ಕನ್ನಡದ ಉದ್ದಾಮ ಪಂಡಿತರಲ್ಲಿ ಒಬ್ಬರಾದ ಎಂ. ಮರಿಯಪ್ಪ ಭಟ್ಟರು ರವರ ಜನ್ಮದಿನ

Share and Enjoy !

Shares
Listen to this article
ವಿಜಯನಗರ ವಾಣಿ
ಪ್ರೊ. ಎಂ. ಮರಿಯಪ್ಪ ಭಟ್ಟರು ಕನ್ನಡದ ಉದ್ದಾಮ ಪಂಡಿತರಲ್ಲಿ ಒಬ್ಬರು. ಅವರು ಮೂರು ದಶಕಗಳ ಕಾಲ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿ, ಪಂಡಿತರಾಗಿ, ನಿಘಂಟುತಜ್ಞರಾಗಿ, ಸಂಶೋಧಕರಾಗಿ ಕೀರ್ತಿವಂತರಾಗಿದ್ದವರು. ದ್ರಾವಿಡ ಭಾಷೆಗಳ ದೊಡ್ಡ ವಿದ್ವಾಂಸರು ಮತ್ತು ಭಾರತದಲ್ಲಿ ಭಾಷಾಶಾಸ್ತ್ರದ ಮುಖ್ಯ ಪರಿಣತರಲ್ಲೊಬ್ಬರಾಗಿದ್ದರು.
ಮರಿಯಪ್ಪಭಟ್ಟರು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ಸಮೀಪದ ಮುಂಗ್ಲಿ ಮನೆಯಲ್ಲಿ 1906ರ ಜುಲೈ 27ರಂದು ಜನಿಸಿದರು. ತಂದೆ ಗೋವಿಂದ ಭಟ್ಟರು. ತಾಯಿ ಕಾವೇರಿ ಅಮ್ಮನವರು. ಮರಿಯಪ್ಪ ಭಟ್ಟರ ಪ್ರಾರಂಭಿಕ ವಿದ್ಯಾಭ್ಯಾಸ ಪುತ್ತೂರು ಸಮೀಪದ ಪೊಳ್ಯದಲ್ಲಿ ನೆರವೇರಿತು. ಅವರು ಹೈಸ್ಕೂಲಿಗೆ ಸೇರಿದ್ದು ಪುತ್ತೂರಿನಲ್ಲಿ. ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಿಂದ ಬಿ. ಎ. ಪದವಿ ಪಡೆದರು.
ಮುಂದೆ ಮರಿಯಪ್ಪ ಭಟ್ಟರು ಮದರಾಸಿನ ಪ್ರಾಚ್ಯ ಹಸ್ತ ಪ್ರತಿ ಸಂಶೋಧನ ಗ್ರಂಥ ಭಂಡಾರದಲ್ಲಿ ಜ್ಯೂನಿಯರ್ ಅಸಿಸ್ಟೆಂಟ್‌ರಾಗಿ ಕೆಲಸಕ್ಕೆ ಸೇರಿದರು. ನಂತರ ಗಣಿತ ಶಾಸ್ತ್ರದ ಉಪಾಧ್ಯಾಯರಾಗಿ ಮದರಾಸಿನ ಕ್ರಿಶ್ಚಿಯನ್ ಹೈಸ್ಕೂಲಿನಲ್ಲಿ ವೃತ್ತಿ ನಡೆಸಿದರು. ಸ್ವಂತ ಪರಿಶ್ರಮದಿಂದ ಕನ್ನಡ ಎಂ.ಎ. ಪದವಿ, ಎಲ್.ಟಿ. ಪದವಿ ಸಂಪಾದಿಸಿದ್ದಲ್ಲದೆ, ಕನ್ನಡ ವಿದ್ವಾನ್ ಪದವಿಯನ್ನೂ ಗಳಿಸಿದರು. 1940ರಲ್ಲಿ ಮದರಾಸು ವಿಶ್ವವಿದ್ಯಾಲಯದ ಕನ್ನಡ ವಿಭಾಗದಲ್ಲಿ ಉಪನ್ಯಾಸಕರಾಗಿ ನೇಮಕಗೊಂಡು, ರೀಡರ್, ಪ್ರೊಫೆಸರ್ ಸ್ಥಾನಗಳಿಗೇರಿ, ಅದೇ ವಿಭಾಗದಲ್ಲಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1972ರಲ್ಲಿ ನಿವೃತ್ತಿ ಹೊಂದಿದರು. ಮೂರು ದಶಕಗಳಿಗೂ ಹೆಚ್ಚು ಕಾಲ ಅವರು ಕನ್ನಡ ವಿಭಾಗದ ಏಳಿಗೆಗಾಗಿ ಪರಿಶ್ರಮಪಟ್ಟು ಕಾರ್ಯನಿರ್ವಹಿಸಿದರು.
