ರಾಜ್ಯಸಭೆಯಲ್ಲಿ ರೈತರ ಪ್ರತಿಭಟನೆ ವಿಚಾರದಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆ ಛೇರ್ಮನ್ ಸೀಟ್​ನತ್ತ ಫೈಲ್ ಎಸೆದು ತನ್ನ ಕೃತ್ಯವನ್ನ ಸಮರ್ಥಿಸಿಕೊಂಡ ಕಾಂಗ್ರೆಸ್ ಸಂಸದ

Share and Enjoy !

Shares
Listen to this article

ವಿಜಯನಗರ ವಾಣಿ

ಮೊನ್ನೆ ರಾಜ್ಯಸಭೆಯ ಕಲಾಪದ ವೇಳೆ ಗದ್ದಲ ನಡೆಸಿದ ವಿಪಕ್ಷಗಳ ಕೆಲ ಸದಸ್ಯರ ಪೈಕಿ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರು ಟೇಬಲ್ ಮೇಲೆ ಹತ್ತಿ ರೂಲ್​ಬುಕ್ ಅನ್ನು ಛೇರ್ಮನ್ ಸೀಟ್​ನತ್ತ ಎಸೆದು ದುರ್ವರ್ತನೆ ತೋರಿದ್ದರು. ನಿನ್ನೆ ರಾಜ್ಯಸಭಾ ಛೇರ್ಮನ್ ಈ ಘಟನೆಯನ್ನ ಉಲ್ಲೇಖಿಸಿ ಆಕ್ರೋಶ ವ್ಯಕ್ತಪಡಿಸಿದ್ದರು. ಇದು ಸದನದ ಮರ್ಯಾದೆಗೆ ಮಾಡಿದ ಕೇಡು ಎಂದು ಬೇಸರಪಟ್ಟಿದ್ದರು. ಆದರೆ, ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ತಮ್ಮ ವರ್ತನೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆ ಘಟನೆ ಬಗ್ಗೆ ನಾನ್ಯಾಕೆ ವ್ಯಥೆ ಪಡಬೇಕು ಎಂದು ಕೇಳಿದ ಅವರು, ನಾನು ಮಾಡಿದ್ದರಲ್ಲಿ ಯಾವ ತಪ್ಪೂ ಇರಲಿಲ್ಲ ಎಂದು ಹೇಳಿದ್ದಾರೆ.

“ನಾನ್ಯಾಕೆ ಕ್ಷಮೆ ಕೇಳಬೇಕು? ಕಳೆದ 20 ತಿಂಗಳುಗಳಿಂದ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ಅವರ ಧ್ವನಿ ಎಲ್ಲರಿಗೂ ಕೇಳಿಸಬೇಕು ಎಂಬುದು ನಮ್ಮ ಉದ್ದೇಶವಾಗಿತ್ತು. ನಾನು ಪಶ್ಚಾತಾಪ ಪಡುವಂಥದ್ದೇನಿಲ್ಲ. ಅವರು ಏನು ಬೇಕಾದರೂ ಕ್ರಮ ಕೈಗೊಳ್ಳಲಿ” ಎಂದಿದ್ದಾರೆ.  ಮಾತನಾಡುತ್ತಾ ಪ್ರತಾಪ್ ಸಿಂಗ್ ಬಾಜ್ವಾ ತಮ್ಮ ವರ್ತನೆಯನ್ನ ಬಲವಾಗಿ ಸಮರ್ಥಿಸಿಕೊಂಡರು. “ನೂರಕ್ಕೆ ನೂರು ನನಗೆ ಯಾವ ಪಶ್ಚಾತಾಪ ಇಲ್ಲ. ನೀವು ಬೇಕಾದರೆ ನನ್ನನ್ನ ಬಂಧಿಸಿ, ಶೂಟ್ ಮಾಡಿ. ರೈತರ ಧ್ವನಿ ಎಲ್ಲಿಯವರೆಗೆ ಕೇಳಿಸಿಕೊಳ್ಳುವುದಿಲ್ಲವೋ ಇಂಥ ಕೃತ್ಯವನ್ನ ನೂರು ಬಾರಿ ಬೇಕಾದರೂ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆ ವಿಚಾರಗಳ ಬಗ್ಗೆ ರಾಜ್ಯಸಭೆಯಲ್ಲಿ ಮೊನ್ನೆ ಚರ್ಚೆ ನಡೆಯುತ್ತಿದ್ದ ವೇಳೆ ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷದ ಸದಸ್ಯರು ಪ್ರತಿಭಟನೆ ಮಾಡತೊಡಗಿದರು. ಸದನದ ಬಾವಿಗೆ ಇಳಿದು ಘೋಷಣೆ ಕೂಗತೊಡಗಿದರು. ರಾಜ್ಯಸಭೆ ಸ್ಪೀಕರ್ ಚೇರ್​ನ ಕೆಳಗಿನ ಸಾಲಿನಲ್ಲಿ ಅಧಿಕಾರಿಗಳು ಕೂರುವ ಟೇಬಲ್ ಮೇಲೆ ಹಲವರು ಹತ್ತಿ ನಿಂತು ಕೂಗಾಡಿದರು. ಈ ವೇಳೆ, ಪ್ರತಾಪ್ ಸಿಂಗ್ ಬಾಜ್ವಾ ಅವರು ಟೇಬಲ್ ಮೇಲೆ ನಿಂತು ನಿಯಮಪುಸ್ತಕದ ಕಡತವನ್ನ ಸ್ಪೀಕರ್ ಚೇರ್​ನತ್ತ ಎಸೆದಿದ್ದರು. ಕೊನೆಗೆ ರಾಜ್ಯಸಭೆ ಕಲಾಪವನ್ನ ಮುಂದೂಡಬೇಕಾಯಿತು.

