ವಿಜಯನಗರ ವಾಣಿ
ಕರ್ನಾಟಕ ಸೇರಿದಂತೆ ವಿವಿಧೆಡೆ ಕೊರೊನಾ ಸೋಂಕಿತರ ಸಂಖ್ಯೆ ಮತ್ತೆ ಏರುಗತಿಯಲ್ಲಿ ಸಾಗಲಾರಂಭಿಸಿದೆ. ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಹಾಗೂ ಇನ್ನೂ ಕೆಲ ಜಿಲ್ಲೆಗಳಲ್ಲಿ ಕೊರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಸೋಂಕು ನಿಯಂತ್ರಣಕ್ಕೆ ಕಠಿಣ ನಿಯಮಾವಳಿಗಳನ್ನು ಜಾರಿ ಮಾಡುವಂತೆ ತಾಂತ್ರಿಕ ಸಲಹಾ ಸಮಿತಿ ಶಿಫಾರಸು ಮಾಡಿದೆ. ಇದೇ ವಿಚಾರವಾಗಿ ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ಸಭೆ ಕೂಡಾ ನಡೆಯುತ್ತಿದ್ದು, ಮೂರನೇ ಅಲೆಯಿಂದ ರಾಜ್ಯವನ್ನು ರಕ್ಷಿಸಲು ಒಂದಷ್ಟು ಬಿಗಿ ಕ್ರಮಗಳನ್ನು ಜಾರಿಗೊಳಿಸುವ ಸಾಧ್ಯತೆ ಇದೆ. ಏತನ್ಮಧ್ಯೆ, ತಾಂತ್ರಿಕ ಸಲಹಾ ಸಮಿತಿ ಪ್ರಸ್ತಾಪಿಸಿರುವ ಅಂಶಗಳು ಇಂತಿವೆ.
ಕೊರೊನಾ ಸೋಂಕಿತರ ಸಂಖ್ಯೆ ಇದೇ ರೀತಿ ಹೆಚ್ಚಳವಾಗುತ್ತಿದ್ದಲ್ಲಿ ಮತ್ತೆ ಕಠಿಣ ಕ್ರಮ ಜಾರಿ ಮಾಡುವುದು ಅನಿವಾರ್ಯವಿದ್ದು, ಬೆಳಗ್ಗೆ 6ರಿಂದ ಸಂಜೆ 6ರವರೆಗೆ ಮಾತ್ರ ಬಸ್ಗಳ ಸಂಚಾರಕ್ಕೆ ಅವಕಾಶ ನೀಡಬೇಕು. ಸಂಜೆ 7 ಗಂಟೆಯಿಂದ ಬೆಳಗ್ಗೆ 6 ಗಂಟೆವರೆಗೂ ನೈಟ್ ಕರ್ಫ್ಯೂ ಜಾರಿ ಮಾಡಬೇಕು. ಶುಕ್ರವಾರ ಸಂಜೆ 7 ಗಂಟೆಯಿಂದ ಸೋಮವಾರ ಬೆಳಗ್ಗೆ 6 ಗಂಟೆ ತನಕ ವೀಕೆಂಡ್ ಕರ್ಫ್ಯೂ ಪಾಲನೆಯಾಗಬೇಕು. ಶನಿವಾರ ಭಾನುವಾರ ಎರಡು ದಿನವೂ ಸಂಪೂರ್ಣ ಲಾಕ್ಡೌನ್ ಅತ್ಯಗತ್ಯ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಕೊರೊನಾ ಮೂರನೇ ಅಲೆಯ ಆತಂಕದ ಕಾರಣ ಕಠಿಣ ನಿಯಮಾವಳಿಗಳನ್ನು ಜಾರಿ ಮಾಡಲು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸಭೆಯಲ್ಲೂ ಇಂದು ಚರ್ಚೆಯಾಗುತ್ತಿದ್ದು, ಜಿಲ್ಲೆಗಳಲ್ಲಿ ಕೊರೊನಾ ಪರಿಸ್ಥಿತಿ ನಿಭಾಯಿಸುವ ಸಲುವಾಗಿ ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ದರ ಇರುವ ಜಿಲ್ಲೆಗಳ ಪರಿಸ್ಥಿತಿ ಅವಲೋಕಿಸಲಾಗುವುದು. ಕೇರಳ, ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸುತ್ತಿರುವ ಜನರ ಬಗ್ಗೆ ಕ್ರಮ ಕೈಗೊಳ್ಳುವ ಕುರಿತು ಚರ್ಚೆ ಮಾಡಲಾಗುವುದು. 