ಸಚಿವ ಸಂಪುಟ ವಿಸ್ತರಣೆ ಹಿನ್ನೆಲೆ ಪೂರ್ಣಿಮಾ ಶ್ರೀನಿವಾಸ್‌ಗೆ ಸಚಿವ ಸ್ಥಾನವಿಲ್ಲ ಎಂದು ಬೆಂಬಲಿಗರಿಂದ ಹೆದ್ದಾರಿ ತಡೆದು ಆಕ್ರೋಶ…!

Share and Enjoy !

Shares
Listen to this article

ವಿಜಯನಗರ ವಾಣಿ

ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬುಧವಾರ ಸಂಪುಟ ವಿಸ್ತರಣೆ ಮಾಡಿದರು. 29 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ಹಿರಿಯೂರು ಕ್ಷೇತ್ರದ ಬಿಜೆಪಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಸಚಿವ ಸ್ಥಾನದ ಆಕಾಂಕ್ಷಿಯಾಗಿದ್ದರು.

ಬುಧವಾರದ ತನಕ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಸಂಭವನೀಯ ಸಚಿವರ ಪಟ್ಟಿಯಲ್ಲಿ ಪೂರ್ಣಿಮಾ ಶ್ರೀನಿವಾಸ್ ಹೆಸರಿತ್ತು. ಬುಧವಾರ ಬೆಳಗ್ಗೆ ಸಹ ಶಾಸಕರ ಮನೆಗೆ ಅವರ ಅಭಿಮಾನಿಗಳು ಆಗಮಿಸಿ ಶುಭ ಕೋರಿದ್ದರು. ಆದರೆ, ಪಟ್ಟಿ ಬಿಡುಗಡೆ ಬಳಿಕ ಆಗಿದ್ದೇ ಬೇರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಯಿ ಸಂಪುಟಕ್ಕೆ ಮಹಿಳಾ ಕೋಟಾದಡಿ ಶಶಿಕಲಾ ಜೊಲ್ಲೆ ಸೇರ್ಪಡೆಗೊಂಡಿದ್ದಾರೆ. ಇದರಿಂದಾಗಿ ಪೂರ್ಣಿಮಾ ಶ್ರೀನಿವಾಸ್ ಬೆಂಬಲಿಗರು ಹಾಗೂ ಅಭಿಮಾನಿಗಳು ಆಕ್ರೋಶಗೊಂಡರು. ರಾಷ್ಟ್ರೀಯ ಹೆದ್ದಾರಿ -4 ತಡೆದು ಪ್ರತಿಭಟನೆ ನೆಡೆಸುವ ಮೂಲಕ ಪಕ್ಷದ ನಾಯಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸಂಪುಟ ಸೇರುವವರ ಪಟ್ಟಿಯಲ್ಲಿ ಕೆ. ಪೂರ್ಣಿಮಾ ಶ್ರೀನಿವಾಸ್ ಹೆಸರು ಮೊದಲಿನಿಂದಲೂ ಕೇಳಿ ಬರುತ್ತಿತ್ತು. ಬುಧವಾರ ಕೊನೆಗಳಿಗೆಯಲ್ಲಿ ಇದ್ದಕ್ಕಿದ್ದಂತೆ ಪೂರ್ಣಿಮಾ ಹೆಸರು ಮಾಯವಾಗಿತ್ತು. ಇದನ್ನು ಗಮನಿಸಿದ ಕಾರ್ಯಕರ್ತರು ಚಿತ್ರದುರ್ಗ- ಬೆಂಗಳೂರು, ತುಮಕೂರು- ದಾವಣಗೆರೆ ರಸ್ತೆ ತಡೆದು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ರಾಜ್ಯ ಮತ್ತು ಕೇಂದ್ರ ಸರಕಾರದ ವಿರುದ್ಧ ಧಿಕ್ಕಾರ ಕೂಗಿದರು.

ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಪಕ್ಷದ ವಿರುದ್ಧ ಧಿಕ್ಕಾರ ಕೂಗಿ ಶಾಸಕಿಗೆ ಸಚಿವ ಸಂಪುಟದಲ್ಲಿ ಅವಕಾಶ ನೀಡಬೇಕು ಎಂದು ಪಟ್ಟು ಹಿಡಿದರು.

