ವಿಜಯನಗರ ವಾಣಿ
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಇಂದು ಉಜ್ವಲ ಯೋಜನೆ 2.0 ಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ನೀಡಿದರು. ಇಂದು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಯೋಜನೆಗೆ ಚಾಲನೆ ನೀಡಿದ್ದಾರೆ. ಫಲಾನುಭವಿಗಳೊಂದಿಗೆ ಪ್ರಧಾನಿ ನರೇಂದ್ರ ಮೋದಿ ಸಂವಾದವನ್ನೂ ನಡೆಸಲಿದ್ದಾರೆ. ಈ ಸಮಾರಂಭದಲ್ಲಿ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಕೂಡ ಇದ್ದಾರೆ. ಕಾರ್ಯಕ್ರಮದಲ್ಲಿ ಮೊದಲು ಸಚಿವ ಹರ್ದೀಪ್ ಸಿಂಗ್ ಪುರಿ ಮಾತನಾಡಿ, ಉಜ್ವಲ ಯೋಜನೆಯ ಬಗ್ಗೆ ವಿವರಿಸಿದರು.
ಏನಿದು ಉಜ್ವಲ ಯೋಜನೆ?
ಮೊಟ್ಟ ಮೊದಲಿಗೆ ಈ ಪ್ರಧಾನಮಂತ್ರಿ ಉಜ್ವಲ ಯೋಜನೆ (PMUY) ಪ್ರಾರಂಭವಾಗಿದ್ದು, 2016ರ ಮೇ 1ರಂದು. ಅಂದು ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯಲ್ಲಿ ಈ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿಯವರು ಚಾಲನೆ ನೀಡಿದ್ದರು. ಹಳ್ಳಿಗಳಲ್ಲಿ ಇನ್ನೂ ಮಹಿಳೆಯರು ಉರುವಲನ್ನೇ ಉಪಯೋಗಿಸಿ ಅಡುಗೆ ಮಾಡುತ್ತಿದ್ದಾರೆ. ಆ ಕಷ್ಟವನ್ನು ತಪ್ಪಿಸಿ, ಗ್ರಾಮೀಣ ಪ್ರದೇಶಗಳಿಗೂ ಎಲ್ಪಿಜಿ ಗ್ಯಾಸ್ ಕನೆಕ್ಷನ್ ಕೊಡುವ ಉದ್ದೇಶದೊಂದಿಗೆ, ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಈ ಉಜ್ವಲ ಯೋಜನೆಯನ್ನು ಪರಿಚಯಿಸಿತು.
ಮೊದಲ ಬಾರಿ ಉದ್ಘಾಟನೆಯಾದ ಉಜ್ವಲ 1.0ರಡಿ, ಬಡತನ ರೇಖೆಗಿಂತ ಕಡಿಮೆ ಇರುವ ಮಹಿಳೆಯರಿಗೆ ಎಲ್ಪಿಜಿ ಗ್ಯಾಸ್ ಸೌಲಭ್ಯ ಒದಗಿಸುವ ಗುರಿ ಇತ್ತು. 2020ರ ಮಾರ್ಚ್ ಹೊತ್ತಿಗೆ ಬಿಪಿಎಲ್ ವ್ಯಾಪ್ತಿಗೆ ಬರುವ, 50 ಮಿಲಿಯನ್ ಮಹಿಳೆಯರ ಕುಟುಂಬಕ್ಕೆ ಎಲ್ಪಿಜಿ ಗ್ಯಾಸ್ ಸಂಪರ್ಕ ಕೊಡುವುದು ಇದರ ಉದ್ದೇಶವಾಗಿತ್ತು. ಆದರೆ 2018ರಲ್ಲಿ ಈ ಉಜ್ವಲ 1.0ರಡಿ ಇನ್ನೂ ಏಳುವರ್ಗದ ಅಂದರೆ, ಎಸ್ಸಿ/ಎಸ್ಟಿ, ಪ್ರಧಾನ ಮಂತ್ರಿ ಆವಾಸ್ ಯೋಜನೆ (PMAY) ಅಡಿಯಲ್ಲಿರುವವರು, ಅಂತ್ಯೋದಯ ಅನ್ನ ಯೋಜನೆಯ (AAY) ಫಲಾನುಭವಿಗಳು, ಅರಣ್ಯ ನಿವಾಸಿಗಳು, ಅತ್ಯಂತ ಹಿಂದುಳಿದ ವರ್ಗಗಳನ್ನೂ ಉಜ್ವಲ ವ್ಯಾಪ್ತಿಗೆ ಸೇರ್ಪಡೆಗೊಳಿಸಲಾಯಿತು.
ಉಜ್ವಲ ಯೋಜನೆ ವ್ಯಾಪ್ತಿಗೆ ಇಷ್ಟು ವರ್ಗಗಳನ್ನು ಸೇರ್ಪಡೆಗೊಳಿಸಿದ ಬಳಿಕ ಮಾರ್ಚ್ 2020ರ ಹೊತ್ತಿಗೆ, 80 ದಶಲಕ್ಷ ಕುಟುಂಬದ ಮಹಿಳೆಯರಿಗೆ ಎಲ್ಪಿಜಿ ಸಂಪರ್ಕ ಕೊಡಬೇಕು ಎಂಬ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿತ್ತು. ಆದರೆ ಈ ಗುರಿಯನ್ನು ಕೇಂದ್ರ ಆಗಸ್ಟ್ 2019ರಲ್ಲೇ ತಲುಪುವ ಮೂಲಕ ಸಾಧನೆ ಮಾಡಿತು. 2021ರ ಜುಲೈ 30ರ ಲೆಕ್ಕಾಚಾರದಂತೆ, ಇಲ್ಲಿಯವರೆಗೆ 79,995,022 ಫಲಾನುಭವಿಗಳಿಗೆ ಉಜ್ವಲ ಯೋಜನೆಯಡಿ ಗ್ಯಾಸ್ ಸಂಪರ್ಕ ಸಿಕ್ಕಿದೆ.
ಈಗೆಷ್ಟು ಗುರಿ?
ಪ್ರಧಾನಿ ನರೇಂದ್ರ ಮೋದಿಯವರು ಇಂದು ಉಜ್ವಲ 2.0ಗೆ ಚಾಲನೆ ನೀಡುತ್ತಿದ್ದಾರೆ. ಅದರಡಿಯಲ್ಲಿ ಫಲಾನುಭವಿಗಳಿಗೆ 10 ದಶಲಕ್ಷ ಎಲ್ಪಿಜಿ ಸಂಪರ್ಕ ನೀಡುವ ಗುರಿ ಹೊಂದಲಾಗಿದೆ. ಈ ಹೆಚ್ಚುವರಿ ಸಂಪರ್ಕಕ್ಕೆ ಸಂಬಂಧಪಟ್ಟ ನಿಬಂಧನೆಗಳನ್ನು 2021-22ರ ಬಜೆಟ್ನಲ್ಲಿ ಘೋಷಿಸಲಾಗಿತ್ತು.