ಕೊರೋನ ಪ್ರಕರಣಗಳ ಏರಿಕೆ ಹಿನ್ನೆಲೆ ಅಮೇರಿಕ ಮಾದರಿಯ ಅಂದಾಜು ಏನು.?

Share and Enjoy !

Shares
Listen to this article

ವಿಜಯನಗರ ವಾಣಿ

ದೇಶದಲ್ಲಿ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳ ಏರಿಕೆ ಮೂರನೇ ಅಲೆ ಎಚ್ಚರಿಕೆ ಗಂಟೆ ಬಾರಿಸಿದೆ. ಫೆಬ್ರವರಿ ನಂತರದಲ್ಲಿ ಇದೀಗ ಕೊರೊನಾ ಸೋಂಕಿನ ಪುನರುತ್ಪತ್ತಿ ದರ ಹಾಗೂ ಪಾಸಿಟಿವಿಟಿ ದರದಲ್ಲಿನ ಹೆಚ್ಚಳ, ಸೋಂಕಿನ ಪ್ರಕರಣಗಳು ಗಣನೀಯವಾಗಿ ಏರಿಕೆಯಾಗುವ ಎಲ್ಲಾ ಲಕ್ಷಣಗಳನ್ನೂ ಸೂಚಿಸುತ್ತಿವೆ.

ಇದರೊಂದಿಗೆ ತಜ್ಞರು ಕೂಡ ಕೇಂದ್ರಕ್ಕೆ ಎಚ್ಚರಿಕೆ ರವಾನಿಸುತ್ತಿದ್ದಾರೆ. ಕೊರೊನಾ ಮೂರನೇ ಅಲೆ ಆಗಸ್ಟ್‌ನಲ್ಲೇ ಆರಂಭವಾಗಲಿದ್ದು, ಅಕ್ಟೋಬರ್ ತಿಂಗಳಿನಲ್ಲಿ ಅತಿ ಹೆಚ್ಚಿನ ಪ್ರಕರಣಗಳು ದಾಖಲಾಗಲಿವೆ ಎಂದು ಈ ಹಿಂದೆಯೇ ಭಾರತದ ಕೆಲವು ತಜ್ಞರು ಅಂದಾಜಿಸಿದ್ದರು.

ಇದೇ ಅಂಶವನ್ನು ಅಮೆರಿಕ ಮಾದರಿ ಕೂಡ ಸೂಚಿಸುತ್ತಿದೆ. ಭಾರತದಲ್ಲಿ ಆಗಸ್ಟ್‌ ಅಂತ್ಯದ ವೇಳೆಗೆ ಕೊರೊನಾ ಪ್ರಕರಣಗಳು ಸಣ್ಣ ಏರಿಕೆಯತ್ತ ಸಾಗಲಿದ್ದು, ನವೆಂಬರ್ ವೇಳೆಗೆ ಉತ್ತುಂಗಕ್ಕೇರಲಿದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಮಾದರಿ ಅಂದಾಜಿಸಿದೆ.

“ಆಗಸ್ಟ್‌ ತಿಂಗಳಿನಲ್ಲಿ ಕೆಲವೇ ದಿನಗಳಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುವ ಸೂಚನೆಯನ್ನು ನಮ್ಮ ಮಾದರಿ ತೋರಿಸುತ್ತಿದೆ. ನವೆಂಬರ್‌ನಲ್ಲಿ ಪ್ರಕರಣಗಳ ಸಂಖ್ಯೆ ಉತ್ತುಂಗಕ್ಕೇರಲಿವೆ. ಆದರೆ ಇದು ನಮ್ಮ ಅನುಸರಣಾ ಕ್ರಮಗಳನ್ನು ಅವಲಂಬಿಸಿವೆ. ನಮ್ಮ ಕ್ರಮ ಹಾಗೂ ಕೊರೊನಾ ನಿಯಮಗಳಿಗೆ ತಕ್ಕಂತೆ ಪ್ರಕರಣಗಳಲ್ಲೂ ಏರಿಳಿತವಾಗಬಹುದು” ಎಂದು ಮಿಚಿಗನ್ ವಿಶ್ವವಿದ್ಯಾಲಯದ ಬಯೋಸ್ಟಾಟಿಸ್ಟಿಕ್‌ನ ಭ್ರಮರ್ ಮುಖರ್ಜಿ ಹೇಳಿದ್ದಾರೆ. ಆಗಸ್ಟ್‌ ತಿಂಗಳಿನಲ್ಲಿ ದೇಶದಲ್ಲಿ ಕೊರೊನಾ ಮೂರನೇ ಅಲೆ ಕಾಣಿಸಿಕೊಳ್ಳಲಿದ್ದು, ದಿನಕ್ಕೆ ಲಕ್ಷಕ್ಕಿಂತ ಕಡಿಮೆ ಪ್ರಕರಣಗಳು ದಾಖಲಾಗಲಿವೆ. ಅತಿ ಕೆಟ್ಟ ಸನ್ನಿವೇಶದಲ್ಲಿ 1,50,000ರವರೆಗೂ ಪ್ರಕರಣಗಳು ದಾಖಲಾಗಲಿವೆ ಎಂದು ಸೋಮವಾರ ಹೈದರಾಬಾದ್ ಹಾಗೂ ಕಾನ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಮಾತುಕುಮಲ್ಲಿ ವಿದ್ಯಾಸಾಗರ್ ಹಾಗೂ ಮಣೀಂದ್ರ ಅಗರ್‌ವಾಲ್ ನೇತೃತ್ವದ ಸಂಶೋಧಕರು ತಿಳಿಸಿದ್ದರು. ಕೊರೊನಾ ಎರಡನೇ ಅಲೆ ಸಮಯದಲ್ಲಿ ಭಾರತದಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ದಿನನಿತ್ಯದ ಕೊರೊನಾ ಪ್ರಕರಣಗಳು ದಾಖಲಾಗಿದ್ದವು ಹಾಗೂ ಆನಂತರ ಇಳಿಕೆಯಾದವು.