ನಿಘಂಟು ರಚನಾ ಕ್ಷೇತ್ರ, ಮರಿಯಪ್ಪ ಭಟ್ಟರು ಬಹು ತಜ್ಞರೆಂದು ಪರಿಗಣಿಸಲ್ಪಟ್ಟ ಮುಖ್ಯವಾದೊಂದು ಕ್ಷೇತ್ರ. ಅವರು, ಪರಿಷ್ಕರಿಸಿದ ಕನ್ನಡ ಕಿಟೆಲ್ ನಿಘಂಟನ್ನು ನಾಲ್ಕು ಸಂಪುಟಗಳಲ್ಲಿ ಪ್ರಕಟಿಸಿದರು. 1968ರಲ್ಲಿ ಅವರು ಕಿಟೆಲ್ ಕೋಶದ ಸಂಪುಟಗಳನ್ನು ಪ್ರಕಟಿಸತೊಡಗಿದಾಗ ಕನ್ನಡ ಜನ ಪ್ರೀತಿಯಿಂದ ಅವರನ್ನು ಅಭಿನವ ಕಿಟೆಲ್ ಎಂದು ಗೌರವಿಸಿದರು. ಪರಿಷ್ಕರಿಸಿದ ಕಿಟೆಲ್ ಅವರ ಕನ್ನಡ – ಇಂಗ್ಲಿಷ್ ನಿಘಂಟುವಿನ ನಾಲ್ಕು ಸಂಪುಟಗಳು ಮಾತ್ರವಲ್ಲದೆ ಅವರು ದ್ರಾವಿಡಿಯನ್ ಕಂಪಾರೆಟಿವ್ ವಕಾಬ್ಯುಲರಿ (ದ್ರಾವಿಡ ಭಾಷೆಗಳ ಹೋಲಿಕೆಯ ಶಬ್ದಕೋಶ) , ತುಳು – ಇಂಗ್ಲಿಷ್ ನಿಘಂಟು ಹಾಗೂ ಹವ್ಯಕ ಭಾಷೆಯ ನಿಘಂಟುಗಳನ್ನೂ ಪ್ರಕಟಿಸಿದ್ದಾರೆ.
