ಶಾಲೆಯನ್ನು ನಂದನವನ್ನಾಗಿ ಮಾಡಿದ ವಿದ್ಯಾರ್ಥಿಗಳು!

Share and Enjoy !

Shares
Listen to this article

ವಿಜಯನಗರ ವಾಣಿ

ಸಾಮಾನ್ಯವಾಗಿ ಸರಕಾರಿ ಶಾಲಾ ಆವರಣಗಳಲ್ಲಿ ಕಸ-ಕಡ್ಡಿಗಳು, ಮಳೆಗಾಲದಲ್ಲಿ ಕೆಸರು ನಿಂತಿರುವುದನ್ನು ಕಾಣುತ್ತೇವೆ. ಆದರೆ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಲಕ್ಷ್ಮಿ ಕ್ಯಾಂಪ್ ನ ಶಾಲೆ ವಿಭಿನ್ನವಾಗಿದೆ. ಶಾಲೆಯು ಗಿಡ ಮರಗಳಿಂದ ಆವೃತವಾಗಿದೆ. ಶಾಲಾ ಆವರಣವು ಆಲಂಕಾರಿಕ ಗಿಡಗಳು, ಸಸ್ಯಗಳಿಂದ ಕಂಗೊಳಿಸುತ್ತಿದೆ. ಇದು ಶಾಲೆಯೋ ಅಥವಾ ಸುಂದರ ಉದ್ಯಾನವನವೋ ಎಂಬಂತೆ ಶಾಲೆಯು ಪರಿಸರ ಪ್ರೇಮಿಗಳನ್ನು ಕೈ ಮಾಡಿ ಕರೆಯುತ್ತಿದೆ.

ಕೊಪ್ಪಳ ಜಿಲ್ಲೆಯ ಕುಂಟೋಜಿ ಬಳಿಯಲ್ಲಿರುವ ಲಕ್ಷ್ಮಿಕ್ಯಾಂಪ್ ಎಂಬುವುದು ತೀರಾ ಚಿಕ್ಕ ಗ್ರಾಮ. ಇಲ್ಲಿ ಸುಮಾರು 60 ಮನೆಗಳಿವೆ. ಪಕ್ಕದಲ್ಲಿ ತುಂಗಭದ್ರಾ ಎಡದಂಡೆ ನಾಲೆ ಹರಿಯುತ್ತದೆ. ನಾಲೆಯ ನೀರಿನಿಂದ ಕೃಷಿ ಮಾಡುವ ಕುಟುಂಬಗಳು ಇಲ್ಲಿ ಇವೆ. ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಈ ಗ್ರಾಮದಲ್ಲಿದ್ದು, ಅಲ್ಲಿ 23 ವಿದ್ಯಾರ್ಥಿಗಳು ಪಾಠ ಕಲಿಯುತ್ತಿದ್ದಾರೆ. ಇಲ್ಲಿ ಸೋಮು ಕುದರಿಹಾಳ ಎಂಬುವವರು ಶಿಕ್ಷಕರಾಗಿದ್ದಾರೆ. ಸೋಮು ಕುದರಿಹಾಳ ಮೂಲತಃ ಹಾವೇರಿ ಜಿಲ್ಲೆಯ ಚಂದಾಪುರದವರಾಗಿದ್ದು 2007 ರಲ್ಲಿ ಇಲ್ಲಿಗೆ ಶಿಕ್ಷಕರಾಗಿ ಬಂದಿದ್ದಾರೆ. ಬಂದಾಗ ಇಲ್ಲಿ ಬಿಸಿಲು, ಶಾಲೆಯಲ್ಲಿ ಬಿಸಿಲಿನ ಧಗೆಯಿಂದ ತತ್ತರಿಸುತ್ತಿರುವುದರಿಂದ ಇಲ್ಲಿ ಗಿಡ ಮರಗಳನ್ನು ಬೆಳೆಸ ಬೇಕೆಂದುಕೊಂಡು ಅಂದಿನಿಂದಲೇ ಶಾಲಾ ಆವರಣದಲ್ಲಿ ಗಿಡಗಳನ್ನು ನೆಡುತ್ತಾ ಬಂದರು.

ಶಾಲೆಯ ಆವರಣದಲ್ಲಿ ಸುಮಾರು 10 ಗುಂಟೆ ಜಾಗ ಇದ್ದು ಇಲ್ಲಿ ಸುಮಾರು 200 ಗಿಡಗಳನ್ನು ನಾಟಿ ಮಾಡಿದ್ದಾರೆ, ಅದರಲ್ಲಿ ಬಹುತೇಕ ಆಲಂಕಾರಿಕ ಗಿಡಗಳಿವೆ. ಬಾದಾಮಿ, ಕೋನಾ ಕಾರ್ಪಸ್, ಲಂಗಟನ್, ಬೇವು, ಕರಿವೇವು, ಹೆಬ್ಬೇವು , ಹೀಗೆ ಬಗೆ ಬಗೆಯ ಗಿಡಗಳನ್ನು ಹಾಕಿದ್ದು ಕೆಲವು ಗಿಡಗಳು ಈಗ ದೊಡ್ಡದಾಗಿ ಬೆಳೆದಿವೆ. ಇವುಗಳ ಮಧ್ಯೆ ಅಲಂಕಾರಿಕ ಗಿಡಗಳಿಗೆ ನಿತ್ಯ ಕಾಳಜಿ ವಹಿಸಬೇಕು. ಆ ಶಾಲೆಯಲ್ಲಿ ಓದಿರುವ ಹಳೆಯ ವಿದ್ಯಾರ್ಥಿಗಳು ತಮ್ಮೂರಿನ ಶಾಲೆಯ ಅಂದ ಹೆಚ್ಚಿಸಲು ಶಿಕ್ಷಕರೊಂದಿಗೆ ಕೈ ಜೋಡಿಸಿದ್ದಾರೆ.

