ಪೆಗಾಸಸ್ ಗೂಢಚರ್ಯೆ ಮತ್ತು ರೈತರ ಪ್ರತಿಭಟನೆ ಬಗ್ಗೆ ಸಂಸತ್ತಿನ ಸದನಗಳಲ್ಲಿ ಚರ್ಚಿಸಲು ಸರ್ಕಾರವು ಅವಕಾಶ ನೀಡುತ್ತಿಲ್ಲ.

Share and Enjoy !

Shares
Listen to this article

ವಿಜಯನಗರ ವಾಣಿ

ಪೆಗಾಸಸ್ ಗೂಢಚರ್ಯೆ ಮತ್ತು ರೈತರ ಪ್ರತಿಭಟನೆ ಬಗ್ಗೆ ಸಂಸತ್ತಿನ ಸದನಗಳಲ್ಲಿ ಚರ್ಚಿಸಲು ಸರ್ಕಾರವು ಅವಕಾಶ ನೀಡುತ್ತಿಲ್ಲ. ಈ ಎರಡೂ ವಿಷಯಗಳ ಬಗ್ಗೆ ಸರ್ಕಾರದ ಗಮನ ಸೆಳೆಯಲು ವಿರೋಧ ಪಕ್ಷಗಳು ಹೊಸ ತಂತ್ರವನ್ನು ಅನುಸರಿಸುತ್ತಿವೆ. ಬೇರೆ ಮಸೂದೆಗಳ ಚರ್ಚೆಯ ಮಧ್ಯೆ ವಿರೋಧ ಪಕ್ಷಗಳ ನಾಯಕರು ಪೆಗಾಸಸ್ ಗೂಢಚರ್ಯೆ ಮತ್ತು ರೈತರ ಪ್ರತಿಭಟನೆ ಬಗ್ಗೆ ಪ್ರಸ್ತಾಪಿಸಿದ್ದಾರೆ.
ರಾಜ್ಯಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಅನುಸರಿಸುತ್ತಿರುವ ಈ ಭಿನ್ನ ತಂತ್ರದ ವಿಡಿಯೊವನ್ನು ಟಿಎಂಸಿ ಸಂಸದ ಡೆರೆಕ್ ಒಬ್ರಿಯಾನ್ ಭಾನುವಾರ ಟ್ವೀಟ್‌ ಮಾಡಿದ್ದಾರೆ. ವಿರೋಧ ಪಕ್ಷಗಳ ಹಲವು ನಾಯಕರು ಈ ವಿಡಿಯೊವನ್ನು ರಿಟ್ವೀಟ್ ಮಾಡಿದ್ದಾರೆ, ವಿಡಿಯೊವನ್ನು ಹಂಚಿಕೊಂಡಿದ್ದಾರೆ. ‘ಮಿಸ್ಟರ್ ಮೋದಿ, ನಮ್ಮ ಮಾತನ್ನು ಕೇಳಿಸಿಕೊಳ್ಳಿ’ ಎಂಬ ಧ್ವನಿಯೊಂದಿಗೆ ವಿಡಿಯೊ ಆರಂಭವಾಗುತ್ತದೆ. ಆನಂತರ ಯಾವ ಪಕ್ಷದ ನಾಯಕರು ಮಾತನಾಡಿದ್ದಾರೆ ಎಂಬುದರ ವಿವರ ಮತ್ತು ದೃಶ್ಯದ ತುಣುಕನ್ನು ಈ ವಿಡಿಯೊ ಒಳಗೊಂಡಿದೆ.

ರಾಜ್ಯಸಭೆಯಲ್ಲಿ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್‌ನ ಮಲ್ಲಿಕಾರ್ಜುನ ಖರ್ಗೆ, ಟಿಎಂಸಿಯ ಸುಖೇಂದು ಶೇಖರ್ ರಾಯ್, ಶಿವಸೇನಾದ ಪ್ರಿಯಾಂಕಾ ಚತುರ್ವೇದಿ, ಸಮಾಜವಾದಿ ಪಕ್ಷ, ಡಿಎಂಕೆ, ಟಿಆರ್‌ಎಸ್‌ ಮತ್ತು ಎಎಪಿಯ ಸಂಸದರು ರಾಜ್ಯಸಭೆಯಲ್ಲಿ ಮಾತನಾಡಿರುವ ದೃಶ್ಯಗಳ ತುಣುಕನ್ನು ಈ ವಿಡಿಯೊ ಒಳಗೊಂಡಿದೆ. 3 ನಿಮಿಷ 44 ಸೆಕೆಂಡ್‌ಗಳ ಒಂದು ವಿಡಿಯೊ ಮತ್ತು 2 ನಿಮಿಷ 20 ಸೆಕೆಂಡುಗಳ ಎರಡು ವಿಡಿಯೊವನ್ನು ಒಬ್ರಿಯಾನ್ ಟ್ವೀಟ್ ಮಾಡಿದ್ದಾರೆ. ಖರ್ಗೆ ಸಹ ಒಂದು ವಿಡಿಯೊವನ್ನು ಟ್ವೀಟ್ ಮಾಡಿದ್ದಾರೆ.

