ವಿಜಯನಗರ ವಾಣಿ
ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್ 14ನ (IPL 2021) ದ್ವಿತಿಯಾರ್ಧ ಆರಂಭಕ್ಕೆ ಇನ್ನು ತಿಂಗಳು ಮಾತ್ರ ಉಳಿದಿವೆ. ಈಗಾಗಲೇ ಚೆನ್ನೈ ಸೂಪರ್ ಕಿಂಗ್ಸ್ , ಮುಂಬೈ ಇಂಡಿಯನ್ಸ್ ತಂಡಗಳು ಯುಎಇನತ್ತ ತೆರಳಿದೆ. ಇನ್ನು ಉಳಿದ ತಂಡಗಳು ಕೂಡ ಈ ತಿಂಗಳಾಂತ್ಯದೊಳಗೆ ದುಬೈನತ್ತ ಪ್ರಯಾಣ ಬೆಳೆಸಲಿದೆ. ಅದರಂತೆ ಸೆಪ್ಟೆಂಬರ್ 19 ರಿಂದ ಲೀಗ್ನ ಉಳಿದ ಪಂದ್ಯಗಳಿಗೆ ಚಾಲನೆ ಸಿಗಲಿದ್ದು, ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ ಅನ್ನು ಎದುರಿಸಲಿದೆ. ಇನ್ನು 31 ಪಂದ್ಯಗಳನ್ನು ಶಾರ್ಜಾ, ಅಬುಧಾಬಿ ಹಾಗೂ ದುಬೈ ಅಂತಾರಾಷ್ಟ್ರೀಯ ಸ್ಟೇಡಿಯಂಗಳಲ್ಲಿ ಆಯೋಜಿಸಲಾಗುತ್ತದೆ.
ಯುಎಇನಲ್ಲಿ ಕಳೆದ ಬಾರಿ ಖಾಲಿ ಸ್ಟೇಡಿಯಂನಲ್ಲಿ ಟೂರ್ನಿಯನ್ನು ಆಯೋಜಿಸಲಾಗಿತ್ತು. ಆದರೆ ಈ ಬಾರಿ ದ್ವಿತಿಯಾರ್ಧದಲ್ಲಿ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಚರ್ಚಿಸಲಾಗಿದೆ. ಈ ಬಗ್ಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಮತ್ತು ಯುಎಇ ಸರ್ಕಾರದ ಜೊತೆ ಮಾತುಕತೆ ನಡೆಸಿದೆ.
ಅಷ್ಟೇ ಅಲ್ಲದೆ ಪ್ರೇಕ್ಷಕರಿಗೆ ಅವಕಾಶ ನೀಡುವ ಹಿನ್ನೆಲೆಯಲ್ಲಿ ಕೋವಿಡ್ -19 ಪೊಟ್ರೊಕಾಲ್ ಬಗ್ಗೆ ಯುಎಇ ಸರ್ಕಾರದ ಜೊತೆ ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಪ್ರಧಾನ ಕಾರ್ಯದರ್ಶಿ ಮುಬಶೀರ್ ಉಸ್ಮಾನಿಯ ಕೂಡ ಚರ್ಚಿಸಿದ್ದಾರೆ. ಅಲ್ಲದೆ ಆತಿಥೇಯ ಆಟಗಾರರು ಯಾವ ಪ್ರೋಟೋಕಾಲ್‌ಗಳನ್ನು ಅನುಸರಿಸಬೇಕು ಎಂಬುದರ ಕುರಿತು ಅನುಮೋದನೆ ಪಡೆಯಲು ಇಸಿಬಿ ಅಧಿಕಾರಿಗಳು ಸರ್ಕಾರಕ್ಕೆ ಮನವಿ ಸಲ್ಲಿಸಿದ್ದಾರೆ.