ಗಿಡಗಳು ಶಾಲೆಯಲ್ಲಿ ತಂಪು ನೀಡಿವೆ. ಪರಿಸರವನ್ನು ಶುದ್ದವಾಗಿಡಲು ಕಾರಣವಾಗಿವೆ. ಈ ಮೊದಲು ಶಾಲಾ ಮಕ್ಕಳಿಗಾಗಿ ಶಾಲಾ ಮಕ್ಕಳಿಂದಲೇ ತರಕಾರಿ ಬೆಳೆಸಲಾಗುತ್ತಿತ್ತು. ಈ ಮಧ್ಯೆ ಕಳೆದ ವರ್ಷದಿಂದ ಲಾಕ್​ಡೌನ್ ಆಗಿ ಶಾಲೆಗಳು ಆರಂಭವಾಗಿಲ್ಲ, ಈ ಕಾರಣಕ್ಕಾಗಿ ಈಗ ಕೈತೋಟ ಮಾಡುತ್ತಿಲ್ಲ. ಆದರೂ ನಿತ್ಯ ಇಲ್ಲಿ ವಿದ್ಯಾರ್ಥಿಗಳು ತಮ್ಮ ತೋಟವನ್ನು ಬೆಳೆಸಲು ಯತ್ನಿಸುತ್ತಾರೆ.

ಶಾಲೆಯ ಪಕ್ಕದಲ್ಲಿಯೇ ಕಾಲುವೆ ಹರಿಯುತ್ತಿದೆ. ಈ ಕಾಲುವೆಯಿಂದ ಗ್ರಾಮದ ಹಳೆಯ ವಿದ್ಯಾರ್ಥಿಗಳು ನಿತ್ಯ ನೀರು ತಂದು ಗಿಡಗಳಿಗೆ ಹಾಕಿ ಬೆಳೆಸುತ್ತಿದ್ದಾರೆ. ಅಲಂಕಾರಿಕ ಗಿಡಗಳು, ಹೂವು, ಕಾಯಿ ಬಿಡುತ್ತಿರುವುದರಿಂದ ಅವುಗಳ ಪೋಷಣೆ ಅವಶ್ಯವಾಗಿದೆ. ಈ ಹಿನ್ನಲೆಯಲ್ಲಿ ಇಲ್ಲಿಯ ಹಳೆಯ ವಿದ್ಯಾರ್ಥಿಗಳು ತಮ್ಮ ಕಾಲೇಜು ಹಾಗೂ ಕೆಲಸ ಮುಗಿಸಿದ ನಂತರ ಶಾಲೆಯಲ್ಲಿ ಗಿಡಗಳನ್ನು ಬೆಳೆಸಲು ಸಾಕಷ್ಟು ಶ್ರಮ ಹಾಕುತ್ತಾರೆ.

ಕಾಲುವೆಗಳಲ್ಲಿ ಬೇಸಿಗೆಯ ಸಂದರ್ಭದಲ್ಲಿ ನೀರು ಇರುವುದಿಲ್ಲ. ಈ ಸಂದರ್ಭದಲ್ಲಿ ಗ್ರಾಮದಿಂದ ನೀರು ತಂದು ಹಾಕುತ್ತಾರೆ. ಅದರಲ್ಲಿ 2008-09 ರಲ್ಲಿ ಒಂದನೆಯ ತರಗತಿಯಿಂದ ಓದಿರುವ ಅನಿಲ ಎಂಬ ವಿದ್ಯಾರ್ಥಿ ಈಗ ಗಂಗಾವತಿಯಲ್ಲಿಯ ಕೊಲ್ಲಾ ನಾಗೇಶ್ವರ ಕಾಲೇಜಿನಲ್ಲಿ ಪದವಿ ಪ್ರಥಮ ವರ್ಷದಲ್ಲಿ ಓದುತ್ತಿದ್ದು, ಈ ವಿದ್ಯಾರ್ಥಿ ತನ್ನ ಸ್ನೇಹಿತರೊಂದಿಗೆ ಒಂದೂ ದಿನವೂ ಬಿಡದೆ ತಾವು ಕಲಿತ ಶಾಲೆಯಲ್ಲಿ ಗಿಡಗಳನ್ನು ಬೆಳೆಸಲು ಸಮಯ ನಿಗಿದಿ ಮಾಡಿಕೊಂಡಿದ್ದಾನೆ.

ಚಿಕ್ಕ ಗ್ರಾಮದ ಚಿಕ್ಕ ಶಾಲೆಯು ಈಗ ಸುಂದರ ನಂದನವನವಾಗಿದೆ. ಇಲ್ಲಿ ಓದಲು ಬರುವವರು, ಶಾಲೆಯನ್ನು ಸುಂದರವಾಗಿಡಲು ಈ ರೀತಿಯಾಗಿ ಪರಿಸರ ಬೆಳೆಸಬಹುದು ಎಂಬುವುದಕ್ಕೆ ಲಕ್ಷ್ಮಿ ಕ್ಯಾಂಪ್ ಶಾಲೆ, ಶಾಲೆಯ ಶಿಕ್ಷಕ, ಶಾಲೆಯ ಹಳೆಯ ವಿದ್ಯಾರ್ಥಿಗಳು ಮಾದರಿಯಾಗಿದ್ದಾರೆ.

Share and Enjoy !

Shares