‘14 ದಿನಗಳಿಂದ ಕೇಳಿಕೊಳ್ಳುತ್ತಿದ್ದೇವೆ. ಆದರೆ ಚರ್ಚೆ ನಡೆಸಲು ನೀವು ಅವಕಾಶ ನೀಡುತ್ತಿಲ್ಲ. ಆದರೆ ಸುಮ್ಮನೆ ಮಸೂದೆಗಳನ್ನು ಅಂಗೀಕರಿಸುತ್ತಿದ್ದೀರಿ. ನಿಮಗೆ ಧೈರ್ಯ ಇದ್ದದ್ದೇ ಆದರೆ, ಪೆಗಾಸಸ್ ಚರ್ಚೆಯನ್ನು ಆರಂಭಿಸಿ’ ಎಂದು ಖರ್ಗೆ ಅವರು ರಾಜ್ಯಸಭೆಯಲ್ಲಿ ಆಗ್ರಹಿಸುತ್ತಿರುವ ದೃಶ್ಯ ವಿಡಿಯೊದಲ್ಲಿ ಇದೆ.

‘ಪೆಗಾಸಸ್ ಈಗ ಎಲ್ಲರ ಮನೆಯನ್ನೂ ಹೊಕ್ಕಿದೆ. ಅದರ ಬಗ್ಗೆ ನಾವು ಚರ್ಚೆ ನಡೆಸಲೇಬೇಕು’ ಎಂದು ಆರ್‌ಜೆಡಿಯ ಮನೋಜ್ ಝಾ ಪ್ರತಿಪಾದಿಸಿದ್ದಾರೆ. ‘ನಾನು ರೈತರ ಬಗ್ಗೆ ಮಾತನಾಡಬೇಕಿದೆ. ನೀವು ನನ್ನ ಮೈಕ್ ಆಫ್ ಮಾಡದೇ ಇದ್ದರೆ ಮಾತ್ರ ನಾನು ಮಾತನಾಡಲು ಸಾಧ್ಯವಾಗುತ್ತದೆ’ ಎಂದು ಕಾಂಗ್ರೆಸ್‌ನ ದೀಪೆಂದರ್ ಹೂಡಾ ಹೇಳಿದ್ದಾರೆ.

‘ಸಂಸತ್ತಿನಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸರ್ಕಾರ ಕೊಲ್ಲುತ್ತಿದೆ’ ಎಂದು ಟಿಎಂಸಿಯ ಸುಖೇಂದು ಶೇಖರ್ ರಾಯ್ ಆರೋಪಿಸಿದ್ದಾರೆ.
‘ಅದು ರೈತರ ವಿಚಾರವೇ ಆಗಿರಲಿ, ಆರ್ಥಿಕತೆಯೇ ಆಗಿರಲಿ, ಭದ್ರತೆ ಮತ್ತು ಪೆಗಾಸಸ್ ವಿಚಾರವಾಗಿರಲಿ. ವಿರೋಧ ಪಕ್ಷಗಳ ನಾಯಕರು ಈ ಬಗ್ಗೆ ಒಂದು ಪದ ಹೇಳಿದರೂ ಅವರ ದನಿಯನ್ನು ಅಡಗಿಸಲಾಗುತ್ತಿದೆ. ಕಲಾಪವನ್ನು ಸುಮ್ಮನೆ ಮುಂದೂಡಲಾಗುತ್ತದೆ, ನಮ್ಮ ಮೈಕ್‌ಗಳನ್ನು ಆಫ್ ಮಾಡಲಾಗುತ್ತದೆ’ ಎಂದು ಶಿವಸೇನಾದ ಪ್ರಿಯಾಂಕಾ ಚತುರ್ವೇದಿ ಆರೋಪಿಸಿದ್ದಾರೆ.

