ಚೊಚ್ಚಲ ಬಾರಿಗೆ ಸಲಗ ಚಿತ್ರದ ಮೂಲಕ ನಿರ್ದೇಶಕರಾಗಿರುವ ‘ದುನಿಯಾ’ ವಿಜಯ್

Share and Enjoy !

Shares
Listen to this article

ವಿಜಯನಗರ ವಾಣಿ

ಕನ್ನಡ ಚಿತ್ರರಂಗದಲ್ಲಿಹೊಸ ಮೈಲಿಗಲ್ಲುಸ್ಥಾಪಿಸಿದ ‘ಜೋಗಿ’ ಚಿತ್ರ ಇಂದಿಗೂ ಸಿನಿಪ್ರಿಯರ ಫೇವರಿಟ್‌. 2005ರ ವರಮಹಾಲಕ್ಷ್ಮಿ ಹಬ್ಬದಂದು ಬಿಡುಗಡೆಯಾದ ಈ ಸಿನಿಮಾ ಎಲ್ಲಾಕೇಂದ್ರಗಳಲ್ಲಿಯೂ ಅದ್ಭುತ ಪ್ರದರ್ಶನ ಕಂಡು, ಬ್ಲಾಕ್‌ಬಸ್ಟರ್‌ ಅನಿಸಿಕೊಂಡಿತ್ತು. ಇದೀಗ ಅದೇ ದಿನಾಂಕದಂದು ಅಂದರೆ ಈ ಬಾರಿಯ ವರಮಹಾಲಕ್ಷ್ಮಿ ಹಬ್ಬದಂದು ದುನಿಯಾ ವಿಜಯ್‌ ನಿರ್ದೇಶನದ ‘ಸಲಗ’ ಸಿನಿಮಾ ಬಿಡುಗಡೆಯಾಗುತ್ತಿದೆ. ಈಗಾಗಲೇ ಟೀಸರ್‌, ಹಾಡು, ಪೋಸ್ಟರ್‌ಗಳ ಮೂಲಕ ಭಾರಿ ನಿರೀಕ್ಷೆ ಹುಟ್ಟಿಸಿರುವ ‘ಸಲಗ’ ಚಿತ್ರವು ನಿರ್ಮಾಪಕ ಕೆ ಪಿ ಶ್ರೀಕಾಂತ್‌ ಮತ್ತು ವಿಜಯ್‌ ಇಬ್ಬರಿಗೂ ಅತ್ಯಂತ ವಿಶೇಷ. ವಿಜಿಗೆ ಇದು ಮೊದಲ ನಿರ್ದೇಶನದ ಸಿನಿಮಾವಾದರೆ, ಶ್ರೀಕಾಂತ್‌ಗೆ ತಮ್ಮ ಆರಾಧ್ಯ ದೈವ ಶಿವರಾಜ್‌ಕುಮಾರ್‌ ಅವರ ಸೂಪರ್‌ಹಿಟ್‌ ‘ಜೋಗಿ’ ಸಿನಿಮಾ ಬಿಡುಗಡೆಯಾದ ದಿನವೇ ಈ ಸಿನಿಮಾ ರಿಲೀಸ್‌ ಆಗಲಿರುವುದು ಸಂಭ್ರಮದ ವಿಚಾರ.