ಬಿಜೆಪಿ ಯುವ ಮುಖಂಡ ಪಿ. ಕೃಷ್ಣಮೂರ್ತಿ ಮಾತನಾಡಿ, “ಇನ್ನೊಂದು ವಾರದಲ್ಲಿ ಶಾಸಕಿಗೆ ಸಚಿವ ಸ್ಥಾನ ನೀಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯದಾದ್ಯಂತ ಪ್ರತಿಭಟನೆ ಮಾಡಲಾಗುವುದು. ಹಿರಿಯೂರು ವಿಧಾನಸಭಾ ಕ್ಷೇತ್ರದಲ್ಲಿ ಮೊದಲ ಬಾರಿಗೆ ಬಿಜೆಪಿ ಅಧಿಕಾರಕ್ಕೆ ತರುವಲ್ಲಿ ಯಶಸ್ವಿಯಾದ ಶಾಸಕರಿಗೆ ಮಂತ್ರಿ ಸ್ಥಾನ ನೀಡದೆ ಕಡೆಗಣಿಸುವ ಮೂಲಕ ಅವಮಾನ ಮಾಡಿದ್ದಾರೆ” ಎಂದು ಆರೋಪಿಸಿದರು. ಕಳೆದ ಲೋಕಸಭಾ ಚುನಾವಣೆ, ಶಿರಾ ಹಾಗೂ ರಾಜ್ಯದ ಇತರೆ ಕಡೆಗಳಲ್ಲಿ ಉಪಚುನಾವಣೆ ಪ್ರಚಾರಕ್ಕೆ ಶಾಸಕರನ್ನು ಬಳಸಿಕೊಂಡು, ಗೆಲುವು ಪಡೆದು ಅನ್ಯಾಯ ಮಾಡಿದರು. ನಮ್ಮ ಶಾಸಕರನ್ನು ಕೇವಲ ಪ್ರಚಾರಕ್ಕಾಗಿ ಬಳಸಿಕೊಳ್ಳುವ ಭ್ರಷ್ಟ ಬಿಜೆಪಿ ಸರ್ಕಾರಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕ ಪಾಠ ಕಲಿಸದ್ದೇವೆ ಎಂದು ಎಚ್ಚರಿಕೆ ನೀಡಿದರು. ಹಿರಿಯೂರು, ಹೊಸದುರ್ಗ, ಹೊಳಲ್ಕೆರೆ, ಶಿರಾ, ಕೂಡ್ಲಿಗಿ, ಜಗಳೂರು, ಸೇರಿದಂತೆ ಮತ್ತಿತರರ ಕಡೆಗಳಲ್ಲಿ ಗೊಲ್ಲ ಸಮುದಾಯ ನಿರ್ಣಾಯಕ ಪಾತ್ರ ವಹಿಸುತ್ತದೆ.

ಇಂತಹ ಸಮುದಾಯಕ್ಕೆ ಅನ್ಯಾಯ ಮಾಡಲಾಗಿದೆ. ಚುನಾವಣೆಗಿಂತ ಮೊದಲೇ ನಮಗೆ ಮಾತು ಕೊಟ್ಟಿದ್ದರು. ಹಿರಿಯೂರಿನಲ್ಲಿ ಬಿಜೆಪಿ ಗೆದ್ದರೆ ಮಂತ್ರಿ ಸ್ಥಾನ ನೀಡಲಾಗುವುದು ಎಂದು. ಇದೀಗ ಕೊಟ್ಟ ಮಾತಿಗೆ ತಪ್ಪಿ ನಡೆದಿದ್ದಾರೆ ಎಂದು ಆಕ್ರೋಶ ಹೊರ ಹಾಕಿದರು. ರಾಜ್ಯಾದ್ಯಂತ ನಮ್ಮ ಸಮುದಾಯವನ್ನು ಸಂಘಟನೆ ಮಾಡಿಕೊಂಡು ಬರುವ ಚುನಾವಣೆಯಲ್ಲಿ ಬಿಜೆಪಿ ವಿರುದ್ಧ ಸೆಡ್ಡು ಹೊಡೆಯುತ್ತೆವೆ. ಇದಲ್ಲದೆ ರಾಜ್ಯಾದ್ಯಂತ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು. ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ಮಣೆ ಹಾಕಲಾಗಿದೆ. ಮನೆ ಮನೆಗೆ ತೆರಳಿ ಜಾಗೃತಿ ಮೂಡಿಸುವ ಮೂಲಕ ನಮ್ಮ ಶಕ್ತಿ ಪ್ರದರ್ಶನ ಮಾಡುತ್ತೇವೆ ಎಂದರು. ಧರ್ಮಪುರ ಹೋಬಳಿಯಲ್ಲಿ ಸಹ ಬಿಜೆಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಪ್ರತಿಭಟನೆ ನಡೆಸಿದರು. ಬಿಜೆಪಿ ಪ್ರತಿಭಟನೆಯಿಂದಾಗಿ ಒಂದು ಕಿಲೋ ಮೀಟರ್ ದೂರದವರೆಗೂ ವಾಹನಗಳು ಸಾಲುಗಟ್ಟಿ ನಿಂತಿದ್ದವು.