ಏಕೈಕ ದಾರಿ: ವಿಪಕ್ಷ ನಾಯಕರ ಪ್ರತಿಪಾದನೆ
‘ನಮ್ಮ ಮಾತನ್ನು ಸರ್ಕಾರವು ಕೇಳಿಸಿಕೊಳ್ಳುವಂತೆ ಮಾಡಲು ಮಸೂದೆ ಮಧ್ಯೆ ಮಾತನಾಡುವುದೇ ನಮಗೆ ಉಳಿದಿರುವ ಏಕೈಕ ದಾರಿ’ ಎಂದು ವಿರೋಧ ಪಕ್ಷಗಳ ನಾಯಕರು ಪ್ರತಿಪಾದಿಸಿದ್ದಾರೆ.

‘ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ವಿರೋಧ ಪಕ್ಷಗಳ ನಾಯಕರು ಮಾತನಾಡುವಾಗ ಪೆಗಾಸಸ್ ಮತ್ತು ರೈತರ ಪ್ರತಿಭಟನೆ ಎಂಬ ಎರಡು ಪದಗಳನ್ನು ಬಳಸಿದ ತಕ್ಷಣ ಗದ್ದಲ ಎಬ್ಬಿಸಲಾಗುತ್ತದೆ. ಅವರ ಮೈಕ್ ಅನ್ನು ಬಂದ್ ಮಾಡಲಾಗುತ್ತದೆ. ನಾವು ಮಾತನಾಡುವ ಎಲ್ಲಾ ಅಧಿಕೃತ ಮಾರ್ಗಗಳೂ ಬಂದ್ ಆದಾಗ, ನಮ್ಮ ಮಾತನ್ನು ಅವರು ಕೇಳಿಸಿಕೊಳ್ಳುವಂತೆ ಮಾಡಲು ನಮಗೆ ಉಳಿದ ಏಕೈಕ ದಾರಿ ಇದು’ ಎಂದು ಡೆರೆಕ್ ಒಬ್ರಿಯಾನ್ ಹೇಳಿದ್ದಾರೆ.

‘ಪ್ರಧಾನಿ ನರೇಂದ್ರ ಮೋದಿ ಅವರು ಧೈರ್ಯಗುಂದಿದ್ದಾರೆ. ಸಂಸತ್ತಿನಲ್ಲಿ ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಲು ಅವರೇಕೆ ಧೈರ್ಯ ತೋರುತ್ತಿಲ್ಲ? ಈ ಬಗ್ಗೆ ಚರ್ಚೆ ನಡೆಸಲು ವಿರೋಧ ಪಕ್ಷಗಳು ಸಿದ್ಧವಿವೆ. ಆದರೆ, ಬಿಜೆಪಿ ಸಂಸತ್ತಿನ ಕಲಾಪಗಳನ್ನು ಸ್ಥಗಿತಗೊಳಿಸುತ್ತಿದೆ ಮತ್ತು ಸತ್ಯ ಜನರನ್ನು ತಲುಪುವುದನ್ನು ತಡೆಯುತ್ತಿದೆ’ ಎಂದು ಮಲ್ಲಿಕಾರ್ಜುನ ಖರ್ಗೆ ಟ್ವೀಟ್ ಮಾಡಿದ್ದಾರೆ.

‘ನಮ್ಮ ಮಾತನ್ನು ಕೇಳಿಸಿಕೊಳ್ಳಲು ಸರ್ಕಾರ ಸಿದ್ಧವಿಲ್ಲ ಎಂದು ಗೊತ್ತಾದ ನಂತರವೇ, ನಾವು ನಮ್ಮ ಮಾತನ್ನು ಮಸೂದೆಗಳ ಮೇಲಿನ ಚರ್ಚೆಯ ಮಧ್ಯೆ ಆಡಬೇಕು ಎಂಬುದು ನಮಗೆ ಮನದಟ್ಟಾಯಿತು’ ಎಂದು ಪ್ರಿಯಾಂಕಾ ಚತುರ್ವೇದಿ ಹೇಳಿದ್ದಾರೆ.‘ಚರ್ಚೆಗೆ ಅವಕಾಶ ನೀಡಿ ಎಂಬ ನಮ್ಮ ಬೇಡಿಕೆಗೆ ಸರ್ಕಾರ ಒಪ್ಪುತ್ತಲೇ ಇಲ್ಲ. ನಮ್ಮ ಮೈಕ್‌ಗಳನ್ನು ಹೇಗೆ ಆಫ್ ಮಾಡಲಾಗುತ್ತಿದೆ ಎಂಬುದನ್ನು ಎಲ್ಲರೂ ನೋಡಿದ್ದೀರಿ. ಈ ತಂತ್ರವನ್ನು ಅಧಿವೇಶನದ ಮುಂದಿನ ಕಲಾಪಗಳಲ್ಲೂ ಅನುಸರಿಸುತ್ತೇವೆ. ಎಲ್ಲಾ ವಿರೋಧ ಪಕ್ಷಗಳೂ ಇದಕ್ಕೆ ಬದ್ಧವಾಗಿವೆ. ಸರ್ಕಾರ ಚರ್ಚೆಗೆ ಬರುವವರೆಗೂ ನಾವು ನಮ್ಮ ಪಟ್ಟನ್ನು ಸಡಿಲಿಸುವುದಿಲ್ಲ’ ಎಂದು ಸಿಪಿಎಂನ ಎಳಮರಂ ಕರೀಂ ಅವರು ಹೇಳಿದ್ದಾರೆ.