ಈ ವಿಚಾರವನ್ನು ನಿನ್ನೆ ರಾಜ್ಯಸಭೆ ಕಲಾಪದ ಆರಂಭದಲ್ಲಿ ಪ್ರಸ್ತಾಪಿಸಿದ ರಾಜ್ಯಸಭೆ ಛೇರ್ಮನ್ ವೆಂಕಯ್ಯ ನಾಯ್ಡು, ಘಟನೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದರು. ದೇವಸ್ಥಾನದಲ್ಲಿ ಪಾವಿತ್ರ್ಯತೆ ಕಾಪಾಡಲು ಗರ್ಭಗುಡಿಗೆ ಭಕ್ತರು ಪ್ರವೇಶ ಮಾಡುವುದಿಲ್ಲ. ಹಾಗೆಯೇ, ಸದನದ ಪಾವಿತ್ರ್ಯತೆಯನ್ನ ಸದಸ್ಯರು ಕಾಪಾಡುವುದು ಅವರ ಜವಾಬ್ದಾರಿ. ನಿನ್ನೆ ಕೆಲ ಸದಸ್ಯರು ತಮ್ಮ ವರ್ತನೆ ಮೂಲಕ ಮನೆಯ ಪಾವಿತ್ರ್ಯತೆ ಹಾಳು ಮಾಡಿದರು. ನಿನ್ನೆ ರಾತ್ರಿ ನನಗೆ ನಿದ್ದೆಯೇ ಬರಲಿಲ್ಲ ಎಂದು ವೆಂಕಯ್ಯ ನಾಯ್ಡು ಹೇಳಿದರು.

ವೆಂಕಯ್ಯ ನಾಯ್ಡು ಹೇಳಿಕೆ ನೀಡಿದ ಬೆನ್ನಲ್ಲೇ ಕಾಂಗ್ರೆಸ್ ಸಂಸದ ಪ್ರತಾಪ್ ಸಿಂಗ್ ಬಾಜ್ವಾ ಅವರು ನಿನ್ನೆಯೇ ತಮ್ಮ ವರ್ತನೆಯನ್ನ ಸಮರ್ಥಿಸಿಕೊಂಡಿದ್ದರು. ಇಂದು ಅದನ್ನೇ ಅವರು ಪುನರುಚ್ಚರಿಸಿದ್ದಾರೆ.

Share and Enjoy !

Shares