ಸಿಂಧೂರ ಸಿರಿ. (ಕವನ ಸಂಕಲನ) ವಿಮರ್ಶೆ

Share and Enjoy !

Shares
Listen to this article

ಸಿಂಧೂರ ಸಿರಿ# ಕೃತಿಯು ನವ್ಯ ನವೋದಯ ದಲಿತ ಬಂಡಾಯ ಮೊದಲಾದ ಎಲ್ಲಾ ಪ್ರಕಾರಗಳ ಕವಿತೆಗಳನ್ನು ಒಳಗೊಂಡ ಸಂಕಲನವಾಗಿದ್ದು, ಸಮಾಜಕ್ಕೆ ಸಂದೇಶವನ್ನು ನೀಡುವ ಉತ್ತಮ ಕೃತಿಯಾಗಿದೆ.

ಬಳ್ಳಾರಿ ಜಿಲ್ಲೆಯ ಹಡಗಲಿ ತಾಲೂಕಿನ ವರಕನಹಳ್ಳಿ ಗ್ರಾಮದಲ್ಲಿ ವಾಸವಿರುವ *ಹಾಲೇಶ್ ಹಕ್ಕಂಡಿ* ಯವರು ಅಪ್ಪಟ ಗ್ರಾಮೀಣ ಯುವ ಪ್ರತಿಭೆ. ವೃತ್ತಿಯಲ್ಲಿ ಶಿಕ್ಷಕರಾಗಿದ್ದರೂ, ಪ್ರವೃತ್ತಿಯಲ್ಲಿ ಕವಿಯೂ ಹೌದು. ಇವರ ಎರಡನೇ ಕವನ ಸಂಕಲನವೇ “ಸಿಂಧೂರ ಸಿರಿ”

ಯೌವನದಲ್ಲಿರುವಾಗ ಬಹುತೇಕವಾಗಿ ಪ್ರೇಮ, ವಿರಹ, ವಿಷಾದದ ಕವಿತೆಗಳನ್ನೇ ಹೆಚ್ಚಾಗಿ ಬರೆಯುತ್ತಾರೆ. ಹಾಗೆಯೇ ಹಾಲೇಶ್ ಹಕ್ಕಂಡಿಯವರ ಕೃತಿಗಳಲ್ಲಿ ಪ್ರೇಮಗೀತೆಗಳದ್ದೇ ಕಾರುಬಾರು. ಅಲ್ಲದೇ ಇವರ ಪ್ರತಿಯೊಂದು ಕವಿತೆಗಳೂ ಅನುಭಾವದ ಕಡಲಲ್ಲಿ ಮಥನಗೊಂಡು ಪದಗಳ ಮೂಲಕ ಕಾವ್ಯವಾಗಿ ಮೈದಾಳಿವೆ.
ಬ್ರೂಣ ಹತ್ಯೆ, ಬದುಕಿನ ಹೋರಾಟ ಮೊದಲಾದ ಕವಿತೆಗಳು ನೋವು, ಹತಾಸೆ, ಅಸಹಾಯಕತೆಗಳನ್ನು ಹೊರ ಹಾಕುವುದಲ್ಲದೇ, ಸಮಾಜ ಬದಲಾಗುವುದರೊಂದಿಗೆ ಮಾನವೀಯತೆ ನೆಲೆಯೂರಬೇಕೆಂಬ ಸಂದೇಶವನ್ನೂ ಸಾರುತ್ತವೆ.

ಸಿಂಧೂರ ಸಿರಿ ಕೃತಿಯ ಆರಂಭದಲ್ಲೇ *ನಡೆದಾಡುವ ದೇವರು* ಎಂಬ ಕವಿತೆ ಗಮನ ಸೆಳೆಯುತ್ತದೆ.
*ಶುದ್ಧ ಸಂಸ್ಕ್ರತಿಯ ಘನ ಮಹಿಮೆ ಮೆರೆದ ಶ್ರೀ*
*ಭವ ಲೋಕದ ಸಿರಿ ಮರೆತು ಜನ ಕಲ್ಯಾಣಕ್ಕೆ ನಿಂತ ಶ್ರೀ*
*ಸಿದ್ಧಗಂಗೆಯಲಿ ಜ್ಞಾನ ಜ್ಯೋತಿಯ ಬೆಳಗಿಸಿದ ಶ್ರೀ*
*ಅಗಣಿತ ಜನರ ಬಾಳು ಬೆಳಗಿಸಿದ ಪೂಜ್ಯ ಶ್ರೀ* /ನಡೆದಾಡುವ ದೇವರು.

