ಅಭಿನಯ ಶಾರದೆ ಜಯಂತಿ ಬಗ್ಗೆ ಅಭಿಮಾನದ ಮಾತುಗಳನ್ನಾಡಿದ ಶಿವರಾಜ್‌ಕುಮಾರ್

Share and Enjoy !

Shares
Listen to this article

ವಿಜಯನಗರ ವಾಣಿ

ಕನ್ನಡ ಚಿತ್ರರಂಗದ ಹಿರಿಯ ನಟಿ, ‘ಅಭಿನಯ ಶಾರದೆ’ ಜಯಂತಿ ಬಾರದ ಲೋಕಕ್ಕೆ ಪಯಣಿಸಿದರು. ನಿದ್ದೆಯಲ್ಲಿರುವಾಗಲೇ ಚಿರನಿದ್ರೆಗೆ ಜಾರಿದರು. ಜಯಂತಿ ಅವರ ನಿಧನಕ್ಕೆ ಇಡೀ ಕನ್ನಡ ಚಿತ್ರರಂಗ, ರಾಜಕೀಯ ನಾಯಕರು, ಅಭಿಮಾನಿಗಳು ಕಂಬನಿ ಮಿಡಿದರು. ಇದೀಗ ಜಯಂತಿ ಅವರ ಬಗ್ಗೆ ಕನ್ನಡ ನಟ, ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್ ಅಭಿಮಾನದ ಮಾತುಗಳನ್ನಾಡಿದ್ದಾರೆ. ಜಯಂತಿ ಅವರ ಬಗ್ಗೆ ಫೇಸ್‌ಬುಕ್‌ನಲ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಬರೆದುಕೊಂಡಿದ್ದಾರೆ.

ನಟ ಶಿವರಾಜ್‌ಕುಮಾರ್ ಫೇಸ್‌ಬುಕ್ ಪೋಸ್ಟ್:
”ನನ್ನ ಮೊದಲ ಸಿನಿಮಾದಲ್ಲಿ ಅಮ್ಮನಾಗಿ.. ನನ್ನ ಬಣ್ಣದ ಬದುಕಿಗೆ ಜೊತೆಯಾದವರು, ನಮ್ಮ ಕುಟುಂಬದ ಜೊತೆ ಅವಿನಾಭಾವ ಬೆಸುಗೆ ಹೊಂದಿದ್ದವರು, ಕನ್ನಡದ ಅಭಿನಯ ಶಾರದೆ ಕರ್ನಾಟಕದ ಒನಕೆ ಓಬವ್ವ ಅಂದರೆ ಅದು ನೀವು ಮಾತ್ರ. ನಿಮ್ಮ ಅಗಲಿಕೆ ನನಗೆ ಹಾಗೂ ನಮ್ಮ ಕುಟುಂಬಕ್ಕೆ ಭರಿಸಲಾಗದ ನಷ್ಟವಾಗಿದೆ. ನಿಮ್ಮ ನೆನಪು ಹಾಗೂ ನೀವು ಮಾಡಿದ ಪಾತ್ರಗಳು ಎಂದಿಗೂ ಸದಾ ಜೀವಂತ. ಎಲ್ಲಾ ತಲೆಮಾರಿನ ನಟರೊಂದಿಗೆ ನಟಿಸಿ ಸೈ ಎನಿಸಿಕೊಂಡವರು ನೀವು, ನಿಮ್ಮ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ನಿಮ್ಮ ಕುಟುಂಬಕ್ಕೆ ದುಃಖವನ್ನು ಭರಿಸುವ ಶಕ್ತಿ ನೀಡಲಿ” ಎಂದು ಫೇಸ್‌ಬುಕ್‌ನಲ್ಲಿ ಶಿವರಾಜ್‌ಕುಮಾರ್ ಬರೆದುಕೊಂಡಿದ್ದಾರೆ.

ಶಿವರಾಜ್‌ಕುಮಾರ್ ಅವರ ಚೊಚ್ಚಲ ಚಿತ್ರದಲ್ಲಿ ತಾಯಿ ಪಾತ್ರ ಮಾಡಿದ್ದ ಜಯಂತಿ:
ಡಾ.ರಾಜ್‌ಕುಮಾರ್ ಜೊತೆಗೆ ಅತಿ ಹೆಚ್ಚು ಚಿತ್ರಗಳಲ್ಲಿ ಜಯಂತಿ ಅಭಿನಯಿಸಿದ್ದರು. ಬ್ಯಾಕ್ ಟು ಬ್ಯಾಕ್ ಒಟ್ಟಿಗೆ ಹಿಟ್ ಸಿನಿಮಾಗಳನ್ನು ನೀಡಿದ್ದ ರಾಜ್‌ಕುಮಾರ್ ಮತ್ತು ಜಯಂತಿ ಒಟ್ಟಾಗಿ ಅಭಿನಯಿಸಿದ್ದ ಕಡೆಯ ಸಿನಿಮಾ ‘ಬಹದ್ದೂರ್ ಗಂಡು’. ಈ ಚಿತ್ರದ ಬಳಿಕ ಅಣ್ಣಾವ್ರ ಜೊತೆಗೆ ಅಭಿನಯಿಸುವ ಅವಕಾಶ ಜಯಂತಿಗೆ ಸಿಗಲಿಲ್ಲ. ಆದರೆ, ಡಾ.ರಾಜ್ ಕುಟುಂಬದಿಂದ ಜಯಂತಿಗೆ ಆಫರ್ ಹೋಗಿದ್ದು ‘ಆನಂದ್’ ಚಿತ್ರಕ್ಕಾಗಿ.

ಶಿವರಾಜ್‌ಕುಮಾರ್ ಅಭಿನಯದ ಚೊಚ್ಚಲ ಚಿತ್ರ ‘ಆನಂದ್’ ಸಿನಿಮಾದಲ್ಲಿ ತಾಯಿ ಪಾತ್ರ ಮಾಡುವಂತೆ ಜಯಂತಿಗೆ ರಾಜ್ ಕುಟುಂಬ ಆಫರ್ ನೀಡಿತ್ತು. ಡಾ.ರಾಜ್‌ಕುಮಾರ್ ಮೇಲಿನ ಅಭಿಮಾನ ಹಾಗೂ ಡಾ.ರಾಜ್ ಕುಟುಂಬದ ಮೇಲಿನ ಪ್ರೀತಿಗಾಗಿ ಮೊದಲ ಬಾರಿಗೆ ‘ಆನಂದ್’ ಚಿತ್ರದಲ್ಲಿ ಪೋಷಕ ಪಾತ್ರ ಮಾಡಲು ಜಯಂತಿ ಒಪ್ಪಿಕೊಂಡಿದ್ದರು.

ಕಂಬನಿ ಮಿಡಿದಿದ್ದ ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್
ಜಯಂತಿ ಅವರ ನಿಧನಕ್ಕೆ ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಕೂಡ ಕಂಬನಿ ಮಿಡಿದಿದ್ದರು. ಜಯಂತಿ ಅವರ ಆತ್ಮಕ್ಕೆ ಸದ್ಗತಿ ದೊರಕಲಿ, ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ನೀಡಲಿ ಎಂದು ರಾಘವೇಂದ್ರ ರಾಜ್‌ಕುಮಾರ್ ಮತ್ತು ಪುನೀತ್ ರಾಜ್‌ಕುಮಾರ್ ಪ್ರಾರ್ಥಿಸಿದ್ದರು.

Share and Enjoy !

Shares