ಡೆಹ್ರಾಡೂನ್ ನ ಕಾಲ್ಸಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಪರೂಪದ ಎರಡು ತಲೆಯ ನಾಗರಹಾವು ಪತ್ತೆ.!

Share and Enjoy !

Shares
Listen to this article

ವಿಜಯನಗರ ವಾಣಿ

ನಾವೆಲ್ಲಾ ಉದ್ದನೆಯ ಮತ್ತು ದಪ್ಪವಾದ ನಾಗರಹಾವನ್ನು ನೋಡಿರುತ್ತೇವೆ, ಆದರೆ 2 ತಲೆಯ ನಾಗರಹಾವನ್ನು ನೋಡಿರುವುದು ತುಂಬಾ ಅಪರೂಪ. ಉತ್ತರಾಖಂಡ ರಾಜ್ಯದಲ್ಲಿರುವ ಡೆಹ್ರಾಡೂನ್ ಜಿಲ್ಲೆಯ ಕಾಲ್ಸಿ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಅಪರೂಪದ ಎರಡು ತಲೆಯ ನಾಗರಹಾವು ಪತ್ತೆಯಾಗಿದೆ. ಡೆಹ್ರಾಡೂನ್ ಜಿಲ್ಲೆಯ ವಿಕಾಸ್ ನಗರ ಪ್ರದೇಶದಲ್ಲಿರುವಂತಹ ಕೈಗಾರಿಕಾ ಘಟಕದ ಆವರಣದಲ್ಲಿ ಒಂದು ನಾಗರಹಾವು ಬಂದಿರುವುದನ್ನು ಕಂಡಂತಹ ಸ್ಥಳೀಯರು ಕಾಲ್ಸಿ ಅರಣ್ಯ ಇಲಾಖೆಗೆ ಕರೆ ಮಾಡಿದ್ದಾರೆ. ಕಳೆದ 15 ವರ್ಷಗಳಿಂದ ಅನೇಕ ಹಾವುಗಳನ್ನು ರಕ್ಷಿಸಿದ ಆದಿಲ್ ಮಿರ್ಜಾ ಅರಣ್ಯ ಇಲಾಖೆಯವರೊಂದಿಗೆ ಜೊತೆಗೂಡಿ ಕೆಲಸ ಮಾಡುತ್ತಿದ್ದು, ನಾಗರಹಾವು ಬಂದಿರುವ ಸ್ಥಳಕ್ಕೆ ಕೂಡಲೇ ಧಾವಿಸಿ ಬಂದು ನೋಡಿದಾಗ ಅಲ್ಲಿ ಅವರಿಗೆ ಕಂಡದ್ದು ಅಪರೂಪವಾದಂತಹ 2 ತಲೆಯ ನಾಗರಹಾವು.

“ನಾನು ಸುಮಾರು 15 ವರ್ಷಗಳಿಂದ ಹಾವುಗಳನ್ನು ರಕ್ಷಿಸುವ ಕೆಲಸ ಮಾಡುತ್ತಿದ್ದು, ಇಂತಹ 2 ತಲೆಯುಳ್ಳ ನಾಗರಹಾವನ್ನು ಎಂದೂ ನೋಡಿರಲಿಲ್ಲ. ಇದು ತುಂಬಾ ಅಪರೂಪದ ನಾಗರಹಾವು”, ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.

ಈ ಎರಡು ತಲೆಯುಳ್ಳ ನಾಗರಹಾವು ಸುಮಾರು ಒಂದೂವರೆ ಅಡಿ ಉದ್ದವಿದ್ದು ಮತ್ತು ಇದಕ್ಕೆ ಎರಡು ವಾರಗಳಿಗಿಂತ ಕಡಿಮೆ ವಯಸ್ಸಾಗಿತ್ತು ಎಂದು ಹೇಳಲಾಗಿದೆ. 2 ತಲೆಗಳುಳ್ಳ ಈ ನಾಗರಹಾವಿನ ಫೋಟೋಗಳು ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿವೆ.

ಹಾವನ್ನು ಡೆಹ್ರಾಡೂನ್ ಮೃಗಾಲಯದಲ್ಲಿರುವ ಪ್ರಾಣಿ ಸಂರಕ್ಷಣಾ ಕೇಂದ್ರಕ್ಕೆ ಕಳುಹಿಸಲಾಗಿದೆ, ಅಲ್ಲಿನ ಪಶುವೈದ್ಯರು ನಾಗರಹಾವನ್ನು ಪರೀಕ್ಷಿಸಿದ್ದಾರೆ.