ಸದ್ಯ ಪ್ರೇಕ್ಷಕರಿಗೆ ಅವಕಾಶ ನೀಡುವ ಬಗ್ಗೆ ಬಿಸಿಸಿಐ (BCCI) ಆಸಕ್ತಿ ಹೊಂದಿದ್ದು, ಹೀಗಾಗಿ ಐಪಿಎಲ್ ಉಳಿದ 31 ಪಂದ್ಯಗಳನ್ನು ಸ್ಟೇಡಿಯಂ ಸ್ಟ್ಯಾಂಡ್ನಲ್ಲಿ ಕುಳಿತು ವೀಕ್ಷಿಸಲು ಅವಕಾಶ ಸಿಗುವ ಸಾಧ್ಯತೆ ಹೆಚ್ಚಿದೆ. ಇದಾಗ್ಯೂ ಕೊರೋನಾ ಭೀತಿ ಹಿನ್ನೆಲೆಯಲ್ಲಿ ನಿರ್ದಿಷ್ಟ ಸಂಖ್ಯೆಯಲ್ಲಿ ಮಾತ್ರ ಐಪಿಎಲ್ (IPL 2021) ಅಭಿಮಾನಿಗಳಿಗೆ ಟಿಕೆಟ್ ನೀಡುವ ಸಾಧ್ಯತೆಯಿದೆ. ಒಟ್ಟಿನಲ್ಲಿ ಕಳೆದ ಎರಡು ವರ್ಷಗಳಿಂದ ಐಪಿಎಲ್ ಪಂದ್ಯಾವಳಿಯು ಪ್ರೇಕ್ಷಕರಿಲ್ಲದೆ ನಡೆಯುತ್ತಿದ್ದು, ಈ ಬಾರಿಯ ಉಳಿದ 31 ಪಂದ್ಯಗಳ ಮೂಲಕ ಮತ್ತೆ ಐಪಿಎಲ್ಗೆ ಹಳೆಯ ರಂಗು ತರಲು ಬಿಸಿಸಿಐ ಮುಂದಾಗಿದೆ.
ಐಪಿಎಲ್ ದ್ವಿತಿಯಾರ್ಧಕ್ಕೆ ಸೆಪ್ಟೆಂಬರ್ 19 ರಂದು ಚಾಲನೆ ಸಿಗಲಿದ್ದು, ಅಕ್ಟೋಬರ್ 8 ರಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ದೆಹಲಿ ಕ್ಯಾಪಿಟಲ್ಸ್ (DC) ನಡುವೆ ಲೀಗ್ ಹಂತದ ಅಂತಿಮ ಪಂದ್ಯ ಆಡಲಿದೆ. ಇನ್ನು ದುಬೈ ಇಂಟರ್ನ್ಯಾಷನಲ್ ಸ್ಟೇಡಿಯಂ ಮೊದಲ ಕ್ವಾಲಿಫೈಯರ್ ಮತ್ತು ಫೈನಲ್ ಸೇರಿದಂತೆ 13 ಪಂದ್ಯಗಳು ನಡೆಯಲಿದೆ. ಅದೇ ರೀತಿ ಎಲಿಮಿನೇಟರ್ ಮತ್ತು ಎರಡನೇ ಕ್ವಾಲಿಫೈಯರ್ ಪಂದ್ಯ ಸೇರಿದಂತೆ ಶಾರ್ಜಾದಲ್ಲಿ ಒಟ್ಟು 10 ಪಂದ್ಯಗಳನ್ನು ಆಯೋಜಿಸಲಿದೆ. ಹಾಗೆಯೇ 8 ಪಂದ್ಯಗಳಿಗೆ ಅಬುಧಾಬಿ ಸ್ಟೇಡಿಯಂ ಆತಿಥ್ಯವಹಿಸಲಿದೆ. ಸೆಪ್ಟೆಂಬರ್ 25ರಿಂದ ಡಬಲ್ ಹೆಡರ್ಗಳು ಆರಂಭವಾಗಲಿದ್ದು, ಒಟ್ಟು ಏಳು ಡಬಲ್ ಹೆಡರ್ಗಳು ಇರಲಿದೆ. ಭಾರತೀಯ ಕಾಲಮಾನ ರಾತ್ರಿ 7.30ಕ್ಕೆ ಪಂದ್ಯಗಳು ನಡೆಯಲಿದ್ದು, ಎರಡು ಪಂದಗಳಿದ್ದಾಗ ಮೊದಲ ಪಂದ್ಯವು ಮಧ್ಯಾಹ್ನ 3.30ಕ್ಕೆ ಶುರುವಾಗಲಿದೆ.