ಪ್ರಜಾಪ್ರಭುತ್ವದ ಅಣಕ: ‘ಎನ್‌ಡಿಎ-ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವವನ್ನು ಅಣಕ ಮಾಡುತ್ತಿದೆ’ ಎಂದು ಕಾಂಗ್ರೆಸ್ ಸಂಸದ ಶಶಿ ತರೂರ್ ಆರೋಪಿಸಿದ್ದಾರೆ. ಪಿಟಿಐಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಮಾತು ಹೇಳಿದ್ದಾರೆ.

‘ಪ್ರಶ್ನೆಗಳಿಗೆ ಉತ್ತರಿಸಲು ಮತ್ತು ತನ್ನ ಹೊಣೆಗಾರಿಕೆಯನ್ನು ನಿರಾಕರಿಸುವ ಮೂಲಕ ಎನ್‌ಡಿಎ-ಬಿಜೆಪಿ ಸರ್ಕಾರವು ಪ್ರಜಾಪ್ರಭುತ್ವ ಮತ್ತು ತಾನು ಪ್ರತಿನಿಧಿ ಎಂದು ಹೇಳಿಕೊಳ್ಳುತ್ತಿರುವ ಸಾಮಾನ್ಯ ಭಾರತೀಯರನ್ನು ಅಣಕ ಮಾಡುತ್ತಿದೆ. ತನ್ನ ಕಾರ್ಯಸೂಚಿಗಳಿಗೆ ಒಪ್ಪಿಗೆ ನೀಡುವ ರಬ್ಬರ್ ಸ್ಟ್ಯಾಂಪ್‌ ಮತ್ತು ತನ್ನ ಏಕಪಕ್ಷೀಯ ನಿರ್ಧಾರಗಳನ್ನು ಪ್ರಕಟಿಸುವ ನೋಟಿಸ್‌ ಬೋರ್ಡ್‌ನ ಮಟ್ಟಕ್ಕೆ ಸಂಸತ್ ಭವನವನ್ನು ಬಿಜೆಪಿ ಸರ್ಕಾರ ಕುಗ್ಗಿಸಿದೆ’ ಎಂದು ತರೂರ್ ಟೀಕಿಸಿದ್ದಾರೆ. ‘ಪೆಗಾಸಸ್ ಚರ್ಚೆ ನಡೆಯಬಾರದು ಎಂಬುದು ಬಿಜೆಪಿಯ ಉದ್ದೇಶವಾಗಿತ್ತು. ಹೀಗಾಗಿಯೇ ಮಾಹಿತಿ ತಂತ್ರಜ್ಞಾನ ವ್ಯವಹಾರಗಳ ಸಂಸದೀಯ ಸ್ಥಾಯಿ ಸಮಿತಿ ಸಭೆಯಲ್ಲಿ ಕೋರಂ ಇರದಂತೆ ಬಿಜೆಪಿ ಸದಸ್ಯರು ನೋಡಿಕೊಂಡರು. ಜತೆಗೆ ಸಭೆಯಲ್ಲಿ ಹಾಜರಾಗಬೇಕಿದ್ದ ಮೂರು ಸಚಿವಾಲಯಗಳ ಕಾರ್ಯದರ್ಶಿಗಳಿಗೆ, ಸಭೆಗೆ ಹಾಜರಾಗಬೇಡಿ ಎಂಬ ನಿರ್ದೇಶನ ನೀಡಿರಬೇಕು. ಹೀಗಾಗಿಯೇ ಅವರು ಕೊನೆ ಕ್ಷಣದಲ್ಲಿ ಸಭೆಗೆ ಗೈರುಹಾಜರಾದರು. ಮುಂದೆ ನಡೆಯಲಿರುವ ಸಭೆಗೆ ಅಧಿಕಾರಿಗಳು ಬರುತ್ತಾರೆ ಎಂದುಕೊಂಡಿದ್ದೇನೆ’ ಎಂದು ಅವರು ಹೇಳಿದ್ದಾರೆ.

Share and Enjoy !

Shares