ಬೆಂಗಳೂರು ಮಾಜಿ ಆಟಗಾರ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ

Share and Enjoy !

Shares
Listen to this article

ವಿಜಯನಗರ ವಾಣಿ

ಭಾರತ ವಿರುದ್ಧ ಸೀಮಿತ ಓವರ್‌ಗಳ ಸರಣಿ ಮುಗಿಸಿದ ಕೇವಲ ಎರಡು ದಿನಗಳಲ್ಲಿಯೇ ಶ್ರೀಲಂಕಾ ತಂಡದ ಆಲ್‌ರೌಂಡರ್‌ ಇಸುರು ಉದಾನ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಹಠಾತ್‌ ನಿವೃತ್ತಿ ಘೋಷಿಸಿ ಎಲ್ಲರಿಗೂ ಶಾಕ್‌ ನೀಡಿದ್ದಾರೆ.

ಜುಲೈ 29 ರಂದು ಮುಗಿದಿದ್ದ ಭಾರತ ವಿರುದ್ಧದ ಸೀಮಿತ ಓವರ್‌ಗಳ ಸರಣಿಯಲ್ಲಿ ಇಸುರು ಉದಾನ ಕಾಣಿಸಿಕೊಂಡಿದ್ದರು. ಮೊದಲನೇ ಓಡಿಐ ಪಂದ್ಯ ಹಾಗೂ ಟಿ20 ಸರಣಿಯ ಆರಂಭಿಕ ಎರಡು ಪಂದ್ಯಗಳಲ್ಲಿ ಆಲ್‌ರೌಂಡರ್ ಕಾಣಿಸಿಕೊಂಡಿದ್ದರು. ಅಂದಹಾಗೆ ಮೂರೂ ಪಂದ್ಯಗಳಿಂದ ಕೇವಲ ಎಂಟು ರನ್‌ ಗಳಿಸಿ, ವಿಕೆಟ್‌ ಪಡೆಯುವಲ್ಲಿ ಉದಾನ ವಿಫಲರಾಗಿದ್ದರು.

2009ರಲ್ಲಿ ನಾಟಿಂಗ್‌ಹ್ಯಾಮ್‌ನಲ್ಲಿ ಐಸಿಸಿ ಟಿ20 ವಿಶ್ವಕಪ್‌ ಟೂರ್ನಿಯ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಇಸುರು ಉದಾನ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. ಈ ಪಂದ್ಯದಲ್ಲಿ ಡೇವಿಡ್‌ ಹಸ್ಸಿ ಹಾಗೂ ಬ್ರಾಡ್‌ ಹೆಡ್ಡಿನ್ ಅವರ ವಿಕೆಟ್‌ ಪಡೆದ ಹೊರತಾಗಿಯೂ 47 ರನ್ ನೀಡುವ ಮೂಲಕ ದುಬಾರಿಯಾಗಿದ್ದರು.

ಇನ್ನು 2012ರಲ್ಲಿ ಅಂತಾರಾಷ್ಟ್ರೀಯ ಓಡಿಐ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದ ಉದಾನ, ಕೆಳ ಕ್ರಮಾಂಕದಲ್ಲಿ ಉಪಯುಕ್ತ ಬ್ಯಾಟ್ಸ್‌ಮನ್‌ ಕೂಡ ಆಗಿದ್ದರು. ಅಂದಹಾಗೆ ಕಳೆದ ಹಲವು ವರ್ಷಗಳಿಂದ ಇಸುರು ಉದಾನ ನಿಧಾನಗತಿಯ ಪಿಚ್‌ಗಳಲ್ಲಿ ಕಟ್ಟರ್‌ ಹಾಗೂ ವಿಭಿನ್ನ ಎಸೆತಗಳಿಂದ ಶ್ರೀಲಂಕಾ ತಂಡದ ಬೌಲಿಂಗ್‌ ವಿಭಾಗಕ್ಕೆ ಅವಿಭಾಜ್ಯ ಅಂಗವಾಗಿದ್ದರು. ಆದರೆ, ಟಿ20 ವಿಶ್ವಕಪ್‌ ಟೂರ್ನಿಗೂ ಮೊದಲೇ ನಿವೃತ್ತಿ ಘೋಷಿಸುವ ಮೂಲಕ ಎಲ್ಲರಿಗೂ ಅಚ್ಚರಿ ಮೂಡಿಸಿದ್ದಾರೆ.

ಟೆಸ್ಟ್ ಹಾಗೂ ಓಡಿಐ ಕ್ರಿಕೆಟ್‌ ವೃತ್ತಿ ಜೀವನದಲ್ಲಿ ತಲಾ ಒಂದೊಂದು ಅರ್ಧಶತಕ ಸಿಡಿಸಿರುವ ಉದಾನ, 21 ಏಕದಿನ ಪಂದ್ಯಗಳಿಂದ 18 ವಿಕೆಟ್‌ ಹಾಗೂ 35 ಟಿ20 ಪಂದ್ಯಗಳಿಂದ 27 ವಿಕೆಟ್‌ಗಳನ್ನು ತಮ್ಮ ಖಾತೆಯಲ್ಲಿ ಸೇರಿಸಿಕೊಂಡಿದ್ದಾರೆ. ಇದರ ಜೊತೆಗೆ ತಮ್ಮ ವೃತ್ತಿ ಜೀವನದಲ್ಲಿ 450 ರನ್‌ಗಳನ್ನು ಬ್ಯಾಟ್‌ನಿಂದ ಗಳಿಸಿದ್ದಾರೆ.

2020ರ ಐಪಿಎಲ್‌ನಲ್ಲಿ ಆರ್‌ಸಿಬಿ ಪರ ಆಡಿದ್ದ ಉದಾನ:

ಕಳೆದ 2020ರ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಟೂರ್ನಿಯಲ್ಲಿ ರಾಯಲ್‌ ಚಾಲೆಂಜರ್ಸ್ ಬೆಂಗಳೂರು ಪರ ಇಸುರು ಉದಾನ ಕಣಕ್ಕೆ ಇಳಿದಿದ್ದರು. ಅವರನ್ನು ಮಿನಿ ಹರಾಜಿನಲ್ಲಿ ಬೆಂಗಳೂರು ಫ್ರಾಂಚೈಸಿಯು 50 ಲಕ್ಷ ರೂ. ಗಳಿಗೆ ಖರೀದಿಸಿತ್ತು. ಅದರಂತೆ ಲಂಕಾ ಆಲ್‌ರೌಂಡರ್‌ ಆಡಿದ್ದ 10 ಪಂದ್ಯಗಳಿಂದ 8 ವಿಕೆಟ್‌ ಕಬಳಿಸಿದ್ದರು ಹಾಗೂ 9.75 ರಷ್ಟು ಎಕಾನಮಿ ರೇಟ್‌ ಹೊಂದಿದ್ದರು.

Share and Enjoy !

Shares