ಸಿರುಗುಪ್ಪ :ನೂತನ ನಗರಾಯುಕ್ತರಿಗೆ ವಿಪ್ರ ಸಮಾಜದವರಿಂದ ಸನ್ಮಾನ

Share and Enjoy !

Shares
Listen to this article

ವಿಜಯನಗರ ವಾಣಿ ಸುದ್ದಿ ಬಳ್ಳಾರಿ

ಸಿರುಗುಪ್ಪ: ನಗರದ ಶ್ರೀ ವೇಣುಗೋಪಾಲ ಮತ್ತು ಶ್ರೀ ರಾಘವೇಂದ್ರ ಸ್ವಾಮಿಗಳ ದೇವಸ್ಥಾನದ ಸಭಾಂಗಣದಲ್ಲಿ ನಗರಸಭೆಗೆ ನೂತನವಾಗಿ ಪೌರಾಯುಕ್ತರಾಗಿ ಪದಗ್ರಹಣ ಮಾಡಿರುವ ರಾಘವೇಂದ್ರ ಗುರು ಇವರನ್ನು ಗುರುವಾರ ಸಂಜೆ ಆಹ್ವಾನಿಸಿ ಸನ್ಮಾನಿಸಲಾಯಿತು. 

ನೂತನ ಆಯುಕ್ತರೊಂದಿಗೆ ನಗರದ ಇಂಜಿನಿಯರ್ ವೃತ್ತಿ ನಿರತ ಹನುಮಂತರಾವು ವೇದಿಕೆ ಹಂಚಿಕೊಂಡರು.

ನಗರದ ವಾದಿರಾಜ ಬ್ರಾಹ್ಮಣ ಸಂಘ, ವಿಪ್ರ ಸಮಾಜ, ಶ್ರೀ ವೇಣುಗೋಪಾಲ ಸ್ವಾಮಿ ಸತ್ಸಂಗಗಳ ಪದಾಧಿಕಾರಿಗಳು ನೂತನ ಪೌರಾಯುಕ್ತ ರಾಘವೇಂದ್ರ ಗುರು ಇವರಿಗೆ 

ಶಾಲು ಹೊದಿಸಿ, ಪುಶ್ಪಮಾಲೆ ಹಾಕಿ, ಫಲ ಮತ್ತು ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ನಂತರ ಶ್ರೀನಿವಾಸ ಜೋಯಿಸ್, ಸಂಜಯಾಚಾರ್, ರವಿ ದೇಸಾಯಿ, ರಘುನಾಥಾಚಾರ್, ಪವನ ದೇಸಾಯಿ, ವಾದಿರಾಜ  ಸೇರಿದಂತೆ ಅನೇಕ ವಿಪ್ರರು ಆಯುಕ್ತರನ್ನು ಸನ್ಮಾನಿಸಿದರು.

ಈ ವೇಳೆ ತಮ್ಮ ನಿರೂಪಣೆಯಲ್ಲಿ ಖ್ಯಾತ ಹಾಸ್ಯ ಕಲಾವಿದ ಹಾಗೂ ಶಿಕ್ಷಕ ಜೆ. ನರಸಿಂಹ ಮೂರ್ತಿ ಮಾತನಾಡಿ ಇತ್ತೀಚಿನ ದಿನಗಳಲ್ಲಿ ವಿಪ್ರರು ಸರ್ಕಾರಿ ಸೇವೆಗೆ ಸೇರುವುದು ಅಪರೂಪವಾಗುತ್ತಿದೆ. ಆದರೆ ಮೂಲತಃ ಬಳ್ಳಾರಿಯವರೇ ಆದ ಇವರು ಬಳ್ಳಾರಿಯಲ್ಲಿ ವೃತ್ತಿ ಪ್ರಾರಂಭಿಸಿ ಸಂಡೂರು ಸೇರಿದಂತೆ  ಅನೇಕ ಕಡೆಗಳಲ್ಲಿ ಕರ್ತವ್ಯ ನಿರ್ವಹಿಸಿ ಬಳ್ಳಾರಿ ನಗರಸಭೆಯಲ್ಲಿ ಹೆಚ್ಚಿನ ಸೇವೆ ನೀಡಿದ್ದಾರೆ. ಈಗ ಸಿರುಗುಪ್ಪದಲ್ಲಿಯೂ ಇವರ ಸೇವೆ ಮುಂದುವರೆಯಲಿ. ಕರ್ತವ್ಯದಲ್ಲಿ ಯಾವುದೇ ಚ್ಯತಿ ಬಾರದಂತಿರಲಿ ಎಂದು ದೇವರ ಹೆಸರನಲ್ಲಿ ಶುಭವನ್ನು ಆಶಿಸಿದರು.

