದರು. ‘ಈಚೆಗೆ ಜಾಲತಾಣಗಳಲ್ಲಿ ಹರಿದಾಡಿದ ಆಡಿಯೋ ವಿರುದ್ಧ ಠಾಣೆಗೆ ದೂರು ನೀಡಲಾಗಿದ್ದು, ತನಿಖೆ ನಡೆಯುತ್ತಿದೆ. ಆಡಿಯೋ ಬಗ್ಗೆ ಹೆಚ್ಚು ಮಾತನಾಡುವುದಿಲ್ಲ’ ಎಂದರು

Share and Enjoy !

Shares