ನಾಗರಿಕ ಪ್ರಪಂಚದ ಬಹುಭಾಗವನ್ನೊಳಗೊಂಡ ಪ್ರಪ್ರಥಮ ಮಹಾಸಂಗ್ರಾಮ

Share and Enjoy !

Shares
Listen to this article

ವಿಜಯನಗರ ವಾಣಿ

ನಾಗರಿಕ ಪ್ರಪಂಚದ ಬಹುಭಾಗವನ್ನೊಳಗೊಂಡ ಪ್ರಪ್ರಥಮ ಮಹಾಸಂಗ್ರಾಮ, 1914ರ ಜುಲೈ 28ರಿಂದ 1918ರನವೆಂಬರ್ 11ರವರೆಗೆ ನಡೆಯಿತು. ಈ ಯುದ್ಧದಲ್ಲಿ ಜರ್ಮನಿ ಮತ್ತು ಆಸ್ಟ್ರಿಯ-ಹಂಗರಿಗಳು ಒಂದು ಕಡೆಯೂ ಫ್ರಾನ್ಸ್‌ ಮತ್ತು ಗ್ರೇಟ್ ಬ್ರಿಟನ್ಗಳೂ(ಮಿತ್ರ ಪಕ್ಷ) ಇನ್ನೊಂದು ಕಡೆಯೂ ಪ್ರಧಾನವಾಗಿ ಕಾದಿದುವು. 1917-18ರಲ್ಲಿ ಮಿತ್ರಪಕ್ಷದೊಂದಿಗೆ ಅಮೆರಿಕ ಸಂಯುಕ್ತಸಂಸ್ಥಾನವೂ ಸೇರಿಕೊಂಡಿತು. 19ನೆಯ ಶತಮಾನದ ದೃಷ್ಟಿ ಪ್ರವೃತ್ತಿಗಳಿಗೆ ಹೊಸ ದಿಕ್ಕನ್ನು ನೀಡಿ, ಹೊಸ ವಿಶ್ವದ ನಿರ್ಮಾಣಕ್ಕೆ ಕಾರಣವಾಗಿ ಪರಿಣಮಿಸಿ ಇದು ವಿಶ್ವೇತಿಹಾಸದ ಒಂದು ಮಹಾಫಟ್ಟವೆನಿಸಿದೆ.

ಒಂದನೆಯ ಮಹಾಯುದ್ಧಕ್ಕೆ ಅನೇಕ ಕಾರಣಗಳು ಅನೇಕ. ಮಹಾಭಾರತದ ಯುದ್ಧದಲ್ಲಿ ಒಂದು ಮಾತು ಬರುತ್ತದೆ,“ಪಾಂಡವರು ಮತ್ತು ಕೌರವರ ಪಕ್ಷಗಳ ಪರವಾಗಿ ನಿಂತ ರಾಜರುಗಳು ಪಾಂಡವರನ್ನಾಗಲಿ, ಕೌರವರನ್ನಾಗಲಿ ಬೆಂಬಲಿಸಲು ಎಂದೇನೂ ಅವರ ಪರವಾಗಿ ಯುದ್ಧ ಮಾಡಲು ಬಂದವರಲ್ಲ. ಎಲ್ಲರೂ ಅವರವರಲ್ಲಿ ತುಂಬಿದ್ದ ಯಾವುದೋ ವೈಯಕ್ತಿಕ ರೋಷ, ದ್ವೇಷಗಳ ಕಿಚ್ಚುಗಳಲ್ಲಿ ತಮ್ಮ ತಮ್ಮ ಬೇಳೆ ಬೇಯಿಸಿಕೊಳ್ಳಲು ಬಂದವರು” ಎಂದು. ಇದು ಅಂದು, ಇಂದು, ಮುಂದೂ ಎಲ್ಲ ಯುದ್ಧಗಳಿಗೆ ಮಾತ್ರವಲ್ಲದೆ ಸಣ್ಣಪುಟ್ಟ ವ್ಯಾಜ್ಯಗಳಿಗೂ ಸಾರ್ವಕಾಲಿಕವಾಗಿ ಅನ್ವಯಿಸುವಂತದ್ದು.
ಆಸ್ಟ್ರಿಯ-ಹಂಗೆರಿಗೂ ಸರ್ಬಿಯಕ್ಕೂ ನಡುವಣ ವಿರಸದಿಂದಾಗಿ ಆರಂಭವಾದ ಈ ಯುದ್ಧಕ್ಕೆ ಇದೇ ತತ್ಕ್ಷಣದ ಕಾರಣವಾದರೂ ಇಷ್ಟರಿಂದಲೇ ವಿಶ್ವದ ಅನೇಕ ರಾಷ್ಟ್ರಗಳು ಯುದ್ಧದ ಸುಳಿಯೊಳಕ್ಕೆ ಸಿಲುಕಿದುವೆನ್ನಲಾಗುವುದಿಲ್ಲ. ಇದರ ಹಿಂದೆ ಎರಡು ಮಹಾಬಣಗಳೇ ನಿರ್ಮಾಣವಾಗಿ ಬಲು ಹಿಂದಿನಿಂದಲೂ ಅವು ತಂತಮ್ಮಲ್ಲೆ ಮಸೆದಾಟಕ್ಕೆ ಆರಂಭಿಸಿದ್ದುವು. ದೀರ್ಘಕಾಲದ ಸ್ಪರ್ಧೆ, ಅಸೂಯೆ ಮತ್ತು ದ್ವೇಷಗಳ ಫಲವೇ ಒಂದನೆಯ ಮಹಾಯುದ್ಧ.

ಯುದ್ಧದ ದೀರ್ಘಕಾಲಿಕ ಕಾರಣಗಳಲ್ಲಿ ಬಹಳ ಮುಖ್ಯವಾದದ್ದೆಂದರೆ 1870ರ ಅನಂತರ ಯುರೋಪಿನಲ್ಲಿ ಬಲಿಷ್ಠವಾದ ಮಹಾರಾಷ್ಟ್ರಗಳ ಮದೋನ್ಮತ್ತತೆ ಮತ್ತು ಆಕ್ರಮಣ ಮನೋಭಾವ. 1871ರಲ್ಲಿ ಜರ್ಮನ್ ಸಾಮ್ರಾಜ್ಯದ ನಿರ್ಮಾಣವಾದಾಗಲೇ ಒಂದನೆಯ ಮಹಾಯುದ್ಧದ ಮೊದಲ ಭೇರೀನಾದವಾಯಿತೆನ್ನಬೇಕು. ಉತ್ತರ ಮಧ್ಯ ಯುರೋಪಿನಲ್ಲಿ ಈ ಮಹಾಶಕ್ತಿಯ ನಿರ್ಮಾಣವಾದೊಡನೆಯೇ ಇದರ ನೆರೆಹೊರೆಯ ರಾಷ್ಟ್ರಗಳಾದ ಫ್ರಾನ್ಸ್‌, ರಷ್ಯ, ಆಸ್ಟ್ರಿಯ-ಹಂಗರಿಗಳ ಗಡಿ ರೇಖೆಗಳುದ್ದಕ್ಕೂ ಬಿಸಿ ತಟ್ಟಿತು.

1871ರಲ್ಲಿ ಜರ್ಮಿನಿಯ ಛಾನ್ಸಲರ್ ಆದ ರಾಜಕುಮಾರ ಆಟೋ ಫಾನ್ ಬಿಸ್ಮಾರ್ಕ್ ಮಹಾ ಪ್ರತಿಭಾವಂತ. ಆತನಿಗೆ ನೆರೆರಾಷ್ಟ್ರಗಳೊಂದಿಗೆ ಯುದ್ಧಮಾಡುವ ಇಚ್ಛೆಯಿರಲಿಲ್ಲ. ರಷ್ಯ, ಆಸ್ಟ್ರಿಯ, ಬ್ರಿಟನ್ ಮತ್ತು ಇಟಲಿಗಳು ಜರ್ಮನಿಯ ವಿರುದ್ಧ ಒಂದಾಗುವಂತೆ ಮಾಡುವ ಉದ್ದೇಶದಿಂದ ಅವುಗಳ ಸ್ನೇಹ ಬಯಸಿದ. ಆದರೆ ಇಂಥ ಸ್ನೇಹದ ಒಡಂಬಡಿಕೆಗಳು ವಿಷಮ ಪರಿಸ್ಥಿತಿಯ ಸೂಚನೆಗಳೆಂದೇ ಹೇಳಬೇಕು. ಫ್ರಾನ್ಸಿಗೆ ಸೇರಿದ್ದ ಆಲ್ಸೇಸ್ ಮತ್ತು ಪೂರ್ವ ಲೊರೀನ್ ಪ್ರದೇಶಗಳನ್ನು ಜರ್ಮನಿ ವಶಪಡಿಸಿಕೊಂಡಿದ್ದರಿಂದ (1871) ಫ್ರಾನ್ಸಿಗೆ ಮುಖಭಂಗವಾಗಿತ್ತು. ಈ ಪ್ರದೇಶಗಳಲ್ಲಿರುವ ಬಹುಮಂದಿ ಜರ್ಮನ್ ಜನಾಂಗದವರೆಂಬುದೂ ಸ್ವರಕ್ಷಣೆಯ ದೃಷ್ಟಿಯಿಂದ ಇದು ಜರ್ಮನಿಗೆ ಸೇರಬೇಕೆಂಬುದೂ ಈ ಆಕ್ರಮಣಕ್ಕೆ ಕಾರಣ. ಫ್ರಾನ್ಸ್‌ ಒಂಟಿ ಯಾಗಿದ್ದರೂ ಸುಮ್ಮನಿರಲಿಲ್ಲ. ತನ್ನ ಭದ್ರತೆಗಾಗಿ ಅದು ಇತರ ರಾಷ್ಟ್ರಗಳ ಸ್ನೇಹಕ್ಕಾಗಿ ಕೈಚಾಚಿತು. ಬಿಸ್ಮಾರ್ಕ್ ನ ಅನಂತರ 1894ರಲ್ಲಿ, ಫ್ರಾನ್ಸ್‌-ರಷ್ಯಗಳ ನಡುವೆ ಮೈತ್ರಿ ಏರ್ಪಟ್ಟಾಗ ಜರ್ಮನ್ ವಿರುದ್ಧ ಪಕ್ಷ ಬಲಗೊಂಡಿತೆನ್ನಬಹುದು. ಯುರೋಪಿನ ಪ್ರತಿಯೊಂದು ರಾಷ್ಟ್ರವೂ ಶಸ್ತ್ರಾಸ್ತ್ರ ಸಂಗ್ರಹಣೆಗೆ ತೊಡಗಿತು. ಇದರಿಂದ ರಾಷ್ಟ್ರಗಳ ನಡುವೆ ಭೀತಿ ಹೆಚ್ಚಲು ಕಾರಣವಾಯಿತೇ ಹೊರತು ಭದ್ರತೆ ಬೆಳೆಯಲಿಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನ ತರುಣರನ್ನು ಜಮಾಯಿಸಿ ಅವರಿಗೆ ಖಾಕಿ ತೊಡಿಸಿ ಕವಾಯತು ಮಾಡಿಸುತ್ತಿತ್ತು. ಯುದ್ಧ ಈಗಲೋ ಆಗಲೋ ಎಂಬ ಭಾವನೆ 19ನೆಯ ಶತಮಾನದ ಅಂತ್ಯದ ವೇಳೆಗೆ ಉದ್ಭವವಾಗಿತ್ತು.