‘ಜೋಗಿ ಸಿನಿಮಾದಲ್ಲಿನಾನು ಸಣ್ಣ ಪಾತ್ರದಲ್ಲಿ ನಟಿಸಿದ್ದೆ. ಆ ಪಾತ್ರವನ್ನು ಜನರು ಈಗಲೂ ನೆನಪಿಸಿಕೊಳ್ಳುತ್ತಾರೆ. ಈಗ ಶಿವರಾಜ್‌ಕುಮಾರ್‌ ಅವರ ಜೋಗಿ ಸಿನಿಮಾ ಬಿಡುಗಡೆಯಾದ ದಿನವೇ ನನ್ನ ಮೊದಲ ನಿರ್ದೇಶನದ ಸಿನಿಮಾ ರಿಲೀಸ್‌ ಆಗುತ್ತಿರುವುದು ನನ್ನ ಪುಣ್ಯ. ನಾನು ಅವರ ಸಿನಿಮಾಗಳನ್ನು ಮತ್ತು ಅವರ ಕರಿಯರ್‌ ನೋಡಿಕೊಂಡು ಬೆಳೆದವನು. ಮೊನ್ನೆ ಸಹ ಅವರನ್ನು ಭೇಟಿಯಾಗಿ ಸಿನಿಮಾ ರಿಲೀಸ್‌ ಬಗ್ಗೆ ಮಾತನಾಡಿದೆ. ಅವರು ನೀಡಿರುವ ಒಂದಷ್ಟು ಸಲಹೆಗಳನ್ನು ಚಾಚು ತಪ್ಪದೆ ಪಾಲಿಸುತ್ತೇನೆ. ಸಿನಿಮಾವನ್ನು ಅಂದೇ ಬಿಡುಗಡೆ ಮಾಡಬೇಕು ಎಂದು ನಿರ್ಮಾಪಕ ಶ್ರೀಕಾಂತ್‌ ಉತ್ಸಾಹದಿಂದ ಕೆಲಸ ಮಾಡುತ್ತಿದ್ದಾರೆ. ಜೋಗಿ ಸಿನಿಮಾದಂತೆಯೇ ಈ ಸಿನಿಮಾ ಹಿಟ್‌ ಆಗುತ್ತದೆ ಎಂಬುದು ಅವರ ನಂಬಿಕೆ. ನನಗೂ ಕಂಟೆಂಟ್‌ ಮೇಲೆ ಅಷ್ಟೇ ನಂಬಿಕೆ ಇದೆ’ ಎಂದಿದ್ದಾರೆ ದುನಿಯಾ ವಿಜಯ್‌.

‘ಸಲಗ ಸಿನಿಮಾ ಈಗಾಗಲೇ ದೊಡ್ಡ ಮಟ್ಟದ ಕ್ರೇಝ್‌ ಸೃಷ್ಟಿಸಿದೆ. ಜನರ ಅಭಿಮಾನಕ್ಕೆ ನನ್ನ ಸಿನಿಮಾ ಎಂದಿಗೂ ಮೋಸ ಮಾಡುವುದಿಲ್ಲಎಂಬ ನಂಬಿಕೆ ಇದೆ. ಧನಂಜಯ ಸೇರಿದಂತೆ ಇಡೀ ಸಿನಿಮಾದ ಕಲಾವಿದರೆಲ್ಲರೂ ನನಗೆ ಸಾಥ್‌ ನೀಡಿದ್ದಾರೆ. ಮಾಸ್ತಿ, ಅಭಿ, ಶಿವು ಸೇನಾ ಸೇರಿದಂತೆ ಎಲ್ಲರ ಸಹಕಾರದಿಂದ ಈ ಸಿನಿಮಾ ಅದ್ಭುತವಾಗಿ ಬಂದಿದೆ. ಜೋಗಿ ಸಿನಿಮಾ ಜನರಿಗೆ ಮನರಂಜನೆ ನೀಡಿದಂತೆ ನಮ್ಮ ಸಿನಿಮಾ ಕೂಡ ನೀಡುತ್ತದೆ’ ಎಂದು ಅವರು ಭರವಸೆ ವ್ಯಕ್ತಪಡಿಸಿದ್ದಾರೆ.

