ವಿಜಯನಗರ ವಾಣಿ
ಬಸವರಾಜ ಬೊಮ್ಮಾಯಿ ಆದ ನಾನು… ದೇವರ ಹೆಸರಿನಲ್ಲಿ ರಾಜ್ಯ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುವೆ…
ಬೊಮ್ಮಾಯಿ ಬುಧವಾರ ಬೆಳಗ್ಗೆ 11 ಗಂಟೆಗೆ ರಾಜಭವನದ ಗಾಜಿನ ಮನೆಯಲ್ಲಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಪಾಲ ಥಾವರ್ಚಾಂದ ಗೆಹ್ಲೋಟ್ ಅವರು ಪ್ರಮಾಣವಚನ ಬೋಧಿಸಿದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್ ಕಾರ್ಯಕ್ರಮ ನಡೆಸಿಕೊಟ್ಟರು. ಬಳಿಕ ನೂತನ ಮುಖ್ಯಮಂತ್ರಿ ಕಡತಕ್ಕೆ ಸಹಿ ಹಾಕಿದರು. ನಂತರ ರಾಜ್ಯಪಾಲ ಗೆಹ್ಲೋಟ್ ಅವರು ಸಿಎಂ ಬೊಮ್ಮಾಯಿ ಅವರಿಗೆ ಹೂಗುಚ್ಛ ನೀಡಿ ಅಭಿನಂದಿಸಿದರು. ಇಂದಿನಿಂದ ಬೊಮ್ಮಾಯಿ ರಾಜ್ಯಭಾರ ಶುರುವಾಗಲಿದೆ.
ಶಿಷ್ಯನ ಪಟ್ಟಾಭಿಷೇಕ ಕಾರ್ಯಕ್ರಮಕ್ಕೆ 30 ನಿಮಿಷ ಮೊದಲೇ ಬಿ.ಎಸ್.ಯಡಿಯೂರಪ್ಪ ಹಾಜರಿದ್ದರು. ಬೊಮ್ಮಾಯಿ ಕುಟುಂಬಸ್ಥರು ಪ್ರಮಾಣವಚನ ಸ್ವೀಕರಿಸುವ ಕ್ಷಣವನ್ನು ಕಣ್ತುಂಬಿಕೊಂಡರು. ನೂತನ ಮುಖ್ಯಮಂತ್ರಿಗೆ ಜೈಕಾರ, ಘೋಷಣೆಗಳು ಮೊಳಗಿದವು. ಯಡಿಯೂರಪ್ಪ ಜತೆ ಬೊಮ್ಮಾಯಿ ಕುಟುಂಬಸ್ಥರು ವಿಕ್ಟರಿ ಸಿಂಬಲ್ ತೋರಿಸಿ ಗೆಲುವಿನ ನಗೆ ಬೀರಿದರು. ಪ್ರಮಾಣವಚನ ಸ್ವೀಕಾರಕ್ಕೂ ಮುನ್ನ ಬೊಮ್ಮಾಯಿ ಜತೆ ವೇದಿಕೆ ಮುಂಭಾಗ ಬಿಎಸ್ ವೈ ವಿಕ್ಟರಿ ಸಿಂಬಲ್ ತೋರಿಸಿದರು. ರಾಜಭವನ ಸುತ್ತ ಬಿಗಿಬಂದೋಬಸ್ತ್ ಏರ್ಪಡಿಸಲಾಗಿತ್ತು.