ಇದೇ ಕಾಲಕ್ಕೆ ಯುರೋಪಿನ ಆರ್ಥಿಕ ಸಾಮಾಜಿಕ ಕ್ಷೇತ್ರಗಳಲ್ಲಿ ಆಗಿದ್ದ ಬದಲಾವಣೆಗಳು ಅಗಾಧ. ಸಾರ್ವತ್ರಿಕ ವಿದ್ಯಾಭ್ಯಾಸ, ಪತ್ರಿಕಾ ಪ್ರಸಾರ ಮತ್ತು ಸಂಚಾರಸೌಲಭ್ಯ ವಿಸ್ತರಣೆಗಳಿಂದ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆದಿತ್ತು. ಕೈಗಾರಿಕಾ ಕ್ರಾಂತಿಯ ಫಲವಾಗಿ ಸಂಪತ್ತಿನ ಹೆಚ್ಚಳವೂ ಕಾರ್ಮಿಕರ ಬಲವೂ ಹೆಚ್ಚಿದ್ದುವು. ನೂತನವಾಗಿ ನಿರ್ಮಿತವಾದ ನಗರಗಳಿಂದ ಉದ್ಭವವಾದ ಸಮಸ್ಯೆಗಳೂ ಅನೇಕ. ಇವೆಲ್ಲ ಕಾರಣಗಳಿಂದಾಗಿ ಅಲ್ಲಿನ ಜನಜೀವನದಲ್ಲೂ ಒಂದು ಬಗೆಯ ನೆಮ್ಮದಿ ಭಂಗವೂ ಅಲ್ಲೋಲಕಲ್ಲೋಲವೂ ಆಗಿದ್ದುವು. ಆಗ ಯುರೋಪಿನ ಯಾವ ರಾಷ್ಟ್ರವೇ ಆಗಲಿ ನೆರೆ ರಾಜ್ಯಗಳನ್ನು ಗೆದ್ದು ಯುರೋಪಿನ ಸಾರ್ವಭೌಮತ್ವ ಸ್ಥಾಪಿಸಬೇಕೆಂಬ ಇಚ್ಛೆ ಹೊಂದಿತ್ತೆನ್ನಲು ಆಧಾರಗಳಿಲ್ಲ. ಆದರೆ ಅಲ್ಲಿನ ಜನರಲ್ಲಿ ರಾಷ್ಟ್ರಾಭಿಮಾನ ಬೆಳೆದಿದ್ದುದಂತೂ ನಿಜ. ಇದರಿಂದಾಗಿ ರಾಷ್ಟ್ರಗಳ ನಡುವೆ ಪರಸ್ಪರ ಕೊಡು-ಕೊಳ್ಳುವ ಮನೋಭಾವ ಬೆಳೆಯಲವಕಾಶವಾಗಲಿಲ್ಲ. ಮೈತ್ರಿಯ ಧೋರಣೆಯಿಂದ ತಮ್ಮ ಅಭಿಮಾನಕ್ಕೆ ಕುಂದಾದೀತೇನೋ-ಎಂಬುದೇ ಅವುಗಳ ಅಂಜಿಕೆ.

ವಸಾಹತುಗಳ ಸ್ಪರ್ಧೆಯೂ ಐರೋಪ್ಯ ರಾಷ್ಟ್ರಗಳಲ್ಲಿ ಎರಡು ಬಣಗಳು ವೃದ್ಧಿಯಾಗಲು ಒಂದು ಮುಖ್ಯ ಕಾರಣ.
ಯುದ್ಧಪುರ್ವ ಯುರೋಪಿನ ದ್ವೇಷ-ಭೀತಿಗಳಿಗೆ ಬಹುಮಟ್ಟಿಗೆ ಜರ್ಮನಿಯೇ ಕಾರಣ. 1866ರಲ್ಲೂ 1870ರಲ್ಲೂ ಅದು ಗಳಿಸಿದ ವಿಜಯಗಳೂ ಅದರ ಸೈನಿಕ ಶಕ್ತಿಯೂ ಯುದ್ಧದ ಬೆದರಿಕೆ ಹಾಕಿ ಅನ್ಯರಾಷ್ಟ್ರಗಳನ್ನು ತನ್ನ ಷರತ್ತಿಗೆ ಒಪ್ಪಿಸಿಕೊಳ್ಳುತ್ತಿದ್ದ ವಿಧಾನವೂ ಅದರ ನೌಕಾಬಲವೃದ್ಧಿಯೂ ಜರ್ಮನ್ ಚಕ್ರವರ್ತಿ ಕೈಸ್ತರ ಉದ್ರೇಕಪುರಿತ ಭಾಷಣಗಳೂ ಆ ದೇಶದ ಉದ್ದೇಶಗಳ ಬಗ್ಗೆ ಇತರ ರಾಷ್ಟ್ರಗಳಲ್ಲಿ ಸಂದೇಹೋತ್ಪನ್ನ ಮಾಡಿದುವು. ಜರ್ಮನಿಯನ್ನು ತನ್ನ ಮಿತ್ರರಾಷ್ಟ್ರವೆಂದು ಪರಿಗಣಿಸಿದ್ದ ಬ್ರಿಟನ್ ಕೂಡ ಈ ಕಾರಣದಿಂದಾಗಿ 1904ರ ಅನಂತರ ಫ್ರಾನ್ಸ್‌-ರಷ್ಯಗಳ ಸಖ್ಯ ಬೆಳೆಸಿಕೊಂಡಿತು.
ಆರ್ಥಿಕ ದೃಷ್ಟಿಯಿಂದಲೂ ಪ್ರತಿಷ್ಠೆಯ ದೃಷ್ಟಿಯಿಂದಲೂ ಆಲ್ಸೇಸ್-ಲೊರೇನ್ ಪ್ರದೇಶಗಳನ್ನು ಮತ್ತೆ ಜರ್ಮನಿಯಿಂದ ಪಡೆದುಕೊಳ್ಳಲು ಫ್ರಾನ್ಸ್‌ ಹಾತೊರೆಯುತ್ತಿತ್ತು. ಈ ಪ್ರಾಂತ್ಯಗಳಲ್ಲಿ ದೊರಕುತ್ತಿದ್ದ ಖನಿಜಗಳಿಂದ ಜರ್ಮನಿಯ ಕೈಗಾರಿಕೆಗಳ ಬೆಳೆವಣಿಗೆಯಾಗುವುದು ಫ್ರಾನ್ಸಿನ ಕೈಗಾರಿಕಾ ಪ್ರಭೃತಿಗಳಿಗೆ ಹಿತವಾಗಿ ಕಾಣಲಿಲ್ಲ.