ಎಲ್ಲಾ ಭಕ್ತಾದಿಗಳ ಪ್ರೀತಿಗೆ ಪಾತ್ರರಾಗಿದ್ದ ಪೂಜ್ಯ ಡಾ. ಶ್ರೀ ಶಿವಕುಮಾರ ಸ್ವಾಮೀಜಿಯವರ ಬದುಕಿನ ಚಿತ್ರಣವನ್ನು ಕಟ್ಟಿಕೊಡುವ ಈ ಕವನವು, ಸಮಾಜ ಸೇವಕರ ಸೋಗಿನಲ್ಲಿ ಸ್ವಾರ್ಥ ಮೆರೆಯುವ ಜನರಿಗೆ ತಿಳಿ ಹೇಳಿದಂತಿದೆ.

ಈ ಹಿಂದೆ ಹೈದ್ರಾಬಾದ್ ಕರ್ನಾಟಕ ಎಂದೇ ಗುರುತಿಸಿಕೊಂಡಿದ್ದ ಈಗಿನ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮೂಲಭೂತ ಸೌಕರ್ಯಗಳ ಕೊರತೆ ಹೆಚ್ಚಾಗಿರುವುದರಿಂದ ಬಡತನ ನಿರುದ್ಯೋಗ ಅಜ್ಞಾನ ದಾರಿದ್ರ್ಯ ಎಲ್ಲವೂ ಕರ್ನಾಟಕದ ಉಳಿದ ಭಾಗಗಳಿಗಿಂತ ಹೆಚ್ಚಾಗಿ ಕಂಡು ಬರುತ್ತಿದೆ. ಅದನ್ನು ಕವನದ ಮೂಲಕ ಎತ್ತಿಹಿಡಿಯುವ ಪ್ರಯತ್ನ ಮಾಡಿದ್ದಾರೆ.
*ಸ್ವಾರ್ಥ ಮನಸ್ಸುಗಳು ಬದಲಾಗಬೇಕು*
*ಸ್ವಚ್ಛಂದ ಮನಗಳು ಬೆಳಗಬೇಕು*
*ಕಂಡ ಕನಸುಗಳೆಲ್ಲ ಈಡೇರಬೇಕು*
*ಪ್ರಜೆಗಳ ಬದುಕು ಕಲ್ಯಾಣವಾಗಬೇಕು*/ ಕಲ್ಯಾಣ ಕರ್ನಾಟಕ

ಎನ್ನುವಲ್ಲಿ ಹಾಲೇಶ್ ಹಕ್ಕಂಡಿಯವರು ಸಮಾಜಮುಖಿಯಾಗಿ ಚಿಂತನೆ ನಡೆಸಿದ್ದಾರೆ. ಗಡಿ ಕಾಯುವವರ ನೋವನ್ನು ವಿವರಿಸುವ ವೀರ ಯೋಧ, ಆರೋಗ್ಯದ ರಕ್ಷಣೆಯಲ್ಲಿ ಯೋಗದ ಮಹತ್ವವನ್ನು ಕುರಿತು ಬರೆದ ಯೋಗ ಎಂಬ ಕವನ, ಪ್ರಕೃತಿ ವಿಕೋಪವನ್ನು ಅನಾವರಣಗೊಳಿಸುವ ವರುಣನ ಆರ್ಭಟ, ಸ್ತ್ರೀಪರ ಕಾಳಜಿ ತೋರುವ ಕುಡುಕನ ಹೆಂಡತಿಯ ಗೋಳು, ಹಾಗೂ ತಾಯಿಯ ಕೂಗು ಎಂಬಂಥಾ ಕವನಗಳು ಗಮನ ಸೆಳೆಯುತ್ತವೆ.

ಶೃಂಗಾರದ ಅಲೆಯಲ್ಲಿ ತೇಲುವಂತೆ ಮಾಡುವ ಪ್ರೇಮ ಸಂದೇಶ, ನನ್ನವಳು ನಕ್ಕರೆ, ನಲ್ಮೆಯ ಅರ್ಧಾಂಗಿ, ನಲ್ಲ ನಿನಗಾಗಿ ಎಂಬ ಕವಿತೆಗಳು ಚಂದನೆಯ ಶಬ್ಢಗಳಿಂದ ಮುತ್ತು ಪೋಣಿಸಿದಂತಿದ್ದು ಕಾವ್ಯಕ್ಕೆ ಮೆರಗು ನೀಡಿವೆ.

