ವಿಜಯನಗರ ವಾಣಿ
ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ರತ್ನ ಪ್ರಶಸ್ತಿ ಯಾಗಿ ಕೊಡಲ್ಪಡುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ಘೋಷಿಸಿದರು. ಟ್ವೀಟ್ ಮಾಡಿರುವ ಅವರು, ಖೇಲ್ ರತ್ನ ಪ್ರಶಸ್ತಿಗೆ, ಭಾರತೀಯ ಹಾಕಿ ದಿಗ್ಗಜ ಮೇಜರ್ ಧ್ಯಾನ್ ಚಂದ್ ಹೆಸರಿಡುವಂತೆ ಅನೇಕ ನಾಗರಿಕರಿಂದ ನನಗೆ ಮನವಿ ಬಂದಿತ್ತು. ಆ ಕೋರಿಕೆಗಳನ್ನು ಪುರಸ್ಕರಿಸಲಾಗುವುದು. ಖೇಲ್ ರತ್ನ ಪ್ರಶಸ್ತಿಗೆ ಧ್ಯಾನ್ ಚಂದ್ ಹೆಸರಿಡಲಾಗುವುದು. ಇನ್ನು ಮುಂದೆ ಮೇಜರ್ ಧ್ಯಾನ್ ಚಂದ್ ಖೇಲ್ ರತ್ನ ಎಂಬ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತದೆ. ಹಾಗೇ ಇಂಥದ್ದೊಂದು ವಿಚಾರವನ್ನು ಹಂಚಿಕೊಂಡ ಪ್ರತಿಯೊಬ್ಬರಿಗೂ ಧನ್ಯವಾದ ಎಂದು ಹೇಳಿದ್ದಾರೆ.
ರಾಜೀವ್ ಗಾಂಧಿ ಖೇಲ್ರತ್ನ ಪ್ರಶಸ್ತಿ ಕ್ರೀಡಾಕ್ಷೇತ್ರದ ಅತ್ಯುನ್ನತ ಗೌರವವಾಗಿದೆ. ಇಲ್ಲಿ ಸಾಧನೆ ಮಾಡಿದವರಿಗೆ ಈ ಪ್ರಶಸ್ತಿ ನೀಡಿ ಪುರಸ್ಕರಿಸಲಾಗುತ್ತದೆ. ಹಾಕಿ ದಿಗ್ಗಜ ಸರ್ದಾರ್ ಸಿಂಗ್, ಟೆನ್ನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ, ಕ್ರಿಕೆಟರ್ಸ್ಗಳಾದ ಮಹೇಂದ್ರ ಸಿಂಗ್ ಧೋನಿ, ಸಚಿನ್ ತೆಂಡೂಲ್ಕರ್, ವಿರಾಟ್ ಕೊಹ್ಲಿ ಮತ್ತಿತರರು ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಇಷ್ಟು ದಿನಗಳಿಂದ ಇದು ರಾಜೀವ್ ಗಾಂಧಿ ಖೇಲ್ ರತ್ನ ಪ್ರಶಸ್ತಿ ಎಂದು ಕೊಡಲ್ಪಡುತ್ತಿತ್ತು. ಆದರೀಗ ರಾಜೀವ್ ಗಾಂಧಿ ಹೆಸರನ್ನು ತೆಗೆದು, ಹಾಕಿ ದಿಗ್ಗಜ ಧ್ಯಾನ್ ಚಂದ್ ನಾಮಕರಣ ಮಾಡಲಾಗಿದೆ.
ಧ್ಯಾನ್ಚಂದ್ ಅವರು ಭಾರತದ ಅಗ್ರಗಣ್ಯ ಕ್ರೀಡಾಪಟುಗಳಲ್ಲಿಒಬ್ಬರು. ಅವರು ಭಾರತಕ್ಕೆ ಗೌರವ, ಹೆಮ್ಮೆಯನ್ನು ತಂದಿದ್ದಾರೆ. ನಮ್ಮ ರಾಷ್ಟ್ರದ ಕ್ರೀಡಾಕ್ಷೇತ್ರದ ಅತ್ಯುನ್ನತ ಪ್ರಶಸ್ತಿಯಾದ ಖೇಲ್ ರತ್ನಕ್ಕೆ ಅವರ ಹೆಸರನ್ನಿಡುವುದು ತುಂಬ ಸರಿಯಾದ ಕೆಲಸ. ಹೀಗೊಂದು ದೃಷ್ಟಿಕೋನವನ್ನು ನನಗೆ ತಿಳಿಸಿದವರಿಗೆ ಕೃತಜ್ಞತೆಗಳು ಎಂದು ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.
ಕೊನೆಗೂ ರಾಷ್ಟ್ರದ ಹಾಕಿ ದಂತಕಥೆಗೆ ನಿಜವಾದ ಗೌರವ ಸಲ್ಲುತ್ತಿದೆ.