ದಕ್ಷಿಣ ಕನ್ನಡದಲ್ಲಿ ಡಿಸೇಲ್ ಕಳ್ಳತನವನ್ನು ಪತ್ತೆ ಹಚ್ಚಿದ ಪೊಲೀಸರು

Share and Enjoy !

Shares
Listen to this article

ವಿಜಯನಗರ ವಾಣಿ

ಪೆಟ್ರೋಲ್ ಮತ್ತು ಡಿಸೇಲ್ ದರ ಗಗನಕ್ಕೇರಿದೆ. ಪ್ರತಿದಿನ ಪೈಸೆಗಳ ಲೆಕ್ಕದಲ್ಲೇ ತೈಲಗಳ ದರ ಆಕಾಶಮುಖ ಮಾಡುತ್ತಿದೆ. ಜನರು ವಾಹನಗಳಿಗೆ ಪೆಟ್ರೋಲ್ ಅಥವಾ ಡಿಸೇಲ್ ಹಾಕಿಸುವಾಗ ಅಳೆದು ತೂಗಿ ತೈಲ ಹಾಕಿಸಿಕೊಳ್ಳಬೇಕಾದ ಸ್ಥಿತಿ ಎದುರಾಗಿದೆ.

ಚಿನ್ನಕ್ಕಿಂತಲೂ ತೈಲ ದರ ದುಬಾರಿಯಾಗಿರುವ ಈ ಸಂದರ್ಭದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನಲ್ಲಿ ವ್ಯಕ್ತಿಯೋರ್ವ ಮಂಗಳೂರಿನಿಂದ ಹಾಸನಕ್ಕೆ ಹಾದು ಹೋಗುವ ಸರ್ಕಾರಿ ಸ್ವಾಮ್ಯದ ತೈಲ ಕಂಪೆನಿಯ ಬೃಹತ್ ಡಿಸೇಲ್ ಸಾಗಾಟದ ಪೈಪ್‌ಗೆ ರಂಧ್ರ ಕೊರೆದು ಡಿಸೇಲ್ ಕಳ್ಳತನ ಮಾಡಿರುವ ಘಟನೆ ನಡೆದಿದೆ.

ಬಂಟ್ವಾಳ ತಾಲೂಕಿನ ಅರಳ ಗ್ರಾಮದ ಸೋರ್ನಾಡು ಸಮೀಪದ ಅರ್ಬಿ ಎಂಬಲ್ಲಿ ಘಟನೆ ನಡೆದಿದ್ದು, ಅರ್ಬಿಯ ಐವನ್ ಎಂಬುವವರ ಖಾಸಗಿ ಜಮೀನಿನಲ್ಲಿ ಮಂಗಳೂರಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಪೈಪ್ ಹಾದು ಹೋಗಿದ್ದು, ಡಿಸೇಲ್ ಸಾಗಾಟದ ಪೈಪ್‌ಗೆ ರಂಧ್ರ ಕೊರೆದು ಕನ್ನ ಹಾಕಲಾಗಿದೆ.

ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯು ಕಳುಹಿಸುತ್ತಿರೋ ಡಿಸೇಲ್ ಮತ್ತು ತಲುಪುತ್ತಿರುವ ಡಿಸೇಲ್‌ನಲ್ಲಿ ಭಾರೀ ವ್ಯತ್ಯಾಸ ಕಂಡುಬರುತ್ತಿದ್ದ ಹಿನ್ನಲೆಯಲ್ಲಿ ತಪಾಸಣೆ ಮಾಡಿದಾಗ ಪೈಪ್‌ಗೆ ರಂಧ್ರ ಕೊರೆದು ಕಳ್ಳತನ ಮಾಡುತ್ತಿರುವ ವಿಚಾರ ಬಯಲಾಗಿದೆ.

ವಿಚಾರ ಬೆಳಕಿಗೆ ಬರುತ್ತಿದ್ದಂತೆ ಖಾಸಗಿ ಭೂಮಿಯ ಮಾಲೀಕ ಐವಾನ್ ತಲೆ ಮರೆಸಿಕೊಂಡಿದ್ದಾನೆ. ಪೊಲೀಸರು ಸ್ಥಳಕ್ಕೆ ಬರುತ್ತಿದ್ದಂತೆಯೇ ಮನೆ ಖಾಲಿ ಮಾಡಿ ಪರಾರಿಯಾಗಿದ್ದಾನೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿಗಳು ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಅಧಿಕಾರಿಗಳು ಅರ್ಬಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ 20 ಅಡಿ ಆಳದಲ್ಲಿ ಹಾಕಲಾಗಿದ್ದ ಪೈಪ್‌ಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ.

