ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂ ಗುಚ್ಛ ನಿಷೇಧಕ್ಕೆ ರೈತರ ವಿರೋಧ.

Share and Enjoy !

Shares

ವಿಜಯನಗರ ವಾಣಿ

ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಗಳನ್ನು ನಿಷೇಧಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತಿನಂತೆ ಆದೇಶ ಹೊರಡಿಸಿದ್ದನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರು ರಾಜಧಾನಿ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದ್ರು. ದಕ್ಷಿಣ ಭಾರತದ ಪುಷ್ಪ ಬೆಳೆಗಾರರ ಸಂಘ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಕೃಷಿ ರೈತ ಸಂಘಟನೆಗಳು, ಪುಷ್ಪ ಮಾರಾಟಗಾರರ ಸಂಘದಿಂದ ಪ್ರತಿಭಟನೆ ನಡೆಸಲಾಯಿತು. ಇದರೊಂದಿಗೆ ಪ್ರತಿಭಟನಾಕಾರರು ನಿಷೇಧ ಹಿಂತೆಗೆದುಕೊಳ್ಳುವಂತೆ ಮುಖ್ಯಮಂತ್ರಿಗಳಿಗೆ ಮನವಿಯನ್ನೂ ಸಲ್ಲಿಸಿದರು. ಕರೋನಾ ಸಂಕಷ್ಟದಿಂದ ಈಗತಾನೇ ಚೇತರಿಸಿಕೊಳ್ಳುತ್ತಿರುವ ರಾಜ್ಯದ ಪುಷ್ಪ ಬೆಳೆಗಾರ ರೈತರ ಮೇಲೆ ಗಧಾಪ್ರಹಾರವನ್ನು ಮಾಡುವಂತಹ ಕೆಲಸ ಮಾಡಿದೆ. ಮುಖ್ಯ ಕಾರ್ಯದರ್ಶಿ ರವಿ ಕುಮಾರ್‌ ಅವರ ಆದೇಶವನ್ನು ಈ ಕೂಡಲೇ ಹಿಂತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಇಂದು ಬೆಂಗಳೂರಿನ ಹೆಬ್ಬಾಳದಲ್ಲಿರುವ ಅಂತರಾಷ್ಟ್ರೀಯ ಪುಷ್ಪ ಮಾರುಕಟ್ಟೆಯಲ್ಲಿ ಪುಷ್ಪ ಬೆಳೆಗಾರರು ಹಾಗೂ ಮಾರಾಟಗಾರರು ಪ್ರತಿಭಟನೆ ಮಾಡಿದರು.

ಪ್ರತಿಭಟನೆಯ ನೇತೃತ್ವ ವಹಿಸಿದ್ದ ದಕ್ಷಿಣ ಭಾರತ ಪುಷ್ಪ ಬೆಳೆಗಾರರ ಸಂಘದ ಅಧ್ಯಕ್ಷರಾದ ಟಿ ಎಂ ಅರವಿಂದ್‌ ಮಾತನಾಡಿ, ಸರ್ಕಾರದ ಮುಖ್ಯ ಕಾರ್ಯದರ್ಶಿಗಳಾದ ರವಿಕುಮಾರ್‌ ಅವರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಹೂಗುಚ್ಚ, ಹಾರ, ತುರಾಯಿ, ಹಣ್ಣಿನ ಬುಟ್ಟಿಯನ್ನು ನೀಡದಂತೆ ಆದೇಶವನ್ನು ಹೊರಡಿಸಿದ್ದಾರೆ. ಇದು ರಾಜ್ಯದ 7500 ಹೆಕ್ಟೇರ್‌ ಪ್ರದೇಶದಲ್ಲಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವ ಸಾವಿರಾರು ಜನ ರೈತರ ಕುಟುಂಬಗಳ ಮೇಲಿನ ಗಧಾಪ್ರಹಾರವಾಗಿದೆ. ಈ ನಿರ್ಧಾರದ ಹಿಂದೆ ಯಾವುದೇ ವೈಜ್ಞಾನಿಕ ಅಥವಾ ಸಂಶೋಧನಾತ್ಮ ಅಂಶಗಳ ಕಂಡು ಬರುತ್ತಿಲ್ಲ.