ಪೂರ್ಣಿಮಾ ಶ್ರೀನಿವಾಸ್ ಫೇಸ್ ಬುಕ್ ಪೋಸ್ಟ್;  ಸಚಿವ ಸ್ಥಾನ ಕೈತಪ್ಪಿದ ಬಳಿಕ ಕೆ. ಪೂರ್ಣಿಮಾ ಶ್ರೀನಿವಾಸ್ ಫೇಸ್‌ಬುಕ್‌ ಪೋಸ್ಟ್ ಹಾಕಿದ್ದಾರೆ. ಅದರ ವಿವರ ಹೀಗಿದೆ…. ಎಲ್ಲರಿಗೂ ನಮಸ್ಕಾರ, ಕಳೆದ ವಿಧಾನಪರಿಷತ್ ಚುನಾವಣೆಯಲ್ಲಿ ನಮ್ಮ ಮನೆಯವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಇದ್ದಾಗಲೂ ನಾನು ಪಕ್ಷನಿಷ್ಠೆ, ಪಕ್ಷದ ಸಿದ್ಧಾಂತದ ಅಡಿಯಲ್ಲಿ ಕೆಲಸ ಮಾಡಿ ಶಿರಾ ಬೈ ಎಲೆಕ್ಷನ್ ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಕ್ಷಕ್ಕೆ ತರುವಲ್ಲಿ ಯಶಸ್ವಿಯಾದೆ ಹಾಗೂ ಎಂಎಲ್ಸಿ ಎಲ್ಲೂ ಕೂಡ ನನ್ನ ಪತಿಯ ಪರವಾಗಿ ಪ್ರಚಾರ ಮಾಡಿರಲಿಲ್ಲ, ಕಳೆದ ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಖ್ಯಮಂತ್ರಿಗಳ ಆದೇಶದಂತೆ ಕ್ಷೇತ್ರದಲ್ಲಿ ಓಡಾಡಿ ಗೊಲ್ಲ ಸಮುದಾಯದ ಹೆಚ್ಚು ಮತಗಳನ್ನು ಕೂಡ ಕ್ಷೇತ್ರದಲ್ಲಿ ಪಕ್ಷಕ್ಕೆ ತಂದಿದ್ದೆ. ಮುಖ್ಯವಾಗಿ ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರದಿಂದ ಮಾಜಿ ಪ್ರಧಾನಿಗಳನ್ನು ಸೋಲಿಸಲು ನಮ್ಮ ಸಮುದಾಯದ ಮತಗಳು ಹೆಚ್ಚು ನಿರ್ಣಯ ವಾಗಿದ್ದವು. ಪಕ್ಷವು ಅದನ್ನೆಲ್ಲ ಮರೆತಿದೆ. ಹಲವು ಜಿಲ್ಲೆಯ ಲೋಕಸಭಾ ಚುನಾವಣೆಗಳಲ್ಲಿ ನಮ್ಮ ಸಮುದಾಯದ ಹಾಗೂ ಇತರೆ ಹಿಂದುಳಿದ ಸಮಾಜಗಳನ್ನು ಸಂಘಟನೆ ಮಾಡಿ ಪಕ್ಷಕ್ಕೆ ಹೆಚ್ಚು ಮತಗಳನ್ನು ನೀಡುವಲ್ಲಿ ಯಶಸ್ವಿಯಾಗಿದ್ದೆ. ಎಲ್ಲವನ್ನು ಮರೆತು ಪಕ್ಷ ಈಗ ಜಾಣ ಕುರುಡರಂತೆ ವರ್ತಿಸುತ್ತಿರುವುದು ನೋವುಂಟು ಮಾಡಿದೆ.

