ವಿಜಯನಗರ ವಾಣಿ
ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಉಜ್ವಲ 2.0 ಯೋಜನೆಯನ್ನು ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯಲ್ಲಿ ವಿಡಿಯೊ ಸಂವಾದ ಮೂಲಕ ಚಾಲನೆ ನೀಡಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಎಲ್‌ಪಿಜಿ ಸಂಪರ್ಕಗಳನ್ನು ನೀಡಿದ್ದು ಉಜ್ವಲ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದ್ದಾರೆ, ಯೋಜನೆಯ ಮೊದಲ ಹಂತದಲ್ಲಿ 1,47,43,862 ಎಲ್‌ಪಿಜಿ ಸಂಪರ್ಕಗಳನ್ನು ರಾಜ್ಯದ ಬಡ ಕುಟುಂಬಗಳಿಗೆ ಒದಗಿಸಲಾಗಿದೆ ಎಂದು ವಕ್ತಾರರು ತಿಳಿಸಿದ್ದಾರೆ. ಉಜ್ವಲ ಯೋಜನೆಯ ಮೊದಲ ಹಂತದಲ್ಲಿ ಹೊರಗುಳಿದ ಕುಟುಂಬಗಳು ಎರಡನೇ ಹಂತದಲ್ಲಿ ಪ್ರಯೋಜನ ಪಡೆಯುತ್ತವೆ ಎಂದು ಅವರು ಹೇಳಿದ್ದಾರೆ.
ಏನಿದು ಉಜ್ವಲ ಯೋಜನೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯನ್ನು (PMUY) 2016 ರಲ್ಲಿ ಪ್ರಾರಂಭಿಸಲಾಯಿತು. ಮೊದಲ ಹಂತದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಐದು ಕೋಟಿ ಮಹಿಳಾ ಸದಸ್ಯರಿಗೆ ದ್ರವೀಕೃತ ಪೆಟ್ರೋಲಿಯಂ ಗ್ಯಾಸ್ (LPG) ಸಂಪರ್ಕಗಳನ್ನು ಒದಗಿಸುವ ಗುರಿಯನ್ನು ಇದು ಹೊಂದಿದೆ. ಈ ಯೋಜನೆಯನ್ನು 2018 ರ ಏಪ್ರಿಲ್‌ನಲ್ಲಿ ವಿಸ್ತರಿಸಲಾಗಿದ್ದು , ಇನ್ನೂ ಏಳು ವರ್ಗಗಳ (SC/ST, PMAY, AAY, ಹಿಂದುಳಿದ ವರ್ಗಗಳು, ಚಹಾ ತೋಟ, ಅರಣ್ಯ ನಿವಾಸಿಗಳು, ದ್ವೀಪಗಳು) ಮಹಿಳಾ ಫಲಾನುಭವಿಗಳನ್ನು ಒಳಗೊಂಡಿದೆ. ಎರಡನೇ ಹಂತದಲ್ಲಿ ಗುರಿಯನ್ನು ಎಂಟು ಕೋಟಿ LPG ಸಂಪರ್ಕಗಳಿಗೆ ವಿಸ್ತರಿಸಲಾಯಿತು.
ಏನಿದು ಉಜ್ವಲ 2.0?
ಉಜ್ವಲ 2.0 ಅಡಿಯಲ್ಲಿ ನರೇಂದ್ರ ಮೋದಿ ಸರ್ಕಾರವು ಈ ಆರ್ಥಿಕ ವರ್ಷದಲ್ಲಿ ಸುಮಾರು 1 ಕೋಟಿ ಗ್ಯಾಸ್ ಸಂಪರ್ಕಗಳನ್ನು ಬಡವರಿಗೆ ಉಚಿತ ರೀಫಿಲ್ ಮತ್ತು ಸ್ಟೌವ್ ಜೊತೆಗೆ ವಿತರಿಸುತ್ತದೆ. ಈ ವರ್ಷದ ವಾರ್ಷಿಕ ಬಜೆಟ್ ನಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2021-22 ರಲ್ಲಿ 1 ಕೋಟಿ ಹೊಸ ಫಲಾನುಭವಿಗಳಿಗೆ ಯೋಜನೆಯನ್ನು ವಿಸ್ತರಿಸುವುದಾಗಿ ಘೋಷಿಸಿದ್ದರು. ಈ ಯೋಜನೆಯಡಿ 8 ಕೋಟಿ ಫಲಾನುಭವಿಗಳು ಈಗಾಗಲೇ ಪ್ರಯೋಜನ ಪಡೆದಿದ್ದಾರೆ.
ಲಾಭಗಳೇನು?