ಏಡ್ರಿಯಾಟಿಕ್ ಸಮುದ್ರಕ್ಕೆ ಪುರ್ವದಲ್ಲಿನ ಬಾಸ್ನಿಯ ಮತ್ತು ಹರ್ಸಗೋವಿನ ಪ್ರಾಂತ್ಯಗಳು ಆಸ್ಟ್ರಿಯ-ಹಂಗರಿ ಮತ್ತು ಸರ್ಬಿಯಗಳ ನಡುವೆ ಪೈಪೋಟಿ ಮತ್ತು ವೈಮನಸ್ಯವನ್ನು ತಂದುವು. ಜರ್ಮನಿಯ ನೆರೆ ರಾಷ್ಟ್ರವಾಗಿದ್ದ ಆಸ್ಟ್ರಿಯ-ಹಂಗರಿ ಸಾಮ್ರಾಜ್ಯವೊಂದು ಕಲಸುಮೇಲೋಗರ. ನಾನಾ ಜಾತಿಗಳ ನಾನಾ ಪ್ರದೇಶಗಳ ಸಮೂಹ. ಅಲ್ಲಿಯ ರಾಜ ನಿರಂಕುಶನಾಗಿದ್ದ. ಆತನ ಪ್ರಜೆಗಳಲ್ಲಿ ಜರ್ಮನ್ನರಲ್ಲದೆ ಮಗ್ಯಾರರೂ ಸ್ಲಾವರೂ ಇದ್ದರು. ಸ್ಲಾವ್ ಜನಾಂಗದವರೆಲ್ಲ ಒಂದುಗೂಡಬೇಕೆಂಬ ಚಳವಳಿ ಆ ರಾಜನ ಪ್ರಭುತ್ವಕ್ಕೆ ತೊಂದರೆ ಕೊಡತಕ್ಕುದಾಗಿತ್ತು. ಈ ಚಳವಳಿಗೆ ಸರ್ಬಿಯ ರಾಜ್ಯವೇ ಕೇಂದ್ರ. ಈ ರಾಜ್ಯ ಸ್ವತಂತ್ರವಾಗಿದ್ದುದು ಆಸ್ಟ್ರಿಯದ ಪ್ರಭುವಿಗೆ ಸರಿಬೀಳಲಿಲ್ಲ. ಸರ್ಬಿಯ ರಾಜ್ಯಕ್ಕೆ ಸಮುದ್ರತೀರ ಬೇಕೆನಿಸಿತ್ತು; ಆದರೆ ಅದನ್ನು ಆಸ್ಟ್ರಿಯ ಬಿಟ್ಟುಕೊಟ್ಟ ಹೊರತು ಸಿಕ್ಕುವಂತಿರಲಿಲ್ಲ. ಹೀಗೆ ಆಸ್ಟ್ರಿಯ-ಸರ್ಬಿಯಗಳಿಗೆ ವೈಷಮ್ಯವಿದ್ದಾಗ ಆಸ್ಟ್ರಿಯದ ಪ್ರಭುವೇ ಮೊದಲು ಜಗಳಕ್ಕೆ ಸಿದ್ಧನಾಗಿ, ಅದಕ್ಕೆ ರಷ್ಯನ್ನರು ಸಹಾಯ ನೀಡುವುದಕ್ಕೆ ಮೊದಲೇ ಸರ್ಬಿಯನ್ನರನ್ನು ಅಡಗಿಸಲು ಮನಸ್ಸು ಮಾಡಿ ಹೊಂಚುಹಾಕುತ್ತಿದ್ದ. ಇದಲ್ಲದೆ ಬಾಸ್ನಿಯ ಮತ್ತು ಹರ್ಸಗೋವಿನ ಪ್ರಾಂತ್ಯದ ಸ್ಲಾವ್ ಜನಾಂಗಕ್ಕೆ ಸೇರಿದ ಜನರೂ ಸಾಧ್ಯವಾದರೆ ಆಸ್ಟ್ರಿಯ-ಹಂಗರಿ ಸಾಮ್ರಾಜ್ಯದ ಹಿಡಿತದಿಂದ ಬಿಡಿಸಿಕೊಂಡು ಸರ್ಬಿಯದಲ್ಲಿ ನಡೆಯುತ್ತಿದ್ದ ಅಖಿಲ ಸ್ಲಾವ್ ಚಳವಳಿಗೆ ಸೇರಿಕೊಳ್ಳಬೇಕೆಂದು ಹವಣಿಸುತ್ತಿದ್ದರು. ಹೀಗೆ ಆಸ್ಟ್ರಿಯ-ಹಂಗೆರಿ ಸಾಮ್ರಾಜ್ಯದಲ್ಲಿದ್ದ ಉಗ್ರ ರಾಷ್ಟ್ರೀಯತಾ ಭಾವನೆಗಳು ಆ ಸಾಮ್ರಾಜ್ಯಕ್ಕೆ ಸೇರಿದ ವಿವಿಧ ಜನಾಂಗಗಳನ್ನು ಕೆಣಕಿದುವು.
1870ರಲ್ಲಿ ಇಟಲಿಯ ದೊರೆಯಾಗಿದ್ದ ಎರಡನೆಯ ವಿಕ್ಟರ್ ಎಮ್ಯಾನ್ಯುಯೆಲ್ ರೋಮ್ ನಗರ ಪ್ರವೇಶ ಮಾಡಿದಾಗ ಇಟಲಿಯ ಐಕ್ಯ ಸಂಪುರ್ಣವಾಗಿ ಮುಗಿದಿರಲಿಲ್ಲ. ಆಸ್ಟ್ರಿಯ-ಹಂಗರಿ ಸಾಮ್ರಾಜ್ಯಕ್ಕೆ ಸೇರಿದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಬೇಕೆಂದು ಅದು ಹವಣಿಕೆ ನಡೆಸಿತ್ತು. ಆ ಪ್ರದೇಶಗಳಲ್ಲಿ ಇಟಾಲಿಯನ್ನರು ಹೆಚ್ಚಿನ ಸಂಖ್ಯೆಯಲ್ಲಿದ್ದರು. ಇದಲ್ಲದೆ ಇಟಲಿ ಏಡ್ರಿಯಾಟಿಕ್ ಸಮುದ್ರದ ಮೇಲೆ ತನ್ನ ಹತೋಟಿಯನ್ನು ಸ್ಥಾಪಿಸುವ ಪ್ರಯತ್ನದಲ್ಲಿ ಆಸ್ಟ್ರಿಯದೊಡನೆ ಪೈಪೋಟಿ ನಡೆಸಿತ್ತು.

1908ರಲ್ಲಿ ತುರ್ಕಿಯಲ್ಲಿ ಒಂದು ಪಲ್ಲಟ ನಡೆಯಿತು. ಅಬ್ದುಲ್ ಹಮೀದ್ ಸುಲ್ತಾನನ ಆಳ್ವಿಕೆಯನ್ನು ತರುಣ ತುರ್ಕಿ ಪಕ್ಷದವರು ಕೊನೆಗಾಣಿಸಿ ಕ್ರಮಬದ್ಧ ಆಡಳಿತವನ್ನು ಕಟ್ಟಲು ಉದ್ಯಮಿಸಿದರು. ಇವರ ಸೈನ್ಯಕ್ಕೆ ತರಬೇತಿ ಕೊಡಲು ಮುಂದೆ ಬಂದವರು ಜರ್ಮನರು. ಅಲ್ಲಿ ಸ್ವಲ್ಪ ಕಾಲ ಅವ್ಯವಸ್ಥೆ ತೋರಿದಂತಿದ್ದಾಗ ಆಸ್ಟ್ರಿಯದ ಪ್ರಭು ಆತುರಪಟ್ಟು ಹಿಂದೆ ತನಗೆ ಸೇರಿದ್ದ ಬಾಸ್ನಿಯ-ಹರ್ಸಗೋವಿನ ಪ್ರಾಂತ್ಯಗಳನ್ನು ತನ್ನ ರಾಜ್ಯಕ್ಕೆ ಸೇರಿಸಿಕೊಂಡ. ಇದರಿಂದ ರಷ್ಯನ್ ಚಕ್ರವರ್ತಿಗೆ ಅಸಮಾಧಾನವಾಯಿತು. ತುರ್ಕಿಯ ಮೇಲೆ ಬಿದ್ದು ಸಿಕ್ಕಿದಷ್ಟನ್ನು ದಕ್ಕಿಸಿಕೊಳ್ಳುವುದು ಜಾಣತನವೆಂದು ಐರೋಪ್ಯರಾಷ್ಟ್ರಗಳು ಭಾವಿಸಿದುವು. 1911ರಲ್ಲಿ ಇಟಲಿಯವರು ತುರ್ಕಿಯೊಡನೆ ಜಗಳ ತೆಗೆದು ಉತ್ತರ ಆಫ್ರಿಕದಲ್ಲಿ ಟ್ರಿಪೋಲಿ ಪ್ರದೇಶವನ್ನಾಕ್ರಮಿಸಿಕೊಂಡರು. ಅದೇ ಒಳ್ಳೆಯ ಸಮಯವೆಂದು ಗ್ರೀಸಿನ ನಾಯಕ ವೆನಿಜೆಲಸ್ ಬಲೇರಿಯ, ಸರ್ಬಿಯ ಮತ್ತು ಮಾಂಟೆ ನೀಗ್ರೊಗಳೊಂದಿಗೆ ಸೇರಿ ತುರ್ಕಿಯ ವಿರುದ್ಧವಾಗಿ ಬಾಲ್ಕನ್ ಲೀಗ್ ಎಂಬ ವ್ಯೂಹ ಕಟ್ಟಿದ. 1912ರಲ್ಲಿ ಇದು ತುರ್ಕಿಯನ್ನು ಸೋಲಿಸಿತು. ಯುರೋಪಿ ನಲ್ಲಿ ಸೇರಿದ್ದ ಭೂಭಾಗಗಳೆಲ್ಲವನ್ನೂ ತುರ್ಕಿ ಕಳೆದುಕೊಂಡಿತು. ಆದರೆ ವಿಜಯೀ ಬಾಲ್ಕನ್ ರಾಷ್ಟ್ರಗಳು 1913ರಲ್ಲಿ ತಂತಮ್ಮಲ್ಲೇ ಕಲಹವನ್ನಾರಂಭಿಸಿದುವು. ಆಗ ಬ್ರಿಟನ್, ರಷ್ಯ, ಜರ್ಮನಿಗಳ ಮಂತ್ರಿಪ್ರಮುಖರು ಸಂಧಾನ ನಡೆಸಿ ಆ ಜಗಳಗಳನ್ನು ಒಂದು ರೀತಿ ಪರಿಹರಿಸಿದರು. ಆದರೆ ಆಸ್ಟ್ರಿಯದ ಪ್ರಭು ಮಾತ್ರ ತನ್ನ ಆಸೆ ಆಕಾಂಕ್ಷೆಗಳನ್ನು ಬೆಳೆಸಿಕೊಳ್ಳುತ್ತಲೇ ಇದ್ದ.

