ನ್ಯೂಮೊಕಾಕಲ್‍ಕಾಂಜುಗೆಟ್ ಲಸಿಕೆ ಬಳ್ಳಾರಿ ಜಿಲ್ಲೆಯಲ್ಲಿ ಸೆಪ್ಟೆಂಬರ್ ತಿಂಗಳಿನಿಂದ ನೀಡಿಕೆ:ಡಿಎಚ್‍ಒ ಡಾ.ಜನಾರ್ಧನ್

Share and Enjoy !

Shares

ವಿಜಯನಗರ ವಾಣಿ

ಬಾಲ್ಯದಲ್ಲಿ ಮಕ್ಕಳಲ್ಲಿ ಕಂಡುಬರುವ ನ್ಯೂಮೊಕಾಕಲ್ ನ್ಯೂಮೊನಿಯಾವು ಒಂದು ಶ್ವಾಸಕೋಶದ ಸೋಂಕಾಗಿದ್ದು ಈ ಸೋಂಕು ತಗುಲಿದ ಮಗುವಿಗೆ ಉಸಿರಾಡಲು ಕಷ್ಟ, ಪಕ್ಕೆ ಸೆಳೆತ, ಕೆಮ್ಮು, ಜ್ವರ ಮತ್ತಿತರ ಸಮಸ್ಯೆಗಳು ಕಂಡುಬರುವ ಸಾಧ್ಯತೆಯಿದ್ದು ನಿರ್ಲಕ್ಷ್ಯ ವಹಿಸಿದರೆ ಮಗು ಮರಣ ಸಹ ಹೊಂದಬಹುದು ಎಂದು ಡಿಎಚ್‍ಒ ಡಾ.ಎಚ್.ಎಲ್.ಜನಾರ್ಧನ್ ಅವರು ಹೇಳಿದರು.

ಜಿಲ್ಲಾಡಳಿತ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ನಗರದಲ್ಲಿ ಶನಿವಾರ ಜಿಲ್ಲೆಯ ವೈದ್ಯಾಧಿಕಾರಿಗಳು ಹಾಗೂ ಆರೋಗ್ಯ ಮೇಲ್ವಿಚಾರಣ ಅಧಿಕಾರಿಗಳಿಗೆ ಹಮ್ಮಿಕೊಂಡಿದ್ದ ನ್ಯೂಮೊಕಾಕಲ್‍ಕಾಂಜುಗೆಟ್ ಲಸಿಕೆ ಪರಿಚಯ ಕಾರ್ಯಾಗಾರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಈ ಹಿನ್ನಲೆ ಭಾರತ ಸರ್ಕಾರವು ಕೆಲವೆ ದಿನಗಳಲ್ಲಿ ಸಾರ್ವತ್ರಿಕಾ ಲಸಿಕಾ ಕಾರ್ಯಕ್ರಮದ ಮೂಲಕ ಲಸಿಕೆ ನೀಡಿಕೆಗೆ ಚಾಲನೆ ನೀಡಲಿದ್ದು, ರಾಜ್ಯದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಲಸಿಕೆ ನೀಡಿಕೆ ಆರಂಭಿಸಲಾಗುವುದು. 2017ರಲ್ಲಿ ರಾಷ್ಟ್ರದ 5 ರಾಜ್ಯಗಳಲ್ಲಿ ರಾಷ್ಟ್ರೀಯ ಲಸಿಕಾ ಕಾರ್ಯಕ್ರಮದಲ್ಲಿ ಅನುಷ್ಠಾನ ಮಾಡಿದ ನಂತರ ಪ್ರಸ್ತುತ ಮುಂದಿನ ತಿಂಗಳನಿಂದ ಜಿಲ್ಲೆಯಲ್ಲೂ ಲಸಿಕೆ ಲಭ್ಯವಾಗಲಿದೆ ಎಂದರು.

ಜಿಲ್ಲಾ ಆರ್.ಸಿ.ಹೆಚ್ ಅಧಿಕಾರಿಗಳಾದ ಡಾ.ಆರ್. ಅನಿಲ್‍ಕುಮಾರ್ ಅವರು ಮಾತನಾಡಿ, ಮಗುವಿನ ಒಂದುವರೆ, ಮೂರುವರೆ ಹಾಗೂ ಒಂಬತ್ತು ತಿಂಗಳಲ್ಲಿ ಲಸಿಕೆಯನ್ನು ನೀಡುವ ಮಾರ್ಗಸೂಚಿಯಿದ್ದು, ಈ ಕಾಯಿಲೆಯು ಮುಖ್ಯವಾಗಿ ಸೋಂಕಿತರು ಕೆಮ್ಮಿದಾಗ, ಸೀನುವಾಗ ವ್ಯಕ್ತಿಯ ಬಾಯಿ ಅಥವಾ ಮೂಗಿನಿಂದ ಹೊರಬೀಳುವ ತುಂತುರುಗಳಿಂದ ಇನ್ನೊಬ್ಬರಿಗೆ ಹರಡುತ್ತದೆ ಎಂದರು.

ಈ ಕಾರ್ಯಾಗಾರದಲ್ಲಿ ಡಾ.ಶ್ರೀಧರ್ ಎಸ್.ಎಮ್.ಒ, ಜಿಲ್ಲಾ ತರಬೇತಿ ಕೇಂದ್ರದ ಪ್ರಾಂಶುಪಾಲ ಡಾ.ಗುರುನಾಥ್ ಬಿ ಚೌವ್ಹಾಣ್, ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಬಿ.ಕೆ.ಶ್ರೀಕಾಂತ್, ಭಾರತೀಯ ಮಕ್ಕಳ ತಜ್ಞ ವೈದ್ಯರ ಸಂಘದ ಕಾರ್ಯದರ್ಶಿ ಡಾ. ಭಾವನಾ, ಟಿಎಚ್‍ಒ ಡಾ.ಮೋಹನಕುಮಾರಿ, ಡಾ.ಕುಶಾಲ್, ಡಾ.ವಿದ್ಯಾಶ್ರೀ ಮತ್ತು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಈಶ್ವರ ದಾಸಪ್ಪನವರ ಮತ್ತಿತರರು ಇದ್ದರು.

Share and Enjoy !

Shares