ಅವಿಭಜಿತ ಬಳ್ಳಾರಿ ಜಿಲ್ಲೆಗೆ ಎರಡನೇ ಬಾರಿಗೆ ಒಲಿಯಲಿದೆಯೇ ಡಿಸಿಎಂ ಸ್ಥಾನ

Share and Enjoy !

Shares
Listen to this article

ವಿಜಯನಗರ ವಾಣಿ

ಬಿಜೆಪಿ ನೇತೃತ್ವದ ರಾಜ್ಯ ಸರಕಾರದಲ್ಲಿ ಸಿಎಂ ಬದಲಾಗುತ್ತಿದ್ದಂತೆಯೇ ಗಣಿ ಜಿಲ್ಲೆಯಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಚಿವ ಸ್ಥಾನ ಹಾಗೂ ಜಿಲ್ಲಾ ಉಸ್ತುವಾರಿ ಕುರಿತು ನಾನಾ ಚರ್ಚೆಗಳು ಮುನ್ನೆಲೆಗೆ ಬಂದಿವೆ.

ಈ ಬಾರಿ ಮೂವರಿಗೆ ಉಪಮುಖ್ಯಮಂತ್ರಿ ಸ್ಥಾನ ಖಚಿತ ಎಂಬ ಮಾತು ಕೇಳಿ ಬಂದಿದ್ದು, ಗಣಿ ಜಿಲ್ಲೆಯವರೇ ಆದ ಮೊಳಕಾಲ್ಮೂರು ಶಾಸಕ ಬಿ. ಶ್ರೀರಾಮುಲು ಅವರಿಗೂ ಡಿಸಿಎಂ ಸ್ಥಾನ ಒಲಿಯುವ ನಿರೀಕ್ಷೆ ದಟ್ಟವಾಗಿದೆ. ಜಿಲ್ಲೆಯ ಬಿಜೆಪಿ ಶಾಸಕರ ಚಿತ್ತ, ಸದ್ಯ ಸಚಿವ ಸಂಪುಟ ವಿಸ್ತರಣೆಯ ಮೇಲೆ ನೆಟ್ಟಿದ್ದು, ಸಂಪುಟಕ್ಕೆ ಸೇರಲು ಶಾಸಕರ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ರಾಜ್ಯ ರಾಜಕಾರಣದಲ್ಲಿ ಗಮನ ಸೆಳೆದ ಗಣಿ ಜಿಲ್ಲೆಯ ಉಸ್ತವಾರಿ ಈ ಬಾರಿ ಯಾರ ಹೆಗಲಿಗೆ ಬೀಳಲಿದೆ ಎನ್ನುವ ಕುತೂಹಲ ಕಾಡುತ್ತಿದೆ.

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಕ್ಷೇತ್ರದಿಂದ ಎಂ. ಎಸ್‌. ಸೋಮಲಿಂಗಪ್ಪ, ಬಳ್ಳಾರಿ ನಗರ ಕ್ಷೇತ್ರದಿಂದ ಜಿ. ಸೋಮಶೇಖರ್‌ ರೆಡ್ಡಿ ಅವರು ಬಿಜೆಪಿ ಶಾಸಕರಾಗಿದ್ದಾರೆ. ಇನ್ನುಳಿದ ಕಂಪ್ಲಿ, ಸಂಡೂರು, ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ವಿಜಯನಗರ ನೂತನ ಜಿಲ್ಲೆ ವ್ಯಾಪ್ತಿಯಲ್ಲಿ ಹೊಸಪೇಟೆ ಕ್ಷೇತ್ರದಿಂದ ಶಾಸಕ ಆನಂದ್‌ ಸಿಂಗ್‌, ಕೂಡ್ಲಿಗಿ ಕ್ಷೇತ್ರದಿಂದ ಎನ್‌. ವೈ. ಗೋಪಾಲಕೃಷ್ಣ, ಹರಪನಹಳ್ಳಿ ಕ್ಷೇತ್ರದಿಂದ ಜಿ. ಕರುಣಾಕರ ರೆಡ್ಡಿ ಬಿಜೆಪಿ ಶಾಸಕರಾಗಿದ್ದಾರೆ. ಹಗರಿಬೊಮ್ಮನಹಳ್ಳಿ, ಹೂವಿನಹಡಗಲಿ ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಸಚಿವ ಸ್ಥಾನ ಪಡೆಯಲು ಬಿಜೆಪಿ ಶಾಸಕರು, ರಾಜ್ಯ ನಾಯಕರ ದುಂಬಾಲು ಬಿದ್ದಿದ್ದಾರೆ.

ಸಚಿವ ಸ್ಥಾನದ ನಿರೀಕ್ಷೆಯಲ್ಲಿಇವರು:

ಬಳ್ಳಾರಿ ಜಿಲ್ಲೆಯಲ್ಲಿ ಶಾಸಕ ಜಿ. ಸೋಮಶೇಖರ್‌ ರೆಡ್ಡಿ ಹಾಗೂ ಸಿರುಗುಪ್ಪ ಶಾಸಕ ಎಂ. ಎಸ್‌. ಸೋಮಲಿಂಗಪ್ಪ ಅವರು ಸಚಿವ ಸ್ಥಾನಕ್ಕಾಗಿ ಇನ್ನಿಲ್ಲದ ಪ್ರಯತ್ನ ನಡೆಸಿದ್ದಾರೆ. ವಿಜಯನಗರ ಕ್ಷೇತ್ರದ ಶಾಸಕ ಆನಂದ್‌ ಸಿಂಗ್‌ ಅವರು ಈ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದು, ಅವರಿಗೆ ಸಚಿವ ಸ್ಥಾನ ದೊರಕುವ ಸಾಧ್ಯತೆ ದಟ್ಟವಾಗಿದೆ. ಮತ್ತೊಂದೆಡೆ ಹರಪನಹಳ್ಳಿ ಶಾಸಕ ಜಿ. ಕರುಣಾಕರ ರೆಡ್ಡಿ ಅವರು ಸಹ ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದು, ತೀವ್ರ ಪೈಪೋಟಿಯಲ್ಲಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸಮ್ಮಿಶ್ರ ಸರಕಾರದ ಆಡಳಿತಾವಧಿ 2006ರಲ್ಲಿ ಜಿಲ್ಲೆಯವರಾದ ದಿ. ಎಂ. ಪಿ. ಪ್ರಕಾಶ ಅವರು ಉಪಮುಖ್ಯಮಂತ್ರಿಯಾಗಿದ್ದರು. ಅದಾದ ಬಳಿಕ ಒಂದೂವರೆ ದಶಕದ ಬಳಿಕ ರಾಜ್ಯ ಬಿಜೆಪಿ ಸರಕಾರದ ಅಧಿವಧಿಯಲ್ಲಿ ಬಿ. ಶ್ರೀರಾಮುಲು ಅವರಿಗೆ ಉಪಮುಖ್ಯ ಮಂತ್ರಿ ಸ್ಥಾನ ಒಲಿಯಲಿದೆ ಎಂಬ ಮಾತು ರಾಜಕೀಯ ಪಡಸಾಲೆಯಲ್ಲಿ ಜೋರಾಗಿದೆ. ಶ್ರೀರಾಮುಲು ಮೂಲಕ ಜಿಲ್ಲೆಗೆ ಎರಡನೇ ಬಾರಿ ಉಪಮುಖ್ಯಮಂತ್ರಿ ಸ್ಥಾನ ದೊರಕಿದಂತಾಗಲಿದೆ.

ಉಸ್ತುವಾರಿ ಮೇಲೆ ಹಲವರ ಕಣ್ಣು:

ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಪತನವಾಗಿ ಬಿಜೆಪಿ ಸರಕಾರ ಆಡಳಿತಕ್ಕೆ ಬರುತ್ತಿದ್ದಂತೆಯೇ ಬಿ. ಶ್ರೀರಾಮುಲು ಅವರು ಬಳ್ಳಾರಿ ಜಿಲ್ಲೆ ಉಸ್ತುವಾರಿ ಜವಾಬ್ದಾರಿ ಸಿಗುವ ನಿರೀಕ್ಷೆ ಹೊಂದಿದ್ದರು. ಆದರೆ ಆರಂಭದಲ್ಲಿ ಲಕ್ಷ್ಮಣ ಸವದಿ ಬಳಿಕ ಆನಂದ್‌ ಸಿಂಗ್‌ ಅವರಿಗೆ ಉಸ್ತುವಾರಿ ವಹಿಸಲಾಗಿತ್ತು. ಜಿಲ್ಲೆ ವಿಭಜನೆಯಾಗುತ್ತಿದ್ದಂತೆಯೇ ಜಿಲ್ಲಾ ಉಸ್ತುವಾರಿ ಸ್ಥಾನದ ಬದಲಾವಣೆ ಕೂಗು ವ್ಯಾಪಕವಾಗಿತ್ತು. ಇದೀಗ ಗಣಿ ಜಿಲ್ಲೆಯ ಉಸ್ತುವಾರಿ ಯಾರ ಹೆಗಲಿಗೆ ಬಿಳಲಿದೆ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.

ಬಳ್ಳಾರಿ ಹಾಗೂ ವಿಜಯನಗರ ಬೇರ್ಪಟ್ಟಿದ್ದು, ಉಭಯ ಜಿಲ್ಲೆಗಳಿಗೆ ಪ್ರತ್ಯೇಕ ಉಸ್ತುವಾರಿ ಸಚಿವರ ನೇಮಕ ವಿಷಯ ಮುನ್ನಲೆಗೆ ಬಂದಿದೆ. ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಗೆ ಆನಂದ್‌ ಸಿಂಗ್‌ ಅವರು ಈಗಾಗಲೇ ಉಸ್ತುವಾರಿ ವಹಿಸಿಕೊಂಡಿದ್ದು, ಮುಂದಿನ ದಿನಗಳಲ್ಲಿ ವಿಜಯನಗರಕ್ಕೆ ಸಿಂಗ್‌ ಅವರು ಉಸ್ತುವಾರಿ ವಹಿಸಿಕೊಂಡರೆ, ಡಿಸಿಎಂ ರೇಸ್‌ನಲ್ಲಿರುವ ಬಿ.ಶ್ರೀರಾಮುಲು ಅವರಿಗೆ ಚಿತ್ರದುರ್ಗ ಜಿಲ್ಲೆ ಜತೆಗೆ ಬಳ್ಳಾರಿ ಜಿಲ್ಲಾ ಉಸ್ತುವಾರಿ ವಹಿಸಿದರೂ ಆಶ್ಚರ್ಯವಿಲ್ಲ ಎಂಬ ಮಾತು ಬಿಜೆಪಿ ಮುಖಂಡರ ವಲಯದಲ್ಲಿ ಕೇಳಿಬಂದಿದೆ.

Share and Enjoy !

Shares