ರಾಜಿನಾಮೆ ಹಿನ್ನೆಲೆ ಬಿ.ಎಸ್.ವೈ.ಅಭಿಮಾನಿಯೊಬ್ಬ ಮನನೊಂದು ಆತ್ಮಹತ್ಯೆ

Share and Enjoy !

Shares
Listen to this article

ವಿಜಯನಗರ ವಾಣಿ

ಮುಖ್ಯಮಂತ್ರಿ ಸ್ಥಾನಕ್ಕೆ ಬಿಎಸ್ ಯಡಿಯೂರಪ್ಪ ರಾಜೀನಾಮೆಯಿಂದ ಮನನೊಂದ ಅಭಿಮಾನಿಯೊಬ್ಬ ಆತ್ಮಹತ್ಯೆಗೆ ಶರಣಾಗಿದ್ದಕ್ಕೆ ಯಡಿಯೂರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಬೊಮ್ಮಲಾಪುರ ಗ್ರಾಮದ ವ್ಯಕ್ತಿಯೊಬ್ಬರು ಯಡಿಯೂರಪ್ಪ ಅವರ ರಾಜೀನಾಮೆಯಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ರವಿ (35) ಮೃತಪಟ್ಟವರು. ಈತ ಗ್ರಾಮದಲ್ಲಿ ಕ್ಯಾಂಟೀನ್ ನಡೆಸುತ್ತಿದ್ದು, ಯಡಿಯೂರಪ್ಪ ಅವರ ಕಟ್ಟಾ ಅಭಿಮಾನಿಯಾಗಿದ್ದು, ಅವರ ರಾಜೀನಾಮೆ ನಂತರ ಬೇಸತ್ತಿದ್ದರು. ಇಂದು ಬೆಳಗ್ಗೆ ನೋಡಿದರೆ ನೇಣಿಗೆ ಶರಣಾಗಿದ್ದರು.

ಈ ಕುರಿತು ಟ್ವೀಟ್ ಮಾಡಿರುವ ಯಡಿಯೂರಪ್ಪ, ನನ್ನ ರಾಜೀನಾಮೆಯಿಂದ ಮನನೊಂದ ಗುಂಡ್ಲುಪೇಟೆ ತಾಲ್ಲೂಕಿನ ಬೊಮ್ಮಲಾಪುರದ ರಾಜಪ್ಪ (ರವಿ) ಆತ್ಮಹತ್ಯೆಗೆ ಶರಣಾದ ಸುದ್ದಿ ಅತೀವ ನೋವು ಹಾಗೂ ಬೇಸರ ತರಿಸಿದೆ.

ರಾಜಕಾರಣದಲ್ಲಿ ಏರಿಳಿತಗಳು ಸಹಜ ,ಇದಕ್ಕಾಗಿ ಪ್ರಾಣಾರ್ಪಣೆ ಮಾಡಿಕೊಳ್ಳಲು ಮುಂದಾಗುವುದು ಸರ್ವಥಾ ಒಪ್ಪಲಾಗದು, ಇದರಿಂದ ಕುಟುಂಬಕ್ಕಾಗುವ ನಷ್ಟ ಯಾರಿಂದಲೂ ಭರಿಸಲಾಗದು ಎಂದಿದ್ದಾರೆ.

ಅಭಿಮಾನ ಅತಿರೇಕಕ್ಕೆ ಹೋಗಬಾರದೆಂದು ಕೈಮುಗಿದು ವಿನಂತಿಸುವೆ. ರವಿ ಕುಟುಂಬದ ನೋವಿನೊಂದಿಗೆ ನಾನಿರುವೆ ಎಂದು ಇದೇ ವೇಳೆ ಮನವಿ ಮಾಡಿಕೊಂಡಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ಸೋಮವಾರ ರಾಜೀನಾಮೆ ನೀಡಿದ್ದಾರೆ. ಈ ಸಂದರ್ಭದಲ್ಲಿ ಅವರು ಕಣ್ಣೀರು ಹಾಕಿ ವಿದಾಯದ ಭಾಷಣ ಮಾಡಿದ್ದರು‌. ಬಿಎಸ್ವೈ ಕಣ್ಣೀರು ಹಲವಾರು ವ್ಯಾಖ್ಯಾನಗಳಿಗೆ ಗ್ರಾಸವಾಗಿತ್ತು.

Share and Enjoy !

Shares