ಎಚ್‌.ಡಿ. ಕುಮಾರಸ್ವಾಮಿ ಚಿತ್ರಕ್ಕೆ ನಿರ್ಮಾಣಕ್ಕೆ ಎಸ್. ನಾರಾಯಣ್ ನಿರ್ದೇಶನ!

Share and Enjoy !

Shares
Listen to this article

ವಿಜಯನಗರ ವಾಣಿ

ಕನ್ನಡ ಸಾಹಿತ್ಯದಲ್ಲಿ ಸಿನಿಮಾ ಆಗುವಂತಹ ಕಾದಂಬರಿಗಳು ಹಲವಾರಿವೆ. ಒಂದಷ್ಟು ನಿರ್ದೇಶಕರು ಕಾದಂಬರಿಗಳನ್ನು ಸಿನಿಮಾ ಮಾಡಿ ಯಶಸ್ವಿಯೂ ಆಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿಯನ್ನೂ ಪಡೆದಿದ್ದಾರೆ. ಈಗ ಕನ್ನಡದ ಖ್ಯಾತ ಸಾಹಿತಿ ವ್ಯಾಸರಾಯ ಬಲ್ಲಾಳರ ‘ಹೆಜ್ಜೆ’ ಕಾದಂಬರಿ ಸಿನಿಮಾ ಆಗುತ್ತಿದ್ದು, ಈ ಕಾದಂಬರಿಗಾಗಿ ಹಿರಿಯ ನಿರ್ದೇಶಕ ಎಸ್‌. ನಾರಾಯಣ್‌ ಮತ್ತು ಮಾಜಿ ಸಿಎಂ ಎಚ್‌ ಡಿ ಕುಮಾರಸ್ವಾಮಿ ಜತೆಯಾಗಿದ್ದಾರೆ.

ಮಾಜಿ ಸಿಎಂ ಎಚ್‌. ಡಿ. ಕುಮಾರಸ್ವಾಮಿಯವರು ರಾಜಕೀಯಕ್ಕೆ ಬರುವುದಕ್ಕೂ ಮುನ್ನ ಸಿನಿಮಾ ರಂಗದಲ್ಲಿ ವಿತರಕರಾಗಿ, ನಿರ್ಮಾಪಕರಾಗಿ ಹೆಸರು ಮಾಡಿದವರು. ‘ಸೂರ್ಯವಂಶ’, ‘ಚಂದ್ರಚಕೋರಿ’, ‘ಗಲಾಟೆ ಅಳಿಯಂದ್ರು’ ತರಹದ ಸೂಪರ್‌ ಹಿಟ್‌ ಸಿನಿಮಾಗಳನ್ನು ಅವರು ನಿರ್ಮಾಣ ಮಾಡಿದ್ದರು. ಈ ಮೂರು ಸಿನಿಮಾಗಳನ್ನೂ ಎಸ್‌. ನಾರಾಯಣ್‌ ಅವರೇ ನಿರ್ದೇಶನ ಮಾಡಿದ್ದರು ಎಂಬುದು ವಿಶೇಷ. ‘ಹಾಲುಂಡ ತವರು’, ‘ಪಂಚಮವೇದ’ ಸೇರಿದಂತೆ ಕೆಲ ಸಿನಿಮಾಗಳನ್ನು ವಿತರಣೆ ಮಾಡಿದ್ದರು. ಕಡೆಯದಾಗಿ ತಮ್ಮ ಪುತ್ರ ನಿಖಿಲ್‌ ಕುಮಾರಸ್ವಾಮಿ ನಾಯಕರಾಗಿದ್ದ ‘ಸೀತಾರಾಮ ಕಲ್ಯಾಣ’ ಸಿನಿಮಾವನ್ನು ನಿರ್ಮಿಸಿದ್ದರು. ಈಗ ಮತ್ತೆ ನಿರ್ಮಾಪಕರಾಗಿ ಮತ್ತೊಂದು ಇನ್ನಿಂಗ್ಸ್‌ಗೆ ಸಿದ್ಧತೆ ನಡೆಸಿದ್ದಾರೆ.

ಕಮಲ್ & ಐಶ್ವರ್ಯಾ ರೈ ಮಾಡಬೇಕಿದ್ದ ಸಿನಿಮಾ
ವ್ಯಾಸರಾಯ ಬಲ್ಲಾಳರು ಬರೆದ ‘ಹೆಜ್ಜೆ’ ಕಾದಂಬರಿ ಸ್ವಾತಂತ್ರ್ಯಪೂರ್ವದಲ್ಲಿನ ಒಂದು ಕುಟುಂಬದ ಕಥೆ. ಈ ಕಾದಂಬರಿಯನ್ನು ಸಿನಿಮಾ ಮಾಡುವ ಬಗ್ಗೆ ಹಲವು ವರ್ಷಗಳ ಹಿಂದೆಯೇ ಎಸ್‌. ನಾರಾಯಣ್‌ ಚಿಂತಿಸಿದ್ದರು. ಕಮಲ್‌ ಹಾಸನ್‌ ಮತ್ತು ಐಶ್ವರ್ಯಾರೈ ಅವರನ್ನು ಕಲಾವಿದರನ್ನಾಗಿ ಆಯ್ಕೆ ಕೂಡ ಮಾಡಿಕೊಂಡಿದ್ದರಂತೆ. ಕಮಲ್‌ ಕಥೆ ಕೇಳಿ ಥ್ರಿಲ್‌ ಆಗಿದ್ದರು ಎಂದು ಸ್ವತಃ ನಾರಾಯಣ್‌ ಅವರೇ ಹೇಳಿದ್ದಾರೆ.