1940ನೇ ಇಸವಿಯ ಆದಿಯಲ್ಲಿ ಕನ್ನಡದ ಮುಖ್ಯ ಕೃತಿಗಳ ಸಂಪಾದನೆ ಇನ್ನೂ ನಡೆಯುತ್ತಿದ್ದ ಕಾಲದಲ್ಲಿ ಅವರು ಕನ್ನಡದ ಮುಖ್ಯವಾದ 14 ಕೃತಿಗಳನ್ನು ಸಂಪಾದಿಸಿದರು. ಅವುಗಳಲ್ಲಿ ಮುಖ್ಯವಾದ ಕೆಲವು ಕೃತಿಗಳೆಂದರೆ ಮಂಗರಾಜನ ಅಭಿನವಾಭಿದಾನಂ, ಸೆಲೆಕ್ಟೆಡ್ ಕನ್ನಡ ಇನ್‌ಸ್ಕ್ರಿಪ್ಷನ್ಸ್, ಆಚಣ್ಣನ ವರ್ಧಮಾನ ಪುರಾಣಂ, ಪಾರ್ಶ್ವನಾಥ ಪುರಾಣಂ, ಶ್ರೀಧರಾಚಾರ್ಯರ ಜಾತಕ ತಿಲಕಂ, ಚಿಕುಪಾಧ್ಯಾಯನ ವಿಷ್ಣುಪುರಾಣಂ, ಹಳಗನ್ನಡ, ನಡುಗನ್ನಡ ಕಾವ್ಯ ಸಂಗ್ರಹ, ಹೊಸಗನ್ನಡ ಕಾವ್ಯಶ್ರೀ, ನಾಲ್ನುಡಿ-ನಾಣ್ಣುಡಿ, ಸರ್ವಜ್ಞನ ವಚನ ಸಂಗ್ರಹ ಮೊದಲಾದವು. ‘ಸಂತರ ಚರಿತ್ರೆ’ ಎಂಬುದು ಅನುವಾದ.
ಭಟ್ಟರು ಕೆಲವೊಂದು ಸ್ವತಂತ್ರ ಕೃತಿಗಳನ್ನೂ ರಚಿಸಿದರು. ಅವುಗಳಲ್ಲಿ ಮುಖ್ಯವಾದವುಗಳೆಂದರೆ ಕನ್ನಡ ಸಂಸ್ಕೃತಿ, ಸಂಕ್ಷಿಪ್ತ ಕನ್ನಡ ಸಾಹಿತ್ಯ ಚರಿತ್ರೆ, ಕೇಶೀರಾಜ ಮೊದಲಾದವು. ಇವಲ್ಲದೆ ಹಳೆಗನ್ನಡ ಕಾವ್ಯ ಸಂಗ್ರಹಗಳು ಹಾಗೂ ಅನೇಕ ಸಂಶೋಧನಾ ಲೇಖನಗಳನ್ನೂ ಬರೆದರು. ‘ಖಗಮಣಿ ದರ್ಪಣ’ ಎಂಬ ವೈದ್ಯಕ್ಷೇತ್ರದ ಕನ್ನಡ ಕೃತಿಯೂ ಸೇರಿ ಕಳೆದು ಹೋಗಬಹುದಾದ ಕೆಲವಾರು ಕೃತಿಗಳನ್ನೂ ಅವರು ಸಂಪಾದಿಸಿ ಪ್ರಕಟಿಸಿದ್ದಾರೆ.
ಕನ್ನಡ, ತುಳು ಹಾಗೂ ಮಲಯಾಳ ಭಾಷೆಗಳು ಮರಿಯಪ್ಪ ಭಟ್ಟರಿಗೆ ಅವರ ಹುಟ್ಟೂರಾದ ದಕ್ಷಿಣ ಕನ್ನಡ ಜಿಲ್ಲೆಯ ಪರಿಸರದಲ್ಲಿ ದೊರೆತವು. ಮದ್ರಾಸಿನಲ್ಲಿದ್ದು ಅವರು ತಮಿಳು ಭಾಷೆಯನ್ನು ಕರಗತ ಮಾಡಿಕೊಂಡರು. ತೆಲುಗು ಭಾಷೆಯ ತಿಳುವಳಿಕೆಯನ್ನು ವಿಶೇಷವಾದ ಅಭ್ಯಾಸದಿಂದ ಪಡೆದರು. 1955-56ರಲ್ಲಿ ಅವರು ವಿಶೇಷ ವ್ಯಾಸಂಗಕ್ಕಾಗಿ ಇಂಗ್ಲೆಂಡಿಗೆ ತೆರಳಿ ಅಲ್ಲಿ ಭಾಷಾ ವಿಜ್ಞಾನವನ್ನು ಅಭ್ಯಾಸ ಮಾಡಿದರು. ಭಾರತದಲ್ಲಿ ಭಾಷಾ ವಿಜ್ಞಾನದ ಮೊದಲ ಪ್ರವರ್ತಕರಲ್ಲಿ ಪ್ರೊ. ಮರಿಯಪ್ಪ ಭಟ್ಟರೂ ಒಬ್ಬರು.
