75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವ ಅರ್ಥಪೂರ್ಣ ಆಚರಣೆಗೆ ನಿರ್ಧಾರ:ಅಪರ ಜಿಲ್ಲಾಧಿಕಾರಿ ಮಂಜುನಾಥ

Share and Enjoy !

Shares
Listen to this article

ವಿಜಯನಗರ ವಾಣಿ

ಕೋವಿಡ್ ಮಾರ್ಗಸೂಚಿಗಳನ್ನು ಅನುಸರಿಸಿಕೊಂಡು 75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಅತ್ಯಂತ ಅರ್ಥಪೂರ್ಣವಾಗಿ ಆ.15ರಂದು ಆಚರಿಸಲು ಜಿಲ್ಲಾಡಳಿತ ನಿರ್ಧರಿಸಿದೆ. ಸ್ವಾತಂತ್ರ್ಯ ದಿನ ಆಚರಣೆಗೆ ಜತೆಗೆ ಸ್ವಾತಂತ್ರ್ಯ ಹೋರಾಟದ ಇತಿಹಾಸವನ್ನು ನೆನಪಿಸುವ ದೃಷ್ಟಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಸಹ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಸಂಜೆ ನಡೆದ ಸಭೆಯಲ್ಲಿ ತೀರ್ಮಾನಿಸಲಾಗಿದೆ.

ಸ್ವಾತಂತ್ರ್ಯ ದಿನವನ್ನು ಅರ್ಥಪೂರ್ಣವಾಗಿ ಆಚರಿಸುವ ನಿಟ್ಟಿನಲ್ಲಿ ವಿವಿಧ ಇಲಾಖೆಗಳಿಗೆ ವಹಿಸಲಾದ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಬೇಕು;ಯಾವುದೇ ರೀತಿಯ ನಿರ್ಲಕ್ಷ್ಯ;ಉದಾಸೀನತೆ ತೋರದಂತೆ ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಆ.15ರಂದು ಬೆಳಗ್ಗೆ 9ಕ್ಕೆ ಜಿಲ್ಲಾ ಕ್ರೀಡಾಂಗಣದಲ್ಲಿ ಏರ್ಪಡಿಸಿರುವ ಕಾರ್ಯಕ್ರಮದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಧ್ವಜಾರೋಹಣ ನೆರವೇರಿಸಿ ಪರೇಡ್ ವೀಕ್ಷಿಸಿ ಪಥ ಸಂಚಲನ ತಂಡಗಳಿಂದ ಗೌರವ ಸ್ವೀಕರಿಸಿ ಸ್ವಾತಂತ್ರ್ಯೋತ್ಸವ ಸಂದೇಶ ನೀಡಲಿದ್ದಾರೆ. ಕೋವಿಡ್ ನಿಯಂತ್ರಣದಲ್ಲಿ ಅವಿರತ ಶ್ರಮವಹಿಸಿದ ಕೋವಿಡ್ ವಾರಿಯರ್ಸ್‍ಗಳಿಗೆ ಇದೇ ಸಂದರ್ಭದಲ್ಲಿ ಸನ್ಮಾನಿಸಲಾಗುತ್ತದೆ. ಇದಕ್ಕೂ ಮುಂಚೆ ಜಿಲ್ಲಾ ಉಸ್ತುವಾರಿ ಸಚಿವರು ಎಚ್.ಆರ್.ಗವಿಯಪ್ಪ ವೃತ್ತದಲ್ಲಿರುವ 150 ಅಡಿ ಎತ್ತರದ ರಾಷ್ಟ್ರಧ್ವಜದ ಧ್ವಜಾರೋಹಣ ನೆರವೇರಿಸಲಿದ್ದಾರೆ ಹಾಗೂ ವಿಮ್ಸ್ ಆವರಣದಲ್ಲಿರುವ ಮಹಾತ್ಮಗಾಂಧೀಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಲಿದ್ದಾರೆ ಎಂದು ಅವರು ವಿವರಿಸಿದರು.