19ನೆಯ ಶತಮಾನದ ಯುರೋಪಿನ ಚರಿತ್ರೆಯಲ್ಲಿ ಜರ್ಮನಿ, ಇಟಲಿ ದೇಶಗಳು ಐಕ್ಯವನ್ನೂ ಸ್ವಾತಂತ್ರ್ಯವನ್ನೂ ಪಡೆದದ್ದು ದೊಡ್ಡ ಘಟನೆಗಳು. ಫ್ರಾನ್ಸಿಗೆ ಸೇರಿದ್ದ ಆಲ್ಸೇಸ್-ಲೊರೋನ್ ಪ್ರಾಂತ್ಯಗಳನ್ನು ಪದೆದುಕೊಂಡ ಬಿಸ್óಮಾರ್ಕ್ ಫ್ರೆಂಚರ ವಿರುದ್ಧವಾಗಿ ಆಸ್ಟ್ರಿಯ ಮತ್ತು ಇಟಲಿಗಳೊಡನೆ ಸೇರಿ ಮಾಡಿಕೊಂಡಿದ್ದ ತ್ರಿಪಕ್ಷ ಮೈತ್ರಿಯೂ (ಟ್ರಿಪಲ್ ಅಲಯನ್ಸ್‌, 1882) ರಷ್ಯದೊಂದಿಗೆ ಹೊಂದಿದ್ದ ಎಚ್ಚರದ ಸ್ನೇಹಪರತೆಯೂ ಆತನ ಚಾಣಾಕ್ಷತನದ ದ್ಯೋತಕಗಳಾಗಿದ್ದುವು. ಆದರೆ ಅವನ ಅನಂತರ ಅಧಿಕಾರಕ್ಕೆ ಬಂದ ಜರ್ಮನ್ ಪ್ರಭುಗಳು ಆಸ್ಟ್ರಿಯದೊಂದಿಗೆ ಆಪ್ತತೆ ಕಾಪಾಡಿಕೊಂಡು ಬಂದರಾದರೂ ರಷ್ಯದ ವಿಚಾರದಲ್ಲಿ ಉಪೇಕ್ಷೆ ತಳೆದರು. ಬಾಲ್ಟಿಕ್ ಮತ್ತು ಕಪ್ಪು ಸಮುದ್ರಗಳ ಪ್ರದೇಶವನ್ನೂ ಪೆಸಿಫಿಕ್ ತೀರಗಳನ್ನೂ ಒಟ್ಟುಗೂಡಿಸುವ ರೈಲುದಾರಿ ಹಾಕಿಕೊಳ್ಳುವುದು ರಷ್ಯನ್ನರ ಇಷ್ಟವಾಗಿತ್ತು. ಫ್ರೆಂಚರು ಆ ಉದ್ಯಮದಲ್ಲಿ ಸಹಕರಿಸಿ ರಷ್ಯದವರ ಮೈತ್ರಿಯನ್ನು ಕಟ್ಟಿದರು. ಜರ್ಮನಿಯ ತ್ರಿಪಕ್ಷ ಮೈತ್ರಿಗೆ ವಿರುದ್ಧವಾಗಿ ಫ್ರಾನ್ಸ್‌-ರಷ್ಯಗಳ ದ್ವಿಪಕ್ಷ ಮೈತ್ರಿ (ಡ್ಯೂಯಲ್ ಅಲಯನ್ಸ್‌) ಏರ್ಪಟ್ಟಾಗ ಯುದ್ಧ ಮನೋಭಾವ ಬೆಳೆಯಲು ಕಾರಣವಾಯಿತು. ಎರಡೂ ಕಡೆಗಳವರೂ ತಮ್ಮ ಯುದ್ಧಸನ್ನಾಹಗಳಿಗೆ ಹೆಚ್ಚು ಹೆಚ್ಚು ಗಮನ ಕೊಟ್ಟು ದೊಡ್ಡ ದೊಡ್ಡ ಸೈನ್ಯ ಕಟ್ಟಲು ತೊಡಗಿದರು.

19ನೆಯ ಶತಮಾನದ ಅಂತ್ಯದಲ್ಲಿ ಆಫ್ರಿಕ-ಏಷ್ಯಗಳಲ್ಲಿ ಸಾಮ್ರಾಜ್ಯ ಸಂಪಾದನೆಗೂ ವ್ಯಾಪಾರದ ಸವಲತ್ತುಗಳಿಗಾಗಿಯೂ ಐರೋಪ್ಯ ರಾಷ್ಟ್ರಗಳ ನಡುವೆ ತೀವ್ರ ಸ್ವರ್ಧೆ ನಡೆದಿತ್ತು. ಇಂಗ್ಲಿಷರಿಗೂ ಫ್ರೆಂಚರಿಗೂ ನಡುವೆ ವಿರಸ ಬೆಳೆಯಿತು. ಸೂಡಾನ್ ಪ್ರದೇಶದಲ್ಲಿ ಬ್ರಿಟಿಷರು ನುಗ್ಗಿದಾಗ ಪಶ್ಚಿಮದ ಕಡೆಯಿಂದ ಫ್ರೆಂಚರು ಅಲ್ಲಿಗೆ ನುಗ್ಗಿಬಂದು ಆ ಪ್ರದೇಶ ತಮ್ಮದಾಗಬೇಕೆಂದು ಹಟಹೂಡಿದರು. ಆದರೆ ಆಫ್ರಿಕ-ಏಷ್ಯಗಳಲ್ಲಿ ಐರೋಪ್ಯರು ಪರಸ್ಪರವಾಗಿ ಹೊಡೆದಾಟ ನಡೆಸದೆ ಕೇವಲ ಸಂಧಾನಗಳಿಂದಲೇ ತಮ್ಮ ತಮ್ಮ ಸಾಮ್ರಾಜ್ಯ ವಿಸ್ತಾರಗಳನ್ನು ಗೊತ್ತುಮಾಡಿಕೊಂಡರು.