3ನೇ ಅಲೆಗೆ ಅಗತ್ಯ ಸಿದ್ಧತೆ ಕುರಿತು, ಮಕ್ಕಳಿಗಾಗಿ ವಿಶೇಷ ಕೊವಿಡ್ ಕೇರ್ ಪ್ರಾರಂಭ ಕುರಿತು ಚಿಂತಿಸಲಾಗುವುದು. ರಾಜ್ಯಾದ್ಯಂತ ಲಸಿಕೆ ಅಭಿಯಾನದ ಪ್ರಗತಿ ಕುರಿತು, ಲಸಿಕೆ, ಔಷಧಿ ಅಭಾವದ ಬಗ್ಗೆ ಹಾಗೂ ಈಗ ನೀಡಿರುವ ವಿನಾಯಿತಿಗಳನ್ನ ಕಡಿತ ಮಾಡುವ ಕುರಿತು ಯೋಜನೆ ರೂಪಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
3ನೇ ಅಲೆ ತಡೆಗೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆಯ ಕ್ರಮಗಳಲ್ಲಿ ಬಾರ್, ಪಬ್, ಕೈಗಾರಿಕೆಗಳು, ದೇವಾಲಯ, ಮದುವೆ, ಮಾರುಕಟ್ಟೆ ಸೇರಿದಂತೆ ವಿವಿಧ ವಲಯಗಳಲ್ಲಿ ಕೊಟ್ಟಿರುವ ವಿನಾಯತಿ ಕಡಿತ ಮಾಡುವ ಬಗ್ಗೆ ಚರ್ಚೆ ಸಾಧ್ಯತೆ ಇದ್ದು, ಸಾರಿಗೆ ವಿನಾಯತಿ, ಅಂತರ್ ರಾಜ್ಯ, ಅಂತರ್ ಜಿಲ್ಲೆ ಓಡಾಟಗಳ ಮೇಲೆ ಮತ್ತಷ್ಟು ನಿಗಾ ಇಡುವ ಬಗ್ಗೆಯೂ ಚರ್ಚೆಯಾಗಲಿದೆ. ಕೊವಿಡ್ ಟೆಸ್ಟ್ ಹೆಚ್ಚಳ, ಕೊವಿಡ್ ಕೇರ್ ಸೆಂಟರ್ಗಳ ಸಿದ್ದತೆ ಬಗ್ಗೆ ಸಭೆಯಲ್ಲಿ ಚರ್ಚೆಯಾಗಲಿದೆ ಎನ್ನಲಾಗಿದೆ.
ರಾಜ್ಯದ 6 ಜಿಲ್ಲೆಗಳಲ್ಲಿ ಕೊವಿಡ್ ಪಾಸಿಟಿವಿ ದರ ಹೆಚ್ಚಿದೆ. ದಕ್ಷಿಣ ಕನ್ನಡ, ಕೊಡಗು, ಉಡುಪಿ, ಹಾಸನ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಶೇ.2ಕ್ಕಿಂತ ಹೆಚ್ಚು ಪಾಸಿಟಿವಿಟಿ ಪ್ರಮಾಣವಿದ್ದು, ಕಳೆದ 7 ದಿನದಿಂದ ಕೊವಿಡ್ ಪಾಸಿಟಿವಿಟಿ ದರ ಹೆಚ್ಚಳವಾಗಿರುವುದು ಆತಂಕಕಾರಿ ಬೆಳವಣಿಗೆ. ಹೀಗಾಗಿ ಕಠಿಣ ಕ್ರಮ ಜಾರಿ ಮಾಡಲೇಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಅಭಿಪ್ರಾಯ ವ್ಯಕ್ತಪಡಿಸಿದೆ.