ಸ್ವಾತಂತ್ರ್ಯ ದಿನಾಚರಣೆ ಅಚ್ಚುಕಟ್ಟಾಗಿ ಸಾಗುವ ನಿಟ್ಟಿನಲ್ಲಿ ಸ್ವಾಗತ ಸಮಿತಿ, ಪರೇಡ್ ಸಮಿತಿ,ವೇದಿಕೆ ಸಮಿತಿ, ಆಹಾರ ಸಮಿತಿ, ಮಾಧ್ಯಮ ಸಮಿತಿ,ಐತಿಹಾಸಿಕ ಕಟ್ಟಡಗಳ ದೀಪಾಲಂಕಾರ ಸಮಿತಿ,ವಿದ್ಯುತ್ ಸಮಿತಿ, ಆರೋಗ್ಯ, ಸ್ವಚ್ಛತಾ ಸಮಿತಿ ಸೇರಿದಂತೆ ವಿವಿಧ ಸಮಿತಿಗಳಿಗೆ ವಹಿಸಲಾದ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು; ಆ.12ರಂದು ಮತ್ತೊಂದು ಬಾರಿ ಸೇರಲಿರುವ ಪೂರ್ವಸಿದ್ಧತಾ ಸಭೆಯಲ್ಲಿ ಕೈಗೊಳ್ಳಲಾಗಿರುವ ಕ್ರಮಗಳನ್ನು ಪ್ರಸ್ತುತಪಡಿಸುವಂತೆ ಅವರು ಸೂಚಿಸಿದರು.

ಆಮಂತ್ರಣ ಪತ್ರದಲ್ಲಿ ಆಹ್ವಾನಿತ ಹೆಸರಿರುವ ಎಲ್ಲರಿಗೂ ಕಡ್ಡಾಯವಾಗಿ ಆಮಂತ್ರಣ ಪತ್ರ ತಲುಪಿಸಿ;ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಆಹ್ವಾನಿಸಬೇಕು;ಈ ವಿಷಯದಲ್ಲಿ ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸುವಂತಿಲ್ಲ ಎಂದು ಹೇಳಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಈ ಕಾರ್ಯಕ್ರಮದ ಪ್ರವೇಶದ್ವಾರದಲ್ಲಿ ಸ್ಯಾನಿಟೈಸರ್,ಮಾಸ್ಕ್, ಥರ್ಮಲ್ ಸ್ಕ್ಯಾನರ್ ಗಳಿಡಬೇಕು;ಕಾರ್ಯಕ್ರಮಕ್ಕೆ ಆಗಮಿಸುವವರಿಗೆ ಸ್ಯಾನಿಟೈಸರ್ ಸಿಂಪಡಿಸುವ, ಥರ್ಮಲ್ ಸ್ಕ್ಯಾನರ್‍ಗಳಿಂದ ತಪಾಸಣೆ ನಡೆಸುವ,ಮಾಸ್ಕ್ ಧರಿಸದೇ ಇರುವವರಿಗೆ ಮಾಸ್ಕ್ ವಿತರಿಸುವುದಕ್ಕಾಗಿ ಎರಡು ತಂಡಗಳನ್ನು ಆರೋಗ್ಯ ಇಲಾಖೆಯವರು ನಿಯೋಜಿಸಬೇಕು. ಸ್ವಚ್ಛತಾ ಕಾರ್ಯವನ್ನು ಮಹಾನಗರ ಪಾಲಿಕೆಯವರು ಅಚ್ಚುಕಟ್ಟಾಗಿ ನಿರ್ವಹಿಸಬೇಕು ಎಂದು ಸೂಚಿಸಿದ ಅವರು ಕೋವಿಡ್ ಎರಡು ಡೋಸ್ ಲಸಿಕೆ ಪಡೆದವರು ಆಗಮಿಸುವಂತೆ ಅವರು ತಿಳಿಸಿದರು.

ರಿಹರ್ಸಲ್ ಸಂದರ್ಭದಲ್ಲಿ ಹಾಗೂ ಕಾರ್ಯಕ್ರಮ ನಡೆಯುವ ದಿನದಂದು ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳು ಕೈಗೊಳ್ಳಬೇಕು.ಪೊಲೀಸ್ ಇಲಾಖೆಯವರು ಶಿಷ್ಟಾಚಾರದ ಅನ್ವಯ ಬಂದೋಬಸ್ತ್ ವ್ಯವಸ್ಥೆ ಮಾಡಬೇಕು ಎಂದು ಅವರು ಸೂಚಿಸಿದರು.
ಜಿಲ್ಲೆಯಲ್ಲಿರುವ ಐತಿಹಾಸಿಕ ಕಟ್ಟಡಗಳು,ದೇವಸ್ಥಾನಗಳಿಗೆ ಮತ್ತು ಮಸೀದಿ ಚಚ್‍ಗಳಿಗೆ ವಿಶೇಷ ದೀಪಾಲಂಕಾರದ ವ್ಯವಸ್ಥೆ ಮಾಡುವಂತೆ ಅವರು ತಿಳಿಸಿದರು.

*ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ವಿವಿಧ ಆನ್‍ಲೈನ್ ಸ್ಪರ್ಧೆಗಳು:

*ಕ್ವಿಟ್ ಇಂಡಿಯಾ ಚಳುವಳಿಯ ಉಪನ್ಯಾಸ ಕಾರ್ಯಕ್ರಮ: ಆಜಾದಿ ಕಾ ಅಮೃತ ಮಹೋತ್ಸವ ಅಂಗವಾಗಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗಾಗಿ ಆ.10ರಂದು ಜಿಲ್ಲೆಯಲ್ಲಿ ವರ್ಚುವಲ್ ಲಿಂಕ್ ಮೂಲಕ ಕ್ವಿಟ್ ಇಂಡಿಯಾ ಚಳುವಳಿ ಕುರಿತು ಉಪನ್ಯಾಸ ಕಾರ್ಯಕ್ರಮ ಏರ್ಪಡಿಸಬೇಕು ಎಂದು ಸೂಚನೆ ನೀಡಿದ ಎಡಿಸಿ ಮಂಜುನಾಥ ಅವರು ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕರು ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಕ್ರಮವಹಿಸಲು ತಿಳಿಸಿದರು.

*ಅಜಾದಿ ಅಮೃತ್ ಮಹೋತ್ಸವ ಕುರಿತು ಘೋಷಣೆ ಬರೆಯುವ ಸ್ಪರ್ಧೆ: ಆ.17 ರಂದು ಜಿಲ್ಲೆಯ ಆಯಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವದ ಕುರಿತು ಘೋಷಣೆಗಳನ್ನು ಬರೆಯುವ ಸ್ಪರ್ಧೆಯನ್ನು ಆನ್‍ಲೈನ್ ಮೂಲಕ ಏರ್ಪಡಿಸುವಂತೆ ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಿಗೆ ಎಡಿಸಿ ಮಂಜುನಾಥ ಅವರು ಸೂಚನೆ ನೀಡಿದರು.

*ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಪ್ರಬಂಧ ಸ್ಪರ್ಧೆ: ಆ.25ರಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಆಯಾ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಸ್ವಾತಂತ್ರ್ಯ ಹೋರಾಟದಲ್ಲಿ ಬಳ್ಳಾರಿ ಜಿಲ್ಲೆಯ ಪಾತ್ರ ಎಂಬ ವಿಷಯದ ಕುರಿತು ಪ್ರಬಂಧ ಬರೆಯುವ ಸ್ಪರ್ಧೆಯನ್ನು ಆನ್‍ಲೈನ್ ಮೂಲಕ ಏರ್ಪಡಿಸಬೇಕು.

*ಸ್ವಾತಂತ್ರ್ಯ ಹೋರಾಟದ ಕುರಿತು ಚಿತ್ರ ಬಿಡಿಸುವ ಸ್ಪರ್ಧೆ: ಆ.30ರಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಜಿಲ್ಲೆಯ ಆಯಾ ಶಾಲೆಯ ವಿದ್ಯಾರ್ಥಿಗಳಿಂದ ಆಜಾದಿ ಕಾ ಅಮೃತ ಮಹೋತ್ಸವದ ನಿಮಿತ್ತ ಸ್ವಾತಂತ್ರ್ಯ ಹೋರಾಟದ ಕುರಿತು ಚಿತ್ರ ಬಿಡಿಸುವ ಸ್ಪರ್ಧೆಯನ್ನು ಆನ್‍ಲೈನ್ ಮೂಲಕ ಏರ್ಪಡಿಸುವಂತೆ ಸೂಚನೆ ನೀಡಿದ ಅಪರ ಜಿಲ್ಲಾಧಿಕಾರಿ ಮಂಜುನಾಥ ಅವರು ಈ ಎಲ್ಲ ವೈವಿಧ್ಯಮಯ ಕಾರ್ಯಕ್ರಮಗಳನ್ನ ಏರ್ಪಡಿಸಿ ನಿಗದಿಪಡಿಸಿದ ಅವಧಿಯೊಳಗೆ ಕಾರ್ಯಕ್ರಮಗಳ ವರದಿಯನ್ನು ಜಿಲ್ಲಾಡಳಿತಕ್ಕೆ ಸಲ್ಲಿಸುವಂತೆ ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಸಹಾಯಕ ಆಯುಕ್ತ ಆಕಾಶ ಶಂಕರ್, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರಮೇಶ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶರಣಪ್ಪ ಮುದಗಲ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.

Share and Enjoy !

Shares