ಜರ್ಮನಿಯನ್ನು ಒಟ್ಟುಗೂಡಿಸಿದ ತರುವಾಯ ಬಿಸ್ಮಾರ್ಕ್ ದೂರಾಲೋಚನೆಯಿಂದ ಶಾಂತಿ ನೆಲೆಗೊಳಿಸಿ ಜರ್ಮನಿಯ ರೈಲುದಾರಿಗಳೂ ಕೈಗಾರಿಕೆಗಳೂ ಸ್ಥಲಜಲ ಸೈನ್ಯಗಳೂ ಅಭಿವೃದ್ಧಿಯಾಗಲು ಆಸ್ಪದವನ್ನು ಕಲ್ಪಿಸಿಕೊಟ್ಟ. 1884ರ ವರೆಗೂ ಹೊರಗಿನ ಸಾಮ್ರಾಜ್ಯಕ್ಕಾಗಿ ಜರ್ಮನ್ನರು ಉದ್ಯಮಿಸಲಿಲ್ಲ. ಆಫ್ರಿಕ-ಏಷ್ಯಗಳಲ್ಲಿ ಸಾಮ್ರಾಜ್ಯ ಪ್ರಯತ್ನವನ್ನು ಜರ್ಮನ್ನರು ಕೈಗೊಂಡದ್ದು ಸಾವಕಾಶವಾಯಿತು. ಆ ವೇಳೆಗೆ ಆಫ್ರಿಕದ ಉತ್ತಮ ಭಾಗಗಳು ಇತರರ ಪಾಲಾಗಿದ್ದುವು. ಆಫ್ರಿಕದ ವಾಯವ್ಯಭಾಗವೆಲ್ಲವೂ ಫ್ರ್ರೆಂಚರದಾಗಿತ್ತು. ಆದ್ದರಿಂದ ಜರ್ಮನ್ನರಿಗೆ ಫ್ರೆಂಚರಲ್ಲಿ ಅಸಮಾಧಾನ ಬೆಳೆದದ್ದು ಅನಿರೀಕ್ಷಿತವಲ್ಲ. ಆ ಸಮಯದಲ್ಲಿ ಬ್ರಿಟನ್-ಜರ್ಮನಿಗಳು ಫ್ರೆಂಚರಿಗೆ ವಿರೋಧವಾಗಿ ಒಟ್ಟುಗೂಡಬಹುದಾಗಿತ್ತು. ಆದರೆ ವ್ಯಾಪಾರ ಪ್ರಪಂಚದಲ್ಲಿ ಬ್ರಿಟಿಷರಿಗೂ ಜರ್ಮನ್ನರಿಗೂ ಪೈಪೋಟಿ ಬೆಳೆಯುತ್ತಲೇ ಇತ್ತು. ಬ್ರಿಟಿಷರ ನೌಕಾಪ್ರಾಬಲ್ಯ ತಮ್ಮ ಅಭಿವೃದ್ಧಿಗೆ ಅಡ್ಡಿಯೆಂದು ಜರ್ಮನರು ಭಾವಿಸಿಕೊಂಡು ತಾವೂ ಹಡಗುಪಡೆಯನ್ನು ಬಲಪಡಿಸಿಕೊಳ್ಳುತ್ತಿದ್ದರು. 19ನೆಯ ಶತಮಾನದ ಕಡೆಕಡೆಗೆ ಬ್ರಿಟಿಷರೂ ಜರ್ಮನ್ನರೂ ಪೈಪೋಟಿಯ ಮೇಲೆ ಹಡಗುಗಳನ್ನು ಕಟ್ಟಿಕೊಳ್ಳುತ್ತಿದ್ದರು. 1904ರಲ್ಲಿ ಬ್ರಿಟಿಷರು ತಮ್ಮ ಪ್ರಧಾನ ನೌಕಾಬಲವನ್ನು ಭೂಮಧ್ಯಸಮುದ್ರದಿಂದ ಸಾಗಿಸಿ ಜರ್ಮನಿಗೆದುರಾಗಿ ಉತ್ತರ ಸಮುದ್ರದಲ್ಲಿಟ್ಟುಕೊಂಡರು.
ದೂರಪ್ರಾಚ್ಯದಲ್ಲಿ ಜಪಾನಿಗೂ ರಷ್ಯಕ್ಕೂ ವಿರಸ ಉಂಟಾಯಿತು. ಜಪಾನಿನೊಡನೆ ಯುದ್ಧಮಾಡುತ್ತ ರಷ್ಯದವರು ಪುರ್ವಕ್ಕೆ ಮುಖಮಾಡಿಕೊಂಡಿದ್ದಾಗ ಜರ್ಮನ್ನರು ತಮ್ಮೊಡನೆ ಜಗಳ ತೆಗೆಯಬಹುದೆಂದು ಫ್ರೆಂಚರಿಗೆ ಭಯ. ಆದ್ದರಿಂದ ಫ್ರೆಂಚರು ಬ್ರಿಟಿಷರೊಂದಿಗೆ ಮೈತ್ರಿ ಬೆಳೆಸಿದರು. ಸಾಮ್ರಾಜ್ಯ ಸಂಪಾದನೆಯ ಪೈಪೋಟಿಯಲ್ಲಿ ಫ್ರೆಂಚರು ಬ್ರಿಟಿಷರಿಗೆ ಅನುಕೂಲರಾಗಿಯೇ ವರ್ತಿಸಿದ್ದರು. ಇವರ ನಡುವೆ ಸ್ನೇಹ ಬೆಳೆಯಿತು. ಮೊರಾಕೋ ಪ್ರಾಂತ್ಯದಲ್ಲಿ ಫ್ರೆಂಚರ ಪ್ರಾಬಲ್ಯವನ್ನೂ ಈಜಿಪ್ಟಿನಲ್ಲಿ ಬ್ರಿಟಿಷರ ಪ್ರಾಬಲ್ಯವನ್ನೂ ಆ ರಾಷ್ಟ್ರಗಳೂ ಪರಸ್ಪರವಾಗಿ ಒಪ್ಪಿದವು. 1907ರಲ್ಲಿ ರಷ್ಯದವರು ಕೂಡ ಬ್ರಿಟಿಷರೊಂದಿಗೆ ಮೈತ್ರಿ ಬೆಳೆಸಿದರು. ಹೀಗೆ ಬ್ರಿಟನ್, ಫ್ರಾನ್ಸ್‌ ಮತ್ತು ರಷ್ಯಗಳದು ಒಂದು ವ್ಯೂಹವಾಯಿತು.

ಜರ್ಮನ್ ಚಕ್ರವರ್ತಿ 2ನೆಯ ವಿಲಿಯಂ ಮಹತ್ವಾಕಾಂಕ್ಷಿ. ಆ ರಾಷ್ಟ್ರದಲ್ಲಿ ಸೈನ್ಯಮುಖ್ಯಸ್ಥರು ಅತ್ಯಂತ ಪ್ರಬಲರಾಗಿದ್ದರು. ಆಲ್ಸೇಸ್-ಲೊರೋನ್ ವಿಷಯದಲ್ಲಿ ಮಾತ್ರವಲ್ಲದೆ ಆಫ್ರಿಕದಲ್ಲೂ ಜರ್ಮನಿಗೆ ಫ್ರಾನ್ಸಿನ ಹಗೆತನವಿತ್ತು. ಸಾಮ್ರಾಜ್ಯ ಕಟ್ಟುವ ಆಸೆ ಹೆಚ್ಚಾಗಿಯೇ ಇತ್ತು. ಜರ್ಮನಿಯ ಕೈಸರ್ ತುರ್ಕಿಯ ಸುಲ್ತಾನನ ಸ್ನೇಹ ಕಟ್ಟಿಕೊಂಡು ಬರ್ಲಿನ್ ನಗರದಿಂದ ತುರ್ಕಿಯ ಮೂಲಕ ಬಾಗ್ದಾದಿನವರೆಗೆ ರೈಲುದಾರಿ ಹಾಕಿಸುವ ಸಂಧಾನದಲ್ಲಿ ತೊಡಗಿದ್ದ. ಜರ್ಮನ್ ವಶದಲ್ಲಿರುವ ಈ ರೈಲುದಾರಿಯಿಂದ ಅದು ಸಮುದ್ರಮಾರ್ಗಗಳನ್ನು ತಪ್ಪಿಸಿಕೊಂಡು ಭೂಮಾರ್ಗಗಳ ಮೂಲಕವೆ ವ್ಯಾಪಾರ ನಡೆಸಬಹುದೆಂಬುದು ಕೈಸರನ ಆಲೋಚನೆ. ತುರ್ಕಿಯಲ್ಲಿ ಜರ್ಮನ್ನರ ಪ್ರವೇಶ ಬ್ರಿಟಿಷರಿಗೆ ಸರಿಬೀಳಲಿಲ್ಲ. ಹಿಂದೆ ರಷ್ಯದವರು ಪ್ರಬಲರಾಗಿ ತುರ್ಕಿಯನ್ನು ವಶಪಡಿಸಿಕೊಂಡಿದ್ದಿದ್ದರೆ ಯಾವ ಅಪಾಯ ತೋರಬಹುದಾಗಿತ್ತೋ ಅದೇ ಅಪಾಯ ಜರ್ಮನ್ನರಿಂದ ಸಂಭವಿಸುವಂತೆ ಆಯಿತು. ತುರ್ಕಿಯಲ್ಲಿ ಜರ್ಮನ್ನರು ಪ್ರಬಲರಾಗುವ ಅಂಶ ರಷ್ಯದವರಿಗೂ ಅನಿಷ್ಟವಾಗಿತ್ತು.

20ನೆಯ ಶತಮಾನದ ಆದಿಯಲ್ಲಿ ಈ ರೀತಿ ಐರೋಪ್ಯ ರಾಷ್ಟ್ರಗಳಲ್ಲಿ ಎರಡು ಭಾರಿ ವ್ಯೂಹಗಳಾಗಿದ್ದು ಪ್ರತಿ ರಾಷ್ಟ್ರದವರೂ ತಮ್ಮ ಯೋಗ್ಯತೆ ಮೀರಿ ಯುದ್ಧಕ್ಕೆ ಅಣಿಮಾಡಿಕೊಳ್ಳುತ್ತಿದ್ದರು. ಒಬ್ಬರ ಮೇಲೊಬ್ಬರಿಗೆ ಅತೀವ ಸಂಶಯ, ಭಯ, ಜಗಳಕ್ಕೆ ಕಾರಣ ತೋರಿದೊಡನೆ ಎಲ್ಲರೂ ಸಭೆ ಸೇರಿ ಇತ್ಯರ್ಥ ಮಾಡಿಕೊಳ್ಳುವ ಪ್ರಯತ್ನ ನಡೆದರೂ ಅದು ಫಲದಾಯಕವಾಗಿ ಮುಗಿಯುತ್ತಿರಲಿಲ್ಲ. ಬಾಲ್ಕನ್ ಕ್ಷೇತ್ರಗಳ ವಿಷಯದಲ್ಲಿ ಆಸ್ಟ್ರಿಯಕ್ಕೂ ರಷ್ಯಕ್ಕೂ ಹಗೆತನವಿತ್ತು. ಆಲ್ಸೇಸ್-ಲೊರೇನ್ ಮತ್ತು ಉತ್ತರ ಆಫ್ರಿಕಗಳ ವಿಚಾರದಲ್ಲಿ ಜರ್ಮನಿಯೂ ಫ್ರಾನ್ಸೂ ವೈರಿಗಳು, ಕೈಗಾರಿಕೆ ವ್ಯಾಪಾರಗಳಲ್ಲಿಯೂ ನೌಕಾಬಲ ರಚನೆಯಲ್ಲಿಯೂ ಜರ್ಮನಿಯೂ ಬ್ರಿಟನ್ನೂ ವಿರೋಧಿಗಳು. ಹೀಗಿರುವಲ್ಲಿ ಯಾವ ಘಟನೆಯಿಂದಲೂ ಕದನ ಉದ್ಭವಿಸುವ ಪರಿಸ್ಥಿತಿಯಿತ್ತು.