ಈ ನಿಷೇಧದಿಂದಾಗಿ ಕರೋನಾ ಸಂಕಷ್ಟದಿಂದ ತೊಂದರೆಗೀಡಾಗಿರುವ ಪುಷ್ಪ ಬೆಳೆಗಾರರ ಚೇತರಿಕೆ ಮತ್ತಷ್ಟು ನಿಧಾನವಾಗುತ್ತದೆ. ವರ್ಷಗಳಿಂದ ಯಾವುದೇ ಸಭೆ ಸಮಾರಂಭಗಳು ನಡೆಯದೇ ತೊಂದರೆಗೀಡಾಗಿದ್ದ ರೈತರು ಇನ್ನಷ್ಟು ಕಷ್ಟಕ್ಕೆ ಸಿಲುಕಿಕೊಂಡು ಆತ್ಮಹತ್ಯೆಯಂತಹ ದಾರಿಯನ್ನು ಕಂಡುಕೊಳ್ಳುವಂತಾಗಿದೆ. ಕೋಟ್ಯಾಂತರ ರೂಪಾಯಿಗಳ ಹಣವನ್ನು ತೊಡಗಿಸಿ ಪುಷ್ಪ ಕೃಷಿಯಲ್ಲಿ ತೊಡಗಿಕೊಂಡಿರುವರು ಬಹಳಷ್ಟು ಸಂಕಷ್ಟಕ್ಕೆ ಬೀಳುವಂತಾಗಿದೆ ಎಂದು ಹೇಳಿದರು.

ಫ್ಲವರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ಅಧ್ಯಕ್ಷರಾದ ಶ್ರೀಕಾಂತ್‌ ಬೊಲ್ಲಪಳ್ಳಿ ಮಾತನಾಡಿ, ಪುಷ್ಪ ಕೃಷಿ ಕ್ಷೇತ್ರ ಹೆಚ್ಚಿನ ಉದ್ಯೋಗಾವಕಾಶಗಳನ್ನು ನೀಡುತ್ತಿದೆ. 7500 ಹೆಕ್ಟೇರ್‌ ನಷ್ಟು ಭೂಮಿಯಲ್ಲಿ ಗ್ರೀನ್‌ ಹೌಸ್‌ ಮೂಲಕ ಪುಷ್ಪ ಕೃಷಿಯನ್ನು ನಡೆಸಲಾಗುತ್ತಿದೆ. ಅಲ್ಲದೆ, ಇದನ್ನು ಹೊರಪಡಿಸಿ ಲಕ್ಷಾಂತರ ಎಕರೆಗಳಲ್ಲಿ ಹೂವನ್ನು ಬೆಳೆಯಲಾಗುತ್ತಿದೆ. ಒಂದು ಎಕರೆಯಲ್ಲಿ ಸುಮಾರು ಆರು ಜನ ಮತ್ತು ಒಂದು ಹೆಕ್ಟೇರ್‌ ನಲ್ಲಿ ಸುಮಾರು 15 ಜನರು ಕಾರ್ಯನಿರ್ವಹಿಸುತ್ತಾರೆ. ಬೆಂಗಳೂರು ನಗರ ದೇಶದ ಪುಷ್ಪೋದ್ಯಮದ ಪ್ರಮುಖ ಹಬ್‌ ಆಗಿದ್ದು, ಬೆಂಗಳೂರಿನಿಂದ ದೇಶ ಹಾಗೂ ವಿದೇಶಕ್ಕೆ ಹೂಗಳು ರಫ್ತಾಗುತ್ತವೆ. ವಿದೇಶಿ ವಿನಿಮಯ ಹಾಗೂ ಆರ್ಥಿಕತೆಗೆ ಮಹತ್ವದ ಕೊಡುಗೆ ನೀಡುತ್ತಿರುವ ಪುಷ್ಪ ಕೃಷಿಗೆ ಈ ರೀತಿ ನಿಷೇಧ ಹೇರುವ ಮೂಲಕ ಹೊಡೆತ ನೀಡುವುದು ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ರಾಜ್ಯದ ಹೂ ಬೆಳೆಗಾರ ರೈತರು ಹಾಗೂ ಪುಷ್ಪೋದ್ಯಮದಲ್ಲಿ ತೊಡಗಿಕೊಂಡಿರುವ ಲಕ್ಷಾಂತರ ಜನರ ಜೀವನ ಆಧಾರ ಉದ್ಯಮಕ್ಕೆ ಈ ರೀತಿ ಕೊಡಲಿ ಪೆಟ್ಟು ನೀಡುವ ಆದೇಶವನ್ನು ಹಿಂದಕ್ಕೆ ಪಡೆಯಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಹೂಗುಚ್ಚ, ಹಾರ, ಹಣ್ಣಿನ ಬುಟ್ಟಿಯನ್ನು ಹಿಡಿದುಕೊಂಡು ವಿನೂತನವಾಗಿ ನಡೆಸಿದ ಪ್ರತಿಭಟನೆಯಲ್ಲಿ, ರಾಜ್ಯದ ಎಲ್ಲಾ ಪುಷ್ಪ ಬೆಳೆಗಾರರು ಹಾಗೂ ಪುಷ್ಪ ಬೆಳೆಗಾರರ ರೈತ ಸಂಘಟನೆಗಳು, ರಾಜ್ಯದ ಎಲ್ಲಾ ಪುಷ್ಪ ಮಾರಾಟಗಾರರು ಮತ್ತು ಪುಷ್ಪ ಮಾರಾಟಗಾರರ ಸಂಘಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

 

Share and Enjoy !

Shares