ಈ ಹಿನ್ನಲೆಯಲ್ಲಿ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಅಧಿಕಾರಿಗಳು ಪೊಲೀಸರ ಸಮಕ್ಷಮದಲ್ಲಿ ಐವಾನ್‌ಗೆ ಸೇರಿದ ಭೂಮಿಯ ರಸ್ತೆಯಲ್ಲಿ ಜೆಸಿಬಿ ಮೂಲಕ ಅಗೆದಾಗ 20 ಅಡಿ ಆಳದಲ್ಲಿ ಪೈಪ್‌ಗೆ ರಂಧ್ರ ಕೊರೆದು, ಬೇರೆ ಪೈಪ್‌ನ್ನು ಅಳವಡಿಸಿ ಡಿಸೇಲ್ ಕಳ್ಳತನ ಮಾಡಿರುವ ವಿಚಾರ ಬೆಳಕಿಗೆ ಬಂದಿದೆ.
ಹಲವಾರು ವರ್ಷಗಳ ಹಿಂದಿನಿಂದಲೂ ಈ ರೀತಿಯ ಡಿಸೇಲ್ ಕಳ್ಳತನ ಮಾಡುತ್ತಿರುವ ಸಾಧ್ಯತೆಗಳು ಕಂಡುಬಂದಿದೆ. 20 ಅಡಿ ಆಳದಲ್ಲಿ ಹಾಸನಕ್ಕೆ ಹಾದು ಹೋಗುವ ಪೈಪ್ ಲೈನ್‌ನ್ನು ಅಗೆದು ಆ ಪೈಪ್‌ಗೆ ಇನ್ನೊಂದು ಪೈಪ್ ಅಳವಡಿಸಿ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಗೇಟ್‌ವಾಲ್ ಸಿಕ್ಕಿಸಿ ಟ್ಯಾಪ್ ಮೂಲಕ ಡಿಸೇಲ್ ಕಳ್ಳತನ ಮಾಡಲಾಗುತ್ತಿತ್ತು. ಸುಮಾರು ಒಂದೂವರೆ ಇಂಚಿನ ಪೈಪ್ ಅಳವಡಿಸಲಾಗಿದ್ದು, ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಪೈಪ್‌ನಲ್ಲಿ ಸುಮಾರು 90,000 ರೂಪಾಯಿ ಮೌಲ್ಯದ ಹಾನಿಗಳಾಗಿವೆ. ತೋಟದಲ್ಲಿ ಈ ಟ್ಯಾಪ್ ಅಳವಡಿಸಿ ವಾಹನಗಳಿಗೆ ಅಲ್ಲಿಯೇ ಡಿಸೇಲ್ ತುಂಬಿ ಮಾರಾಟ ಮಾಡಲಾಗುತ್ತಿತ್ತು. ಇದರ ಹಿಂದೆ ಭಾರೀ ಮಾಫಿಯಾ ತಂಡವಿರುವ ಸಾಧ್ಯತೆಗಳಿವೆ ಎಮದು ಪೊಲೀಸ್ ಪ್ರಾಥಮಿಕ ಮೂಲಗಳು ತಿಳಿಸಿವೆ.

ಮಂಗಳೂರಿನ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ತೈಲ ಸಂಗ್ರಹಕಾರದಿಂದ ಹಾಸನಕ್ಕೆ ಪೈಪ್ ಮೂಲಕ ಡಿಸೇಲ್ ರವಾನೆಯಾಗುತ್ತಿದೆ. ಆದರೆ ಕೆಲ ತಿಂಗಳುಗಳಿಂದ ಕಂಪೆನಿಯಿಂದ ಕಳುಹಿಸಲಾಗುತ್ತಿದ್ದ ಡಿಸೇಲ್‌ಗೂ ಹಾಸನಕ್ಕೆ ತಲುಪುತ್ತಿದ್ದ ಡಿಸೇಲ್ ಅಳತೆಯಲ್ಲಿ ವ್ಯತ್ಯಾಸ ಕಂಡುಬಂದಿದೆ. ಡಿಸೇಲ್ ಸೋರಿಕೆ ಬಗ್ಗೆ ಕಂಪೆನಿ ಅತ್ಯಾಧುನಿಕ ತಂತ್ರಜ್ಞಾನ ಹೊಂದಿದ್ದು, ಎಲ್ಲಿ ಸೋರಿಕೆಯಾಗುತ್ತಿದೆ ಎಂಬುವುದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತದೆ‌. ಅಲ್ಲಲ್ಲಿ ಪೈಪ್‌ಗಳಿಗೆ ಗೇಟ್‌ವಾಲ್ ಹಾಕಿರುವುದರಿಂದ ನಿರ್ದಿಷ್ಟ ಸ್ಥಳವೂ ಗೊತ್ತಾಗಲಿದೆ.

ಈ ಹಿನ್ನಲೆಯಲ್ಲಿ ಬಂಟ್ವಾಳದ ಸೋರ್ನಾಡಿನಲ್ಲಿ ತೈಲ ಸೋರಿಕೆಯಾಗುವುದರ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿದೆ. ಕೂಡಲೇ ಮಂಗಳೂರು ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್‌ಗೆ ದೂರು ನೀಡಿದ ಕಂಪೆನಿ ಅಧಿಕಾರಿಗಳು, ಡಿಸೇಲ್ ಕಳ್ಳತನವನ್ನು ಪತ್ತೆ ಹಚ್ಚಿದ್ದಾರೆ. ಇದರ ಹಿಂದೆ ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಸಿಬ್ಬಂದಿಗಳ ಕೈವಾಡವೂ ಇರುವ ಬಗ್ಗೆ ಸಂಶಯ ವ್ಯಕ್ತವಾಗಿದೆ. ಹಿಂದೂಸ್ತಾನ್ ಪೆಟ್ರೋಲಿಯಂ ಕಂಪೆನಿಯ ಡಿಸೇಲ್ ಬಿಡುವ ಸಂದರ್ಭದಲ್ಲಿ ಕಳ್ಳತನ ನಡೆಸುವವರಿಗೆ ಮಾಹಿತಿ ನೀಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಜೊತೆಗೆ ಪೆಟ್ರೊಲಿಯಂ ಇಲಾಖೆಯ ಅಧಿಕಾರಿಗಳ ಶಾಮೀಲಾತಿಯ ಬಗ್ಗೆಯೂ ಸ್ಥಳೀಯರು ಸಂಶಯ ವ್ಯಕ್ತಪಡಿಸಿದ್ದಾರೆ.

Share and Enjoy !

Shares