ಯುರೋಪಿನ ರಾಜ್ಯಗಳಲ್ಲಿ ವಸಾಹತುಗಳಿಗಾಗಿ ನಡೆದ ಈ ಪೈಪೋಟಿಗೆ ಆರ್ಥಿಕ ಕ್ಷೇತ್ರದಲ್ಲಾದ ಕ್ರಾಂತಿಯೆ ಮುಖ್ಯವಾದ ಕಾರಣ. 19ನೆಯ ಶತಮಾನದ ಕೊನೆಯ ಮತ್ತು 20ನೆಯ ಶತಮಾನದ ಆದಿಭಾಗದ ಇತಿಹಾಸವೆಲ್ಲ ಐರೋಪ್ಯ ರಾಷ್ಟ್ರಗಳು ಮಾರುಕಟ್ಟೆಗಳಿಗಾಗಿ, ಕಚ್ಚಾಪದಾರ್ಥಗಳ ಪುರೈಕೆಗಾಗಿ, ಹೆಚ್ಚಿನ ಬಂಡವಾಳವನ್ನು ರೂಢಿಸುವ ಸಲುವಾಗಿ, ಹೆಚ್ಚಿನ ಜನಸಂಖ್ಯೆಯನ್ನು ರವಾನಿಸುವುದಕ್ಕಾಗಿ ವಸಾಹತುಗಳನ್ನು ಕಟ್ಟುವುದರಲ್ಲಿ ನಡೆಸಿದ ಪೈಪೋಟಿಗಳಿಂದ ತುಂಬಿದೆ. ಐರೋಪ್ಯ ರಾಷ್ಟ್ರಗಳು ಆಫ್ರಿಕವನ್ನು ತಮ್ಮತಮ್ಮಲ್ಲೆ ಹಂಚಿಕೊಂಡವು. ಏಷ್ಯ ಮತ್ತು ಮಧ್ಯಪುರ್ವದ ರಾಷ್ಟ್ರಗಳಿಗೂ ಐರೋಪ್ಯರ ವಸಾಹತು ಪೈಪೋಟಿ ಹಬ್ಬಿತು. ಇಂಥ ಹತೋಟಿಯಿಂದ ರಾಷ್ಟ್ರ-ರಾಷ್ಟ್ರಗಳಲ್ಲಿ ತಿಕ್ಕಾಟ ಹೆಚ್ಚಾಯಿತು. ಇಂಗ್ಲೆಂಡ್ ಮತ್ತು ಜರ್ಮನಿಗಳ ಮಧ್ಯೆ ವೈಮನಸ್ಯ ಬೆಳೆಯಲು ಈ ಪೈಪೋಟಿಯೂ ಒಂದು ಮುಖ್ಯ ಕಾರಣ. ಆಸ್ಟ್ರಿಯ-ಹಂಗರಿ ಮತ್ತು ರಷ್ಯಗಳ ನಡುವಣ ವಾಣಿಜ್ಯ ಪೈಪೋಟಿಯೂ ರಾಜಕೀಯ ದ್ವೇಷವಾಗಿ ಪರಿವರ್ತನೆಗೊಂಡಿತು. ಇಟಲಿ ಮತ್ತು ಆಸ್ಟ್ರಿಯಗಳ ನಡುವೆ ಇದೇ ಕಾರಣದಿಂದ ಮನಸ್ತಾಪ ಬೆಳೆಯಿತು.
ಜರ್ಮನಿ ಪ್ರಪಂಚದ ವಾಣಿಜ್ಯ ಮತ್ತು ವ್ಯಾಪಾರಕ್ಷೇತ್ರಗಳಲ್ಲಿ ತನ್ನನ್ನು ಹಿಂದೆ ಹಾಕಬಹುದೆಂಬ ಭಯ ಇಂಗ್ಲೆಂಡಿಗೆ ಇತ್ತು. 1900 ರಿಂದ 1914ರ ವರೆಗಿನ ಕಾಲದಲ್ಲಿ ಬ್ರಿಟನಿನಲ್ಲಿ ಜರ್ಮನಿಯ ಬಗ್ಗೆ ಹೊರಡಿಸಿದ ಅನೇಕ ಹೇಳಿಕೆಗಳಲ್ಲಿ ಈ ಭಯ ಎದ್ದು ಕಾಣುತ್ತದೆ. ಯುದ್ಧಸನ್ನಾಹಕ್ಕೆ ಎಡೆಮಾಡಿಕೊಟ್ಟು ಶಸ್ತ್ರಾಸ್ತ್ರಗಳ ಪೈಪೋಟಿಗೆ ಕಾರಣವಾಗಿದ್ದುವು. ಇದರಿಂದ ಪ್ರತಿಯೊಂದು ರಾಷ್ಟ್ರವೂ ಸೇನಾಸಿದ್ಧತೆಯಲ್ಲಿ ಮತ್ತು ವಿನಾಶಕಾರಕ ಶಸ್ತ್ರಾಸ್ತ್ರಗಳನ್ನು ತಯಾರಿಸುವುದರಲ್ಲಿ ತೊಡಗುವಂತಾಯಿತು. ಒಂದು ದೇಶಕ್ಕೂ ಇನ್ನೊಂದು ದೇಶಕ್ಕೂ ನಡುವೆ ಜಾರಿಯಲ್ಲಿದ್ದ ಒಪ್ಪಂದಗಳ ಅರಿವು ಆ ದೇಶಗಳ ಮಂತ್ರಿಗಳಲ್ಲೇ ಅನೇಕರಿಗೆ ಗೊತ್ತಿರುತ್ತಿರಲಿಲ್ಲ; ಶಾಸನ ಸಭೆಗಳಿಗೂ ಅವುಗಳ ಅರಿವಿರುತ್ತಿರಲಿಲ್ಲ. ಕಳ್ಳತನ, ಮೋಸ, ಲಂಚಗುಳಿತನ, ಕಳ್ಳಕೈಬರೆಹ ಮೊದಲಾದವೇ ಪ್ರಪಂಚದ ಪ್ರತಿಯೊಂದು ವಿದೇಶಾಂಗ ಖಾತೆಯನ್ನೂ ತುಂಬಿದ್ದುವು.
1914ರಲ್ಲಿ ಯುದ್ಧದ ಮುನ್ನಾದಿನಗಳಲ್ಲಿ ಯುರೋಪಿನಲ್ಲಿದ್ದ ಪರಿಸ್ಥಿತಿ ಇದು. ಇಡೀ ಖಂಡವೇ ಮದ್ದಿನ ಮನೆಯಾಗಿತ್ತು. ಯಾವುದೇ ಘಟನೆಯ ಒಂದು ಕಿಡಿ ಬಿದ್ದರೂ ಸಾಕು. ಅದು ಸ್ಫೋಟಿಸುವಂತಿತು.
1917ರಲ್ಲಿ ಯುದ್ಧ ಅಂತಿಮ ಘಟ್ಟ ಮುಟ್ಟಿತು. ರಷ್ಯದಲ್ಲಿನ ಮಹಾಕ್ರಾಂತಿ ಒಂದು ಮಹಾಘಟನೆಯಾಗಿ ಪರಿಣಮಿಸಿ ಅಲ್ಲಿ ಬಾಲ್ಷೆವಿಕ್ ರಾಷ್ಟ್ರ ಸ್ಥಾಪನೆಯಾಯಿತು. ಅದನ್ನು ಕಟ್ಟಿದ ಲೆನಿನ್ ಜರ್ಮನಿಯೊಡನೆ ಯುದ್ಧ ನಿಲ್ಲಿಸಿದ.

1918ರಲ್ಲಿ ರಷ್ಯನ್ನರು ಜರ್ಮನಿಯೊಡನೆ ಬ್ರೆಸ್ಬ್‌ಲಿಟಾಫ್ಸ್‌ನಲ್ಲಿ ಒಪ್ಪಂದ ಮಾಡಿಕೊಂಡು ಹೋರಾಟದಿಂದ ದೂರವಾದರು. ಈ ಕಾರಣದಿಂದ ಜರ್ಮನ್ನರು ತಮ್ಮ ಸರ್ವಚೈತನ್ಯವನ್ನೂ ಪಶ್ಚಿಮದಲ್ಲಿ ಒಡ್ಡಲು ಸಾಧ್ಯವಾಯಿತು. ಕಾಪೊರೆಟ್ಟೊದಲ್ಲಿ ಜರ್ಮನ್ ಸೈನ್ಯಗಳು ಇಟಲಿಯನ್ನು ಸೋಲಿಸಿದುವು. ಬಾಲ್ಕನ್ ಕ್ಷೇತ್ರಕ್ಕೂ ಮೂಡಲಲ್ಲಿ ತುರ್ಕಿ ಆ ವೇಳೆಗೆ ಸೋತಿತ್ತು. ಬ್ರಿಟಿಷರು ಮೆಸೊಪೊಟೇಮಿಯದಲ್ಲೂ ಪ್ಯಾಲೆಸ್ಟೈನಿನಲ್ಲೂ ಜಯಗಳಿಸಿದರು. ಆದರೆ ಜರ್ಮನ್ ದಳಪತಿ ಲೂಡೆನ್ಡಾರ್ಫ್ ಪಶ್ಚಿಮ ರಣರಂಗದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾರ್ಯಾಚರಣೆ ನಡೆಸಿದ. ಇದರಿಂದ ಮಿತ್ರರಾಷ್ಟ್ರಗಳಿಗೆ ಕಷ್ಟವಾಗಿದ್ದರೂ ಆಹಾರಾಭಾವದಿಂದ ಜರ್ಮನಿಯ ಸ್ಥಿತಿ ಹೆಚ್ಚು ಕಠಿಣವಾಗಿತ್ತು. ಆದ್ದರಿಂದ ಹೇಗಾದರೂ ಸಾಹಸಮಾಡದಿದ್ದರೆ ಅನಾಹುತ ಸಿದ್ಧವೆಂದು ತಿಳಿದು ಆ ದಳಪತಿ ಸರ್ವಶಕ್ತಿಯನ್ನೂ ವಿನಿಯೋಗಿಸಿ ಪಶ್ಚಿಮ ರಣರಂಗದಲ್ಲಿ ಬ್ರಿಟಷರನ್ನೂ ಫ್ರೆಂಚರನ್ನೂ ಗೆಲ್ಲಲು ಹವಣಿಸಿದ.