‘ನಾನು ಪ್ರೀತಿಸುವ ಆರಾಧ್ಯ ದೈವ ಶಿವರಾಜ್‌ಕುಮಾರ್‌. ಅವರ ಒಬ್ಬ ಅಭಿಮಾನಿಯಾಗಿ ನಾನು ಜೋಗಿ ಸಿನಿಮಾ ಬಿಡುಗಡೆಯಾದಾಗ ಸಂಭ್ರಮಿಸಿದ್ದೆ. ಈಗ ಅದೇ ಅಭಿಮಾನಿ ನಿರ್ಮಾಣ ಮಾಡಿರುವ ಸಿನಿಮಾ ಅವರದ್ದೇ ಜೋಗಿ ಸಿನಿಮಾ ಬಿಡುಗಡೆಯಾದ ದಿನವೇ ಬಿಡುಗಡೆಯಾಗುತ್ತಿದೆ. ಇದು ನನ್ನ ಅದೃಷ್ಟ. ನನ್ನ ಜತೆಗೆ ಶಿವಣ್ಣ ಯಾವಾಗಲೂ ಇರುತ್ತಾರೆ. ಜೋಗಿಯಂತೆ ಈ ಸಿನಿಮಾ ಕೂಡ ಜನರಿಗೆ ಇಷ್ಟವಾಗುತ್ತದೆ’ ಎಂದಿದ್ದಾರೆ ಕೆ ಪಿ ಶ್ರೀಕಾಂತ್‌. ಸಲಗ ಸಿನಿಮಾದಲ್ಲಿದುನಿಯಾ ವಿಜಯ್‌ಗೆ ಜೋಡಿಯಾಗಿ ಸಂಜನಾ ಆನಂದ್‌ ನಟಿಸಿದ್ದಾರೆ. ಇದೇ ಮೊದಲ ಬಾರಿಗೆ ಧನಂಜಯ ಪೊಲೀಸ್‌ ಅಧಿಕಾರಿಯಾಗಿ ನಟಿಸಿದ್ದು, ಮಾಸ್ತಿ ಸಂಭಾಷಣೆ ಮತ್ತು ಚರಣ್‌ರಾಜ್‌ ಸಂಗೀತ ಸಂಯೋಜನೆ ಮಾಡಿದ್ದಾರೆ.

ಕೋಟ್‌
ಜೋಗಿ ಸ್ಯಾಂಡಲ್‌ವುಡ್‌ನ ದೊಡ್ಡ ಆಸ್ತಿ. ಆ ಸಿನಿಮಾ ಬಿಡುಗಡೆಯಾದ ದಿನವೇ ನಮ್ಮ ಸಿನಿಮಾ ರಿಲೀಸ್‌ ಆಗುತ್ತಿರುವುದು ನನ್ನ ಅದೃಷ್ಟ. ಇದಕ್ಕೆ ನಿರ್ಮಾಪಕ ಶ್ರೀಕಾಂತ್‌ರ ಸಹಕಾರ ಪ್ರಮುಖ ಕಾರಣ.

ದುನಿಯಾ ವಿಜಯ್‌, ನಿರ್ದೇಶಕ, ನಟ

ಶಿವರಾಜ್‌ಕುಮಾರ್‌ ಅವರ ಅಭಿಮಾನಿಗಳಾದ ನಮಗೆ ವರಮಹಾಲಕ್ಷ್ಮಿ ಹಬ್ಬ ಎಂದರೆ ಜೋಗಿ ಸಿನಿಮಾ ನೆನಪಿಗೆ ಬರುತ್ತದೆ. ನನ್ನಂಥ ಅಭಿಮಾನಿಗಳಲ್ಲಿ ಒಬ್ಬರಾದ ಕೆ ಪಿ ಶ್ರೀಕಾಂತ್‌ ಅವರು ನಿರ್ಮಾಣ ಮಾಡಿರುವ ಸಲಗ ಸಿನಿಮಾ ಸಹ ಅದೇ ದಿನ ಬಿಡುಗಡೆಯಾಗುತ್ತಿರುವುದು ನಮಗೆ ಸಂತಸದ ವಿಚಾರ.

-ಪುನೀತ್‌, ಶಿವರಾಜ್‌ಕುಮಾರ್‌ ಅಭಿಮಾನಿ

Share and Enjoy !

Shares