ಪ್ರೊ. ಎಂ. ಮರಿಯಪ್ಪ ಭಟ್ಟರು ಅನೇಕ ಸಂಶೋಧನಾ ಲೇಖನಗಳನ್ನು ಇಂಗ್ಲಿಷ್ ಭಾಷೆಯಲ್ಲಿ ಕೂಡಾ ಪ್ರಕಟಿಸಿದ್ದಾರೆ. ಅವುಗಳಲ್ಲಿ ಆಯ್ದ 28 ಲೇಖನಗಳನ್ನು ಒಟ್ಟುಮಾಡಿ ‘ಡ್ರಾವಿಡಿಕ್ ಸ್ಟಡೀಸ್’ ಎಂಬ ಲೇಖನಗಳ ಸಂಗ್ರಹವನ್ನು ಅವರ ಪುತ್ರಿ ಡಾ. ಶಾರದಾ ಜಯಗೋವಿಂದ ಸಂಪಾದಿಸಿದ್ದಾರೆ.
ಪ್ರೊ. ಎಂ. ಮರಿಯಪ್ಪ ಭಟ್ಟರು ಹಲವಾರು ಸಂಘ ಸಂಸ್ಥೆಗಳೊಡನೆ ಒಡನಾಟ ಹೊಂದಿದವರಾಗಿದ್ದರು. ಕೇಂದ್ರ ಫಿಲಂ ಸೆನ್ಸಾರ್ ಮಂಡಳಿಯ ಕನ್ನಡ ಸಲಹಾ ಸಮಿತಿಯ ಸದಸ್ಯರಾಗಿ, ಪಠ್ಯಪುಸ್ತಕ ಸಮಿತಿ, ಅಧ್ಯಯನ ಮಂಡಲಿ, ನಿಘಂಟು ರಚನಾ ಸಮಿತಿ ಸದಸ್ಯರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ನಿಘಂಟು ರಚನಾ ಸಮಿತಿಯ ಅಧ್ಯಕ್ಷರಾಗಿ ಅವರು ಸೇವೆ ಸಲ್ಲಿಸಿದ್ದರು.
ಪ್ರೊ. ಎಂ. ಮರಿಯಪ್ಪ ಭಟ್ಟರಿಗೆ ಕರ್ನಾಟಕ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಸೋವಿಯತ್ ಲ್ಯಾಂಡ್ ಫೆಲೋಷಿಪ್, ಶ್ರೀನಗರದಲ್ಲಿ ನಡೆದ ಅಖಿಲ ಭಾರತ ಪ್ರಾಚ್ಯ ಸಮ್ಮೇಳನದ ಅಧ್ಯಕ್ಷತೆ ಮುಂತಾದ ಗೌರವಗಳು ಸಂದಿದ್ದವು. ಅವರ ಅಭಿಮಾನಿಗಳು ಅರ್ಪಿಸಿದ ಸಂಸ್ಮರಣ ಗ್ರಂಥ ‘ಸಾರ್ಥಕ.’
ತಮ್ಮ ಬದುಕನ್ನು ಸಾರ್ಥಕವಾಗಿ ಬಾಳಿದ ಪ್ರೊ. ಎಂ. ಮರಿಯಪ್ಪ ಭಟ್ಟರು 1980ರ ಮಾರ್ಚ್ 21ರಂದು ಈ ಲೋಕವನ್ನಗಲಿದರು.

Share and Enjoy !

Shares