ಸಾಮ್ ನದಿಯ ಬಳಿಯಿದ್ದ ಬ್ರಿಟಿಷರ ಮೇಲೆ ಜರ್ಮನ್ನರು ಮೊದಲು ಬಿದ್ದು ಅವರನ್ನು ಹಿಮ್ಮೆಟ್ಟಿಸಿದರು. 1914ರಲ್ಲಿ ಜರ್ಮನ್ನರು ಆಕ್ರಮಿಸಿಕೊಂಡಿದ್ದ ಮಾರ್ನ್ನದೀ ದಡದವರೆಗೆ ಈ ಸಾರಿಯೂ ವೇಗದಿಂದಲೂ ರಭಸದಿಂದಲೂ ನುಗ್ಗಿದರು. ಜರ್ಮನ್ನರನ್ನು ಕುರಿತು ಸಾಕಷ್ಟು ಅನುಭವ ಪಡೆದಿದ್ದ ಬ್ರಿಟಿಷರೂ ಫ್ರೆಂಚರೂ ರಣಭೂಮಿಯಲ್ಲಿ ತಮಗೆ ಏಕದಂಡನಾಯಕನಿರಬೇಕೆಂದು ನಿಶ್ಚಯ ಮಾಡಿ ಮಾರ್ಷಲ್ ಫಾಕನನ್ನು ಅಧಿಪತಿಯಾಗಿ ಗೊತ್ತುಮಾಡಿಕೊಂಡರು. ಅಮೆರಿಕದ ಸೈನ್ಯಗಳೂ ಬಂದಿಳಿದುವು. ಜುಲೈ ತಿಂಗಳ ವೇಳೆಗೆ ಫಾಕ್ ಎಲ್ಲ ಬಲವನ್ನೂ ಒಟ್ಟುಗೂಡಿಸಿಕೊಂಡು ಆಕ್ರಮಣದಲ್ಲಿ ತೊಡಗಿ ಜರ್ಮನ್ನರನ್ನು ಪುನಃ ಹಿಂಡನ್ಬರ್ಗ್ ರೇಖೆಗೆ ಅಟ್ಟಿದ.

ಆ ವೇಳೆಗೆ ಮೂಡಲಲ್ಲಿ ಬಲ್ಗೇರಿಯ ಸೋತಿತ್ತು. ಆಸ್ಟ್ರಿಯವೂ ಇಟಲಿಯಿಂದ ವಿಟ್ಟಾರಿಯೊ ವೇನೆಟೊದಲ್ಲಿ ಸೋತಿತ್ತು. ಆಸ್ಟ್ರಿಯ-ಹಂಗರಿ ರಾಷ್ಟ್ರ ಧ್ವಂಸವೇ ಆಗಿತ್ತು. ಇನ್ನು ಮೂಡಲಿಗೆ ಪ್ಯಾಲೆಸ್ಟೈನಿನಲ್ಲಿ ದಳಪತಿ ಆಲೆನ್ಬಿ ತುರ್ಕಿ ಸೈನ್ಯಗಳನ್ನು ನಾಶಗೊಳಿಸಿ ಸಿರಿಯವನ್ನು ಮುತ್ತಿ ದಮಾಸ್ಕಸ್ ನಗರವನ್ನು ಹಿಡಿದುಕೊಂಡಿದ್ದ. ಈ ರೀತಿ ಎಲ್ಲೆಲ್ಲೊ ಪರಾಜಯಗಳೇ ಸಂಭವಿಸಿದ್ದರಿಂದ ಜರ್ಮನ್ ಸೈನ್ಯಮುಖ್ಯರಲ್ಲಿ ನಿರಾಶೆ ಮೂಡಿತು. ಲೂಡೆನ್ ಡಾರ್ಫ್ ರಾಜೀನಾಮೆ ಕೊಟ್ಟ. ಜರ್ಮನಿಯ ಒಳನಾಡಿನಲ್ಲಿ ಅಲ್ಲೋಲಕಲ್ಲೋಲವಾಯಿತು. ಚಕ್ರವರ್ತಿ ರಾಜಧಾನಿ ಬಿಟ್ಟು ಓಡಿದ. ಕೀಲ್ ಕಾಲುವೆಯಲ್ಲಿದ್ದ ಜರ್ಮನ್ ಹಡಗುಗಳ ನೌಕರರು ದಂಗೆಯೆದ್ದರು. ಮಿತ್ರರಾಷ್ಟ್ರಗಳು ತಾತ್ಕಾಲಿಕವಾಗಿ ಸ್ಥಾಪಿತವಾಗಿದ್ದ ಹೊಸ ಜರ್ಮನ್ ರಾಷ್ಟ್ರದೊಡನೆ ಹೋರಾಟ ನಿಲ್ಲಿಸಲೊಪ್ಪಿದುವು.

1918 ನವೆಂಬರ್ 11 ರಂದು ಯುದ್ಧ ಮುಕ್ತಾಯಮಾಡಲು ಗೊತ್ತುಮಾಡಿಕೊಂಡಾಗಲೇ ಜರ್ಮನ್ನರು ತಮ್ಮ ಯುದ್ಧದ ಹಡಗುಗಳನ್ನೂ ವಿಮಾನಗಳನ್ನೂ ಫಿರಂಗಿಗಳನ್ನೂ ಒಪ್ಪಿಸಬೇಕೆಂದು ನಿಶ್ಚಯವಾಗಿತ್ತು. ತಮ್ಮ ಯುದ್ಧದ ಹಡಗುಗಳನ್ನು ಜರ್ಮನ್ನರು ತಾವಾಗಿಯೇ ನಾಶಮಾಡಿಬಿಟ್ಟರು. ಆದ್ದರಿಂದ ಆ ಹಡಗುಗಳ ಹಂಚಿಕೆ ಹೇಗೆಂಬ ವ್ಯಾಜ್ಯಗಳಿಗೆ ಆಸ್ಪದವಿಲ್ಲವಾಯಿತು. ತಾವು ಯುದ್ಧ ಮಾಡಿದ್ದು ಮಹಾಪರಾಧ; ಇನ್ನುಮೇಲೆ ಯುದ್ಧಸನ್ನಾಹ ಮಾಡುವುದಿಲ್ಲ-ಎಂದು ಜರ್ಮನಿಯ ತಾತ್ಕಾಲಿಕ ಸರ್ಕಾರ ಪ್ರಮಾಣ ಮಾಡಿತಲ್ಲದೆ ಯುದ್ಧದಲ್ಲಿ ಗೆದ್ದಿದ್ದ ರಾಷ್ಟ್ರಗಳಿಗೆ ಪರಿಹಾರ ಕೊಡುವುದಕ್ಕೂ ಒಪ್ಪಿಕೊಂಡಿತು. ಮಿತ್ರರಾಷ್ಟ್ರಗಳಿಗೆ ಆಗಿದ್ದ ವ್ಯಾಪಾರನಷ್ಟಕ್ಕಾಗಿ ತನ್ನ ವ್ಯಾಪಾರ ಹಡಗುಗಳನ್ನೂ ಒಪ್ಪಿಸಬೇಕಾಯಿತು.