ಸಿನಿಮಾಗಾಗಿ ಸಿದ್ಧತೆಗಳನ್ನು ಆರಂಭಿಸಬೇಕಿದೆ
‘ಹೆಜ್ಜೆ ಬಹಳ ಅದ್ಭುತವಾದ ಕಾದಂಬರಿ. ಕನ್ನಡ ಚಿತ್ರರಂಗಕ್ಕೆ ಇದು ದೊಡ್ಡ ಸಿನಿಮಾವಾಗುತ್ತದೆ. ಈ ಕಾದಂಬರಿ ಈಗಾಗಲೇ ಕನ್ನಡ ಸಾಹಿತ್ಯಲೋಕದಲ್ಲಿ ಗುರುತಿಸಿಕೊಂಡಿದೆ. ಅಂತಹ ಒಂದು ಕಾದಂಬರಿಯನ್ನು ಸಿನಿಮಾವಾಗಿಸುತ್ತಿರುವುದು ಬಹು ದೊಡ್ಡ ಖುಷಿಗಳಲ್ಲಿ ಒಂದು. ಕುಮಾರಸ್ವಾಮಿಯವರು ಸಹ ಖುಷಿಯಾಗಿದ್ದಾರೆ. ಈ ಸಿನಿಮಾಗಾಗಿ ಸಿದ್ಧತೆಗಳನ್ನು ಆರಂಭಿಸಬೇಕಿದೆ. ದೊಡ್ಡಮಟ್ಟದ ಕಲಾವಿದರೊಂದಿಗೆ ಸ್ವಾತಂತ್ರ್ಯಪೂರ್ವದ ಸನ್ನಿವೇಶವನ್ನು ಸೃಷ್ಟಿಸಬೇಕಿದೆ. ಕಾದಂಬರಿ ಬರೆದು ಹಲವು ವರ್ಷಗಳಾದರೂ ಇಂದಿಗೂ ಅದು ಹೊಸತನದ ಕಥೆಯಾಗಿ ನಿಲ್ಲುತ್ತದೆ’ ಎಂದು ಹೇಳುತ್ತಾರೆ ಎಸ್‌. ನಾರಾಯಣ್‌.

ನಾರಾಯಣ್‌ ಸದ್ಯ ‘5ಡಿ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸದಲ್ಲಿ ಬಿಝಿಯಾಗಿದ್ದಾರೆ. ಇದರ ನಡುವೆಯೂ ‘ಹೆಜ್ಜೆ’ ಕಾದಂಬರಿಯನ್ನು ಸಿನಿಮಾವಾಗಿಸುವ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಇದುವರೆಗೆ ಎಸ್‌. ನಾರಾಯಣ್‌ ಮತ್ತು ಕುಮಾರಸ್ವಾಮಿ ಕಾಂಬಿನೇಶನ್‌ನಲ್ಲಿ ಮೂಡಿ ಬಂದ ಸಿನಿಮಾಗಳೆಲ್ಲವೂ ಬ್ಲಾಕ್‌ ಬಸ್ಟರ್‌ ಹಿಟ್‌ ಆಗಿವೆ. ಹಾಗಾಗಿ ಇವರಿಬ್ಬರ ಕಾಂಬಿನೇಶನ್‌ನ ಸಿನಿಮಾ ಮೇಲೆ ಒಂದು ನಿರೀಕ್ಷೆ ಇದ್ದೇ ಇರುತ್ತದೆ.

ಸದ್ಯಕ್ಕೆ ಕುಮಾರಸ್ವಾಮಿಯವರ ಜತೆ ಮೊದಲ ಹಂತದ ಮೀಟಿಂಗ್‌ ಆಗಿದೆ. ನನ್ನ ಮತ್ತು ಕುಮಾರಸ್ವಾಮಿಯವರ ಕಾಂಬಿನೇಷನ್‌ನ ಸಿನಿಮಾ ಎಂದರೆ ಅಲ್ಲಿ ಮೌಲ್ಯಧಾರಿತ ಕಥೆ ಇರುತ್ತದೆ. ಆ ನಿಟ್ಟಿನಲ್ಲಿ’ಹೆಜ್ಜೆ’ ಬಹಳ ಒಳ್ಳೆಯ ಆಯ್ಕೆ. ಉಳಿದ ವಿವರಗಳನ್ನು ಸದ್ಯದಲ್ಲೆ ತಿಳಿಸುತ್ತೇನೆ. -ಎಸ್‌. ನಾರಾಯಣ್‌, ನಿರ್ದೇಶಕ

Share and Enjoy !

Shares