ವಿಜಯನಗರ ವಾಣಿ
ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ದಶಕಗಳ ನಂತರ ಸೆಮಿಫೈನಲ್ ತಲುಪಿದ್ದ ಭಾರತದ ಪುರುಷರ ಹಾಕಿ ತಂಡ ಫೈನಲ್ ತಲುಪುವ ಸುವರ್ಣಾವಕಾಶದಿಂದ ವಂಚಿತಗೊಂಡಿತು. ಬೆಲ್ಜಿಯಂ ವಿರುದ್ಧ ನಡೆದ ಸೆಮಿಫೈನಲ್ ಪಂದ್ಯದಲ್ಲಿ ಭಾರತ 2-5 ಗೋಲುಗಳಿಂದ ಸೋಲನುಭವಿಸಿತು. ಪಂದ್ಯದ ಮುಕ್ಕಾಲು ಅವಧಿ ಸಮಬಲದ ಪೈಪೋಟಿ ನೀಡಿದ್ದ ಭಾರತ ತಂಡ ಕೊನೆಯ ಅವಧಿಯಲ್ಲಿ ಎದುರಾಳಿಗಳಿಗೆ ದಿಢೀರ್ ಮೂರು ಗೋಲು ಬಿಟ್ಟುಕೊಟ್ಟು ಸೋಲಪ್ಪಿತು. ಕಳೆದ ಬಾರಿಯ ರಿಯೋ ಒಲಿಂಪಿಕ್ಸ್ನಲ್ಲಿ ಬೆಳ್ಳಿ ಪದಕ ಜಯಿಸಿದ್ದ ಬೆಲ್ಜಿಯಂ ತಂಡ ಈ ಗೆಲುವಿನೊಂದಿಗೆ ಸತತ ಎರಡನೇ ಬಾರಿ ಫೈನಲ್ ತಲುಪಿತು. ಭಾರತ ಈ ಸೆಮಿಫೈನಲ್ ಸೋತರೂ ಅದರ ಕಂಚಿನ ಪದಕದ ಆಸೆ ಜೀವಂತವಾಗಿದೆ.
ಬೆಲ್ಜಿಯಂ ವಿರುದ್ಧದ ಸೆಮಿಫೈನಲ್ ಪಂದ್ಯದಲ್ಲಿ ಭಾರತ ತೀವ್ರ ಪೈಪೋಟಿ ನೀಡಿತು. ಪಂದ್ಯ ಶುರುವಾಗಿ ಎರಡು ನಿಮಿಷ ಆಗುವುದರೊಳಗೆ ಬೆಲ್ಜಿಯಂನ ಲೋಯಿಕ್ ಲುಪೇರ್ಟ್ ಅವರು ಪೆನಾಲ್ಟಿ ಕಾರ್ನರ್ ಅನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದರು. ಆದರೂ ಎದೆಗುಂದದ ಭಾರತ ಕೆಲವೇ ನಿಮಿಷಗಳ ಅಂತರದಲ್ಲಿ ಎರಡು ಗೋಲು ಗಳಿಸಿತು. ಹರ್ಮನ್ ಪ್ರೀತ್ ಸಿಂಗ್ ಮತ್ತು ಮಂದೀಪ್ ಸಿಂಗ್ ಭಾರತದ ಪರ ಗೋಲು ಗಳಿಸಿದರು. ಭಾರತಕ್ಕೆ ಮುನ್ನಡೆಯ ಖುಷಿ ಹೆಚ್ಚು ಹೊತ್ತು ನಿಲ್ಲಲಿಲ್ಲ. ಬೆಲ್ಜಿಯಂ ಮತ್ತೊಂದು ಗೋಲು ಗಳಿಸಿ ಸರಿಸಮ ಮಾಡಿಕೊಂಡಿತು. ಈ ಎಲ್ಲಾ ನಾಲ್ಕು ಗೋಲುಗಳು ಬಂದಿದ್ದು ಮೊದಲ ಕ್ವಾರ್ಟರ್ ಅವಧಿಯಲ್ಲಿ. ಇನ್ನೂ ಎರಡು ಕ್ವಾರ್ಟರ್ ಅವಧಿಯವರೆಗೆ ಯಾವ ಗೋಲು ಬರಲಿಲ್ಲ. ಆದರೆ, ನಾಲ್ಕನೇ ಹಾಗೂ ಕೊನೆಯ ಕ್ವಾರ್ಟರ್ನಲ್ಲಿ ಬೆಲ್ಜಿಯಂ ಪುಟಿದೆದ್ದು ಆಡಿದಂತಿತ್ತು. ಈ ಅವಧಿಯಲ್ಲಿ ಬೆಲ್ಜಿಯಂ 3 ಗೋಲು ಗಳಿಸಿ ಭಾರತದ ಗೆಲುವಿನ ಕನಸನ್ನ ಭಗ್ನಗೊಳಿಸಿತು. ಅಂತಿಮವಾಗಿ ಬೆಲ್ಜಿಯಂ 5-2 ಗೋಲುಗಳಿಂದ ಭಾರತವನ್ನು ಸೋಲಿಸಿ ಫೈನಲ್ಗೆ ಮುನ್ನಡೆಯಿತು.
