ವಿದ್ಯುತ್ ಇಲಾಖೆಯಲ್ಲಿ ಪರಿಸರ ಪ್ರೇಮಿ

Share and Enjoy !

Shares
Listen to this article

ವಿಜಯನಗರ ವಾಣಿ

ಜೆಸ್ಕಾಂ ಮತ್ತು ಕೆ.ಪಿ.ಟಿ.ಸಿ.ಎಲ್ ನಲ್ಲಿ ನೌಕರರಾಗಿದ್ದ ವಿ. ಬಾಬು ಅವರು ಪ್ರಸ್ತುತ ಬಳ್ಳಾರಿ ಜಿಲ್ಲೆಯ ತೋರಣಗಲ್ಲು ಊರಿನಲ್ಲಿ ವಾಸವಾಗಿದ್ದಾರೆ. ಸುಮಾರು ೩೭ ವರ್ಷಗಳ ಕಾಲ ಕೊಟ್ಟೂರು, ಕೂಡ್ಲಿಗಿ, ಬಳ್ಳಾರಿ, ಹೊಸಪೇಟೆ, ಮುನಿರಾಬಾದ್ ಮೊದಲಾದ ಕಡೆಗಳಲ್ಲಿ ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿಯ ವೇಳೆಗೆ ಸಹಾಯಕ ಅಭಿಯಂತರರು ಆಗಿದ್ದರು.

ವಿ. ಬಾಬು ಅವರು ೧೯೯೩ ರಲ್ಲಿ ಕೊಟ್ಟೂರು ಬಳಿಯ ಉಜ್ಜಿನಿಯಲ್ಲಿ ನಡೆದ ಬಳ್ಳಾರಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು. ಅದರ ಪರಿಣಾಮ ಅವರಿಗೆ ಕನ್ನಡ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿಕೊಂಡಿತು. ತದನಂತರ ಸ್ವತಃ ಕವನಗಳನ್ನು ಬರೆಯಲು ಆರಂಭಿಸಿದರು. ಆಗ ‘ಶಿಕ್ಷಣ ಮತ್ತು ಸ್ನೇಹ’ ಎಂಬ ಕವನವನ್ನು ರಾಜ್ಯ ಮಟ್ಟದ ಕವಿ ಗೋಷ್ಟಿಯೊಂದರಲ್ಲಿ ವಾಚಿಸಿ ಜನ ಮೆಚ್ಚುಗೆ ಗಳಿಸಿದರು. ಅಲ್ಲಿಂದ ಅವರು ಹಲವಾರು ಕವನಗಳನ್ನು ಬರೆದು ಕವಿ ಗೋಷ್ಟಿಯಲ್ಲಿ ಭಾಗವಹಿಸುತ್ತಾ ಬಂದಿದ್ದಾರೆ. ಹೀಗಾಗಿ ಅವರೊಬ್ಬ ಕವಿಯೂ ಹೌದು.

ಬಾಬುರವರು ಕಳೆದ ೨೦ ವರ್ಷಗಳಿಂದ ಪರಿಸರ ಸಂರಕ್ಷಣೆಯ ಬಗ್ಗೆ ಆಸಕ್ತಿ ಹೊಂದಿ, ತಮ್ಮದೇ ಆದ ಗೆಳೆಯರ ಬಳಗದೊಂದಿಗೆ ಪರಿಸರ ಸಂರಕ್ಷಣಾ ವೇದಿಕೆಯನ್ನು ಸ್ಥಾಪಿಸಿಕೊಂಡಿದ್ದಾರೆ. ಮತ್ತು ಆಗಾಗ ಸಸಿ ನೆಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಮನೆ ಮನೆಗೆ ಹೋಗಿ ಜನರ ಮನವೊಲಿಸಿ, ಅವರ ಮೂಲಕ ಸಸಿಗಳನ್ನು ನೆಟ್ಟು ಪೋಷಿಸುವ ಕೆಲಸವನ್ನೂ ಮಾಡುತ್ತಿದ್ದಾರೆ. ನಿವೃತ್ತಿಯ ನಂತರ ಹೆಚ್ಚು ಪ್ರಚಾರವಿಲ್ಲದೇ ತಮ್ಮದೇ ಆದ ರೀತಿಯಲ್ಲಿ ತೋರಣಗಲ್ಲು ಪ್ರದೇಶದ ಸುತ್ತ ಮುತ್ತಲು ಪರಿಸರ ಸಂರಕ್ಷಣೆ ಮತ್ತು ಅದರ ಮಹತ್ವ ಕುರಿತು ಜನ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

ಇತ್ತೀಚಿಗೆ ಕೋವಿಡ್-೧೯ ಬಗ್ಗೆಯೂ ಜನರಲ್ಲಿ ಅರಿವು ಮೂಡಿಸುವ ಕಾರ್ಯ ಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಇವರು ಹಲವು ಬಾರಿ ರಕ್ತ ದಾನವನ್ನೂ ಮಾಡಿದ್ದಾರಲ್ಲದೇ, ರಕ್ತದಾನದ ಶಿಬಿರಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಾರೆ.

ಕನ್ನಡ ಸಾಹಿತ್ಯ ಮತ್ತು ಕನ್ನಡ ನಾಡಿನ ಬಗ್ಗೆ ಅಪಾರ ಪ್ರೇಮವನ್ನು ಇಟ್ಟುಕೊಂಡಿದ್ದಾರೆ., ಇವರ ದ್ವಿಚಕ್ರ ವಾಹನದ ಮೇಲೆ ಕನ್ನಡ ಪ್ರೇಮವನ್ನು ಪ್ರದರ್ಶಿಸುವ ಬರಹಗಳನ್ನು ಬರೆಸಿಕೊಂಡಿರುವುದೇ ಅದಕ್ಕೆ ಸಾಕ್ಷಿ. ಇವರನ್ನು ಅನೇಕ ಸಂಘ ಸಂಸ್ಥೆಗಳು ಗೌರವಿಸಿವೆ ಮತ್ತು ಸನ್ಮಾನಿಸಿವೆ.

ವಯಸ್ಸು ೬೫ ದಾಟಿದರೂ ಸದಾ ಕ್ರಿಯಾಶೀಲರಾಗಿದ್ದು, ಪರಿಸರ ಸಂರಕ್ಷಣೆ ಮತ್ತು ಕೋವಿಡ್- ೧೯ ಬಗ್ಗೆ ಜನ ಜಾಗೃತಿ ಮೂಡಿಸುವ ಇವರ ಸಾಮಾಜಿಕ ಕಳಕಳಿ ಮೆಚ್ಚುವಂಥಾದ್ದು.

Share and Enjoy !

Shares