ಮೂರನೇ ಅಲೆಯಲ್ಲಿಯೂ ಪ್ರಕರಣಗಳ ಸಂಖ್ಯೆ ಗಣನೀಯವಾಗಿ ಏರಿಕೆಯಾಗಲಿದೆ ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರಿ ನಂತರ ತಗ್ಗಲಿದೆ ಎಂದು ಹೇಳಿದ್ದರು. ಪ್ರಕರಣಗಳ ಏರಿಕೆ ಹಿನ್ನೆಲೆಯಲ್ಲಿ ಕೇರಳ, ಮಹಾರಾಷ್ಟ್ರ, ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ಒಡಿಶಾ, ಅಸ್ಸಾಂ, ಮಿಝೋರಾಂ, ಮೇಘಾಲಯ ಹಾಗೂ ಮಣಿಪುರದಲ್ಲಿ ಕೊರೊನಾ ಪ್ರಕರಣಗಳು ಏರಿಕೆಯಾಗುತ್ತಿದ್ದು, ಈ ರಾಜ್ಯಗಳಲ್ಲಿನ ಕೊರೊನಾ ಪ್ರಕರಣ ಹಾಗೂ ನಿಯಂತ್ರಣ ಕ್ರಮಗಳ ಕುರಿತು ಕೇಂದ್ರ ವಿಶ್ಲೇಷಣೆ ನಡೆಸುತ್ತಿದೆ. ಇದರೊಂದಿಗೆ, ಚೆನ್ನೈ ಮೂಲದ ಇನ್‌ಸ್ಟಿಟ್ಯೂಟ್ ಆಫ್ ಮ್ಯಾಥಮೆಟಿಕಲ್ ಸೈನ್ಸಸ್ ಭಾರತದಲ್ಲಿ ಸೋಂಕಿನ “R” ದರ (Reproduction rate-ಪುನರುತ್ಪತ್ತಿ ದರ) ಕೊರೊನಾ ಮೂರನೇ ಅಲೆ ಕುರಿತು ಎಚ್ಚರಿಕೆ ಗಂಟೆ ಬಾರಿಸುತ್ತಿರುವುದಾಗಿ ತಿಳಿಸಿದೆ.

ಜುಲೈ ತಿಂಗಳಾಂತ್ಯದಲ್ಲಿ ಕೊರೊನಾ ಸೋಂಕಿನ ಪುನರುತ್ಪತ್ತಿ ದರ ಏರಿಕೆಯಾಗಿರುವುದಾಗಿ ತಿಳಿಸಿದೆ. ಈ ಎಲ್ಲಾ ಅಂಶಗಳು ಕೊರೊನಾ ಮೂರನೇ ಅಲೆ ಸೂಚನೆಯನ್ನು ಮುಂದಿಟ್ಟಿದ್ದು, ಜಾಗ್ರತೆ ವಹಿಸಬೇಕಾದ ಅಗತ್ಯವಿದೆ. ಭಾರತದಲ್ಲಿ ಮಂಗಳವಾರ 30,549 ಮಂದಿಗೆ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಒಟ್ಟು ಸೋಂಕಿತ ಪ್ರಕರಣಗಳ ಸಂಖ್ಯೆ 3,17,26,507 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 422 ಮಂದಿ ಸಾವನ್ನಪ್ಪಿದ್ದು, ಸಾವಿನ ಸಂಖ್ಯೆ 4,25,195ಕ್ಕೆ ಏರಿಕೆಯಾಗಿದೆ. ದೇಶದಲ್ಲಿ ಈವರೆಗೂ 3,08,96,354 ಸೋಂಕಿತರು ಗುಣಮುಖರಾಗಿದ್ದಾರೆ. ಕೇರಳದಲ್ಲಿ ಅತಿ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದು, ಪರಿಸ್ಥಿತಿ ಪರಿಶೀಲನೆಗೆ ಕೇಂದ್ರದ ತಂಡ ರಾಜ್ಯಕ್ಕೆ ಭೇಟಿ ನೀಡಿದೆ. ಕೊರೊನಾ ಹೆಚ್ಚಿರುವ ಹತ್ತು ರಾಜ್ಯಗಳಲ್ಲಿ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ.

 

Share and Enjoy !

Shares