ವಿಜಯನಗರ ವಾಣಿ ಸುದ್ದಿ ಬಳ್ಳಾರಿ
ಸಿರುಗುಪ್ಪ: ರಾಜ್ಯ ಸರ್ಕಾರ ಮತ್ತು ಜಿಲ್ಲಾಡಳಿತ ತಿಳಿಸಿರುವ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುತ್ತಾ ಮೊಹರಂ ಆಚರಿಸುವಂತೆ ತಹಶೀಲ್ದಾರ್ ಎನ್,ಆರ್. ಮಂಜುನಾಥ ಸ್ವಾಮಿ ಶಾಂತಿಸಭೆಯಲ್ಲಿ ತಿಳಿಸಿದರು.
ನಗರದ ಪೊಲೀಸ್‍ಠಾಣೆ ಆವರಣದಲ್ಲಿ ಭಾನುವಾರ ಆಯೋಜನೆಗೊಂಡಿದ್ದ ಶಾಂತಿಸಭೆ ಅಧ್ಯಕ್ಷತೆವಹಿಸಿ ಮಾತನಾಡಿದರು ಅವರು ಈ ತಿಂಗಳ 11ರಿಂದ20ರ ವರಗೆ ಮೊಹರಂ ಆಚರಣೆಗೊಳ್ಳಲಿದ್ದು, ಕೊವಿಡ್ ಮೂರನೆ ಅಲೆ ಈಗಾಗಲೇ ಪ್ರಾರಂಭವಾಗಿದೆ. ಜೀವ-ಜೀವನಗಳು ಮುಖ್ಯವಾಗಿದ್ದು ಅತ್ಯಂತ ಸರಳರೀತಿಯಲ್ಲಿ ಪರಸ್ಪರ ಕೋಮು ಸೌಹಾರ್ದತೆ ಮತ್ತು ಭಾವೈಕ್ಯತೆಗಳಿಂದ ಹಬ್ಬ ಆಚರಿಸಬೇಕು. ಯಾವುದೇ ರೀತಿಯ ನಿಯಮ ಉಲ್ಲಂಘನೆಗಳನ್ನು ಮಾಡಿದರೆ ನಿಯಮಾನುಸಾರ ಕ್ರಮಕೈಗೊಳ್ಳಲಾಗುವದು.
ಸಭೆಯಲ್ಲಿ ಹಾಜರಿದ್ದ ಸಿಪಿಐ ರಮೇಶ್.ಟಿ.ಪವಾರ್ ಮಾತನಾಡಿ, ಈಗಾಗಲೇ ಕಳೆದ ವರ್ಷವೂ ನಾವು ಇದೇ ಕೊವಿಡ್ ಮಾರ್ಗಸೂಚಿಗಳಲ್ಲಿ ಹಬ್ಬಗಳನ್ನು ಆಚರಿಸಿದ್ದೇವೆ. ಕೆಲ ಹಳ್ಳಿಗಳಲ್ಲಿ ಮೊಹರಂ ನಿಷೇಧಿಸಲಾಗಿದೆ. ಯಾವುದೇ ಕಾರಣಕ್ಕೂ ಗುಂಪು ಸೇರದೆ ಮಾಸ್ಕ್, ಸ್ಯಾನಟೈಜರ್ ಮತ್ತು ಸಾಮಾಜಿಕ ಅಂತರ ಹಾಗೂ ಸ್ವಚ್ಛತೆ ಕಾಪಾಡಿಕೊಳ್ಳುತ್ತಾ ಆಚರಿಸಬೇಕು. ಏನಾದರೂ ಅಚಾತುರ್ಯಗಳು ನಡೆದರೆ ಅಲ್ಲಿನ ಮುಖ್ಯಸ್ಥರು ಕಾರಣರಾಗುತ್ತಾರೆ. ಆದ್ದರಿಂದ ತಪ್ಪಡಿ, ತಾಷಾ ಹಾಗೂ ಇನ್ನಿತರ ಶಬ್ದ ಹೊರಡಿಸುವ ಮತ್ತು ಜನ ಗುಂಪು ಸೇರಿಸುವ ಕಾರ್ಯವಾಗಬಾರದು. ನಮ್ಮ ಅಧಿಕಾರಿಗಳು ಎಲ್ಲ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸುತ್ತಾರೆ. ಸಮಸ್ಯೆಗಳು ಬಂದರೆ ಪರಸ್ಪರ ಚರ್ಚೆ ಮಾಡಿಕೊಳ್ಳದೆ ಠಾಣೆಗೆ ಬಂದು ತಿಳಿಸಿದಲ್ಲಿ ನಾವು ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ ಎಂದರು.
ವೇದಿಕೆಯಲ್ಲಿದ್ದ ಕಾನೂನು ಸುವ್ಯವಸ್ಥೆ ವಿಭಾಗದ ಪಿ.ಎಸ್.ಐ. ಕೆ,ರಂಗಯ್ಯ ಸರ್ಕಾರ ಸೂಚಿಸಿರುವ ಮಾರ್ಗದರ್ಶಿಗಳನ್ನು ವಿವರವಾಗಿ ಓದಿ ಸಭೆಗೆ ತಿಳಿಸಿದರು. ಮುಖ್ಯವಾಗಿ ಪಾನೀಯ ಮತ್ತು ಪ್ರಸಾದ ನೀಡುವಂತಿಲ್ಲ ಹಾಗೂ ಚಿಕ್ಕಮಕ್ಕಳು ಮತ್ತು 60 ಪ್ರಾಯದ ವೃದ್ಧರು ಆಗಮಿಸುವಂತಿಲ್ಲ ಎಂದು ತಿಳಿಸಿದರು.
ಶಾಂತಿಸಭೆಗೆ ಆಗಮಿಸಿದ್ದ ಮೊಹರಂ ಆಚರಣೆಕಾರರು ತಮ್ಮಲ್ಲಿನ ಸಂದೇಹಗಳನ್ನು ಹೇಳಿ ವಿವರಣೆ ಪಡೆದರು
ಅಪರಾಧ ವಿಭಾಗದ ಪಿ.ಎಸ್.ಐ. ಕರಣಂ ನಾರಾಯಣಸ್ವಾಮಿ, ಪ್ರೊಬೆಷನರಿ ಪಿ.ಎಸ್.ಐ. ಧನುಂಜಯ ಸೇರಿದಂತೆ ಎ.ಎಸ್.ಐ ಮತ್ತು ಠಾಣೆಯ ಸಿಬ್ಬಂದಿ ಶಾಂತಿಸಭೆಯಲ್ಲಿ ಹಾಜರಿದ್ದರು.