ವಿಜಯನಗರ ವಾಣಿ
ಸೂರಜ್ ಗೌಡ ಹಾಗೂ ಧನ್ಯಾ ರಾಮ್ ಕುಮಾರ್ ಅಭಿನಯದ ‘ನಿನ್ನ ಸನಿಹಕೆ’ ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದ್ದು ಆಗಸ್ಟ್ 20ರಂದು ಅಂದರೆ ವರಮಹಾ ಲಕ್ಷ್ಮಿ ಹಬ್ಬದ ದಿನದಂದು ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.
‘ನಿನ್ನ ಸನಿಹಕೆ’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಚಿತ್ರ ಏಪ್ರಿಲ್ ತಿಂಗಳಲ್ಲೇ ತೆರೆ ಕಾಣಬೇಕಿತ್ತು. ಆದರೆ ಅಷ್ಟರಲ್ಲಿ ಎರಡನೇ ಲಾಕ್ ಡೌನ್ ಘೋಷಿಸಿದ್ದರಿಂದ ಬಿಡುಗಡೆಯನ್ನು ತಾತ್ಕಾಲಿಕವಾಗಿ ಚಿತ್ರತಂಡ ಮುಂದೂಡಿತ್ತು. ಇದೀಗ ಆಗಸ್ಟ್ 20ರಂದು ಚಿತ್ರತೆರೆಗೆ ಸಿದ್ಧವಾಗಿದ್ದು, ಇದೇ ದಿನಾಂಕದಂದು ದುನಿಯಾ ವಿಜಯ್ ರ ಸಲಗ ಚಿತ್ರ ಮತ್ತು ಲಂಕೆ ಚಿತ್ರ ಕೂಡ ಬಿಡುಗಡೆಯಾಗಲಿದೆ.
ಲಾಕ್ ಡೌನ್ ಬಳಿಕ ಚಿತ್ರಮಂದಿರಗಳಿಗೆ ಪ್ರೇಕ್ಷಕರಿಗೆ ಅವಕಾಶ ನೀಡಿದ್ದು, ಇದೇ ಸಂದರ್ಭದಲ್ಲೇ ‘ನಿನ್ನ ಸನಿಹಕೆ’ ಚಿತ್ರ ಥಿಯೇಟರ್‌ಗೆ ಬರಲು ಸಜ್ಜಾಗಿದೆ. ರಘು ದೀಕ್ಷಿತ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸಿದ್ದು, ವಾಸುಕಿ ವೈಭವ್ ಬರೆದ ಸಾಹಿತ್ಯವಿದೆ. ಈಗಾಗಲೇ ಬಿಡುಗಡೆಯಾಗಿರುವ ಹಾಡುಗಳು ಸಾಕಷ್ಟು ಖ್ಯಾತಿಗಳಿಸಿವೆ. ವಿಶೇಷವೆಂದರೆ ಲಾಕ್ ಡೌನ್ ಸಮಯದಲ್ಲಿ ಕವರ್ ಸಾಂಗ್ಸ್ ಮೂಲಕ ಈ ಚಿತ್ರದ ‘ನೀ ಪರಿಚಯ’ ಎಂಬ ಹಾಡು ಸುದ್ದಿಯಾಗಿತ್ತು.
ನಿನ್ನಾ ಸನಿಹಕೆ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿರುವ ಸೂರಜ್ ಗೌಡ ಅವರು ತಮ್ಮ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಚಿತ್ರ ಬಿಡುಗಡೆ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ‘ನೀವು ಸಿಹಿಯಾದ ಫಲಿತಾಂಶವನ್ನು ಮುಂದೆ ಕಾಯುವಿರಿ..ಸ್ವಲ್ಪ ವಿಳಂಬದ ನಂತರ ಅಂತಿಮವಾಗಿ, ನಿನ್ನ ಸನಿಹಕೆ ಚಿತ್ರ ತೆರೆಗೆ ಬರಲು ಸಿದ್ಧವಾಗಿದೆ. ಈ ಚಿತ್ರ ನಮ್ಮ ಅನೇಕರ ಕನಸಾಗಿದ್ದು, ಪ್ರತಿಯೊಬ್ಬರೂ ಚಿತ್ರರಂಗದಲ್ಲಿ ನಮ್ಮ ಛಾಪು ಮೂಡಿಸಲು ಬಯಸುತ್ತಿದ್ದೇವೆ ಎಂದು ಟ್ವೀಟ್ ಮಾಡಿದ್ದಾರೆ.
ಬಿಡುಗಡೆಗೆ ಸಜ್ಜಾಗಿರುವ ತಂಡ ಆಗಸ್ಟ್ 1 ರಂದು ಟ್ರೈಲರ್ ಬಿಡುಗಡೆ ಮಾಡಲು ಯೋಜಿಸುತ್ತಿದೆ.