ಹುಟ್ಟುಹಬ್ಬದ ದಿನವೇ ರಾಜಕೀಯಕ್ಕೆ ವಿದಾಯ ಹೇಳಿದ ಸಂಸದ ವಿ. ಶ್ರೀನಿವಾಸ ಪ್ರಸಾದ್.!

Share and Enjoy !

Shares
Listen to this article

ವಿಜಯನಗರ ವಾಣಿ

ಬಿಜೆಪಿ ಹಿರಿಯ ರಾಜಕಾರಣಿ,ಮಾಜಿ ಸಚಿವ, ಚಾಮರಾಜನಗರ ಸಂಸದ ವಿ ಶ್ರೀನಿವಾಸ ಪ್ರಸಾದ್  ಇಂದು ರಾಜಕೀಯಕ್ಕೆ ವಿದಾಯ ಘೋಷಿಸಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಪಕ್ಷದ ಜೊತೆಯಲ್ಲಿ ಗುರುತಿಸಿಕೊಂಡಿದ್ದ ಶ್ರೀನಿವಾಸ್‌ ಪ್ರಸಾದ್‌ ಸದ್ಯ ಬಿಜೆಪಿ ಸಂಸದರಾಗಿದ್ದಾರೆ. ಇದುವರೆಗಿನ ರಾಜಕೀಯ ಜೀವನದ ಬಗ್ಗೆ ನನಗೆ ತೃಪ್ತಿ ಇದೆ, ಸದ್ಯ ಚುನಾವಣಾ ರಾಜಕಾರಣ ನನಗೆ ಸಾಕಾಗಿದೆ. ಇನ್ಮುಂದೆ ಚುನಾವಣೆಗೆ ನಿಲ್ಲುವುದಿಲ್ಲ ಎಂದು ಘೋಷಿಸಿದ್ದಾರೆ. ಈಗ ಇವರು ಚಾಮರಾಜನಗರ ಲೋಕಸಭಾ ಕ್ಷೇತ್ರದ ಸಂಸದರಾಗಿದ್ದಾರೆ. ತಮ್ಮ ಹುಟ್ಟು ಹಬ್ಬದ ದಿನವೇ ರಾಜಕೀಯಕ್ಕೆ ವಿದಾಯ ಹೇಳಿದ್ದಾರೆ. ನಾನು ಇದುವರೆಗೂ 14 ಚುನಾವಣೆ ಎದುರಿಸಿದ್ದೇನೆ. 12ನೇ ಚುನಾವಣೆಯ ಸಮಯದಲ್ಲೇ ನನಗೆ ಸಾಕು ಎನಿಸಿತ್ತು. ಕಂದಾಯ ಸಚಿವನಾಗಿ ಅವಧಿ ಪೂರ್ಣಗೊಳಿಸಲು ಎರಡು ವರ್ಷ ಅವಕಾಶ ನೀಡಿದ್ದರೆ ಸಾಕಿತ್ತು. ಅದೇ ನನ್ನ ಕೊನೆಯ ಚುನಾವಣೆ ಆಗುತ್ತಿತ್ತು. ಆದರೆ ಅನಿವಾರ್ಯವಾಗಿ ಮತ್ತೆರಡು ಚುನಾವಣೆ ಎದುರಿಸಬೇಕಾಯ್ತು. ಇನ್ಮುಂದೆ ನಾನು ಯಾವ ಚುನಾವಣೆಗೆಗೂ ನಿಲ್ಲುವುದಿಲ್ಲ ಎಂದು ಶ್ರೀನಿವಾಸ ಪ್ರಸಾದ್​ ಹೇಳಿದ್ದಾರೆ.

ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎನ್ನುವ ತನ್ನ ಮಾತಿಗೆ ಬದ್ಧನಾಗಿರುತ್ತೇನೆ ಎಂದಿದ್ದಾರೆ ಶ್ರೀನಿವಾಸ್ ಪ್ರಸಾದ್. ಸಕ್ರಿಯ ರಾಜಕಾರಣಿಯಾಗಿರುವ ಇವರು ಅಪಾರ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ವಿಶೇಷವಾಗಿ ಮೈಸೂರು ಭಾಗದಲ್ಲಿ ಪ್ರಭಾವಿ ರಾಜಕಾರಣಿಯಾಗಿ ವಿ ಶ್ರೀನಿವಾಸ್ ಪ್ರಸಾದ್ ಗುರುತಿಸಿಕೊಂಡಿದ್ದಾರೆ.

ನಿವೃತ್ತಿ ಬಗ್ಗೆ ನನಗೆ ಏನೂ ಬೇಸರವಿಲ್ಲ ಎಂದಿರುವ ಶ್ರೀನಿವಾಸ್ ಪ್ರಸಾದ್ ಸಂಬಂಧ ಈ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಜೊತೆ ಹಳಸಿತ್ತು. ಆನಂತರವಷ್ಟೇ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದರು. ಚಾಮರಾಜನಗರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಿ ಗೆದ್ದಿದ್ದರು.

ಈಗ ನಿವೃತ್ತಿಯ ನಿರ್ಧಾರದಿಂದ ಎಂದಿಗೂ ಹಿಂದೆ ಸರಿಯುವುದಿಲ್ಲ ಎಂದಿರುವ ಶ್ರೀನಿವಾಸ್ ಪ್ರಸಾದ್ ನಾನು ಆತ್ಮತೃಪ್ತಿಯಿಂದ ನಿವೃತ್ತನಾಗುತ್ತಿದ್ದೇನೆ ಎಂದಿದ್ದಾರೆ. 50 ವರ್ಷಗಳ ತನ್ನ ರಾಜಕೀಯ ಬದುಕಿನ ಕುರಿತು ಪುಸ್ತಕವೊಂದು ಶೀಘ್ರದಲ್ಲೇ ಬಿಡುಗಡೆಯಾಗಲಿದ್ದು ಅದರಲ್ಲಿ ತನ್ನ ರಾಜಕೀಯ ಜೀವನದ ಎಲ್ಲಾ ಏಳೂ ಬೀಳುಗಳ ಕುರಿತು ಬರೆದಿದ್ದೇನೆ ಎಂದಿದ್ದಾರೆ.

Share and Enjoy !

Shares