ಒಂದನೆಯ ಮಹಾಯುದ್ಧ ಆರಂಭವಾದ ಮೂರು ತಿಂಗಳಲ್ಲೇ ಭಾರತೀಯ ಸೈನಿಕರು ಪಶ್ಚಿಮ ರಣಕ್ಷೇತ್ರದಲ್ಲಿ ಕಾದಾಡುತ್ತಿದ್ದರು. ಭಾರತ ಉಳಿದ ಬ್ರಿಟಿಷ್ ವಸಾಹತುಗಳಂತೆ, ಯುದ್ಧದ ಸಮಯದಲ್ಲಿ ಇಂಗ್ಲೆಂಡಿಗೆ ಅಧೀನವಾಗಿ ನಡೆದುಕೊಂಡಿತು. ಯುದ್ಧಕ್ಕಾಗಿ ಭಾರತ ಒದಗಿಸಿದ ಸೈನಿಕರ ಮತ್ತು ಭಾರತೀಯ ಕಾರ್ಮಿಕರ ಸಂಖ್ಯೆ 13,00,000, ಈಜಿಪ್ಟ್‌, ಚೀನ, ಆಫ್ರಿಕ, ಅರೇಬಿಯ, ಬಾಲ್ಕನ್ ಪ್ರದೇಶ ಮತ್ತು ಫ್ರಾನ್ಸಿನಲ್ಲಿ ಭಾರತೀಯರು ಸೇವೆ ಸಲ್ಲಿಸಿದರು. ಭಾರತ ಸರ್ಕಾರ ಇದಲ್ಲದೆ ಬ್ರಿಟನಿಗೆ 50,00,00,000 ಡಾಲರ್ಗಳನ್ನು ಒಪ್ಪಿಸಿತು. ಯುದ್ಧನಿಧಿಗಾಗಿ ನೂರಾರು ರಾಜಮಹಾರಾಜರು ನೀಡಿದ ಕಾಣಿಕೆ 2,50,00,000 ಡಾಲರ್ಗಳು, ಯುದ್ಧ ಮುಗಿದ ಅನಂತರ ಬ್ರಿಟನ್ ಮಾಂಟೆಗು-ಚಮ್ಸಫರ್ಡ್ ಸುಧಾರಣೆಗಳ ಮೂಲಕ ಭಾರತೀಯರಿಗೆ ಕೆಲವು ರಾಜಕೀಯ ಹಕ್ಕುಗಳನ್ನು ನೀಡಿತು.

ಒಂದನೆಯ ಮಹಾಯುದ್ಧ 1565 ದಿನಗಳ ಕಾಲ ನಡೆಯಿತು. ಈ ಯುದ್ಧ ನಡೆಸಲು ಆದ ವೆಚ್ಚ ಅಗಾಧ. ಇದನ್ನು ನಡೆಸಲು ನಿಯೋಜಿತರಾದ ಜನರ ಸಂಖ್ಯೆ 6.5 ಕೋಟಿ 1.3 ಕೋಟಿ ಜನ ಯುದ್ಧದಲ್ಲೋ ಯುದ್ದದಿಂದ ಗಾಯಗೊಂಡೋ ಮರಣಕ್ಕೀಡಾದರು. ಸುಮಾರು 2,20,00,000 ಜನ (ಮೂವರಲ್ಲಿ ಒಬ್ಬರಂತೆ) ಗಾಯಗೊಂಡರು. ಇವರ ಪೈಕಿ 70,00,000 ಜನ ಸಂಪುರ್ಣವಾಗಿ ದೇಹದ ಸ್ವಾಸ್ಥ್ಯ ಕಳೆದುಕೊಂಡರು. ಗಾಯಗೊಂಡ ಅನೇಕರು ಕೆಲವೇ ವರ್ಷಗಳಲ್ಲಿ, ದೇಹದ ಗಾಯಗಳಿಂದಾಗಿ ಮಡಿದರು. ಷೆಲ್ ದಾಳಿಗೆ ಒಳಗಾದ ಮತ್ತು ವಿಷವಾಯು ಪ್ರಯೋಗಕ್ಕೆ ತುತ್ತಾದ ಅನೇಕರು ಹೇಗೋ ಜೀವಚ್ಛವಗಳಾಗಿ ಬದುಕಿದರು.
1790 – 1913ರ ವರೆಗೆ ನಡೆದ ನೆಪೋಲಿಯನಿಕ್ ಯುದ್ಧಗಳೂ, ಕ್ರಿಮಿಯನ್ ಯುದ್ಧ, ಡೇನಿಷ್ ಯುದ್ಧ, ಆಸ್ಟ್ರೋ-ಪ್ರಷ್ಯನ್ ಯುದ್ಧ, ಅಮೆರಿಕನ್ ಅಂತರ್ಯುದ್ಧ, ಫ್ರಾಂಕೊ-ಪ್ರಷ್ಯನ್ ಯುದ್ಧ, ಬೋಯರ್ ಯುದ್ಧ, ರಷ್ಯ ಜಪಾನ್ ಯುದ್ಧ ಮತ್ತು ಬಾಲ್ಕನ್ ಯುದ್ಧಗಳೇ ಮೊದಲಾದ ಎಲ್ಲ ಯುದ್ಧಗಳಲ್ಲೂ ಮಡಿದವರ ಸಂಖ್ಯೆಯ ಎರಡರಷ್ಟು ಮಂದಿ ಈ ಯುದ್ಧದಲ್ಲಿ ಮಡಿದರು. ಅಲ್ಲದೆ ಅವೆಲ್ಲಕ್ಕಿಂತ ಇದು ಹೆಚ್ಚು ಉಗ್ರ, ಯುದ್ಧದಲ್ಲಿ ಮಡಿದ ನಾಗರಿಕರ ಸಂಖ್ಯೆ ಸೈನಿಕರ ಸಂಖ್ಯೆಗಿಂತ ಹೆಚ್ಚು. ಯುದ್ಧದಲ್ಲಿ ನೇರವಾಗಿ ಭಾಗವಹಿಸದೆ ಇದ್ದವರನೇಕರು ಹಸಿವು, ರೋಗರುಜಿನ ಸಾಮೂಹಿಕ ಕೊಲೆ, ಸಾಂಕ್ರಾಮಿಕ ರೋಗ ಮತ್ತು ಧಾಳಿಗಳಿಗೆ ತುತ್ತಾಗಿ ಮರಣಹೊಂದಿದರು. ಅನೇಕ ದೇಶಗಳಲ್ಲಿ ಜನಸಂಖ್ಯೆಯ ಏರಿಕೆಯ ವೇಗ ಕಡಿಮೆಯಾಯಿತು.

ಒಟ್ಟು ಆರ್ಥಿಕ ನಾಶ 270,00,00,000 ಡಾಲರ್ಗಳು. ಈ ಮೊತ್ತಕ್ಕೆ ಯುದ್ಧದಲ್ಲಿ ಸತ್ತವರ 67,00,00,000 ಡಾಲರ್ಗಳನ್ನು ಸೇರಿಸಿದರೆ, ಒಟ್ಟು 3,370,00,00,000 ಡಾಲರ್ಗಳಷ್ಟಾಗುತ್ತದೆ. ಈ ಎಣಿಕೆಯಲ್ಲಿ ಅಂಗವಿಕಲರಾದ ಸೈನಿಕರು ಮತ್ತು ನಾಗರಿಕರ ಲೆಕ್ಕ ಸೇರಿಲ್ಲ. ಯುದ್ಧಭಾಗಿ ರಾಷ್ಟ್ರಗಳು ಕೋಟ್ಯಂತರ ಡಾಲರ್ಗಳಷ್ಟು ಬಡ್ಡಿ ಹಣ ಕೊಡಬೇಕಾಗಿತ್ತು. ಇದೂ ಈ ಎಣಿಕೆಯಲ್ಲಿ ಸೇರಿಲ್ಲ. ಅನೇಕ ತಲೆಮಾರುಗಳವರೆಗೆ ಈ ಹಣ ತೆರಬೇಕಾಯಿತು. ಯುದ್ಧ ಮುಗಿದ ತರುವಾಯ ನಡೆದ ಶಾಂತಿಸಂಧಾನಗಳಲ್ಲಿ. ವಿವಿಧ ದೇಶಗಳ ನಾಯಕರ ಮೇಲೆ ಅಮಿತವಾದ ಜವಾಬ್ದಾರಿ ಬಿದ್ದಿತ್ತು. ಲಕ್ಷಾಂತರ ಜನಗಳನ್ನು ಬಲಿಕೊಟ್ಟು, ಕೋಟ್ಯಂತರ ಡಾಲರ್ಗಳಷ್ಟು ಹಣದ ವೆಚ್ಚದಲ್ಲಿ ಇಂಥ ಘೋರ ಯುದ್ಧ ನಡೆಸಿದ್ದಕ್ಕೆ ಪ್ರತಿಯಾಗಿ ಸರಿಯಾದ ಶಾಂತಿ ಒಪ್ಪಂದವನ್ನು ನಡೆಸುವುದೇ ನಾನಾ ದೇಶಗಳ ನಾಯಕರ ಮೇಲೆ ಆಗ ಬಿದ್ದ ಜವಾಬ್ದಾರಿ. ಅಪಾರ ನಷ್ಟ ಅನುಭವಿಸಿದ ರಾಷ್ಟ್ರಗಳೂ ಶಾಂತಿಯನ್ನು ಲಘುವಾಗಿ ಸ್ಥಾಪಿಸಲು ಇಷ್ಟಪಡಲಿಲ್ಲ. ಆದರೂ ತಮ್ಮ ತಮ್ಮ ದೇಶದ ಸ್ವಾರ್ಥಗಳನ್ನು ಮುಂದು ಮಾಡಿಕೊಂಡ ಶಾಂತಿ ಸಮ್ಮೇಳನದ ನಾಯಕರು ಅನೇಕ ವೇಳೆ ಆದರ್ಶವನ್ನೇ ಬಲಿಗೊಟ್ಟರು.
ಮಾಹಿತಿ ಆಧಾರ: ಮೈಸೂರು ವಿಶ್ವಕೋಶ
ಕೃಪೆ:-ಕನ್ನಡ ಸಂಪದ

Share and Enjoy !

Shares