ರಾಜ್ಯದಲ್ಲಿ ಗೊಲ್ಲ ಸಮುದಾಯದಿಂದ ಏಕೈಕ ವಿಧಾನಸಭಾ ಜನಪ್ರತಿನಿಧಿಯಾಗಿ ವಿಧಾನಸಭೆ ಪ್ರವೇಶಿಸಿದ್ದ ನಾನು ಎಂದು ಪಕ್ಷ ಬಾಹಿರ ಚಟುವಟಿಕೆಯಲ್ಲಿ ಇರಲಿಲ್ಲ, ಯಾವುದೇ ಹಗರಣ ನನ್ನ ಸುತ್ತಿ ಕೊಂಡಿರಲಿಲ್ಲ. ಇಂದು ಪಕ್ಷ ತೆಗೆದುಕೊಂಡಿರುವ ನಿರ್ಧಾರ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಹಗರಣದಲ್ಲಿ ಸಿಲುಕಿಕೊಂಡಿರುವ ಮಾಜಿ ಸಚಿವರಿಗೆ ಮತ್ತೆ ಸಚಿವ ಸ್ಥಾನ ನೀಡಿ ಒಂದೇ ಮನೇಲಿ ಎರಡು ಮೂರು ಅಧಿಕಾರ ನೀಡಿದೆ. ಯಾವುದೇ ಹಗರಣ ಇಲ್ಲದೆ ಇರುವ ಇನ್ನೊಬ್ಬ ಮಹಿಳೆಗೂ ಸಚಿವ ಸ್ಥಾನ ನೀಡಿದರೆ ಯಾವುದೇ ಬೇಜಾರಿರಲಿಲ್ಲ. ಸ್ವಂತ ಬಲದಿಂದ ಗೆದ್ದಿರುವ ನನಗೂ ಹಾಗೂ ಇನ್ನೊಬ್ಬ ಮಹಿಳಾ ಶಾಸಕಿಯವರಿಗೂ ಇದು ಪಕ್ಷ ಮಾಡುತ್ತಿರುವ ದೊಡ್ಡ ಅವಮಾನ. ಚಿತ್ರದುರ್ಗ ಜಿಲ್ಲೆಯಲ್ಲಿ ಗೂಳಿಹಟ್ಟಿ ಶೇಖರ್, ಚಂದ್ರಪ್ಪರಂತಹ ಹಿರಿಯ ನಾಯಕರು ಮತ್ತು ಆರು ಬಾರಿ ಗೆದ್ದಂತಹ ತಿಪ್ಪಾರೆಡ್ಡಿ ಅವರಿಗಾದರೂ ಸಚಿವ ಸ್ಥಾನ ನೀಡಬಹುದಿತ್ತು. ಇದು ಪಕ್ಷವು ನಮ್ಮ ಜಿಲ್ಲೆಗೆ ಮಾಡುತ್ತಿರುವ ಅವಮಾನ. ವಿಧಾನಸಭೆ, ಲೋಕಸಭೆ ಚುನಾವಣೆಗಳಲ್ಲಿ ರಾಜ್ಯದ ಗೊಲ್ಲ ಸಮುದಾಯವು 80 ರಷ್ಟು ಭಾಗವು ಬಿಜೆಪಿಗೆ ಮತ ನೀಡಿದ ಗೊಲ್ಲ ಸಮುದಾಯವನ್ನು ಪಕ್ಷ ಮರೆಯಬಾರದಿತ್ತು. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಗೊಲ್ಲ ಸಮುದಾಯದ ಮತಗಳಿದ್ದು, ಒಂದು ಸ್ಥಾನ ನೀಡದೇ ಇರುವುದು ತುಂಬಾ ನೋವುಂಟು ಮಾಡಿದೆ.

Share and Enjoy !

Shares