*ನಮ್ಮನ್ನು ಹೊತ್ತಾಕೆ ಹೆಣ್ಣಲ್ಲವೇ?*
*ನಮ್ಮನ್ನು ಹೆತ್ತಾಕೆ ಹೆಣ್ಣಲ್ಲವೇ?*
*ಪ್ರೀತಿಸುವ ಮಡದಿ, ಒಡ ಹುಟ್ಟಿದವಳು ಹೆಣ್ಣಲ್ಲವೇ?*
*ಹರಿವ ನದಿ ಪರಿಸರವೆಲ್ಲವೂ ಹೆಣ್ಣಲ್ಲವೇ?*
*ಮತ್ಯಾವ ಸಾಧನೆಗೆಂದು ಈ ಬ್ರೂಣ ಹತ್ಯೆ?*/ಬ್ರೂಣ ಹತ್ಯೆ.
ಈ ಕವನದಲ್ಲಿ ಹೆಣ್ಣಿನ ಮಹತ್ವವನ್ನು ಸಾರಿ ಹೇಳಿದ್ದಾರೆ.
*ಕುಡುಕ ಗಂಡನ ಕಟ್ಟಿಕೊಂಡು*
*ನಾ ಹ್ಯಾಂಗ ಮಾಡಲಿ ಸಂಸಾರ?*
*ಕೈಯಲ್ಲೆರೆಡು ಬಗಲಲ್ಲೊಂದು ಮಕ್ಕಳ ಕೊಟ್ಟಾನ*
*ದಿನ ರಾತ್ರಿ ಕುಡಿದು ನನ್ನ ಬಡಿತಾನ*
*ನನ್ನ ಕಣ್ಣೀರಿನ ಗೋಳು ಕೇಳುವವರ್ಯಾರವ್ವಾ*/ ಕುಡುಕನ ಹೆಂಡತಿಯ ಗೋಳು.

ಗ್ರಾಮೀಣ ಭಾಗದ ಅನೇಕ ಬಡ ಕುಟುಂಬಗಳಲ್ಲಿ ಇಂದಿಗೂ ಕಾಣುತ್ತಿರುವ ಸಾಮಾನ್ಯ ಚಿತ್ರಣವಿದು. ಹೀಗೆ ಹಲವು ರೀತಿಯ ಪರಿಕರಗಳನ್ನು ಹೊಂದಿಸಿಕೊಂಡು ಕಾವ್ಯ ರಚಿಸಿದ್ದಾರೆ.
ಶಂಕರ ಗೌಡ್ರ ಬೆಟಗೇರಿ ಅವರ ಮುನ್ನುಡಿ ಹಾಗೂ ಹಾಲಪ್ಪ ಚೆಗಟೇರಿಯವರ ಬೆನ್ನುಡಿಯೊಂದಿಗೆ “ಸಿಂಧೂರ ಸಿರಿ” ಆಕರ್ಷಕ ಮುಖ ಪುಟ ಹೊತ್ತು ಗಮನ ಸೆಳೆಯುತ್ತದೆ

ಹಾಲೇಶ್ ಹಕ್ಕಂಡಿಯವರು ಕವಿತೆಗಳ ಆಳ ಅಗಲಗಳನ್ನು ಅರಿತಲ್ಲಿ ಇನ್ನಷ್ಟು ಉತ್ತಮ ಕವಿತೆಗಳು ಸೃಷ್ಟಿಯಾಗುತ್ತವೆ. ಅದಕ್ಕಾಗಿ ಹೆಚ್ಚು ಹೆಚ್ಚು ಅಧ್ಯಯನದಲ್ಲಿ ತಮ್ಮನ್ನು ತೊಡಗಿಸಿಕೊಂಡು ವಿವಿಧ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತಮ್ಮನ್ನು ತೊಡಗಿಸಿಕೊಳ್ಳಲಿ ಎಂದು ಈ ಮೂಲಕ ಹಾರೈಸುತ್ತೇನೆ.

ವಿನೋದಾ ಕರಣಂ ಉಪನ್ಯಾಸಕರು
ಬಳ್ಳಾರಿ

Share and Enjoy !

Shares