“ಪಶು ವೈದ್ಯರು ಅದನ್ನು ಪರೀಕ್ಷಿಸಿದ ನಂತರ, ಹಾವನ್ನು ಮರಳಿ ಅರಣ್ಯ ಪ್ರದೇಶದಲ್ಲಿ ಬಿಡಬೇಕೋ ಅಥವಾ ಇದನ್ನು ಅಧ್ಯಯನಕ್ಕಾಗಿ ಇರಿಸಬೇಕೋ ಎಂಬುದನ್ನು ನಿರ್ಧರಿಸಲಾಗುವುದು. ಇಂತಹ ಹಾವುಗಳು ಕಾಡಿನಲ್ಲಿ ಬದುಕುವುದು ತುಂಬಾ ಅಪರೂಪ” ಎಂದು ಕಾಲ್ಸಿ ಅರಣ್ಯ ವಿಭಾಗದ ಜಿಲ್ಲಾ ಅರಣ್ಯ ಅಧಿಕಾರಿಯಾದ ಬಿ ಬಿ ಮಾರ್ಟೋಲಿಯಾ ಹೇಳಿದರು.

ಅನುವಂಶಿಕ ಅಸಹಜತೆಯ ಕಾರಣದಿಂದ ಹಾವಿನಲ್ಲಿ ಈ ರೀತಿ ಎರಡು ತಲೆಗಳ ಬೆಳವಣಿಗೆ ಆಗುತ್ತದೆ ಮತ್ತು ಇಂತಹ ಹಾವುಗಳು ಬದುಕುಳಿಯುವಿಕೆಯ ಪ್ರಮಾಣ ತುಂಬಾ ಕಡಿಮೆಯಾಗಿದೆ ಎಂದು ತಜ್ಞರು ಹೇಳುತ್ತಾರೆ.

ಕಳೆದ ವರ್ಷ ಆಗಸ್ಟ್‌ನಲ್ಲಿ ಇಂತಹದೇ ಒಂದು ವಿಷಕಾರಿ ಹಾವು ಎರಡು ತಲೆಗಳನ್ನು ಹೊಂದಿದ್ದು, ಮಹಾರಾಷ್ಟ್ರದ ಕಲ್ಯಾಣ್ ನಗರದಲ್ಲಿ ರಕ್ಷಿಸಲಾಗಿತ್ತು. ಈ ರಸೆಲ್ ವೈಪರ್ ಎಂಬ ಹಾವು ಭಾರತದಲ್ಲಿರುವಂತಹ ಅತ್ಯಂತ ವಿಷಕಾರಿ ಹಾವುಗಳಲ್ಲಿ ಒಂದಾಗಿದೆ ಎಂದು ಹೇಳಲಾಗಿದೆ.

ಡಿಸೆಂಬರ್ 2019ರಲ್ಲಿ, 2 ತಲೆಯ ಹಾವು ಪಶ್ಚಿಮ ಬಂಗಾಳದ ಬೆಲ್ದಾ ಅರಣ್ಯ ವ್ಯಾಪ್ತಿಯಲ್ಲಿರುವಂತಹ ಏಕರುಖಿ ಗ್ರಾಮದಲ್ಲಿ ಪತ್ತೆಯಾಗಿತ್ತು. “ಇದು ಸಂಪೂರ್ಣವಾಗಿ ಜೈವಿಕ ಸಮಸ್ಯೆಯಾಗಿದ್ದು, ಮನುಷ್ಯನಿಗೆ ಎರಡು ತಲೆಗಳು ಅಥವಾ ಹೆಬ್ಬೆರಳುಗಳು ಇರುವಂತೆಯೇ ಈ ಹಾವು ಎರಡು ತಲೆಗಳನ್ನು ಹೊಂದಿದೆ. ಇಂತಹ ಹಾವುಗಳನ್ನು ಸಂರಕ್ಷಿಸಿದರೆ ಮಾತ್ರ ಹೆಚ್ಚು ಕಾಲದವರೆಗೂ ಬದುಕುತ್ತವೆ” ಎಂದು ಸರೀಸೃಪ ತಜ್ಞರಾದ ಕೌಸ್ತವ್ ಚಕ್ರವರ್ತಿ ಹೇಳಿದ್ದಾರೆ.

Share and Enjoy !

Shares