ಇಂದು ನಡೆಯುವ ಮತ್ತೊಂದು ಸೆಮಿಫೈನಲ್ನಲ್ಲಿ ಆಸ್ಟ್ರೇಲಿಯಾ ಮತ್ತು ಜರ್ಮನಿ ತಂಡಗಳು ಮುಖಾಮುಖಿಯಾಗಲಿವೆ. ಇದರಲ್ಲಿ ಗೆದ್ದ ತಂಡವು ಚಿನ್ನದ ಪದಕಕ್ಕಾಗಿ ಬೆಲ್ಜಿಯಂ ತಂಡವನ್ನ ಎದುರುಗೊಳ್ಳಲಿದೆ. ಸೋತ ತಂಡದ ವಿರುದ್ಧ ಭಾರತ ಕಂಚಿನ ಪದಕಕ್ಕಾಗಿ ಸೆಣಸಲಿದೆ. ಚಿನ್ನ ಮತ್ತು ಕಂಚಿನ ಪದಕಕ್ಕಾಗಿ ಪಂದ್ಯಗಳು ಆ. 3, ನಾಳೆ ನಡೆಯಲಿವೆ. ಇನ್ನು, ಒಲಿಂಪಿಕ್ ಇತಿಹಾಸದಲ್ಲೇ ಮೊದಲ ಬಾರಿಗೆ ಸೆಮಿಫೈನಲ್ ತಲುಪಿರುವ ಭಾರತ ಮಹಿಳಾ ತಂಡ ಕೂಡ ನಾಳೆ ಅರ್ಜೆಂಟೀನಾವನ್ನು ಎದುರಿಸುತ್ತಿದೆ.
ಇವತ್ತು ಒಲಿಂಪಿಕ್ಸ್ ಕ್ರೀಡಾಕೂಟದ 10ನೇ ದಿನವಾಗಿದ್ದು, ಎರಡು ಪದಕಗಳನ್ನ ಮಾತ್ರ ಬುಟ್ಟಿಯಲ್ಲಿ ಹೊಂದಿರುವ ಭಾರತಕ್ಕೆ ಇಂದು ತುಸು ನಿರಾಸೆಯ ದಿನವಾಗಿದೆ. ಹಾಕಿಯ ಸೋಲಿನ ಜೊತೆಗೆ ಮಹಿಳಾ ಜಾವೆಲಿನ್ ಪಟು ಅನ್ನು ರಾಣಿ ನಿರಾಸೆಯ ಪ್ರದರ್ಶನ ನೀಡಿ ಫೈನಲ್ ತಲುಪಲು ವಿಫಲರಾಗಿದ್ದಾರೆ. ಕುಸ್ತಿ ಕ್ರೀಡೆಯಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿರುವ ಭಾರತ ನಿರಾಸೆಯ ಆರಂಭ ಕಂಡಿದೆ. 62 ಕಿಲೋ ವಿಭಾಗದಲ್ಲಿ ಸೋನಮ್ ಮಲಿಕ್ ಮೊದಲ ಸುತ್ತಿನಲ್ಲೇ ಸೋತು ನಿರ್ಗಮಿಸಿದ್ದಾರೆ. ಇನ್ನು, ಮಧ್ಯಾಹ್ನದ ನಂತರ ಪುರುಷರ ಶಾಟ್ ಪುಟ್ ಸ್ಪರ್ಧೆಯಲ್ಲಿ ಭಾರತದ ತಜೀಂದರ್ ಪಾಲ್ ಸಿಂಗ್ ತೂರ್ ಕಣದಲ್ಲಿದ್ದಾರೆ.