ನೂತನ ನಗರಾಯುಕ್ತ ರಾಘವೇಂದ್ರ ಗುರು ಗೌರವ ಸಮರ್ಪಣೆ ಸ್ವೀಕರಿಸಿದ ನಂತರ ಮಾತನಾಡಿ ಸರ್ಕಾರಿ ಕೆಲಸಗಳಲ್ಲಿ ವರ್ಗಾವಣೆ ಅನಿವಾರ್ಯ, ಯಾವುದೇ ನೀರೀಕ್ಷೆಗಳನ್ನು ಮಾಡದೆ ಕಾನೂನು ಚೌಕಟ್ಟಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ನನಗೆ ತೃಪ್ತಿ ತಂದಿದೆ. ಸರ್ಕಾರದ ಮೂಲಕ ವಿಪ್ರ ಸಮಾಜಕ್ಕೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೊರಕಿಸಿ ಕೊಡುತ್ತೇನೆ. ನಿವೇಲ್ಲರೂ ನನ್ನನ್ನು ಈ ದೇವಸ್ಥಾನ ಪ್ರಾಂಗಣಕ್ಕೆ ಆಹ್ವಾನಿಸಿ ದೇವರ ಆಶೀರ್ವಾದ ಮತ್ತು ನಿಮ್ಮಗಳ ಪ್ರೀತಿ ವಿಶ್ವಾಸ ತೋರಿಸಿರುತ್ತೀರಿ. ನನ್ನ ಪಾಲಿನ ಕರ್ತವ್ಯ ನಾನು ಮಾಡುತ್ತೇನೆ. ತಮ್ಮ ಸಹಕಾರವೂ ನನಗೆ ಮುಖ್ಯ ಎಂದರು.

ವಿಪ್ರ ರಾಘವೇಂದ್ರ ಮಾತನಾಡಿ ನಮ್ಮ ಊರಿಗೆ ನಮ್ಮ ವಿಪ್ರ ಸಮಾಜದ ಒಳ್ಳೆಯ ಆಡಳಿತ ನೀಡುವ ಅಧಿಕಾರಿ ದೊರೆತಂತಾಗಿದೆ. ನಾವು ಯಾವುದೇ ರಾಜಕೀಯ ಪಕ್ಷಗಳ ಒತ್ತಡ ಹೇರದೆ ಅವರ ಪಾಲಿನ ಕರ್ತವ್ಯ ಮಾಡಲು ನಾವೆಲ್ಲಾ ಸಹಕರಿಸೋಣವೆಂದು ತಮ್ಮ ಅನಿಸಿಕೆ ವ್ಯಕ್ತ ಪಡಿಸಿದರು.

ಶಿಕ್ಷಕ ಪದ್ಮನಾಭರಾವ್ ವಂದನಾರ್ಪಣೆ ನಡೆಸಿಕೊಟ್ಟರು. ವಿಪ್ರ ಸಮಾಜದ ವಿವಿಧ ಸಂಘಗಳ ಪದಾಧಿಕಾರಿಗಳು ಮತ್ತು ಸಮಾಜದ ಹಿರಿಯರು ಹಾಗೂ ಮಾತೆಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

Share and Enjoy !

Shares