ಪ್ರಸ್ತುತ ಯೋಜನೆಯಡಿ ಠೇವಣಿ ರಹಿತ ಎಲ್‌ಪಿಜಿ ಸಂಪರ್ಕದ ಹೊರತಾಗಿ, ರೂ. 800 ಕ್ಕಿಂತ ಹೆಚ್ಚು ಮೌಲ್ಯದ ಉಚಿತ ರೀಫಿಲ್ ಮತ್ತು ಫಲಾನುಭವಿಗಳಿಗೆ ಉಚಿತ ಸ್ಟೌ ಒದಗಿಸಲಾಗುವುದು
ಈ ಮೊದಲು ಉಜ್ವಲ 1.0 ಅಡಿಯಲ್ಲಿ, ಠೇವಣಿ ರಹಿತ LPG ಸಂಪರ್ಕವನ್ನು ರೂ .1600 ರ ಹಣಕಾಸಿನ ನೆರವಿನೊಂದಿಗೆ ನೀಡಲಾಗುತ್ತಿತ್ತು. ಅಲ್ಲಿ ಫಲಾನುಭವಿಗಳು ಸಾರ್ವಜನಿಕ ವಲಯದ ತೈಲ ಮಾರುಕಟ್ಟೆ ಕಂಪನಿಗಳಿಂದ ಹಾಟ್ ಪ್ಲೇಟ್ (ಸ್ಟವ್) ಮತ್ತು ಮೊದಲ ರೀಫಿಲ್ ಶೂನ್ಯ ಬಡ್ಡಿ ಸಾಲದ ಆಯ್ಕೆಯನ್ನು ಹೊಂದಿದ್ದರು.
ಉಜ್ವಲ ಯೋಜನೆಗಾಗಿರುವ ಅರ್ಹತೆ ಏನು?
ಪಿಎಂಯುವೈ (PMUY) ಉಜ್ವಲ 2.0 ಗಾಗಿ ದಾಖಲಾತಿ ಪ್ರಕ್ರಿಯೆಗೆ ಕನಿಷ್ಠ ಪೇಪರ್‌ವರ್ಕ್ ಅಗತ್ಯವಿದೆ. ಇದಲ್ಲದೆ ವಲಸಿಗರು ಈ ಯೋಜನೆಯ ಲಾಭ ಪಡೆಯಲು ಪಡಿತರ ಚೀಟಿ ಅಥವಾ ವಿಳಾಸ ಪುರಾವೆ ಸಲ್ಲಿಸುವ ಅಗತ್ಯವಿಲ್ಲ. ಅವರಿಗೆ ಬೇಕಾಗಿರುವುದು ‘ಕುಟುಂಬ ‘ ಮತ್ತು ‘ವಿಳಾಸದ ಪುರಾವೆ’ ಗಾಗಿ ಸ್ವಯಂ ಘೋಷಣೆ.
ಯೋಜನೆಗೆ ಕೆಲವು ಮಾನದಂಡಗಳು ಇಲ್ಲಿವೆ:
ಅರ್ಜಿದಾರರು ಮಹಿಳೆಯೇ ಆಗಿರಬೇಕು
ಮಹಿಳೆಯ ವಯಸ್ಸು 18ಕ್ಕಿಂತ ಹೆಚ್ಚಿರಬೇಕು
ಬಿಪಿಎಲ್ (ಬಡತನ ರೇಖೆಗಿಂತ ಕೆಳಗೆ) ಕುಟುಂಬದವರಾಗಿರಬೇಕು
ಬಿಪಿಎಲ್ ಕಾರ್ಡ್ ಮತ್ತು ರೇಷನ್ ಕಾರ್ಡ್ ಹೊಂದಿರಬೇಕು
ಅರ್ಜಿದಾರರ ಕುಟುಂಬದ ಯಾವೊಬ್ಬ ಸದಸ್ಯರ ಹೆಸರಿನಲ್ಲಿಯೂ ಎಲ್ ಪಿಜಿ ಕನೆಕ್ಷನ್ ಇರಬಾರದು
ಅರ್ಜಿ ಸಲ್ಲಿಸುವುದು ಹೇಗೆ?
ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಲಾಭ ಪಡೆಯಲು ಎಲ್‌ಪಿಜಿ ವಿತರಣಾ ಏಜೆನ್ಸಿಯಲ್ಲಿ ಅರ್ಜಿ ಭರ್ತಿ ಮಾಡಿ ಸಲ್ಲಿಸುವ ಮೂಲಕ ಆಫ್‌ಲೈನ್ ಮೋಡ್ ಮೂಲಕ ಅರ್ಜಿ ಸಲ್ಲಿಸಬಹುದು. ಆನ್‌ಲೈನ್ ಮೋಡ್‌ನಲ್ಲಿ ಅರ್ಜಿ ಸಲ್ಲಿಸುವುದಾದರೆ ಅರ್ಜಿದಾರರು ಅಧಿಕೃತ ವೆಬ್‌ಸೈಟ್ pmujjwalayojana.com ಗೆ ಹೋಗಿ ಫಾರ್ಮ್ ಅನ್ನು ಡೌನ್‌ಲೋಡ್ ಮಾಡಬಹುದು ಮತ್ತು ಈ ಫಾರ್ಮ್ ಅನ್ನು ಹತ್ತಿರದ ಎಲ್‌ಪಿಜಿ ಕೇಂದ್ರದಲ್ಲಿ ಸಲ್ಲಿಸಬೇಕು.